More

    ಸಂಚಾರ ಸಂಕಷ್ಟಕ್ಕೆ ಕೊನೆಗೂ ಮುಕ್ತಿ

    ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮದ ಹೃದಯಭಾಗದಲ್ಲಿರುವ ರಸ್ತೆಗೆ ಕೊನೆಗೂ ಕಾಯಕಲ್ಪ ಸಿಕ್ಕಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು, ಸ್ಥಳೀಯರ ಎರಡು ದಶಕದ ಕನಸು ನನಸಾಗುತ್ತಿದೆ.

    ಬೈಂದೂರು ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಅನುದಾನದ ಮೂಲಕ 80 ಲಕ್ಷ ರೂ. ವೆಚ್ಚದಲ್ಲಿ ಹಕ್ಲಾಡಿ ಹಾಲಿನ ಡೇರಿಯಿಂದ ಬಾಳೆಮನೆ ಕ್ರಾಸ್ ತನಕ ಡಾಂಬರು ರಸ್ತೆಯಾದರೆ, ಯಳೂರು ಗದ್ದೆ ಬಯಲಿನ 300 ಮೀಟರ್ ಸರ್ವಋತು ರಸ್ತೆಯಾಗಿ ನಿರ್ಮಾಣವಾಗಲಿದೆ.

    ಗ್ರಾಮಸ್ಥರ ಸಹಕಾರದಲ್ಲಿ ನಿರ್ಮಾಣವಾಗಿದ್ದ ರಸ್ತೆ ಸಂಪೂರ್ಣ ಹದಗೆಟ್ಟ ವಾಹನ ಸಂಚಾರವೇ ಕಷ್ಟ ಎಂಬಂತಾಗಿತ್ತು. ನಿರ್ವಹಣೆ ಲ್ಲದ ಕಾರಣ ಇಡೀ ರಸ್ತೆ ಹೊಂಡ ಗುಂಡಿಗಳಿಂದ ತುಂಬಿಹೋಗಿತ್ತು. ವಾಹನಗಳು ಸಂಚರಿಸಲಾರದಷ್ಟು ಹದಗೆಟ್ಟಿತ್ತು. ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಹುತೇಕ ವಾಹನಗಳು ಕಟ್ಟಿನಮಕ್ಕಿ ಹೊರ್ಣಿ ಮೂಲಕ ತೆರಳುತ್ತಿದ್ದವು. ಆಟೋ ಚಾಲಕರು ಈ ರಸ್ತೆಯಲ್ಲಿ ಬಾಡಿಗೆಗೆ ಬರಲೂ ಹಿಂದೇಟು ಹಾಕುತ್ತಿದ್ದರು. ಪ್ರಸ್ತುತ ಈ ರಸ್ತೆಗೆ ಕಾಯಕಲ್ಪ ದೊರೆತಿದ್ದು ಹಕ್ಲಾಡಿ ಗ್ರಾಮಸ್ಥರ ಸಂಚಾರ ಸಂಕಷ್ಟಕ್ಕೆ ಶೀಘ್ರ ಮುಕ್ತಿ ಸಿಗಲಿದೆ.

    ಈ ರಸ್ತೆ ನವೀಕರಣ ಕಾಮಗಾರಿಯಿಂದ ಗ್ರಾಮಸ್ಥರಿಗೆ ಪಂಚಾಯಿತಿ, ಆಸ್ಪತ್ರೆ ಮತ್ತಷ್ಟು ಸನಿಹದಲ್ಲೇ ಸಿಕ್ಕಂತಾಗುತ್ತದೆ. ಹಿಂದೆ ಭಜನಾ ಮಂದಿರ, ಕಟ್ಟಿನಮಕ್ಕಿ ಹೊರ್ಣಿ, ಮಣಿಕೊಳಲು ಮೂಲಕ ಸುತ್ತುಬಳಸಿ ಗ್ರಾಪಂ, ಶಾಲೆ ಸೇರಬೇಕಿತ್ತು.

    ಒಟ್ಟು 23 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಹಕ್ಲಾಡಿ ಸಂಪರ್ಕಿಸುವ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆಗೆ ಲೋಕೋಪಯೋಗಿ ಇಲಾಖೆ ಮೊದಲ ವರ್ಷದಲ್ಲಿ ಹಣ ಬಿಡುಗಡೆ ಮಾಡಿದೆ. ಹಕ್ಲಾಡಿ ಕೂಡುರಸ್ತೆಯಲ್ಲದೆ ಯಳೂರು ರಸ್ತೆ ಕೂಡ ದುರಸ್ತಿ ಪಡಿಸಲಾಗುತ್ತಿದೆ.
    – ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು

    ಲೋಕೋಪಯೋಗಿ ಇಲಾಖೆ ಮೂಲಕ 23 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು, 80 ಲಕ್ಷ ರೂ. ಅನುದಾನದಲ್ಲಿ ಭಜನಾ ಮಂದಿರದಿಂದ ಹಕ್ಲಾಡಿ ಕೂಡು ರಸ್ತೆ ನಿರ್ಮಿಸಲಾಗುತ್ತಿದೆ. ಯಳೂರು ಗದ್ದೆ ಬಯಲನ್ನು 300 ಮೀ. ಸಿಮೆಂಟ್ ರಸ್ತೆಯಾಗಿ ಪರಿವರ್ತನೆ ಮಾಡಲಾಗುತ್ತದೆ. ಈಗಾಗಲೇ ಕಾಮಗಾರಿಗೆ ಚಾಲನೆ ನೀಡಲಾಗಿದೆ.
    – ರಾಘವೇಂದ್ರ ನಾಯ್ಕ, ಜೆಇ, ಲೋಕೋಪಯೋಗಿ ಇಲಾಖೆ ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts