More

    ಶಾರದಾ ಗ್ರಾಮ; ಪಾಕ್ ಆಕ್ರಮಿತ ಕಾಶ್ಮೀರದಲ್ಲೊಂದು ಪವಿತ್ರ ಹಿಂದು ಹಳ್ಳಿ

    ತಾಯಿ ಶಾರದೆಯನ್ನು ಕಾಶ್ಮೀರಪುರವಾಸಿನಿ ಎನ್ನುತ್ತಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಮಂದಿರ ಶತಮಾನಗಳಿಂದ ಪಾಳು ಬಿದ್ದಿದೆ. ಇತ್ತೀಚೆಗಷ್ಟೇ ಅನತಿ ದೂರದಲ್ಲಿ ನೂತನ ಶಾರದಾಮಂದಿರವನ್ನು ನಿರ್ವಿುಸಿ ಲೋಕಾರ್ಪಣೆ ಮಾಡಲಾಗಿದೆ. ಆ ಕಾರ್ಯಕ್ರಮದಲ್ಲಿ ಸ್ವತಃ ಭಾಗವಹಿಸಿದ್ದ ಲೇಖಕರು, ಪಿ.ಒ.ಕೆ.ಯಲ್ಲಿರುವ ಶಾರದಾ ಗ್ರಾಮದ ಕುರಿತು ಈ ಬರಹದಲ್ಲಿ ಮಾಹಿತಿ ನೀಡಿದ್ದಾರೆ.

    ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

    ದೇಶದ 18 ಶಕ್ತಿಪೀಠಗಳಲ್ಲಿ ಕಾಶ್ಮೀರದಲ್ಲಿರುವ ಶಾರದಾ ಮಂದಿರವೂ ಒಂದು. ಇಲ್ಲಿ ಶಾರದೆಯೇ ಸ್ವತಃ ಮೂರ್ತಿರೂಪದಲ್ಲಿ ನೆಲೆ ನಿಂತಿದ್ದಳು. ಕಾಶ್ಮೀರಿ ಪಂಡಿತರ ಇಷ್ಟದೇವಿಯಾಗಿ, ಶಕ್ತಿರೂಪಿಣಿಯಾಗಿ, ಶೈವಸಂಪ್ರದಾಯಕ್ಕೆ ಅನುಗುಣವಾಗಿ ಪೂಜಿಸಲ್ಪಡುತ್ತಿದ್ದ ದೇವಿ. ಇಲ್ಲಿ ಪ್ರತಿನಿತ್ಯ ಪೂಜೆ, ಪಾಠ, ಅಧ್ಯಯನ ನಡೆಯುತ್ತಿತ್ತು. ಲಕ್ಷಾಂತರ ಯಾತ್ರಿಕರು ದೇಶ-ವಿದೇಶಗಳಿಂದ ಸಾವಿರಾರು ವರ್ಷಗಳ ಕಾಲ ಭೇಟಿ ನೀಡುತ್ತಿದ್ದರು. ಪಂಡಿತರಿಗೆ, ಜ್ಞಾನಿಗಳಿಗೆ, ವಿದ್ವಾಂಸರಿಗೆ ಇದು ಆಕರ್ಷಣೆಯ ಕೇಂದ್ರವಾಗಿತ್ತು.

    ಶಾರದಾ ಪೀಠ ಇರುವ ಪ್ರದೇಶದಲ್ಲಿ ಹಿಂದೆ ಬೌದ್ಧ ವಿಹಾರಗಳಿದ್ದವು. ಕ್ರಿ.ಶ. 631ರಲ್ಲಿ ಹ್ಯುಯೆನ್ ತ್ಸಾಂಗ್ ಕಾಶ್ಮೀರಕ್ಕೆ ಬಂದಾಗ ಅಲ್ಲಿನ ದೊರೆಯು ಅವನನ್ನು ಎದುರುಗೊಂಡು ಅವನ ಅಧ್ಯಯನಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದನಂತೆ. 2005ರಲ್ಲಿ ಸಂಭವಿಸಿದ ಭೂಕಂಪದಿಂದ ಮಂದಿರದ ಹೆಚ್ಚು ಭಾಗ ನಷ್ಟವಾಗಿ ಈಗ ನಾವು ನೋಡುತ್ತಿರುವ ಅವಶೇಷಗಳ ಮಂಟಪವೊಂದು ಮಾತ್ರ ಉಳಿದಿದೆ. ಇದು ಗರ್ಭಗೃಹವೇ ಎಂದು ಖಚಿತವಾಗಿ ಹೇಳಲೂ ಸಾಧ್ಯವಿಲ್ಲ.

    1948ರಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧದ ನಂತರ ಅಲ್ಲಿನ ಸರ್ಕಾರ ಶಾರದಾ ದೇವಾಲಯ ಇರುವುದನ್ನು ಒಪ್ಪಿಕೊಂಡು ಅದರ ರಕ್ಷಣೆಯ ಹೊಣೆಯನ್ನು ಹೊತ್ತಿದೆ. ಶಾರದಾ ವಿಶ್ವವಿದ್ಯಾಲಯ ಇದ್ದುದಕ್ಕೆ ಪುರಾವೆಗಳಿವೆ. ಇಲ್ಲಿಗೆ ಹಲವಾರು ದೇಶಗಳಿಂದ ಅಧ್ಯಯನಕ್ಕೆ ಜನರು ಬರುತ್ತಿದ್ದರು. ಲಿಪಿಗಳಲ್ಲಿ ಸಂಸ್ಕೃತಕ್ಕಿಂತ ಹಳೆಯದಾದ ಶಾರದಾ ಲಿಪಿ ಸಹ ಇಲ್ಲಿತ್ತು ಎಂದು ಕಂಡುಬಂದಿದೆ. ಇಲ್ಲಿರುವ ಜನರು ಶಾರದೆ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದಾರೆ. ಮಾತನಾಡುವಾಗ ಕೆಲವು ಸಂದರ್ಭಗಳಲ್ಲಿ ಶಾರದೆ ಮೇಲೆ ಆಣೆ ಸಹ ಹಾಕುತ್ತಾರೆ. ಶತಶತಮಾನಗಳ ಹಿಂದಿನಿಂದಲೂ ಯಾವಾಗ ಇಲ್ಲಿ ಶಾರದೆ ನೆಲೆಸಿದಳೋ ಅಂದಿನಿಂದ ಈ ಗ್ರಾಮವು ‘ಶಾರದಾ ಗ್ರಾಮ’ ಎಂದು ಪ್ರಚಲಿತವಾಗಿದೆ. ಈಗಲೂ ಸಹ ಶಾರದಾ ಗ್ರಾಮ ಎಂತಲೇ ಕರೆಯುತ್ತಾರೆ.

    ಶಾರದಾ ಗ್ರಾಮದಲ್ಲಿ ಹಿಂದುಗಳು ಯಾರೂ ವಾಸವಾಗಿಲ್ಲ. ಅಲ್ಲಿರುವ ಮುಸ್ಲಿಮರಿಗೆ ಕೂಡ ಶಾರದೆ ಮೇಲೆ ಭಕ್ತಿ ಇದೆ. ಆಗಾಗ ಶಾರದಾ ಪೀಠಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅಲ್ಲಿ ಈಗಲೂ ಶಾರದೆಯ ಹೆಸರಿನಲ್ಲಿ ಹೊಟೇಲ್, ಅಂಗಡಿಗಳು, ಶಾಲೆಗಳು ಇವೆ. ಇದಕ್ಕೆ ಅಲ್ಲಿನ ಜನರಿಗೆ ಶಾರದೆ ಮೇಲೆ ಇರುವ ಭಕ್ತಿಯೇ ಕಾರಣ. ಈ ಪ್ರದೇಶದಲ್ಲಿ ಶಾರದಾ ದೇವಾಲಯ ಆಗಬೇಕು ಎಂಬುದು ಅವರ ಆಸೆ. ಸ್ಥಳೀಯರು ಶಾರದಾದೇವಿಯ ಚಿತ್ರಪಟವನ್ನು ಪೂಜಿಸುತ್ತಾರೆ. ಕಾಶ್ಮೀರದಿಂದ ಮತ್ತು ದೆಹಲಿಯಿಂದ ಶಾರದಾ ಸೇವಾ ಸಂಸ್ಥೆಯ ಪಂಡಿತರು ಅಲ್ಲಿಗೆ ಪ್ರತಿದಿನ ಹೂಗಳನ್ನು ಕಳಿಸುತ್ತಾರೆ. ಸ್ಥಳೀಯರು ಆ ಹೂಗಳನ್ನು ಶಾರದಾ ಚಿತ್ರಕ್ಕೆ ಅರ್ಪಿಸಿ ಮಾರನೇ ದಿನ ಪ್ರಸಾದವನ್ನು ಅವರಿಗೆ ಕಳಿಸುವ ಸಂಪ್ರದಾಯ ಈಗಲೂ ಇದೆ.

    ಪಿ.ಒ.ಕೆ.ಯಲ್ಲಿರುವ ರಾಜ್ಯ ವಸ್ತು ಸಂಗ್ರಹಾಲಯದಲ್ಲಿ ಈ ಶಾರದಾ ಗ್ರಾಮದಲ್ಲಿರುವ ಶಾರದಾ ಸರ್ವಜ್ಞ ಪೀಠದ ಬಗ್ಗೆ ಮಾಹಿತಿ ಇದೆ. ಅದನ್ನು ಪರಿಶೀಲಿಸಿದಾಗ ಸರ್ವಜ್ಞ ಪೀಠದ ಕೆಳಗೆ ಹಿಂದಿನ ಅವಶೇಷಗಳು ಸಿಕ್ಕಿರುವುದು ಕಂಡುಬಂದಿದೆ. 1948ರಲ್ಲಿ ಭಾರತ- ಪಾಕಿಸ್ತಾನ ಯುದ್ಧ ಆಗುವುದಕ್ಕೂ ಮೊದಲು ಇವುಗಳನ್ನು ಸಂಶೋಧಿಸಲಾಗಿತ್ತು. ಈಗಲೂ ಅಲ್ಲಿ ಅವಶೇಷಗಳು ಸಿಗುತ್ತಲೇ ಇರುತ್ತವೆ. ಈಗ ಭಾರತದವರು ಅಲ್ಲಿಗೆ ಹೋಗಿ ಸಂಶೋಧನೆ ಮಾಡಲು ಅವಕಾಶ ಇಲ್ಲ. ಪಾಕಿಸ್ತಾನದಲ್ಲಿರುವ ಹಿಂದುಗಳು ಸಹ ಆ ಸ್ಥಳಕ್ಕೆ ಹೋಗಲು ಅನುಮತಿ ಇಲ್ಲ.

    ಸರ್ವಜ್ಞ ಪೀಠ- ಶೃಂಗೇರಿ ಸಂಬಂಧ

    ಅದ್ವೈತ ಪ್ರತಿಪಾದಕ ಶ್ರೀ ಶಂಕರಾಚಾರ್ಯರು ನಾಲ್ಕು ಪೀಠಗಳನ್ನು ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದರು. ಅದರಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪೀಠವೂ ಒಂದು. ಇಲ್ಲೇ ಪೀಠವನ್ನು ಸ್ಥಾಪಿಸಲು ಬಲವಾದ ಕಾರಣ ಇದೆ. ಮೊದಲ ಬಾರಿಗೆ ಶಂಕರಾಚಾರ್ಯರು ಶೃಂಗೇರಿಗೆ ಬಂದಾಗ ಅವರು ವಿಶೇಷವಾದ ದೃಶ್ಯವನ್ನು ಕಾಣುತ್ತಾರೆ. ತುಂಗಾನದಿಯ ದಡದಲ್ಲಿ ಒಂದು ಸರ್ಪವು ಗರ್ಭಿಣಿ ಕಪ್ಪೆಗೆ ನೆರಳನ್ನು ನೀಡುತ್ತಿರುತ್ತದೆ. ಈ ಸ್ಥಳದಲ್ಲಿ ವೈರತ್ವವೇ ಇಲ್ಲ. ಇದೇ ಪವಿತ್ರ ಸ್ಥಳ ಎಂದು ಶಂಕರಾಚಾರ್ಯರು ಗುರುತಿಸುತ್ತಾರೆ. ಋಷ್ಯಶೃಂಗ ಮುನಿಗಳು ಹಾಗೂ ವಿಭಾಂಡಕ ಮುನಿಗಳು ಹಿಂದೆಯೇ ಇಲ್ಲಿ ತಪಸ್ಸು ಮಾಡಿದ್ದರು. ಈ ಕಾರಣಕ್ಕೆ ಕಾಶ್ಮೀರದ ಸರ್ವಜ್ಞ ಪೀಠದಲ್ಲಿದ್ದ ಶಾರದಾಂಬೆಯನ್ನು ಇಲ್ಲಿ ಪ್ರತಿಷ್ಠಾಪಿಸಿದರು.

    ಸರ್ವಜ್ಞಪೀಠ ಆರೋಹಣ

    ಶಂಕರರು ಸಂಚಾರದಲ್ಲಿರುವಾಗ ಈ ಸರ್ವಜ್ಞಪೀಠ ಇರುವುದನ್ನು ಕೇಳುತ್ತಾರೆ. ಅಲ್ಲಿಗೆ ನಾಲ್ವರು ಶಿಷ್ಯರೊಡನೆ ಕಾಲ್ನಡಿಗೆಯಲ್ಲೇ ಹೋಗುತ್ತಾರೆ. ಆಗ ಸರ್ವಜ್ಞಪೀಠಕ್ಕೆ ನಾಲ್ಕು ಬಾಗಿಲುಗಳು ಇದ್ದವು. ಮಧ್ಯದಲ್ಲಿ ಶಾರದಾಂಬೆ ನೆಲೆಸಿದ್ದಳು. ಸರ್ವಜ್ಞಪೀಠದ ಮೂರು ಬಾಗಿಲು ತೆರೆದಿದ್ದವು. ದಕ್ಷಿಣ ದಿಕ್ಕಿನ ಬಾಗಿಲು ಮಾತ್ರ ತೆರೆದಿರಲಿಲ್ಲ. ಏಕೆ ಎಂದು ವಿಚಾರಿಸಿದಾಗ ಪಂಡಿತರು ಅಲ್ಲಿಯ ನಿಯಮವನ್ನು ತಿಳಿಸುತ್ತಾರೆ. ‘ನಾವು ಮತ್ತು ಶಾರದಾಂಬೆ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ಈ ದಕ್ಷಿಣದ ಬಾಗಿಲಿನಿಂದ ಒಳಗೆ ಹೋಗಿ ಆ ಶಾರದಾ ಪೀಠದ ಮೇಲೆ ಕುಳಿತುಕೊಳ್ಳಲು ಅವಕಾಶ’ ಎನ್ನುತ್ತಾರೆ. ಶಂಕರಾಚಾರ್ಯರು ಒಪ್ಪುತ್ತಾರೆ.

    ಪಂಡಿತರು ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ಶಾಸ್ತ್ರಸಮ್ಮತ ಸರಿ ಉತ್ತರಗಳನ್ನು ಶಂಕರಾಚಾರ್ಯರು ನೀಡುತ್ತಾರೆ. ಶಾರದಾಂಬೆ ಕೇಳಿದ ಪ್ರಶ್ನೆಗೂ ಉತ್ತರ ನೀಡುತ್ತಾರೆ. ‘ಈಗ ನೀವು ಈ ದಕ್ಷಿಣ ಬಾಗಿಲಿನಿಂದ ಪ್ರವೇಶ ಮಾಡಿ ಸರ್ವಜ್ಞ ಪೀಠ ಆರೋಹಣ ಮಾಡಬಹುದು’ ಎನ್ನುತ್ತಾರೆ ಪಂಡಿತರು. ಅದರಂತೆ ಶಂಕರರು ಆ ಪೀಠವನ್ನು ಆರೋಹಣ ಮಾಡಿ ಶಾರದಾಂಬೆಯನ್ನು ಕರೆತಂದು ಶೃಂಗೇರಿಯಲ್ಲಿ ಶ್ರೀಚಕ್ರದ ಮೇಲೆ ಪ್ರತಿಷ್ಠಾಪಿಸಿದರು. ಆ ವಿಗ್ರಹವು ಶ್ರೀಗಂಧದ ವಿಗ್ರಹವಾಗಿತ್ತು. ನೂರಾರು ವರ್ಷಗಳ ನಂತರ ಆ ಮರದ ವಿಗ್ರಹವನ್ನು ಬದಲಾಯಿಸಿ ಬಂಗಾರಮಿಶ್ರಿತ ಪಂಚಲೋಹದ ವಿಗ್ರಹವನ್ನು ಆಗಿನ ಜಗದ್ಗುರುಗಳು ಪ್ರತಿಷ್ಠಾಪಿಸಿದರು. ಈಗ ನಾವು ನೋಡುತ್ತಿರುವುದು ಅದೇ ವಿಗ್ರಹ. ಶ್ರೀಗಂಧದ ವಿಗ್ರಹ ವಿದ್ಯಾಶಂಕರ ದೇವಾಲಯದ ಗರ್ಭಗುಡಿಯ ಮುಂದಿನ ಕೋಣೆಯಲ್ಲಿದೆ. ಅದಕ್ಕೂ ಪೂಜೆ ನಡೆಯುತ್ತದೆ.

    ಸರ್ವಜ್ಞಪೀಠದ ಕೆಳಗಿದ್ದ ಶಿಲೆ

    ಇತ್ತೀಚೆಗೆ ಕಾಶ್ಮೀರದ ಶಾರದಾ ಸೇವಾ ಟ್ರಸ್ಟಿನ ಅಧ್ಯಕ್ಷ ರವೀಂದ್ರ ಪಂಡಿತರು ಹಾಗೂ ಸದಸ್ಯರು ಶೃಂಗೇರಿ ಜಗದ್ಗುರುಗಳನ್ನು ಭೇಟಿ ಆಗಲು ಬಂದಾಗ ಮೂಲ ಸರ್ವಜ್ಞ ಪೀಠದಲ್ಲಿ ಕೆಳಗೆ ಇದ್ದ ಶಿಲೆಯನ್ನು ತಂದಿದ್ದರು. ಶ್ರೀ ಭಾರತೀತೀರ್ಥರಿಗೂ ಮತ್ತು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಗೂ ಅರ್ಪಿಸಿ ಆಶೀರ್ವಾದ ಪಡೆದರು. ಶಾರದಾ ಪೀಠಕ್ಕೆ ಕಾರಿಡಾರ್ ಮಾಡಲು ಇತ್ತೀಚೆಗೆ ಅಲ್ಲಿನ ಸರ್ಕಾರ ನಿರ್ಧಾರ ಮಾಡಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

    (ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts