More

    ಯೋಚನೆ ಮಾಡಿದ್ದರೆ ಸಿನಿಮಾ ಆಗ್ತಿರಲಿಲ್ಲ; ಮುಖಾಮುಖಿ ಸಂವಾದದಲ್ಲಿ ರಿಷಬ್ ಶೆಟ್ಟಿ

    ‘ಕಾಂತಾರ’ ಇಷ್ಟೊಂದು ದೊಡ್ಡ ಯಶಸ್ಸು ಸಾಧಿಸಬಹುದು ಎಂದು ರಿಷಬ್ ಆಗಲೀ, ಚಿತ್ರತಂಡದವರಾಗಲೀ ನಿರೀಕ್ಷಿಸಿರಲಿಲ್ಲ. ಆದರೆ, ಅವರ ನಿರೀಕ್ಷೆಯನ್ನೂ ಮೀರಿ ಚಿತ್ರ ಹಲವು ದಾಖಲೆ ಮಾಡುವುದರ ಜತೆಗೆ ದೊಡ್ಡ ಯಶಸ್ಸು ಪಡೆದಿದೆ. ಆ ಯಶಸ್ಸಿನಿಂದ ರಿಷಬ್, ‘ಕಾಂತಾರ 2’ ಚಿತ್ರವನ್ನು ಘೋಷಿಸಿದ್ದೂ ಆಗಿದೆ. ಆ ಚಿತ್ರದಲ್ಲಿ ತೊಡಗಿಸಿಕೊಳ್ಳುವ ಮುನ್ನ ರಿಷಬ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಮುಖಾಮುಖಿ’ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿ ಹಲವು ವಿಷಯಗಳನ್ನು ಮನಬಿಚ್ಚಿ ಮಾತಾಡಿದ್ದಾರೆ.

    ಲಾಕ್​ಡೌನ್​ನಲ್ಲಿ ಹುಟ್ಟಿದ ಕಥೆ ಇದು. ಆ ಸಮಯದಲ್ಲಿ ಸಾವಯವ ಕೃಷಿ ಮಾಡೋಣ ಎನ್ನುವ ಯೋಚನೆ ಇತ್ತು. ಸಾವಯವ ಕೃಷಿಯಲ್ಲಿನ ಬೆಳೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆ ಸಂದರ್ಭದಲ್ಲಿ ಸ್ನೇಹಿತ ತನ್ನ ಮನೆಯಲ್ಲಾದ ಕಥೆಯನ್ನು ಹೇಳಿದ. ಆ ವಿಷಯ ನನ್ನಲ್ಲಿ ಕೊರೆಯುತ್ತಲಿತ್ತು. ನಂತರ ಇನ್ನೊಮ್ಮೆ ಸಿಕ್ಕಾಗ, ಮುಂದೆ ಯಾವ ಸಿನಿಮಾ ಎಂದ? ನಿಮ್ಮಪ್ಪನ ಕಥೆಯನ್ನೇ ಸಿನಿಮಾ ಮಾಡುತ್ತೇನೆ ಎಂದೆ. ಹಾಗೆ ಶುರುವಾದ ಚಿತ್ರವೇ ‘ಕಾಂತಾರ’.

    ನಾನು ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದೇನೆ ಅಂತ ಅನಿಸಲೇ ಇಲ್ಲ. ಶಿವನಾಗಿ ವರ್ತಿಸಿದೆ ಅಷ್ಟೇ. ಒಂದು ವರ್ಷ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ, ನನ್ನ ಹಲ್ಲು ಕ್ಲೀನ್ ಮಾಡೋದು ಕಷ್ಟ ಆಯ್ತು. ಒಂದು ವರ್ಷ ಬೀಡಾ ಹಾಕಿಕೊಂಡು, ಲುಂಗಿ ಉಟ್ಟುಕೊಂಡು ಊರಲ್ಲಿದ್ದೆ. ನಾನು ನೋಡಿದ ಪಾತ್ರಗಳಾದ್ದರಿಂದ ಯಾವುದೇ ಕಷ್ಟವಾಗಲಿಲ್ಲ. ನಿಜ ಹೇಳಬೇಕೆಂದರೆ, ಈ ಪಾತ್ರದ ಬಗ್ಗೆ ನಾನು ಯೋಚನೆಯೇ ಮಾಡಿರಲಿಲ್ಲ. ಚಿತ್ರ ಗೆದ್ದಾದ ಮೇಲೆ ಎಲ್ಲರೂ ಪಾತ್ರ ಎಷ್ಟು ಚಾಲೆಂಜಿಂಗ್ ಆಗಿತ್ತು ಅಂತ ಹೇಳಿದಾಗಲೇ ಯೋಚನೆ ಮಾಡಿದ್ದು. ಬಹುಶಃ ಮೊದಲೇ ಯೋಚನೆ ಮಾಡಿದ್ದರೆ ಸಿನಿಮಾ ಮಾಡೋಕೆ ಆಗುತ್ತಿರಲಿಲ್ಲವೇನೋ? ಆಗಿದ್ದರೂ ಇನ್ನೊಂದು ವರ್ಷ ಜಾಸ್ತಿಯಾಗುತ್ತಿತ್ತು.

    ಪ್ರತಿ ಸಿನಿಮಾದಲ್ಲೂ ಸವಾಲುಗಳಿರುತ್ತವೆ. ಪ್ರತಿ ಘಟ್ಟದಲ್ಲೂ ಸವಾಲುಗಳಿರುತ್ತವೆ ಮತ್ತು ಆ ಅನುಭವಗಳು ಎಲ್ಲ ಚಿತ್ರತಂಡಗಳಿಗೂ ಆಗುತ್ತವೆ. ಒಂದು ಒಳ್ಳೆಯ ಚಿತ್ರ ಮಾಡಬೇಕು ಎಂದು ಪ್ರತಿಯೊಬ್ಬರೂ ಆಸೆಪಡುತ್ತಾರೆ. ಆದರೆ, ಸಿನಿಮಾ ಒಳ್ಳೆಯದೋ, ಕೆಟ್ಟದ್ದೋ ಎಂದು ಜನ ತೀರ್ವನಿಸಬೇಕು. ಸವಾಲು ನಿಜವಾಗಲೂ ಇರುತ್ತದೆ. ಈಗ ‘ಕಾಂತಾರ’ ಹೇಗೆ ಮಾಡಿದೆನೋ, ‘ಕಾಂತಾರ 2’ ಚಿತ್ರವನ್ನು ಸಹ ಶೂನ್ಯದಿಂದ ಶುರು ಮಾಡುತ್ತೇನೆ. ಸವಾಲು ಇದ್ದೇ ಇರುತ್ತದೆ.

    ‘ಕಾಂತಾರ 2’ ಚಿತ್ರದ ಕಥೆ ಹೊಳೆದಾಗ ಅದನ್ನು ಕೆಲವು ಸ್ನೇಹಿತರೊಂದಿಗೆ ಚರ್ಚೆ ಮಾಡಿದೆ. ಪ್ರಮುಖವಾಗಿ ರಕ್ಷಿತ್ ಶೆಟ್ಟಿಗೆ ಹೇಳಿದೆ. ಈ ಕಥೆಯನ್ನು ಭವಿಷ್ಯದಲ್ಲಿ ಹೇಳೋದು ಕಷ್ಟ. ಈಗ ಹೇಳಬೇಕು ಅಂತನಿಸುತ್ತಿದೆ. ಆ ಯೋಚನೆಯನ್ನು ತಲೆಯಲ್ಲಿಟ್ಟುಕೊಂಡು, ಇನ್ನೊಂದು ಚಿತ್ರ ಮಾಡಿದರೆ, ಆ ಚಿತ್ರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಆಗ ಸ್ನೇಹಿತರೆಲ್ಲ ‘ಕಾಂತಾರ 2’ ಚಿತ್ರವನ್ನು ಮುಂದುವರೆಸು ಎಂದರು. ಅಂತಹ ಒಳ್ಳೆಯ ಸ್ನೇಹಿತರು ಇರುವುದರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ಒಬ್ಬ ನಿರ್ದೇಶಕನಾಗಿ ಬೇಗ ಕಥೆ ಹೇಳಬೇಕು. ನಟನಾಗಿಯಲ್ಲ.

    ಉತ್ಸಾಹ, ನಿರೀಕ್ಷೆ ಎರಡೂ ಕಷ್ಟ …: ನಾನು ಎರಡು ವಿಷಯಗಳನ್ನು ತಲೆಗೆ ತೆಗೆದುಕೊಳ್ಳೋದಕ್ಕೆ ಹೋಗಲ್ಲ. ಅತಿಯಾದ ಉತ್ಸಾಹ ಮತ್ತು ನಿರೀಕ್ಷೆ ಎರಡೂ ತುಂಬಾ ನೋವು ಕೊಡುತ್ತದೆ. ನಾನು ಕೆಲಸ ಮಾತ್ರ ಮಾಡುತ್ತೇನೆ. ನನ್ನ ಸಿನಿಮಾ ಯಾವತ್ತೂ ಬೇರೆ ಭಾಷೆಗೆ ಹೋಗಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅದು ಪ್ಯಾನ್ ಇಂಡಿಯಾ ಸಿನಿಮಾ ಆಯಿತು. ನನ್ನ ಮುಖವೇ ಗೊತ್ತಿಲ್ಲದೆ ಕಡೆಯಲ್ಲೆಲ್ಲಾ ಚಿತ್ರ ನೋಡಿದ್ದಾರೆ ಮತ್ತು ಗೆಲ್ಲಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದಕ್ಕಿಂತ ಭಾರತದ ಇನ್ನೊಂದು ಭಾಷೆಯ ಸಿನಿಮಾ ಎನ್ನಬಹುದು. ಭಾಷೆಯ ಗಡಿ ದಾಟುತ್ತಿದ್ದೇವೆ. ನಮ್ಮ ಪ್ರಾದೇಶಿಕ ಕಂಟೆಂಟ್ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಹೇಳಿದರೆ ಜನರ ಗಮನ ಸೆಳೆಯಬಹುದು.

    40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

    110ನೇ ವರ್ಷದಲ್ಲಿ ಹೊಸ ಕೇಶ, ಹೊಸ ಹಲ್ಲು: ‘ಮರುಹುಟ್ಟನ್ನು’ ಸಂಭ್ರಮಿಸಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts