More

    ಯಕ್ಷಗಾನ ಅಕಾಡೆಮಿಯಲ್ಲಿ ದಕ್ಷಿಣ ಕನ್ನಡಕ್ಕೆ ಪ್ರಾಧಾನ್ಯತೆ ಉಳಿದ ಜಿಲ್ಲೆಯವರಿಗಿಲ್ಲ ಆದ್ಯತೆ-ಆಕ್ಷೇಪ

    ಕಾರವಾರ:ಒಂಭತ್ತು ತಿಂಗಳುಗಳ ಬಳಿಕ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡಲಾಗಿದೆ. ಆದರೆ, ಅದರಲ್ಲಿ ಉಡುಪಿ ದಕ್ಷಿಣ ಕನ್ನಡ ಬಿಟ್ಟು ಬೇರೆ ಜಿಲ್ಲೆಯ ಒಬ್ಬರನ್ನೂ ಸೇರಿಸದೇ ಇರುವುದು ಯಕ್ಷಗಾನ ವಲಯದಲ್ಲಿ ಆಕ್ಷೇಪಣೆಗೆ ಕಾರಣವಾಗಿದೆ.
    ಉಡುಪಿಯ ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ರಾಘವ ಎಚ್. ಕೃಷ್ಣಪ್ಪ ಪೂಜಾರಿ, ಗುರುರಾಜ್ ಭಟ್, ವಿನಯಕುಮಾರ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮುಲ್ಕಿ, ಮೋಹನ್ ಕೊಪ್ಪಾಳ್, ರಾಜೇಶ ಕಳ್ಳೆ, ದಯಾನಂದ ಪಿ, ಜಿ.ವಿ.ಎಸ್.ಉಳ್ಳಾಲ್ ಹಾಗೂ ಕೇರಳ ರಾಜ್ಯದ ಕಾಸರಗೋಡಿನ ಸಂಕದಬೈಲ್‌ನ ಸತೀಶ ಅಡ್ಕಪ್ಪ ಸಂಕದಬೈಲ್ ಅವರನ್ನು ಅವರನ್ನು ಸದಸ್ಯರನ್ನಾಗಿ ನೇಮಿಸಿ ಶನಿವಾರ ಸರ್ಕಾರ ಆದೇಶ ಹೊರಡಿಸಿದೆ.
    ಯಕ್ಷಗಾನದಲ್ಲಿ ತೆಂಕಣತಿಟ್ಟು, ಬಡಗುತಿಟ್ಟು, ಮೂಡಲಪಾಯ, ಘಟ್ಟದ ಕೋರೆ ಹೀಗೆ ವಿಭಿನ್ನ ಪ್ರಾಕಾರಗಳಿವೆ. ಬೇರೆ ಬೇರೆ ಜಿಲ್ಲೆಗಳಲ್ಲೂ ತನ್ನದೇ ವಿಶಿಷ್ಟತೆಯನ್ನು ಯಕ್ಷಗಾನ ಶೈಲಿಗಳು ರೂಢಿಯಲ್ಲಿವೆ. ಉಡುಪಿ, ದಕ್ಷಿಣ ಕನ್ನಡ ಮಾತ್ರವಲ್ಲದೇ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲೂ ಯಕ್ಷಗಾನ ಕಲೆ ಹಾಸುಹೊಕ್ಕಾಗಿದೆ. ಅಲ್ಲದೆ, ಮೈಸೂರು, ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು ವ್ಯಾಪ್ತಿಯಲ್ಲಿಯೂ ಯಕ್ಷಗಾನದ ವಿಭಿನ್ನ ಪ್ರಾಕಾರಗಳನ್ನು ಆಡುವುದು ರೂಢಿಯಲ್ಲಿದೆ. ಯಕ್ಷಗಾನ ಅಕಾಡೆಮಿಯನ್ನು ಈ ಎಲ್ಲ ಜಿಲ್ಲೆಗಳ ವ್ಯಾಪ್ತಿ ಸೇರಿಸಿ ರಚಿಸಲಾಗಿದೆ.
    ಈ ಎಲ್ಲ ಜಿಲ್ಲೆಗಳಲ್ಲಿ ನೂರಾರು ಸಂಖ್ಯೆಯ ಕಲಾವಿದರಿದ್ದಾರೆ. ತಾಳಮದ್ದಳೆ ಅರ್ಥಧಾರಿಗಳು, ಭಾಗವತರು, ಚಂಡೆ, ಮೃದಂಗ ವಾದಕರು, ಪ್ರಸಾದನ ಕಲಾವಿದರು. ಯಕ್ಷಗಾನ ಕೃತಿ ಕತೃಗಳು, ಜಾನಪದ ಕಲೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಿದ್ದಾರೆ. ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇಡೀ ಬೇಸಿಗೆಯಲ್ಲಿ ಒಂದಲ್ಲ ಒಂದು ಕಡೆ ಯಕ್ಷಗಾನಗಳು ನಡೆಯುತ್ತಿರುತ್ತವೆ. ಆದರೆ, ಅಕಾಡೆಮಿಯ 10 ಸದಸ್ಯರ ಪೈಕಿ ರಾಜ್ಯ ಇತರ ಜಿಲ್ಲೆಗಳ ಒಬ್ಬೇ ಒಬ್ಬ ಕಲಾವಿದರನ್ನು, ಯಕ್ಷಗಾನ ತಜ್ಞರನ್ನು ಅಕಾಡಮಿಗೆ ನೇಮಿಸಿಕೊಳ್ಳದೇ ಇರುವುದು ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿದೆ ಎಂಬುದು ಯಕ್ಷ ಪ್ರೇಮಿಗಳ ಅಸಮಾಧಾನ.

    ಇದನ್ನೂ ಓದಿ: ಯಕ್ಷಗಾನ ಚಟುವಟಿಕೆ ಉತ್ತೇಜನಕ್ಕೆ ಮೂಡಲಪಾಯ ಯಕ್ಷಗಾನ ಅಕಾಡೆಮಿ ಅವಶ್ಯ

    ಅಕಾಡೆಮಿ ಬಗ್ಗೆ ತಿಳಿಯಿರಿ: https://yakshaganaacademy.karnataka.gov.in/



    ಸರ್ಕಾರ ಮಾಡಿರುವ ಸದಸ್ಯರ ನೇಮಕ ನೋಡಿದರೆ ಅದು ಕರ್ನಾಟಕ ಯಕ್ಷಗಾನ ಅಕಾಡೆಮಿ ಆಗಲಾರದು. ದಕ್ಷಿಣ ಕನ್ನಡ ಯಕ್ಷಗಾನ ಅಕಾಡೆಮಿಯಂತಿದೆ. ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕಡೆಗಣಿಸಿರುವುದು ಖಂಡನೀಯ. ಈ ನೇಮಕ ರದ್ದಾಗಿ ಪುನಾ ರಚನೆಯಾಗಬೇಕು. ಮೂಡಲಪಾಯ, ಘಟ್ಟದ ಕೋರೆ, ಉತ್ತರ ಕನ್ನಡದ ಯಕ್ಷಗಾನ ಪರಂಪರೆಯನ್ನು ಅವಗಣನೆ ಮಾಡಿರುವುದು ಸಾಂಸ್ಕೃತಿಕ ಕ್ಷೇತ್ರದ ದುರಂತ.

    G.L.Hegde
    ಡಾ.ಜಿ.ಎಲ್.ಹೆಗಡೆ ಕುಮಟಾ
    ನಿಕಟಪೂರ್ವ ಅಧ್ಯಕ್ಷರು
    ಕರ್ನಾಟಕ ಯಕ್ಷಗಾನ ಅಕಾಡೆಮಿ


    ……….



    ಯಕ್ಷಗಾನವು ಬೇರೆ, ಬೇರೆ ಪ್ರಕಾರಗಳಿಂದ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿರುವ ಶ್ರೀಮಂತ ಕಲೆ. ಅಕಾಡೆಮಿಯ ಇತಿಹಾಸದಲ್ಲಿಯೇ ಈ ರೀತಿಯ ಅಧ್ಯಕ್ಷ, ಸದಸ್ಯರ ಆಯ್ಕೆಯಾಗಿರಲಿಲ್ಲ. ಅಧ್ಯಕ್ಷರು ಉಡುಪಿ ಜಿಲ್ಲೆಯವರು. ಉಳಿದ ೯ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಕಾಸರಗೋಡು ನೆರೆಯ ಕೇರಳ ರಾಜ್ಯಕ್ಕೆ ಒಳಪಟ್ಟಿದೆ. ಅಲ್ಲಿಂದ ಯಾವ ಮಾನದಂಡದ ಮೇಲೆ ಸದಸ್ಯರನ್ನು ಘನ ಸರ್ಕಾರ ಆಯ್ಕೆ ಮಾಡಿತೋ ಗೊತ್ತಿಲ್ಲ. ಅಕಾಡೆಮಿ ಸದಸ್ಯರ ಪಟ್ಟಿ ನೋಡಿ ಭ್ರಮನಿರಸನವಾಗಿದೆ.

    Nagaraj-Joshi
    ನಾಗರಾಜ ಜೋಶಿ, ಬಾಡಲಕೊಪ್ಪ
    ಯಕ್ಷಗಾನ, ಕಲಾವಿದ, ಸಂಘಟಕ

    ……..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts