More

    ಶೌರ್ಯ, ಹೋರಾಟವೇ ಹಿಂದು ಸಮಾಜದ ಅಸ್ಮಿತೆ

    ವಿಜಯವಾಣಿ ಸುದ್ದಿಜಾಲ ಮಂಗಳೂರು

    ಹೊರಗಿನಿಂದ ಬಂದ ಆಕ್ರಮಣಕಾರರನ್ನು ಸೋಲಿಸಿದ, ಹಿಮ್ಮೆಟ್ಟಿಸಿದ ಅನೇಕ ಹೋರಾಟಗಾರರನ್ನು ಇತಿಹಾಸದ ಪಠ್ಯದಲ್ಲಿ ಅಳವಡಿಸದೆ ಹಿಂದು ಸಮಾಜದ ಶೌರ್ಯದ ಕಥೆಯನ್ನು, ಹೋರಾಟವನ್ನು ಜನರಿಂದ ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಶೌರ್ಯ, ಹೋರಾಟವೇ ಹಿಂದು ಸಮಾಜದ ಅಸ್ಮಿತೆ ಎಂದು ಹಿಂದು ಜಾಗರಣ ವೇದಿಕೆ ಕರ್ನಾಟಕ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

    ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಆಡಿಟೋರಿಯಂನಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಜಯೀಭವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

    ಸ್ವಾತಂತ್ರೃ ನಂತರದ ಭಾರತದಲ್ಲಿ ನಮ್ಮ ದೇಶದ ಕ್ಷಾತ್ರತೇಜದ ಇತಿಹಾಸವನ್ನು ಮರೆಮಾಚಿ ನಮ್ಮ ಶೌರ್ಯದ ಹೋರಾಟವನ್ನು ತಿರುಚಿ, ದಂಗೆಕೋರರನ್ನು ವೈಭವೀಕರಿಸುವ ಕೆಲಸ ನಡೆಯಿತು. ಹೊರಗಿನಿಂದ ಬಂದ ಆಕ್ರಮಣಕಾರಿಗಳನ್ನು ಶ್ರೇಷ್ಠರೆಂದು ಬಿಂಬಿಸಿ, ಹಿಂದು ಸಮಾಜವನ್ನು ಹೇಡಿಗಳೆಂದು ಬಿಂಬಿಸುವ, ಛತ್ರಪತಿ ಶಿವಾಜಿ ಮೊದಲಾದ ಹಿಂದು ರಾಜರ ಬಗ್ಗೆ ಇತಿಹಾಸದಲ್ಲಿ ಬೆಳಕು ಚೆಲ್ಲದಿರುವ ಷಡ್ಯಂತ್ರವನ್ನು ಹಿಂದಿನ ಸರ್ಕಾರಗಳು ಮಾಡಿಕೊಂಡು ಬಂದವು. ಆದರೆ ಅವೆಲ್ಲವನ್ನೂ ತೊಡೆದು ಹಾಕುವಂತೆ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ರಾಮ ಮಂದಿರ ನಿರ್ಮಾಣ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು.

    Vijayibhava 2
    ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಆಡಿಟೋರಿಯಂನಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಆಶ್ರಯದಲ್ಲಿ ನಡೆದ ವಿಜಯೀಭವ ಕಾರ್ಯಕ್ರಮದ ಮೊದಲು ಉಡುಪಿಯ ಮಂಜರಿ ಚಂದ್ರ ನೇತೃತ್ವದ ತಂಡದಿಂದ ಭಾರತಮಾತೆಗೆ ನಮನ ಸಲ್ಲಿಸುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

    ನಿವೃತ್ತ ಯೋಧ ಲೆಫ್ಟಿನೆಂಟ್ ಸುರೇಶ್ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ ಪಂಪ್‌ವೆಲ್, ಮಂಜಣ್ಣ ಸೇವಾ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಮುಖಂಡರಾದ ಎಚ್.ಕೆ.ಪುರುಷೋತ್ತಮ್, ಶಿವಾನಂದ ಮೆಂಡನ್, ಭುಜಂಗ ಕುಲಾಲ್, ಪುನೀತ್ ಅತ್ತಾವರ, ಹರೀಶ್ ಕುಮಾರ್ ಶಕ್ತಿನಗರ, ಹರ್ಷಿತ್ ಶಕ್ತಿನಗರ, ಸಂದೀಪ್ ಅಂಬ್ಲಮೊಗರು, ಪ್ರಶಾಂತ್ ಕಾಮತ್ ಕಾರ್ಕಳ, ಜಯಪ್ರಕಾಶ್ ವಾಮಂಜೂರು ಮೊದಲಾದವರು ಉಪಸ್ಥಿತರಿದ್ದರು.

    ಸೋಮೇಶ್ವರ ಗುರುಮಠ ಬರೆದ ‘ಅಭಿನವ ಭಾರತ’ ಕೃತಿ ಬಿಡುಗಡೆಗೊಳಿಸಲಾಯಿತು. ಎನ್.ಆರ್.ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಪೆರ್ಲ ದೇಶಭಕ್ತಿ ಗೀತೆ ಹಾಡಿದರು. ಮಂಜರಿ ಚಂದ್ರ ತಂಡದವರಿಂದ ರಾಷ್ಟ್ರಜಾಗೃತಿಯ ನೃತ್ಯರೂಪಕ ಪ್ರಸ್ತುತಗೊಂಡಿತು.

    ಚುನಾವಣೆಗಾಗಿ ಕ್ಷಣಿಕ ಸ್ಥಾನಮಾನದ ಆಸೆ

    ಚುನಾವಣೆ ಸಂದರ್ಭ ಕ್ಷಣಿಕ ಸ್ಥಾನಮಾನದ ಆಸೆಗಾಗಿ ಜಾತಿ, ಜಾತಿ ಎಂದು ಸಮಾಜವನ್ನು ಒಡೆಯುವುದು ಎಷ್ಟು ಸರಿ ಎಂದು ಶ್ರೀಕಾಂತ್ ಶೆಟ್ಟಿ ಪ್ರಶ್ನಿಸಿದರು. ಕತಾರ್‌ನಲ್ಲಿ ಎಂಟು ಮಂದಿ ಸೆರೆಸಿಕ್ಕ ಭಾರತೀಯರನ್ನು ತಮ್ಮ ರಾಜತಾಂತ್ರಿಕ ನಡೆಯಿಂದ ಬಿಡಿಸಿಕೊಂಡು ಬಂದ ನಾಯಕತ್ವ ನಮ್ಮದು. ಆ ರಾಜತಾಂತ್ರಿಕ ನಡೆಗೆ ಮತ ಹಾಕುವ ಜಾಣ್ಮೆ ನಮ್ಮದಾಗಬೇಕು. ಯಾವ ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತೋ ಅದನ್ನು ತೆಗೆದು ಭಾರತದ ತ್ರಿವರ್ಣ ಧ್ವಜ ಹಾರಿಸಿದ, ಅಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನೇ ಆರಂಭಿಸಿದ ನಾಯಕತ್ವಕ್ಕಾಗಿ ಮತ ಚಲಾಯಿಸುವ ಧೀರೋದಾತ್ತ ನಡೆ ನಮ್ಮದಾಗಬೇಕೇ ಹೊರತು, ಜಾತಿಗಾಗಿ, ಸ್ಥಾನಮಾನಕ್ಕಾಗಿ ಹಂಬಲಿಸುವವರ ಹಿಂಬಾಲಕರಾಗುವ ಪ್ರಮೇಯ ಬಾರದಿರಲಿ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

    ನಮ್ಮ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಮೂರು ಪುಟದ ಪಾಠವಿದೆ. ಆದರೆ ಟಿಪ್ಪುವನ್ನು 33 ಸಲ ಹಿಮ್ಮೆಟ್ಟಿಸಿದ ಕೊಡವರ ಬಗ್ಗೆ ಮಾಹಿತಿ ಇಲ್ಲ. ಇಡೀ ಪಠ್ಯಪುಸ್ತಕದಲ್ಲಿ ಮೊಗಲರು, ಅರಬ್ಬರ ವೈಭವೀಕರಣವಿದೆ. ಕೆಳದಿಯ ರಾಣಿ ಚೆನ್ನಮ್ಮನ ಬಗ್ಗೆ ಪಾಠ ಪುಸ್ತಕದಲ್ಲಿ ಮಾಹಿತಿ ಇಲ್ಲ. ಹೈದರಾಲಿಯ ನೂರಾರು ಸೈನಿಕರನ್ನು ಹೊಡೆದು ಉರುಳಿಸಿದ ಒನಕೆ ಓಬವ್ವನ ಬಗ್ಗೆ ಒಂದು ಪುಟದ ವರ್ಣನೆಯೂ ಇಲ್ಲ. ನಮ್ಮ ನೈಜ ಇತಿಹಾಸ ಮೆಲುಕು ಹಾಕಿದರೆ ಹಿಂದು ಯಾವತ್ತೂ ಹೋರಾಟ, ಶೌರ್ಯದ ಪರಂಪರೆಯನ್ನು ಬಿಟ್ಟಿಲ್ಲ ಎಂಬುದು ಅರಿವಾಗುತ್ತದೆ.
    -ಶ್ರೀಕಾಂತ್ ಶೆಟ್ಟಿ ಕಾರ್ಕಳ
    ಹಿಂದು ಜಾಗರಣ ವೇದಿಕೆ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts