ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು; ಮುಂದಿನ ಸಲ ಇನ್ನೂ ಅದ್ಧೂರಿ ಆಗಿರಬೇಕು: ಚಕ್ರವರ್ತಿ ಸೂಲಿಬೆಲೆ

Chakravarty Sulibele
Published on

ಮೈಸೂರು: ಇಲ್ಲಿ ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು. ಮುಂದಿನ ವರ್ಷ ಈ ವರ್ಷಕ್ಕಿಂತಲೂ ಜೋರಾಗಿ ನಡೆಯಬೇಕು ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ. ಹನುಮ ಜಯಂತಿ ಸಂದರ್ಭದಲ್ಲಿ ಕೊಲೆಗೀಡಾದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಯಲ್ಲಿ ಇಂದು ಪಾಲ್ಗೊಂಡ ಅವರು ಈ ಕರೆ ನೀಡಿದರು.

ಹನುಮ ಜಯಂತಿ ಮಾಡುವುದಕ್ಕೆ ಅಂತಲೇ ಅನೇಕ ಸಂಘಟನೆಗಳು ಇವೆ. ನಾವು ಬೇರೆ ಕೆಲಸ ಮಾಡೋಣ ಅಂತ ಹೇಳುತ್ತಿದ್ದೆ. ಆದರೆ ತಿ.ನರಸೀಪುರದಲ್ಲಿ ವೇಣುಗೋಪಾಲ್‌ನಂತಹ ಹುಡುಗರು ಹನುಮ ಜಯಂತಿಗೋಸ್ಕರವೇ ಹುಟ್ಟಿಕೊಂಡಿದ್ದರು. ವೇಣುಗೋಪಾಲ್ ಸಾವು ಸ್ವಲ್ಪ ದಿನಕ್ಕೆ ಮರೆತು ಹೋಗಬಹುದು. ಹೀಗೆ ಮರೆತು ಹೋಗುವ ಪ್ರವೃತ್ತಿ ಬೆಳೆದರೆ ಅಪಾಯಕಾರಿ.ವೇಣುಗೋಪಾಲ್ ಸಾವು ಮರೆತು ಹೋಗಲು ಬಿಡಬಾರದು. ಆತ ಹಣತೆ ಹಚ್ಚಿದ್ದಾನೆ, ನಾವು ಆ ಹಣತೆಗೆ ತೈಲ ಆಗಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು. ಮುಂದಿನ ವರ್ಷ ಈ ವರ್ಷಕ್ಕಿಂತಲೂ ಜೋರಾಗಿ ನಡೆಯಬೇಕು. ಅದೇ ವೇಣುಗೋಪಾಲ್ ಸಾವಿಗೆ ನಿಜವಾದ ಶ್ರದ್ಧಾಂಜಲಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಮ್ಮದೇ ಹುಡುಗನ ಸಾವಿಗೆ ಶ್ರದ್ಧಾಂಜಲಿ ಸಭೆ ಮಾಡಲು ಅನುಮತಿ ಸಿಗಲ್ಲ ಎಂದರೆ ಯಾವ ಸಮಾಜದಲ್ಲಿ ನಾವಿದ್ದೇವೆ? ಇವರು ಕೊಲೆ ಮಾಡಿದವರಿಗಿಂತ ಕಚಡ ಜನರು. ಕಂಬನಿ ಸುರಿಸಲು ಜಾಗ ಕೊಡಲ್ಲ ಅಂದರೆ ಏನು ಹೇಳಬೇಕು? ವೇಣುಗೋಪಾಲ್ ಮನೆ ಹತ್ತಿರ 20 ಜನ ಸೇರಿ ಮಾಡಿಕೊಳ್ಳಿ ಎಂದಿದ್ದರು. ನಾವು ಹೈಕೋರ್ಟ್‌ಗೆ ಹೋಗಿ ಹೋರಾಡಿ ಪರ್ಮಿಷನ್ ತರಬೇಕಾಯಿತು ಎಂದು ಹೇಳಿದ ಸೂಲಿಬೆಲೆ, ಹಿಂದೂ ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net