More

    ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!

    ಕೇಪ್​ಟೌನ್​: ಪಾಕಿಸ್ತಾನದ ಲಾಹೋರ್​ನಲ್ಲಿ ಜನಿಸಿದ ಸ್ಪಿನ್​ ಬೌಲರ್​ ಇಮ್ರಾನ್​ ತಾಹಿರ್​, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಿರುವುದು ದಕ್ಷಿಣ ಆಫ್ರಿಕಾ ಪರ. 19 ವಯೋಮಿತಿ ಕ್ರಿಕೆಟ್​ನಲ್ಲಿ ಪಾಕಿಸ್ತಾನ ಪರ ಆಡಿರುವ ಅವರು, ಪಾಕಿಸ್ತಾನ ಎ ತಂಡದಲ್ಲೂ ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಪಾಕಿಸ್ತಾನ ಆಡಲು ಬಯಸಿದ್ದ ತಾಹಿರ್​, ಕೊನೆಗೆ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದರ ಹಿಂದೆ ರೋಚಕ ಲವ್​ ಸ್ಟೋರಿ ಇದೆ. ಅದರ ವಿವರವನ್ನು ಈಗ ತಾಹಿರ್​ ಅವರೇ ಹಂಚಿಕೊಂಡಿದ್ದಾರೆ.

    ‘ನಾನು ಲಾಹೋರ್​ನಲ್ಲಿ ಕ್ರಿಕೆಟ್​ ಆಡುತ್ತ ಬೆಳೆದಿದ್ದೆ. ನನ್ನ ಕ್ರಿಕೆಟ್​ ಬೆಳವಣಿಗೆಯಲ್ಲಿ ಲಾಹೋರ್​ ಮಹತ್ವದ ಪಾತ್ರ ನಿರ್ವಹಿಸಿದೆ. ನನ್ನ ಜೀವನದ ಹೆಚ್ಚಿನ ಕ್ರಿಕೆಟ್​ ಆಟವನ್ನು ಪಾಕಿಸ್ತಾನದಲ್ಲೇ ಆಡಿರುವೆ. ಆದರೆ ಪಾಕಿಸ್ತಾನ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ನನಗೆ ಸಿಗಲಿಲ್ಲ. ಆ ಬಗ್ಗೆ ನನಗೆ ಬೇಸರವಿದೆ. ಪಾಕಿಸ್ತಾನವನ್ನು ಬಿಡುವುದು ನನ್ನ ಜೀವನದ ಕಠಿಣ ನಿರ್ಧಾರವಾಗಿತ್ತು. ಆದರೆ ದೇವರ ದಯೆ ನನ್ನ ಮೇಲಿತ್ತು. ನಾನು ದಕ್ಷಿಣ ಆಫ್ರಿಕಾ ಪರ ಆಡಿದ ಶ್ರೇಯ ನನ್ನ ಪತ್ನಿಗೆ ಸಲ್ಲಬೇಕು’ ಎಂದು 41 ವರ್ಷದ ಇಮ್ರಾನ್​ ತಾಹಿರ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ 1000ನೇ ಪೋಸ್ಟ್​ ವಿಶೇಷವಾಗಿ ಸಂಭ್ರಮಿಸಿದ ವಿರಾಟ್​ ಕೊಹ್ಲಿ

    1998ರಲ್ಲಿ ಪಾಕಿಸ್ತಾನದ 19 ವಯೋಮಿತಿ ತಂಡದ ಭಾಗವಾಗಿ ಕಿರಿಯರ ವಿಶ್ವಕಪ್​ನಲ್ಲಿ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ತಾಹಿರ್​ಗೆ ಅಲ್ಲಿ ಸುಮಯ್ಯ ದಿಲ್ದಾರ್​ ಎಂಬ ಹಿಂದು ಮಹಿಳೆಯ ಮೇಲೆ ಪ್ರೀತಿ ಹುಟ್ಟಿತ್ತು. ಪಾಕಿಸ್ತಾನಕ್ಕೆ ಮರಳಿದ ಬಳಿಕವೂ ಅವರಿಗೆ ಆಕೆಯನ್ನು ಮರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಮತ್ತೆ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಅಲ್ಲಿ ಮತ್ತೆ ಆಕೆಯನ್ನು ಭೇಟಿಯಾದರು. ಆಕೆಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡಾಗ ಮೊದಲಿಗೆ ಒಪ್ಪಕೊಳ್ಳದಿದ್ದರೂ, ಕೊನೆಗೆ ತಾಹಿರ್​ರ ಪ್ರೀತಿಗೆ ಸೋತರು. ಆದರೆ ಸುಮಯ್ಯ ತಾಹಿರ್​ರನ್ನು ಮದುವೆಯಾಗಲು ಒಪ್ಪಿದರೂ, ಪಾಕಿಸ್ತಾನಕ್ಕೆ ತೆರಳಲು ಸಿದ್ಧರಿರಲಿಲ್ಲ ಮತ್ತು ದಕ್ಷಿಣ ಆಫ್ರಿಕಾದಲ್ಲೇ ಇರುವುದಾಗಿ ತಿಳಿಸಿದ್ದರು. ಆಕೆಯ ಷರತ್ತಿಗೆ ಒಪ್ಪಿಕೊಂಡ ತಾಹಿರ್​ ದಕ್ಷಿಣ ಆಫ್ರಿಕಾದಲ್ಲೇ ಕ್ರಿಕೆಟ್​ ಆಡಲಾರಂಭಿಸಿದ್ದರು. ಕೊನೆಗೆ 2005ರಲ್ಲಿ ದಕ್ಷಿಣ ಆಫ್ರಿಕಾದ ಪೌರತ್ವ ಪಡೆದ ತಾಹಿರ್​, ರಾಷ್ಟ್ರೀಯ ಕ್ರಿಕೆಟ್​ ತಂಡದ ಪರವಾಗಿಯೂ ಆಡಲು ಅರ್ಹತೆ ಪಡೆದುಕೊಂಡಿದ್ದರು. ಕಳೆದ ವರ್ಷದ ಏಕದಿನ ವಿಶ್ವಕಪ್​ವರೆಗೆ ಅವರು ದಕ್ಷಿಣ ಆಫ್ರಿಕಾ ಪರ 20 ಟೆಸ್ಟ್​, 107 ಏಕದಿನ ಮತ್ತು 38 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 57, 173 ಮತ್ತು 63 ವಿಕೆಟ್​ ಕಬಳಿಸಿದ್ದಾರೆ. 5 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ದೇಶೀಯ ಕ್ರಿಕೆಟ್​ನಲ್ಲಿ ಆಡಿದ ಬಳಿಕ 2011ರಲ್ಲಿ ತಾಹಿರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ಐಪಿಎಲ್​ನಲ್ಲಿ ತಾಹಿರ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ.

    ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!

    ತಾಹಿರ್​ ಜತೆಗಿನ ಲವ್​ ಸ್ಟೋರಿಯ ಬಗ್ಗೆ ಈ ಹಿಂದೆ ಸುಮಯ್ಯ ದಿಲ್ದಾರ್​ ಕೂಡ ಹೇಳಿಕೊಂಡಿದ್ದರು. ’19 ವಯೋಮಿತಿ ವಿಶ್ವಕಪ್​ ಪಂದ್ಯವೊಂದನ್ನು ನೋಡಲು ಕುಟುಂಬದ ಜತೆಗೆ ಮೈದಾನಕ್ಕೆ ಹೋಗಿದ್ದ ನಾನು ಅಲ್ಲಿ ಮೊದಲ ಬಾರಿಗೆ ತಾಹಿರ್​ರನ್ನು ನೋಡಿದ್ದೆ. ಪ್ರೇಕ್ಷಕರ ನಡುವೆ ಅವರು ನನ್ನನ್ನು ನೋಡಿದ್ದರು. 2 ದಿನಗಳ ಬಳಿಕ ಅವರು ಲಾಹೋರ್​ಗೆ ಮರಳುವವರಿದ್ದರು. ವಿಮಾನ ನಿಲ್ದಾಣದಲ್ಲಿ ನಾನು ಆಗ ಮತ್ತೆ ಅವರನ್ನು ನೋಡಿದ್ದೆ. ನಂತರ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದ ಅವರು ಧೈರ್ಯಮಾಡಿ ನನ್ನ ಹೆತ್ತವರನ್ನು ಮಾತನಾಡಿಸಿದ್ದರು. ಬಳಿಕ ನಮ್ಮ ನಡುವೆ ಪ್ರೀತಿ ಹುಟ್ಟಿತ್ತು ಮತ್ತು ಮದುವೆಯಾಗಿದ್ದೆವು’ ಎಂದು ಸುಮಯ್ಯ ವಿವರಿಸಿದ್ದರು. ತಾಹಿರ್​-ಸುಮಯ್ಯ ದಂಪತಿ ಗಿಬ್ರನ್​ ಹೆಸರಿನ ಪುತ್ರನನ್ನು ಹೊಂದಿದ್ದಾರೆ.

    ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts