More

    ಪರೀಕ್ಷೆ ಸಮೀಪಿಸುತ್ತಿದೆ; ಯೋಚನೆ ಬೇಡ ಯೋಜನೆ ಇರಲಿ

    ಪರೀಕ್ಷೆ ಸಮೀಪಿಸುತ್ತಿದೆ. ಅನೇಕ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಆತಂಕವೂ ಶುರುವಾಗಿದೆ. ಈ ಆತಂಕಗಳಿಗೆ ಕಾರಣವೇನು? ಕಾರಣಗಳನ್ನು ಹುಡುಕಿ ಅದನ್ನು ದೂರ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

    ಪರೀಕ್ಷಾ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ದುಗುಡ, ದುಮ್ಮಾನಗಳು ಆವರಿಸುತ್ತವೆ, ಕಸಿವಿಸಿ ಪ್ರಾರಂಭವಾಗುತ್ತದೆ. ಪರೀಕ್ಷಾ ಆತಂಕವೆಂಬುದು ಇತ್ತೀಚೆಗೆ ಪರೀಕ್ಷಾರ್ಥಿಗಳನ್ನು ಕಾಡುವ ಮನೋವ್ಯಾಧಿಯಾಗಿದೆ. ಇಡೀ ವರ್ಷ ಓದಿದ್ದನ್ನು ಕೆಲವೇ ಗಂಟೆಗಳಲ್ಲಿ ಪರೀಕ್ಷೆ ಎಂಬ ಭವಿಷ್ಯ ನಿರ್ಧಾರಕದಲ್ಲಿ ಏನಾದರೂ ಏರುಪೇರುಗಳಾದರೆ ಎಂಬ ಪ್ರಶ್ನೆ ಕಾಡುವುದು ಸಹಜವೇ. ಆದರೆ ಪರೀಕ್ಷೆಯ ಬಗ್ಗೆ ಯೋಚಿಸುವ ಬದಲು ಯೋಜನೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ.

    ಪರೀಕ್ಷಾ ಆತಂಕದ ಪರಿಣಾಮಗಳು: ದೈಹಿಕ ಪರಿಣಾಮಗಳು: ಬಿಗಿಯಾದ ಸ್ನಾಯುಗಳು, ತಲೆನೋವು, ನಿದ್ರಾಹೀನತೆ, ಅಸಮಾಧಾನ ಹೊಟ್ಟೆ, ಹಸಿವಾಗದಿರುವಿಕೆ, ಉಸಿರಾಟದ ತೊಂದರೆ, ಹೃದಯದ ಬಡಿತದ ಹೆಚ್ಚಳ, ಬಾಯಿ ಒಣಗುವಿಕೆ, ಅತಿಸಾರ, ಪದೇ ಪದೇ ಮೂತ್ರ ವಿಸರ್ಜನೆ.

    ವರ್ತನೆಯ ಬದಲಾವಣೆ: ಉದ್ವಿಗ್ನ ಮನಸ್ಸು, ಕೆಲಸಗಳತ್ತ ಗಮನ ಇಲ್ಲದೇ ಇರುವುದು, ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯದ ಕೊರತೆ, ಉಗುರು ಕಚ್ಚುವುದು, ಬೆರಳು ಹಿಸುಕುವುದು, ನಡಿಗೆಯ ವೇಗದಲ್ಲಿ ಬದಲಾವಣೆ, ಧೂಮಪಾನ,ಮದ್ಯಪಾನ ಅಥವಾ ಅತಿಯಾದ ತಿನ್ನುವ ಚಟ.

    ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳು: ವಿಲಕ್ಷಣ ಮನೋಭಾವ, ಚಿಂತೆ, ನಿರಾಶೆ, ಭಯ, ಕೋಪ, ನಿರುತ್ಸಾಹ, ಖಿನ್ನತೆ, ಹತಾಶೆ, ಚದುರಿದ ಗಮನ, ಕಿರಿಕಿರಿ ತರುವ ಆಲೋಚನೆಗಳು, ನಕಾರಾತ್ಮಕ ಚಿಂತನೆ, ಸೋಲಿನ ಭೀತಿ, ಕೆಲಸವನ್ನು ಹಾಳುಮಾಡುವ ಹಗಲುಗನಸು, ಅಪರಾಧಿ ಮನೋಭಾವ.

    ಸಾಮಾಜಿಕ ಪರಿಣಾಮಗಳು: ಸಾಮಾಜಿಕ ಹಿನ್ನಡೆ, ಸ್ನೇಹಿತರು ಮತ್ತು ಕುಟುಂಬದವರ ಸಹವಾಸ ತಪ್ಪಿಸಿಕೊಳ್ಳುವುದು, ಅಸಾಮಾನ್ಯ ಕಿರಿಕಿರಿ, ವಿಳಂಬ ಕಾರ್ಯ, ಸಮಾಜದಿಂದ ದೂರ ಉಳಿಯುವಿಕೆ.

    ಅಧ್ಯಯನದ ಪರಿಣಾಮಗಳು: ಅಸ್ತವ್ಯಸ್ತವಾದ ಸಮಯ ನಿರ್ವಹಣೆ, ಕಳಪೆ ಅಧ್ಯಯನ ಪದ್ಧತಿ, ಓದಿನ ಗಮನ ಕಡಿಮೆ, ಓದಿದ್ದನ್ನು ಪ್ರಸ್ತುತಿಯ ಕೊರತೆ, ವಿಫಲ ಪರಿಣಾಮಗಳ ಬಗ್ಗೆ ಭಯದ ಆಲೋಚನೆಯ ಗೀಳು, ಅಧ್ಯಯನ ವಸ್ತುವನ್ನು ಓದುವ ಮತ್ತು ಅರ್ಥಮಾಡಿಕೊಳ್ಳುವ ಕೊರತೆ, ಶೈಕ್ಷಣಿಕ ವಿಶ್ವಾಸದ ಕೊರತೆ.

    ಪರೀಕ್ಷೆಯ ಮೇಲೆ ಪರಿಣಾಮಗಳು: ಉತ್ತರಗಳತ್ತ ಚಿತ್ತ ಸಂಗ್ರಹದ ಕೊರತೆ, ಪ್ರಮುಖ ಪರಿಕಲ್ಪನೆ ಕೀವರ್ಡ್ ಅಥವಾ ಪ್ರಥಮಾಕ್ಷರಗಳನ್ನು ಮರೆಯುವಿಕೆ, ಪರೀಕ್ಷಾ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲ, ಗೊತ್ತಿದ್ದ ಉತ್ತರಗಳನ್ನು ಮರೆಯುವಿಕೆ,

    ಆತಂಕ ಕಡಿಮೆ ಮಾಡುವ ತಂತ್ರಗಳು

    ಪರಿಣಾಮಕಾರಿ ಅಧ್ಯಯನ: 50 ನಿಮಿಷಗಳವರೆಗೆ ನಿರ್ದಿಷ್ಟ ವಿಷಯವನ್ನು ಅಧ್ಯಯನ ಮಾಡಿ, 10 ನಿಮಿಷಗಳ ವಿರಾಮ ಪಡೆದು ಪುನಃ 50 ನಿಮಿಷಗಳಿಗೆ ಇನ್ನೊಂದು ವಿಷಯ ಅಧ್ಯಯನ ಮಾಡಿ. ಅಗತ್ಯವಿದ್ದರೆ ಪರೀಕ್ಷೆಗೆ ಸಾಕಷ್ಟು ಮುಂಚೆ ತಡರಾತ್ರಿವರೆಗೆ ಅಧ್ಯಯನ ನಡೆಸಿ. ಆದರೆ ಪರೀಕ್ಷಾ ವೇಳೆ ಮಾತ್ರ ಇದು ನಿಷಿದ್ಧ.

    ಆರೋಗ್ಯಕರ ಜೀವನಶೈಲಿ: ಭಾವನೆಗಳು ಅಧಿಕ ಅಥವಾ ಕೆಳ ಹಂತದಲ್ಲಿದ್ದಾಗ ಆತಂಕ ಹೆಚ್ಚುತ್ತದೆ. ಆದ್ದರಿಂದ ಅತಿಯಾದ ಭಾವನೆಗಳಿಗೆ ಬ್ರೇಕ್ ಹಾಕಿ. ಸ್ವಾವಲಂಬಿತನವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ವ್ಯಾಯಾಮ ಅಗತ್ಯ.

    ನಿಖರ ಮಾಹಿತಿ ಇರಲಿ: ಆದಷ್ಟು ಪಠ್ಯವಸ್ತುವನ್ನೇ ಅಧ್ಯಯನ ಮಾಡಿ. ಅಧ್ಯಯನ ಕೋರ್ಸ್​ನ ಚೌಕಟ್ಟು ಮೀರದಿರಲಿ. ಕೋರ್ಸ್ ಪೂರ್ಣಗೊಳಿಸಲು ವೇಳಾಪಟ್ಟಿಯಂತೆ ಅಧ್ಯಯನ ಮಾಡಿ. ಬೋಧಕರ ಶ್ರೇಣೀಕೃತ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳಿ. ಅರ್ಥವಾಗದಿದ್ದರೆ ಶಿಕ್ಷಕರನ್ನು ಇನ್ನೊಮ್ಮೆ ವಿವರಿಸಲು ಕೇಳಿ. ಪರೀಕ್ಷೆಗೂ ಮುಂಚೆ ಪರೀಕ್ಷಾ ಕೇಂದ್ರ, ಪ್ರಾರಂಭವಾಗುವ ವೇಳೆ, ನಿಗದಿಪಡಿಸಿದ ವೇಳೆ, ಅಂಕಗಳ ಬಗ್ಗೆ, ಪರೀಕ್ಷಾ ವಿಧಾನದ ಬಗ್ಗೆ ಅಂದರೆ ವಸ್ತುನಿಷ್ಠ ಕಿರುಉತ್ತರ ಪ್ರಬಂಧ ಮಾದರಿ ಮುಂತಾದ ಬಗ್ಗೆ ನಿಖರ ಮಾಹಿತಿ ನೀಡಿ.

    ಪರೀಕ್ಷಾ ಸಿದ್ಧತೆ: ಪಠ್ಯಪುಸ್ತಕ ಅಥವಾ ಮಾರ್ಗದರ್ಶಿಯಲ್ಲಿನ ಪ್ರಶ್ನೆಪತ್ರಿಕೆ ಮಾದರಿಯಂತೆ ಅಭ್ಯಾಸ ಮಾಡಿಸಿ. ಈ ಬಗ್ಗೆ ಬೋಧಕರಿಂದ ಸಲಹೆ ಪಡೆಯಿರಿ. ಪರೀಕ್ಷೆಯ ಹಿಂದಿನ ದಿನ ಸಾಕಷ್ಟು ನಿದ್ರೆ ಮಾಡಿಸಿ. ಗೊಂದಲಗಳಿಂದ ದೂರವಿರಿಸಿ. ಅಗತ್ಯ ಸಾಮಗ್ರಿಗಳನ್ನು ಮಾತ್ರ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಲು ಹೇಳಿ. ಪರೀಕ್ಷೆಯಲ್ಲಿ ಸಮಯದ ಮೇಲ್ವಿಚಾರಣೆಗಾಗಿ ಕೈಗಡಿಯಾರವನ್ನು ಇಟ್ಟುಕೊಳ್ಳಲಿ.

    ಪರೀಕ್ಷಾ ಆತಂಕಕ್ಕೆ ಕಾರಣ

    • ಜೀವನಶೈಲಿ: ಅಸಮರ್ಪಕ ವಿರಾಮ, ಕಳಪೆ ಗುಣಮಟ್ಟದ ಪ್ರಚೋದಕಗಳು, ಸಾಕಷ್ಟು ದೈಹಿಕ ಮತ್ತು ಮಾನಸಿಕ ವ್ಯಾಯಾಮ ಇಲ್ಲದಿರುವುದು, ಸಮಯದ ಅಸಮರ್ಪಕ ಬಳಕೆ, ಬದ್ಧತೆಗಳಿಲ್ಲದ ಆದ್ಯತೆ.
    • ಮಾಹಿತಿಯ ಅಗತ್ಯತೆ: ಪರೀಕ್ಷಾ ತಂತ್ರಗಳ ಮಾಹಿತಿಯ ಕೊರತೆ, ಕೋರ್ಸ್​ನ ಅವಶ್ಯಕತೆ, ಪರೀಕ್ಷಾ ದಿನಾಂಕ ಮತ್ತು ಸ್ಥಳ, ಆತಂಕ ದೂರಮಾಡುವ ತಂತ್ರಗಳನ್ನು ಹೇಗೆ ಅನ್ವಯಿಸಬೇಕೆಂಬ ಜ್ಞಾನ, ಅಧ್ಯಯನ ಮಾಡುವಾಗ ಪರೀಕ್ಷೆಗೂ ಮೊದಲು ಮತ್ತು ನಂತರ ಆತಂಕವನ್ನು ಹೇಗೆ ನಿಭಾಯಿಸಬೇಕೆಂಬ ಕೊರತೆ.
    • ಅಧ್ಯಯನ ಶೈಲಿ: ಅಸಮಂಜಸ ವಿಷಯ ವ್ಯಾಪ್ತಿ, ಪಠ್ಯವನ್ನು ನೆನಪಿಟ್ಟುಕೊಳ್ಳುವ ಪ್ರಯತ್ನ, ಪರಿಸರದ ಅಸಹಕಾರ, ತಿಳಿವಳಿಕೆ ಇಲ್ಲದ ಓದು, ಮರುಪಡೆಯಲು ಸಾಧ್ಯವಿಲ್ಲದ ಅಭ್ಯಾಸ ಸಾಮಗ್ರಿ, ವಿಮರ್ಶಾತ್ಮಕ ಟಿಪ್ಪಣಿಗಳು ಇಲ್ಲದಿರುವುದು, ಪರಿಶೀಲನೆ ಇಲ್ಲದ ಅಧ್ಯಯನ,
    • ಮಾನಸಿಕ ಅಂಶಗಳು: ನಕಾರಾತ್ಮಕ ಚಿಂತನೆ ಮತ್ತು ಸ್ವಯಂ ಟೀಕೆ, ಪಾಲಕರ ಒತ್ತಡ, ಪರೀಕ್ಷಾ ಪರಿಸ್ಥಿತಿಯ ನಿಯಂತ್ರಣ ಇಲ್ಲದಿರುವುದು, ಪರೀಕ್ಷೆ ಮತ್ತು ಫಲಿತಾಂಶಗಳ ಬಗ್ಗೆ ನಕಾರಾತ್ಮಕ ಟೀಕೆ, ವಿವೇಚನೆಯಿಲ್ಲದ ನಂಬಿಕೆಗಳು.

    ಪಾಲಕರ ಕರ್ತವ್ಯವೇನು?

    • ವರ್ತನೆಗಳನ್ನು ನವೀಕರಿಸಿ: ನಿಮ್ಮ ಮಕ್ಕಳ ಶ್ರಮಕ್ಕಾಗಿ ನೀವೇ ಪುರಸ್ಕರಿಸುವ ಯೋಜನೆ ಹಾಕಿಕೊಳ್ಳಿ. ಮಗು ಪರೀಕ್ಷೆಯನ್ನು ಆನಂದಿಸಲಿ. ಪರೀಕ್ಷೆಯ ನಂತರ ಚಿಕ್ಕ ಟ್ರಿಪ್ ಏರ್ಪಡಿಸಿ, ಅವರ ಇಷ್ಟದ ಸ್ಥಳಕ್ಕೆ ಒಯ್ಯಿರಿ.
    • ಅಂಕದ ಚಿಂತೆ ಬಿಡಿ: ಅಂಕಗಳ ಬಗ್ಗೆ ಕೆಡಿಸಿಕೊಳ್ಳುವ ಬದಲು ಹೆಚ್ಚಿನ ಅಂಕ ಗಳಿಸುವ ಸಾಧನೆಯ ಹಾದಿಯಲ್ಲಿ ನಡೆಯಲು ತಿಳಿಸಿ. ಪರೀಕ್ಷೆಯಲ್ಲಿ ಸ್ಕೋರ್ ಕಡಿಮೆಯಾಗಬಹುದೆಂದು ಆತಂಕವನ್ನು ದೂರಮಾಡಿ. ಪರೀಕ್ಷೆಯನ್ನು ಪರಿಪೂರ್ಣವಾಗಿ ಎದುರಿಸುವ ಸಿದ್ಧ್ದೆ ಮಾಡಿಸಿ.
    • ಪರೀಕ್ಷಾ ತಂತ್ರಗಳನ್ನು ತಿಳಿಸಿ: ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಳ್ಳಲು ತಿಳಿಸಿ. ಪ್ರಾರಂಭದಲ್ಲಿ ಎಲ್ಲಾ ಪ್ರಶ್ನೆಗಳನ್ನು ಓದಲಿ. ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಗುರುತು ಹಾಕಿಕೊಂಡು ನಂತರ ಕನಿಷ್ಠ ಸಮಯದಲ್ಲಿ ಉತ್ತರಿಸಲು ಪ್ರಯತ್ನಿಸಲಿ. ಸಮಾಧಾನ ಚಿತ್ತದಿಂದ ಉತ್ತರಿಸುವಂತೆ ಹೇಳಿ. ಅಕ್ಷರಗಳು ಸುಂದರ ಹಾಗೂ ಸ್ಪುಟವಾಗಿರಲಿ.
    • ಒತ್ತಡ ದೂರ ಮಾಡಿ: ಕೌಶಲಯುಕ್ತ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ. ಓದಿದದ್ದನ್ನು ಪದೇ ಪದೇ ನೆನಪಿಸಿಕೊಳ್ಳಲು ಸಹಾಯ ಮಾಡಿ. ಇಲ್ಲವೇ ಸ್ನೇಹಿತರೊಂದಿಗೆ ಹಂಚಿಕೊಳ್ಳಲಿ. ಇದು ನೆನಪಿಡಲು ಸಹಕಾರಿ. ಪರೀಕ್ಷಾ ಸಮಯದಲ್ಲಿ ಹೆಚ್ಚು ಮಾನಸಿಕ ವಿಶ್ರಾಂತಿ ನೀಡಿರಿ.

    | ಆರ್.ಬಿ.ಗುರುಬಸವರಾಜ ಶಿಕ್ಷಕರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts