More

    ಜಲಸ್ಫೋಟಕ್ಕೆ ಮಾನವನೇ ಕಾರಣ

    ಶ್ರವಣ್‌ಕುಮಾರ್ ನಾಳ, ಪುತ್ತೂರು
    ಕಳೆದ ಮಳೆಗಾಲದಲ್ಲಿ ಪಶ್ಚಿಮಘಟ್ಟದ ಸುತ್ತಮುತ್ತ ಜಲಸ್ಫೋಟ, ಗುಡ್ಡಕುಸಿತ ಸಹಿತ ಪ್ರಾಕೃತಿಕ ವಿಕೋಪ ಸಂಭವಿಸಲು ಪಶ್ಚಿಮಘಟ್ಟದ ಭೌಗೋಳಿಕ ವಿನ್ಯಾಸಕ್ಕೆ ಹಾನಿಯಾಗಿರುವುದೇ ಮೂಲ ಕಾರಣ ಎಂಬುದಾಗಿ ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ತಜ್ಞರ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಗಡಿಭಾಗದ 22 ಕಿ.ಮೀ. ವ್ಯಾಪ್ತಿಯ ಏಳು ಬೆಟ್ಟಗಳಾದ ದುರ್ಗದ ಬೆಟ್ಟ, ಬಾಳೆಗುಡ್ಡ, ಹೊಸಮನೆ ಗುಡ್ಡ, ದೊಡ್ಡೇರಿ ಬೆಟ್ಟ, ಬಾಳಾರುಗುಡ್ಡ, ಎಳೆಮನೆಗುಡ್ಡ, ರಾಮನಗುಡ್ಡದಲ್ಲಿ 2019ರ ಆಗಸ್ಟ್ 9ರಂದು ಜಲಸ್ಫೋಟ ಸಂಭವಿಸಿ ಈ ಜಿಲ್ಲೆಗಳು ಅಪಾರ ನಷ್ಟ ಅನುಭವಿಸಿವೆ. ಘಟನೆಗೆ ಕಾರಣವೇನು ಎಂಬುದರ ಕುರಿತು ಸಂಶೋಧನೆ ನಡೆಸಲು ಸರ್ಕಾರ ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್‌ರನ್ನು ನೇಮಿಸಿತ್ತು. ಅಧ್ಯಯನ ನಡೆಸಿದ ಈ ತಂಡ ದಾಖಲೆ ಸಹಿತ 100 ಪುಟಗಳ ವರದಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ನೀಡಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಈ ವರದಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

    36 ಪ್ರದೇಶದ ಚಿತ್ರಣ ಬದಲು: ಪಶ್ಚಿಮಘಟ್ಟದ ಮಲೆಮನೆ ಬೆಟ್ಟ, ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆಗುಡ್ಡ, ಹೊಸಮನೆ ಗುಡ್ಡ ಬಹುತೇಕ ಅತಿಕ್ರಮಣಕ್ಕೊಳಗಾಗಿದ್ದು, ಇಲ್ಲಿ ನೀರಿನ ತೊರೆ, ಹೊಳೆಗಳ ದಿಕ್ಕು ಬದಲಿಸಲಾಗಿದೆ. ಬಹುತೇಕ ಕಡೆಗಳಲ್ಲಿ ನೀರಿನ ಮೂಲಗಳನ್ನೇ ಬಲವಂತವಾಗಿ ಮುಚ್ಚಲಾಗಿದೆ. ಬೆಟ್ಟಗಳ ಮೇಲೆ ತೊರೆಗಳಿಗೆ ಅಡ್ಡಕಟ್ಟಿ ಮಾನವನ ಅನುಕೂಲಕ್ಕಾಗಿ ಕೆರೆಗಳನ್ನು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ನೀರಿನ ಒತ್ತಡ ಹೆಚ್ಚಾದಾಗ ಬೆಟ್ಟ ಸೀಳಿ ಒಮ್ಮಿಂದೊಮ್ಮೆಲೆ ಸಿಡಿದು ನೀರು ಹೊರಬಂದಾಗ ತಗ್ಗು ಪ್ರದೇಶ ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗುತ್ತದೆ. ಇದರಿಂದ ದ.ಕ ಹಾಗೂ ಚಿಕ್ಕಮಗಳೂರು ಪಶ್ಚಿಮಘಟ್ಟ ಗಡಿಭಾಗದ ಮಲೆಮನೆ, ಸುಂದರ್‌ಬೈಲು, ಚನ್ನಹಡ್ಲು, ಬಾಳೂರು ಹೊರಟಿ, ಕುಕ್ಕಾವು, ಚಾರ್ಮಾಡಿಯ ಕೊಳಂಬೆ, ಅರಣೆಪಾದೆ, ಪೆರ್ಲ ಮಕ್ಕಿ, ಎಲ್ಯರಕಂಡ, ದೈಪಿತ್ತಿಲು ಸೇರಿದಂತೆ 36 ಪ್ರದೇಶದ ಚಿತ್ರಣವೇ ಬದಲಾಗಿದೆ ಎಂದು ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.

     3 ತಿಂಗಳಲ್ಲಿ 48 ಸ್ಥಳ ತನಿಖೆ: ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ನೇತೃತ್ವದ ತಂಡ ಘಟನಾ ದಿನದಿಂದ ನಿರಂತರ ಮೂರು ತಿಂಗಳು 48 ಪ್ರದೇಶಗಳಿಗೆ ತೆರಳಿ ಸ್ಥಳ ತನಿಖೆ ನಡೆಸಿ ಪಶ್ಚಿಮಘಟ್ಟದ ಗುಡ್ಡಗಳ ಅತಿಕ್ರಮಣ, ನೀರಿನ ಸ್ವಾಭಾವಿಕ ಹರಿಯುವಿಕೆಗೆ ಅಡ್ಡಿ, ಬೆಟ್ಟದ ಮೇಲೆ ಕೆರೆ ನಿರ್ಮಾಣ ಗುರುತಿಸಿ ಸಾಕ್ಷ್ಯ ಸಹಿತ ವರದಿಯಲ್ಲಿ ಉಲ್ಲೇಖಿಸಿದೆ. ಜತೆಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಅಪಾಯದ ಬಗ್ಗೆಯೂ ಎಚ್ಚರಿಸಿದೆ.
     
    ಸರ್ಕಾರಕ್ಕೆ ಸಾಕ್ಷ್ಯ ಸಲ್ಲಿಕೆ: ವಿಜ್ಞಾನಿಗಳು ಆರಂಭದಲ್ಲಿ ಈ ಹಿಂದಿನ ಸ್ಯಾಟ್‌ಲೈಟ್ ಚಿತ್ರ ಪಡೆದು ಅಧ್ಯಯನ ಆರಂಭಿಸಿದರು. ಈ ವೇಳೆ ಪಶ್ಚಿಮಘಟ್ಟದ ಭೌಗೋಳಿಕ ವಿನ್ಯಾಸ, ಭೂ ರಚನೆ, ನೀರು ಹರಿಯುವ ಪಥ ಬದಲಾಗಿರುವ ದಾಖಲೆ ಸಂಗ್ರಹಿಸಿದರು. ಸ್ವಾಭಾವಿಕವಾಗಿದ್ದ ತೊರೆ, ಬೆಟ್ಟಗಳನ್ನು ಪತ್ತೆ ಹಚ್ಚಿ, ಪ್ರಸ್ತುತ ಇದು ಬದಲಾಗಿ ಕಾಫಿ ತೋಟ, ಎಸ್ಟೇಟ್, ರೆಸಾರ್ಟ್‌ಗಳಾಗಿ ಬದಲಾಗಿರುವುದನ್ನೂ ವರದಿಯಲ್ಲಿ ತಿಳಿಸಿದ್ದಾರೆ. ಬೆಟ್ಟಗುಡ್ಡಗಳ ಸ್ವಾಭಾವಿಕ ರಚನೆ ಹಾಗೂ ಮಾನವನ ಹಸ್ತಕ್ಷೇಪದಿಂದ ಬದಲಾದ ಭೂರಚನೆಯ ಸಾಕ್ಷ್ಯವನ್ನೂ ತನಿಖಾ ವರದಿಯಲ್ಲಿ ಚಿತ್ರಿಸಿ ಸರ್ಕಾರಕ್ಕೆ ಸಮಗ್ರ ಸಾಕ್ಷ್ಯ ಒದಗಿಸಿದ್ದಾರೆ.

     ಪಶ್ಚಿಮಘಟ್ಟದ ಸುತ್ತಮುತ್ತ ಸಂಭವಿಸಿದ ಪ್ರಕೃತಿಕ ವಿಕೋಪಗಳಿಗೆ ತಕ್ಷಣದ ಕಾರಣ ಹಾಗೂ ಇದರಿಂದ ದೀರ್ಘಾವಧಿಯಲ್ಲಿ ಸಂಭವಿಸಬಹುದಾದ ಘಟನೆಗಳನ್ನು ತನಿಖೆ ಮಾಡಿ ವರದಿ ಒಪ್ಪಿಸಲಾಗಿದೆ. ಕಾಲುವೆ ನಾಶ, ನೀರಿನ ಸಹಜ ಹರಿಯುವಿಕೆಗೆ ಅಡ್ಡಿ ಸೇರಿದಂತೆ ಭೌಗೋಳಿಕ ವಿನ್ಯಾಸ ಬದಲಾಗಿರುವುದೇ ಪಶ್ಚಿಮಘಟ್ಟದಲ್ಲಿ ಇಂತಹ ದುರ್ಘಟನೆಗೆ ಕಾರಣವಾಯಿತು.
    – ಕಪಿಲ್ ಸಿಂಗ್, ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts