More

    ರಾಜ್ಯದಲ್ಲಿ ಗ್ಯಾರಂಟಿ ಸುನಾಮಿ; ಅಧಿಕಾರ ಹಂಚಿಕೆ ಹೈಕಮಾಂಡ್​ ವಿವೇಚನೆಗೆ

    ದೇಶದಲ್ಲಿ ಚುನಾವಣೆ ಕಾವು ರಂಗೇರಿದೆ. ಪ್ರಚಾರದ ಭರಾಟೆ ಜೋರಾಗಿದೆ. ಪರಸ್ಪರ ವ್ಯಾಗ್ಯುದ್ದವೂ ಜೋರಾಗಿದ್ದು, ನಿತ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ವಾಗ್ದಾಳಿ ನಡೆಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯವಾಣಿ ಜತೆ ಮಾತನಾಡಿದ್ದು, ದೇಶದ ಚುನಾವಣೆ ಪ್ರಸ್ತುತ ಸ್ಥಿತಿಗತಿಗಳನ್ನು ವಿಶ್ಲೇಷಿಸಿದ್ದಾರೆ.

    ರುದ್ರಣ್ಣ ಹರ್ತಿಕೋಟೆ ಬೆಂಗಳೂರು
    ‘ಗ್ಯಾರಂಟಿಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪರ ಸುನಾಮಿ ಎದ್ದಿದೆ. ಬೇರೆ ರಾಜ್ಯಗಳಲ್ಲೂ ಪಕ್ಷದ ಮೇಲಿನ ಜನರ ವಿಶ್ವಾಸ ಇಮ್ಮಡಿಗೊಂಡಿದೆ. ಹೀಗಾಗಿ ಎನ್​ಡಿಎ ಈ ಬಾರಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ’.. ಇದು ಸಿಎಂ ಸಿದ್ದರಾಮಯ್ಯ ಅವರ ವಿಶ್ವಾಸ. ಲೋಕಸಭೆ ಚುನಾವಣೆಯ ಪ್ರಚಾರದ ನಡುವೆಯೇ ವಿಜಯವಾಣಿಗೆ ಸಂದರ್ಶನ ನೀಡಿರುವ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ.

    1) ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲಿದೆ? ಆ ವಿಶ್ವಾಸಕ್ಕೆ ಕಾರಣವೇನು?
    ಕಾಂಗ್ರೆಸ್ ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದೆ. ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೈ ಹಿಡಿಯಲಿದೆ ಎಂಬ ಪೂರ್ಣ ವಿಶ್ವಾಸ ಇರಲಿಲ್ಲ. 5 ಗ್ಯಾರಂಟಿ ಜನರಿಗೆ ತಲುಪಿರುವುದರಿಂದ ಫಲಾನುಭವಿಗಳು ನಮ್ಮ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಮೂಡಿದೆ.

    2) ಮೋದಿ ಅಲೆ ಎದುರು ಗ್ಯಾರಂಟಿ ಕೆಲಸ ಮಾಡುತ್ತವೆಯೇ?
    ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಗ್ಯಾರಂಟಿಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಲಾನುಭವಿಗಳಿಗೆ ತಲುಪಿವೆ. ಶಕ್ತಿ ಯೋಜನೆಯಲ್ಲಿ 191 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. 1.18 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ತಲುಪಿದೆ. ಗೃಹಜ್ಯೋತಿ ಫಲ ಸಿಕ್ಕಿದೆ. ಅನ್ನಭಾಗ್ಯದಲ್ಲಿ ಕೇಂದ್ರದಿಂದ 34 ರೂ.ನಂತೆ ಅಕ್ಕಿ ಕೇಳಿದರೂ ಕೊಡಲಿಲ್ಲ. ಆದ್ದರಿಂದ ಹಣ ನೀಡುತ್ತಿದ್ದೇವೆ. ಯುವನಿಧಿ ನಿರುದ್ಯೋಗಿ ಗಳಿಗೆ ನೀಡಿದ್ದೇವೆ. ಗೃಹೋಪ ಯೋಗಿ ವಸ್ತು ಖರೀದಿ, ಅಡವಿಟ್ಟಿದ್ದ ತಾಳಿ ಬಿಡಿಸಿಕೊಂಡಿರುವುದು ಯೋಜನೆ ಜನರನ್ನು ತಲುಪಿರುವುದಕ್ಕೆ ನಿದರ್ಶನ.

    3) ಅನೇಕ ರಾಜ್ಯಗಳ ನಾಯಕರಿಗೆ ಕರ್ನಾಟಕದ ಆಸಕ್ತಿ ಏಕೆ?
    ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿರುವುದೇ ಕಾರಣ. ಕರ್ನಾಟಕ, ತೆಲಂಗಾಣ ಬಳಿಕ ಎಐಸಿಸಿ 25 ಗ್ಯಾರಂಟಿ ಘೋಷಣೆ ಮಾಡಿದೆ. ಕಾಂಗ್ರೆಸ್ ಪರ ಅಲೆ ಇಡೀ ದೇಶವನ್ನು ಆವರಿಸಿದೆ.

    4) ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಗಟ್ಟಿ ನಾಯಕತ್ವ ಇದೆಯಲ್ವ?
    ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಕೊಟ್ಟ ಯಾವ ಭರವಸೆ ಈಡೇರಿಸಿದರು? ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, 2 ಕೋಟಿ ಉದ್ಯೋಗ ಬರಲಿಲ್ಲ, ಬೆಲೆ ಏರಿಕೆ ನಿಯಂತ್ರಣ ಆಗಲಿಲ್ಲ. ಕಪು್ಪ ಹಣ ತಂದು ಖಾತೆಗಳಿಗೆ 15 ಲಕ್ಷ ಕೊಡಲಿಲ್ಲ. ಮೋದಿ ಮೇಲೆ ವಿಶ್ವಾಸ ಮೂಡಲು ಹೇಗೆ ಸಾಧ್ಯ? ಮೋದಿ ದೇಶದ ಜನರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಆದ್ದರಿಂದ ಎನ್​ಡಿಎ ಸೋತು, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವುದು ಖಚಿತ.

    5) ಜನರಿಗೆ ಇನ್ನೂ ಮೋದಿ ಬಗ್ಗೆ ವಿಶ್ವಾಸ ಇದೆ ಅಲ್ವ?
    ನಾವಂತೂ ಜನರಿಗೆ ಮೋದಿ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ, ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತ, ನಮ್ಮ ಸಾಧನೆಗಳನ್ನು ಹೇಳುತ್ತಿದ್ದೇವೆ. ಇದರಿಂದ ತುಲನೆಗೆ ಅನುಕೂಲ. ಎನ್​ಡಿಎಗೆ ವಿಶ್ವಾಸ ಇದ್ದಿದ್ದರೆ ಹಾಲಿ ಎಂಪಿಗಳನ್ನು ಏಕೆ ಬದಲಾವಣೆ ಮಾಡುತ್ತಿದ್ದರು. ಸೋಲುವ ಮುನ್ಸೂಚನೆಯಿಂದ ಆ ರೀತಿ ಮಾಡಿದ್ದಾರೆ. ಆದರೆ ಅದರಿಂದ ಉಪಯೋಗವೇನು ಇಲ್ಲ.

    6) ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಿದ್ದಾರೆ?
    ಚುನಾವಣಾ ಬಾಂಡ್​ನ್ನು ಏನೆಂದು ಕರೆಯ ಬೇಕು. ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಬಿಜೆಪಿ ಸಂಗ್ರಹಿಸಿತು. ಆ ಹಣಕ್ಕೆ ಆದಾಯ ತೆರಿಗೆಯನ್ನೇ ಕಟ್ಟಲಿಲ್ಲ. ಆ ಮೂಲಕ ಕಾನೂನು ಉಲ್ಲಂಘನೆ ಮಾಡಿದೆ. 22 ಬಂಡವಾಳಶಾಹಿಗಳ 16 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಭ್ರಷ್ಟಾಚಾರವನ್ನು ಕಾನೂನುಬದ್ಧ ಮಾಡಿದ್ದೇ ಮೋದಿ ಸಾಧನೆ. ಚುನಾವಣಾ ಬಾಂಡ್​ನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದರೂ ಸಹ ಮೋದಿ ಮತ್ತು ಅಮಿತ್ ಶಾ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅದು ತಪು್ಪ.

    7) ಕಾಂಗ್ರೆಸ್​ನಲ್ಲಿ ಸಮರ್ಥ ನಾಯಕರ ಕೊರತೆ ಇದೆಯಲ್ಲವೇ? ಏಕೆ?
    ಮಲ್ಲಿಕಾರ್ಜುನ್ ಖರ್ಗೆ, ರಾಹುಲ್​ಗಾಂಧಿ ಸಮರ್ಥ ನಾಯಕರಲ್ಲವೇ? ಕಾಂಗ್ರೆಸ್​ನಲ್ಲಿ ಯಾವತ್ತೂ ನಾಯಕರ ಕೊರತೆ ಇಲ್ಲ. ಖರ್ಗೆ ಮತ್ತು ರಾಹುಲ್ ಅವರು ಮೋದಿಗಿಂತ ಉತ್ತಮ ಬುದ್ಧಿವಂತ ನಾಯಕರು.

    8) ಬಿಜೆಪಿ ವಿರುದ್ಧ ಹೇಳಲು ನಿಮಗೇನಿದೆ?
    ಬಿಜೆಪಿ ಯಾವತ್ತೂ ಪ್ರಾಮಾಣಿಕತೆಗೆ ಬದ್ಧವಾದ ಪಕ್ಷ ಅಲ್ಲವೇ ಅಲ್ಲ. ಗೋಹತ್ಯೆ ನಿಷೇಧ ಎನ್ನುತ್ತಾರೆ, ಗೋ ಮಾಂಸ ರಫ್ತು ಮಾಡುವ ಕಂಪೆನಿಗಳಿಂದ ಚುನಾವಣಾ ಬಾಂಡ್ ಸಂಗ್ರಹ ಮಾಡುತ್ತಾರೆ. ಭ್ರಷ್ಟಾಚಾರ ನಿಯಂತ್ರಣ ಅಂತಾರೆ ಆರೋಪ ಇರುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ಶುದ್ಧ ಮಾಡುತ್ತಾರೆ. ಚುನಾವಣೆಗಳಿಗೆ, ಆಪರೇಷನ್ ಕಮಲಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಭ್ರಷ್ಟಾಚಾರ ಮಾಡದೇ ಹಣ ಎಲ್ಲಿಂದ ಬಂತು? ಬಿಜೆಪಿಯೇತರರ ಮೇಲೆ ಐಟಿ, ಇಡಿ ದಾಳಿ ಮಾಡಿಸುವುದೇ ಸಾಧನೆಯೇ?

    9) ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್​ಗೆ ತೊಂದರೆ ಆಗಲ್ವ?
    ಇದೊಂದು ಅನುಕೂಲಸಿಂಧು ಮೈತ್ರಿ. ದೇವೇಗೌಡರು ಕೋಮು ವಾದಿಗಳ ಜತೆ ಸೇರಿರುವುದನ್ನು ಜನ ಒಪ್ಪಲ್ಲ. ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎಂಬ ಮಾತು ಹೇಳಿದ್ದರು. ಆಗ ಗೌಡರು ನನ್ನ ವಿರುದ್ಧ ಮುಗಿಬಿದ್ದಿದ್ದರು. ಆದರೆ ಬಿ ಟೀಂ ಎಂಬುದನ್ನು ಈಗ ನಿಜ ಮಾಡಿದ್ದಾರೆ.

    11) ಇವರಿಬ್ಬರ ಮೈತ್ರಿಯಿಂದ ಬಿಜೆಪಿ ಬಲ ಆಗಲ್ವ?
    ಜೆಡಿಎಸ್ ಯಾವಾಗ ಬಿಜೆಪಿ ಕಡೆ ಹೋಯಿತೋ ಆಗ ಆ ಪಕ್ಷದ ಜಾತ್ಯತೀತವಾದಿ ಮತದಾರರು ಕಾಂಗ್ರೆಸ್ ಕಡೆ ಬಂದಿದ್ದಾರೆ. ಆದ್ದರಿಂದ ಬಿಜೆಪಿಗೆ ಯಾವ ಅನುಕೂಲವೂ ಆಗಲ್ಲ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿಯೂ ಸೋಲುತ್ತದೆ. ಚುನಾವಣೆಯ ನಂತರ ಜೆಡಿಎಸ್ ಅಸ್ತಿತ್ವವೇ ಇರುವುದಿಲ್ಲ.

    12) ಯಾವ ಆಧಾರದಲ್ಲಿ ಮತ ಕೇಳುತ್ತೀರಿ
    ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಆಧಾರ. ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಕೇಳುವುದಿಲ್ಲ, ಕೋಮುಭಾವನೆಯನ್ನು ಕೆರಳಿಸಿ ಮತ ಕೇಳುವುದಿಲ್ಲ.

    13) ಆದರೆ ಗ್ಯಾರಂಟಿಗಳು ಬಂದು ಅಭಿವೃದ್ಧಿ ನಿಂತಿದೆ ಎಂಬ ಮಾತಿದೆ?
    ಇದು ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್​ನ ಅಪಪ್ರಚಾರ. ಈ ರೀತಿ ಮಾತನಾಡುವವರು ಈ ಸಾಲಿನ ಬಜೆಟ್ ನೋಡಬೇಕು. ಅಭಿವೃದ್ಧಿ ಹಾಗೂ ಗ್ಯಾರಂಟಿಗಳಿಗೆ ಪ್ರತ್ಯೇಕ ಅನುದಾನ ಒದಗಿಸಲಾಗಿದೆ. 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ. ಅದರಲ್ಲಿ 52 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ. ಕುಡಿಯುವ ನೀರು, ರಸ್ತೆ, ನೀರಾವರಿ ಯೋಜನೆಗಳು ಎಲ್ಲಿಯೂ ನಿಂತಿಲ್ಲ. ನಿಲ್ಲುವುದು ಇಲ್ಲ.

    14) ಆರ್ಥಿಕವಾಗಿ ರಾಜ್ಯ ಸುಭದ್ರವೇ?
    ಬಿಜೆಪಿ ಹಾಗೂ ದಳದವರು ಹೇಳುವ ರೀತಿಯಲ್ಲಿ ಸರ್ಕಾರ ದಿವಾಳಿಯಾಗಿಲ್ಲ. ತೆರಿಗೆ ಸಂಗ್ರಹಣೆ ಕುಂಠಿತವಾಗಿಲ್ಲ. ನಾವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯಲ್ಲಿಯೇ ಇದ್ದೇವೆ. ಸಾಲ ಸಹ ಮಿತಿಮೀರಿ ಮಾಡಿಲ್ಲ. ತೆರಿಗೆ ಸಂಗ್ರಹಣೆ ಸಹ ಉತ್ತಮವಾಗಿದೆ.

    15) ನರೇಂದ್ರದೊಂದಿಗೆ ಸಂಘರ್ಷ ಬೇಕಾಗಿತ್ತೇ?
    ನಮ್ಮ ಸರ್ಕಾರ ಎಲ್ಲಿಯೂ ಸಂಘರ್ಷಕ್ಕೆ ಮುಂದಾಗಿಲ್ಲ. ಬದಲಾಗಿ ನಾವು ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೋರಿದ್ದೇವೆ. ಕೇಂದ್ರದಿಂದ ಆಗಿರುವ ಅನ್ಯಾಯವನ್ನು ನಮ್ಮ ಜನರಿಗೆ ಪ್ರಾಮಾಣಿಕವಾಗಿ ತಿಳಿಸಿದರೆ ಅದು ಹೇಗೆ ಸಂಘರ್ಷವಾಗುತ್ತದೆ? 15ನೇ ಹಣಕಾಸು ಆಯೋಗ, ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ಬೆಂಗಳೂರಿಗೆ ಕೆರೆಗಳ ಅಭಿವೃದ್ಧಿ ಹಾಗೂ ರಿಂಗ್ ರಸ್ತೆಗೆ 6 ಸಾವಿರ ಕೋಟಿ ರೂ. ಮಾಡಿದ್ದ ಘೋಷಣೆಯಂತೆ ಅನುದಾನ ನೀಡಿಲ್ಲ. ಬರ ನಿರ್ವಹಣೆಗೆ ಇವತ್ತಿನ ತನಕ ನಯಾಪೈಸೆ ಬರಲಿಲ್ಲ. ಇದನ್ನು ಕೇಳಿದರೆ ಸಂಘರ್ಷ ಹೇಗೆ ಆಗುತ್ತದೆ? ಪ್ರಧಾನಿ, ಗೃಹ ಹಾಗೂ ಹಣಕಾಸು ಸಚಿವರು ಸುಳ್ಳು ಹೇಳುವುದು ಸರಿಯೇ?

    10 ಶಾಸಕರಿಗೆ ತಲಾ 50 ಕೋಟಿ ಆಮಿಷ

    16) ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಎಂಬ ಆರೋಪ ಯಾವ ಆಧಾರದಲ್ಲಿ ಮಾಡಿದ್ದೀರಿ?
    ನಮ್ಮ ಪಕ್ಷದ 10 ಶಾಸಕರಿಗೆ ತಲಾ 50 ಕೋಟಿ ರೂ. ಕೊಡುವುದಾಗಿ ಬಿಜೆಪಿ ನಾಯಕರು ಆಮಿಷ ಮಾಡಿದ್ದರು. ಆದರೆ ನಮ್ಮ ಶಾಸಕರಾರು ಪಕ್ಷ ಬಿಡುವುದಿಲ್ಲ. ಆಪರೇಷನ್ ಕಮಲಕ್ಕೆ ಯತ್ನಿಸಿರುವುದನ್ನು ನಮ್ಮ ಶಾಸಕರೇ ತಿಳಿಸಿದ್ದಾರೆ.

    17) ಅಂದರೆ ಚುನಾವಣೆಯ ನಂತರವೂ ಸರ್ಕಾರ ಸುಭದ್ರವೇ?
    ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಈಗಲೂ ಸುಭದ್ರ, ಮುಂದೆಯೂ ಸುಭದ್ರ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಅನುಮಾನವೇ ಬೇಡ.

    18) ಗೆಲ್ಲುವ ವಿಶ್ವಾಸ ಇದ್ದಿದ್ದರೆ ಮಂತ್ರಿಗಳ ಮಕ್ಕಳಿಗೆ ಏಕೆ ಟಿಕೆಟ್ ಕೊಟ್ಟಿರಿ?
    ಇದು ಕುಟುಂಬ ರಾಜಕಾರಣವಲ್ಲ. ಕ್ಷೇತ್ರದ ಜನರ ಅಭಿಪ್ರಾಯದಂತೆ ಟಿಕೆಟ್ ಕೊಟ್ಟಿದ್ದೇವೆ. ಅವರಿಗೆ ಜನ ಬೆಂಬಲ ಸಿಕ್ಕಿದೆ.

    19) ಕೆಲವು ಕ್ಷೇತ್ರಗಳಲ್ಲಿ ಗೊಂದಲ ಬಗೆ ಹರಿದಿಲ್ಲ?
    ನಮ್ಮ ಪಕ್ಷದಲ್ಲಿ ಯಾವುದೇ ಕ್ಷೇತ್ರದಲ್ಲಿ ಗೊಂದ ಲವಿಲ್ಲ. ಎಲ್ಲ ಕಡೆ ಸಮಸ್ಯೆ ಬಗೆಹರಿದಿದೆ. ಪಕ್ಷದ ನಾಯಕರು, ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಕಾಂಗ್ರೆಸ್ ಗೆಲ್ಲಿಸಲು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೊಂದಲ ಇದೆ.

    ಪುನಾರಚನೆ, ಹೈಕಮಾಂಡ್ ವಿವೇಚನೆ

    20) ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದೀರಿ. ಚುನಾವಣೆ ನಂತರ ಸಂಪುಟ ಪುನಾರಚನೆ ಇದೆಯೇ?
    ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರ ಗೆಲ್ಲಿಸಿಕೊಂಡು ಬರುವಂತೆ ಹೇಳಿದ್ದೇವೆ. ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧವಾಗಿರುತ್ತೇವೆ.

    21) ಅಧಿಕಾರ ಹಂಚಿಕೆಯ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ?
    ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ವನಕ್ಕೆ ನಾನು ಬದ್ಧವೆಂದು ಹೇಳಿದ್ದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts