More

    ನರ್ಸರಿ ಮಕ್ಕಳ ಗತಿಯೇನು? ಶಾಲಾರಂಭ ವಿಳಂಬವಾದರೂ ಪೂರ್ತಿ ಶುಲ್ಕ ನೀಡಬೇಕೇ?

    ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಶುರುವಾಗುತ್ತಿವೆ. ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು, ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ, ಶಾಲೆಯಲ್ಲಿ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ, ಪಾಲಕರನ್ನು ಹಲವು ಪ್ರಶ್ನೆಗಳು ಕಾಡುತ್ತಿವೆ.

    ಶಾಲಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ಪಾಳಿಗಳಲ್ಲಿ ಶಾಲೆಗಳನ್ನು ನಡೆಸುವ ಚಿಂತನೆ ಹೊಂದಿದೆ. ಇದಕ್ಕಾಗಿ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿ ವರದಿಗಾಗಿ ಕಾಯುತ್ತಿದೆ.

    ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳು ಒಟ್ಟಿಗೆ ಇರುವಲ್ಲಿ ಒಂದು ಹೊತ್ತಿನಲ್ಲಿ ಪ್ರೌಢಶಾಲೆ ಇನ್ನೊಂದು ಹೊತ್ತಿನಲ್ಲಿ ಪಿಯು ಕಾಲೇಜು ನಡೆಸಬಹುದು ಎಂಬ ಸಲಹೆ ಕೂಡ ನೀಡಿದೆ. ಪ್ರಾಥಮಿಕ ಶಾಲೆಗಳಲ್ಲೂ ಕೂಡ 1-4 ಹಾಗೂ 5-7ನೇ ತರಗತಿಯನ್ನು ಪಾಳಿಯಲ್ಲಿ ನಡೆಸುವ ಪ್ರಸ್ತಾವನೆಯೂ ಇದೆ.

    ಇದನ್ನೂ ಓದಿ; ಮುಂಬೈ ರಕ್ಷಣೆಗೀಗ ಕೇಂದ್ರೀಯ ಪಡೆಗಳೇ ದಿಕ್ಕು…! ಏನಾಗಿದೆ ಪೊಲೀಸರಿಗೆ? 

    ಇನ್ನೊಂದೆಡೆ, ಇದಕ್ಕೆಲ್ಲ ಶಿಕ್ಷಕರು ಸಾಕಾಗೋದಿಲ್ಲ, ಪಾಳಿ ಬೇಡವೇ ಬೇಡ ಎಂಬ ವಾದವೂ ತೀವ್ರವಾಗಿದೆ. ಆದರೆ, ಇದೆಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ್ದಾದರೆ, ಪೂರ್ವ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ ಎನ್ನುವುದು ಪಾಲಕರ ಆರೋಪವಾಗಿದೆ.

    ಸದ್ಯ ಲಾಕ್​ಡೌನ್​ ಜಾರಿಯಲ್ಲಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೀರಿದವರು ಮನೆಯಿಂದ ಹೊರಗೆ ಬರಬಾರದು ಎಂದು ಸರ್ಕಾರವೇ ಆದೇಶ ಹೊರಡಿಸಿದೆ. ಇವರು ಕರೊನಾಗೆ ತುತ್ತಾಗುವ ಸಂಭಾವ್ಯತೆ ಹೆಚ್ಚು ಹಾಗೂ ಚಿಕಿತ್ಸೆ ನೀಡುವುದು ಕಷ್ಟ ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿರುವುದು ಸರಿಯಷ್ಟೇ.

    ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗಪ್ಪಾ ಎಂದು ಪಾಲಕರು ಚಿಂತೆಗೀಡಾಗಿದ್ದಾರೆ. ಅದರಲ್ಲೂ ಒಂದು ಮತ್ತು ಎರಡನೇ ತರಗತಿ ಮಕ್ಕಳು ಮನೆಯಲ್ಲಿದ್ದರೆ ಏನೂ ತೊಂದರೆಯಾಗುವುದಿಲ್ಲ ಎನ್ನುತ್ತಿದ್ದಾರೆ. ಹೀಗಿರುವಾಗ ನರ್ಸರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
    ಈಗಾಗಲೇ ಎಲ್​ಕೆಜಿ ಓದುತ್ತಿದ್ದ ಮಕ್ಕಳನ್ನು ಯುಕೆಜಿಗೆ ದಾಖಲಿಸುವಂತೆ ಶಾಲೆಗಳು ದುಂಬಾಲು ಬೀಳುತ್ತಿವೆ. ಶಾಲೆ ಯಾವಾಗಿನಿಂದ ಆರಂಭ ಎಂಬುದು ಅವರಿಗೂ ಗೊತ್ತಿಲ್ಲ. ಸರ್ಕಾರ ಅನುಮತಿ ನೀಡಿದ ಬಳಿಕ ಶುರು ಮಾಡ್ತೇವೆ ಎಂದು ಹೇಳುತ್ತಿದ್ದಾರೆ. ಹೀಗೆ ತಿಂಗಳುಗಳೇ ಕಳೆದು ಹೋದರೆ, ಪೂರ್ತಿ ವರ್ಷಕ್ಕೆ ನಿಗದಿಪಡಿಸುವ ಲಕ್ಷಾಂತರ ರೂ. ಶುಲ್ಕ ನೀಡಿ ಸೇರಿಸಬೇಕೆ ಎಂಬುದು ಪಾಲಕರ ಪ್ರಶ್ನೆಯಾಗಿದೆ.

    ಇದನ್ನೂ ಓದಿ; ಲಾಕ್​ಡೌನ್​ ಸಮಯದಲ್ಲಿ ಸೂರ್ಯನೂ ಥಂಡಾ…! ಏನಿದು ಸೋಲಾರ್​ ಮಿನಿಮಂ? 

    ಹೊಸದಾಗಿ ಎಲ್​ಕೆಜಿಗೆ ಮಕ್ಕಳನ್ನು ಸೇರಿಸಬೇಕೆ ಬೇಡವೇ? ಶಿಶುವಿಹಾರದಲ್ಲಿ ಎಷ್ಟೇ ಮುನ್ನೆಚ್ಚರಿಕೆ ಕೈಗೊಂಡರೂ ವ್ಯಕ್ತಿಗತ ಅಂತರ ಕಾಯ್ದುಕೊಂಡು ಕಲಿಸುವುದು ಸಾಧ್ಯವೇ? ಆಟವಾಡಿಕೊಂಡು ಕಲಿಯಬೇಕಾದ ಮಕ್ಕಳಿಗೆ ದೂರ ದೂರ ಕೂರಿಸಿ ಪಾಠ ಕೇಳಲು ಶಾಲೆಗೆ ಕಳುಹಿಸಬೇಕೆ ಎಂಬ ಪಾಲಕರ ಗೊಂದಲಕ್ಕೆ ಪರಿಹಾರ ಸಿಗುತ್ತಿಲ್ಲ.

    ಲಾಕ್​ಡೌನ್​ ಮುಂದುವರಿದಿದ್ದೇ ಆದಲ್ಲಿ, ಸರ್ಕಾರದ ನಿಯಮದಂತೆ 10 ವರ್ಷದ ಮಕ್ಕಳನ್ನು ಹೊರಗೆ ಕಳುಹಿಸುವಂತಿಲ್ಲ. ಅಲ್ಲಿಗೆ ನಾಲ್ಕನೇ ತರಗತಿವರೆಗಿನ ಮಕ್ಕಳು ಕೂಡ ಶಾಲೆಗೆ ಹೋಗುವಂತಿಲ್ಲ. ಆದ್ದರಿಂದ ಈ ವರ್ಷ ನಾಲ್ಕನೇ ತರಗತಿವರೆಗಿನ ಮಕ್ಕಳು ಮನೆಯಲ್ಲಿದ್ದೇ ಕಲಿಯಲಿ ಬಿಡಿ ಎಂಬ ಸಲಹೆಯೂ ಪಾಲಕರದ್ದಾಗಿದೆ. ಹಾಗಿದ್ದರೆ, ಇವರಿಂದ ಶಾಲೆಗಳು ಪೂರ್ಣ ಶುಲ್ಕ ವಸೂಲಿ ಮಾಡುವುದಿಲ್ಲವೇ? ನರ್ಸರಿ ಶಾಲೆಗಳು ಶುರುವಾಗುತ್ತೋ, ಬಿಡುತ್ತೋ? ಮಕ್ಕಳಿಗೆ ಪ್ರವೇಶ ಕೊಡಿಸಿ ಮನೆಯಲ್ಲಿ ಕೂರಿಸಿಕೊಳ್ಳುವುದೊಂದೇನಾ ದಾರಿ?

    ಇದನ್ನೂ ಓದಿ; ಜುಲೈ 30, 31 ರಂದು ಸಿಇಟಿ, ಸೆಪ್ಟೆಂಬರ್​ 1ರಂದು ಕಾಲೇಜು ಆರಂಭ 

    ಆನ್​ಲೈನ್​ ಶಿಕ್ಷಣ, ಡಿಜಿಟಲ್​ ತರಗತಿ ಸೇರಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕರೊನಾ ಭಾರಿ ಬದಲಾವಣೆ ತರುತ್ತಿದೆ. ಅಷ್ಟೇ ಗೊಂದಲಗಳಿಗೂ ಕಾರಣವಾಗಿದೆ. ಹೀಗಿರುವಾಗ ಸರ್ಕಾರ ಕೊನೆಯ ಕ್ಷಣದವರೆಗೂ ಕಾಯದೇ ನಿರ್ಧಾರ ಪ್ರಕಟಿಸಬೇಕು ಎಂಬುದು ಪಾಲಕರ ಒತ್ತಾಯವಂತೂ ಹೌದು.

    ರಸ್ತೆಯಲ್ಲಿ ಸಿಕ್ಕ 75 ಲಕ್ಷ ರೂ. ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ದಂಪತಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts