More

    ಪ್ರತಿ ಶಾಲೆಯಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ಸ್ಥಾಪಿಸಿ; ವಿದ್ಯಾರ್ಥಿಗಳ ಮಾನಸಿಕತೆ ಮೇಲೆ ನಿಗಾ ಇಡಿ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಸಲಹೆ

    ಹಾವೇರಿ: ಜಿಲ್ಲೆಯ ಪ್ರತಿ ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಮೌಖಿಕವಾಗಿ ಶಿಕ್ಷಕರ ಗಮನಕ್ಕೆ ತರಲು ಹಿಂಜರಿಕೆ, ಮುಜುಗರ ಇರುವ ವಿಷಯಗಳನ್ನು ಮಕ್ಕಳು ಲಿಖಿತವಾಗಿ ಬರೆದು ಸಲಹಾ ಪೆಟ್ಟಿಗೆಗಳಲ್ಲಿ ಹಾಕಲು ಅನುಕೂಲವಾಗಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿ.ಆರ್.ಸಿ. ಹಾಗೂ ಬಿ.ಆರ್.ಸಿ.ಗಳ ಸಭೆ ನಡೆಸಿದ ಅವರು, ಶಿಕ್ಷಕರು ಶಾಲೆಗೆ ಬರುವ ಮಕ್ಕಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಲಿಕೆಯ ಜತೆಗೆ ಮಕ್ಕಳ ಮಾನಸಿಕ ವ್ಯತ್ಯಯಗಳ ಬಗ್ಗೆ ನಿಗಾ ವಹಿಸಬೇಕು. ಯಾವುದೇ ಮಗು ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದರೆ ಆಪ್ತ ಸಮಾಲೋಚನೆ ಮೂಲಕ ಅರಿತು ಪರಿಹಾರಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
    ನವೆಂಬರ್ 14ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಆಯೋಜಿಸಲಾಗುತ್ತಿದೆ. ಈ ಸಭೆಗಳು ಮಕ್ಕಳಿಗೆ ಮುಂದಿನ ದಿಕ್ಸೂಚಿಗಳಾಗಬೇಕು. ಈ ಹಿನ್ನೆಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಕಡ್ಡಾಯವಾಗಿ ಗ್ರಾಮ ಸಭೆಗೆ ಹಾಜರಾಗಿ ಪಾಲಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕುರಿತಾಗಿ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
    ಶಾಲಾ ಆವರಣದಲ್ಲಿ ಹೊಸದಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಸ್ಥಳಾವಕಾಶ ನೀಡಬಾರದು. ಈಗಾಗಲೇ ಸ್ಥಾಪಿಸಲಾದ ಶಿಥಾಲವಸ್ಥೆಯಲ್ಲಿರುವ ಟ್ಯಾಂಕ್ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ ಪದಕಿ ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಕಾರಣ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಲು ಹಾಗೂ ಹೆಚ್ಚು ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು. ಆಗಾಗ್ಗೆ ಪಾಲಕರನ್ನು ಕರೆಸಿ ಈ ಕುರಿತಂತೆ ತಿಳುವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.
    ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಎಸ್.ಮಜೀದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಸಿ. ಹಾಗೂ ಸಿ.ಆರ್.ಸಿ.ಗಳು ಉಪಸ್ಥಿತರಿದ್ದರು.
    ಬಾಲಕಿಯರ ರಕ್ಷಣೆಯ ಹೊಣೆ
    ಮಕ್ಕಳು ಪದೆಪದೇ ಶಾಲೆಗೆ ಗೈರಾಗುತ್ತಿದ್ದರೆ, ತರಗತಿಗಳ ಬಗ್ಗೆ ನಿರಾಸಕ್ತಿ ಹೊಂದಿದ್ದರೆ, ತಡವಾಗಿ ಬರುತ್ತಿದ್ದರೆ ಕಾರಣಗಳನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿನಿಯರಿಗೆ ವಿವಿಧ ಆಸೆ ಆಮಿಷೆ ತೋರಿಸಿ ಅವರನ್ನು ತಪ್ಪು ದಾರಿಗೆಳೆದು ಅವರ ಜೀವನ ಹಾಳು ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಇವೆಲ್ಲವುಗಳಿಂದ ಮಕ್ಕಳನ್ನು ರಕ್ಷಿಸಲು ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸೂಕ್ಷ್ಮವಾಗಿ ಮಕ್ಕಳನ್ನು ಗಮನಿಸುತ್ತಿರಬೇಕು ಎಂದು ಶೇಖರಗೌಡ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts