More

    ಸಾಧಕರ ದಾರಿ | ರಂಗಸ್ಥಳದಲ್ಲಿ ಇವರ ಅಭಿನಯ ಕಂಡು ಡಾ.ರಾಜ್​ ಕುಮಾರ್ ಸ್ಫೂರ್ತಿ ಪಡೆದಿದ್ದರು!

    ಮುಖಕ್ಕೆ ಬಣ್ಣ, ಭಾರವಾದ ವೇಷ ಭೂಷಣ, ಭಾವ, ಅಭಿನಯ, ನೃತ್ಯ, ಮಾತುಗಾರಿಕೆಯ ಸಂಪೂರ್ಣ ಸಮ್ಮಿಲನವೇ ಯಕ್ಷಗಾನ. ಉತ್ತರ ಮತ್ತು ದಕ್ಷಿಣ ಕನ್ನಡದ ಮನೆ ಮನಗಳಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಬಡಗುತಿಟ್ಟಿನ ಯಕ್ಷಗಾನ ಹೆಸರು ಕೇಳಿದಾಗ ಮೊದಲು ಮನದಲ್ಲಿ ಮೂಡುವ ಹೆಸರು “ಚಿಟ್ಟಾಣಿ’. ಹೌದು, ಯಕ್ಷಗಾನಕ್ಕೆ ಭದ್ರ ಬುನಾದಿಯನ್ನು ಹಾಕಿದವರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಯಕ್ಷಗಾನ ಎಂಬ ಪದ ಕೇಳಿದ ಕೂಡಲೇ ಜನಮಾನಸದಲ್ಲಿ ಬರುವ ಹೆಸರು ಇವರದ್ದೆ. ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿರುವ ಮೇರು ಕಲಾವಿದ.

    7ನೇ ವಯಸ್ಸಿನಿಂದ ಯಕ್ಷಗಾನ ಅಭ್ಯಾಸ

    ರಾಮಚಂದ್ರ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1933 ರಲ್ಲಿ ಜನಿಸಿದರು. ಏಳನೇ ವಯಸ್ಸಿನಲ್ಲೇ ಯಕ್ಷಗಾನ ಅಭ್ಯಸಿಸಲು ಪ್ರಾರಂಭಿಸಿದರು. ಶೈಕ್ಷಣಿಕ ಜೀವನವನ್ನು ಅರ್ಧಕ್ಕೇ ಮೊಟಕುಗೊಳಿಸಿ ಯಕ್ಷಗಾನದತ್ತ ವಾಲಿದರು. ಸತತ ಶ್ರಮದಿಂದ ಅಭ್ಯಸಿಸುತ್ತಾ ಪುರಾಣದ ಪಾತ್ರಗಳಿಗೆ ಜೀವ ತುಂಬಿದರು.

    ಇದನ್ನೂ ಓದಿ: Success Story | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಇಂದಿನಂತಿಲ್ಲದ ಅಂದಿನ ದಿನಗಳಲ್ಲಿಯೇ ಕಲೆ ಬೆಳೆಸಬೇಕು, ಪೋಷಿಸಬೇಕು ಎಂಬ ಹಂಬಲ ಅವರ ಸಾಧನೆಗೆ ಸಹಕಾರಿಯಾಯಿತು. 14ನೇ ವಯಸ್ಸಿಗೆ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದರು. ಯಾವುದೇ ಯಕ್ಷಗಾನದಲ್ಲಿ ಚಿಟ್ಟಾಣಿಯವರಿದ್ದಾರೆ ಅಂದರೆ ಅಂದಿನ ಆಟ ಭರಪೂರ. ಅವರ ಅಭಿನಯ ಮತ್ತು ಮಾತುಗಾರಿಕೆಗೆ ಮನ ಸೋಲದವರಿಲ್ಲ. ರಂಗಕ್ಕೆ ಅವರ ಆಗಮನವಾಯಿತೆಂದರೆ ಆ ಪಾತ್ರದ ಒಳಹೊಕ್ಕು, ತಾವೇ ಆ ಪಾತ್ರವಾಗಿ ಅಭಿನಯಿಸುತ್ತಿದ್ದರು. ಮಗಧ, ಕೀಚಕ, ದುಷ್ಟಬುದ್ಧಿ ಇಂತಹ ಖಳನಾಯಕನ ಪಾತ್ರಗಳಿಗೆ ಹೆಸರಾಗಿದ್ದರು. ಜೀವನ ಎಂಬುದು ಏರು ಇಳಿತಗಳ ಹಾದಿ ಅಂತಹ ಏರಿಳಿತಗಳಲ್ಲಿಯೂ ಕಲೆಯನ್ನು ಬಿಡದೆ ಆರಾಧಿಸಿ ಇಡೀ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ದೇಶ, ವಿದೇಶದಲ್ಲಿಯೂ ಪ್ರಸಿದ್ಧರಾಗಿದ್ದಾರೆ.

    ಇವರಿಂದ ಡಾ. ರಾಜಕುಮಾರ್ ಸ್ಫೂರ್ತಿ ಪಡೆದಿದ್ದರು…

    ಉದಯ ಕುಮಾರ್​, ಡಾ. ರಾಜಕುಮಾರ್​, ಶ್ರೀನಾಥ್​ರಂತಹ ನಟರು ರಾತ್ರಿಯಿಂದ ಬೆಳಗಿನ ತನಕ ಯಕ್ಷಗಾನದಲ್ಲಿ ಇವರ ಅಭಿನಯ ನೋಡಿ ಸ್ಫೂರ್ತಿ ಪಡೆದಿದ್ದರು. ಚಿಟ್ಟಾಣಿ ಅವರು ಗೆಜ್ಜೆ ಕಟ್ಟದ ದಿನವಿಲ್ಲ ಎಂಬ ಹಾಗೆ ಪ್ರತಿ ದಿನವೂ ಪ್ರಸಂಗಗಳು ಇದ್ದೆ ಇರುತ್ತಿತ್ತು. ಅವರ ಈ ಪರಿಯ ಕಲಾ ಆರಾಧನೆ, ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿದೆ. ಪದ್ಮಶ್ರೀ ಪಡೆದ ಕರ್ನಾಟಕದ ಮೊದಲ ಕಲಾವಿದರು ಎಂಬ ಹೆಮ್ಮೆ ಇವರಿಗೆ ಸಲ್ಲುತ್ತದೆ. ರಾಜ್ಯೋತ್ಸವ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಿವೆ.

    ಇದನ್ನೂ ಓದಿ: Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

    ಕಲೆ ಎನ್ನುವುದಕ್ಕೆ ಬೇಧ ಭಾವವಿಲ್ಲ. ಯಾರು ಆರಾಧಿಸುತ್ತಾರೋ, ಪೂಜಿಸುತ್ತಾರೋ ಅವರಿಗೆ ಅದು ಒಲಿಯುತ್ತದೆ. ಇದಕ್ಕೆ ಶ್ರದ್ದೆ, ನಿಷ್ಠೆ ಬೇಕಷ್ಟೆ. ಚಿಟ್ಟಾಣಿ ಅವರು ಅಂದು ಶಿಕ್ಷಣವನ್ನು ಮೊಟಕುಗೊಳಿಸಿ, ನಿತ್ಯ ಬದುಕನ್ನು ಯಕ್ಷಗಾನಕ್ಕೆ ಅರ್ಪಿಸಿದರು. ಕೊನೆಗೆ ಅದೇ ಯಕ್ಷಗಾನದಿಂದ ಸಾವಿರಾರು ಅಭಿಮಾನಿಗಳ ಮನದಲ್ಲಿ ಇಂದಿಗೂ ರಾರಾಜಿಸುತ್ತಿದ್ದಾರೆ.

    ದಿವ್ಯಶ್ರೀ ಹೆಗಡೆ, ಉಜಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts