More

    Web Exclusive | ಬ್ರಹ್ಮಗಿರಿ ಅಭಯಾರಣ್ಯ ಒತ್ತುವರಿ; ತೆರವಿಗೆ ಅರಣ್ಯಾಧಿಕಾರಿಗಳ ಹಿಂದೇಟು

    | ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

    ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯ ನೂರಾರು ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಶ್ರೀಮಂಗಲ ಮತ್ತು ಮಾಕುಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶ ಪ್ರಭಾವಿಗಳ ಸ್ವಾಧೀನದಲ್ಲಿದೆ. ಅನಾದಿ ಕಾಲದಿಂದ ಕಾಡಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಕನಿಷ್ಠ ಮೂಲ ಸವಲತ್ತು ಒದಗಿಸಲು ಅಡ್ಡಿಪಡಿಸುವ ಅರಣ್ಯಾಧಿಕಾರಿಗಳು, ಅರಣ್ಯ ಪ್ರದೇಶದಲ್ಲಿ ನೂರು ಎಕರೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಎರಡು ದಶಕದ ಹಿಂದೆ ಲಕ್ಷಾಂತರ ರೂ. ವಿನಿಯೋಗಿಸಿ ಕೂಟಿಯಾಲ ಸೇತುವೆ ನಿರ್ವಿುಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಕೇವಲ 500 ಅಡಿ ರಸ್ತೆ ಹಾದು ಹೋಗಲು ಅರಣ್ಯಾಧಿಕಾರಿಗಳು ನೀತಿ, ನಿಯಮ ಮುಂದಿಡುತ್ತಾರೆ. ಆದರೆ, ನೂರು ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಪ್ರಶ್ನೆ ಏಳುವಂತೆ ಮಾಡಿದೆ. ಗಿರಿಕಂದರಗಳಲ್ಲಿ ಉನ್ನತಾಧಿಕಾರಿಗಳೊಂದಿಗೆ ಚಾರಣ ಮಾಡುತ್ತಾ ದಿನ ಕಳೆಯುವ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಿಗೆ, ಅರಣ್ಯ ಪ್ರದೇಶ ಕಾಪಾಡುವ ಆಸಕ್ತಿ ಇಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.

    2018ರಲ್ಲಿ ಅರಣ್ಯ ಇಲಾಖೆ ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದ ಸರ್ವೆಯಲ್ಲಿ ನೂರಾರು ಎಕರೆ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಸ್ಥಳೀಯರ ಭಯದಿಂದಾಗಿ ವಲಯ ಅರಣ್ಯಾಧಿಕಾರಿಗಳು ಒತ್ತುವರಿ ತೆರವುಗೊಳಿಸುವ ಸಾಹಸಕ್ಕೆ ಮುಂದಾಗುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಕೂಡ ಆಸಕ್ತಿ ವಹಿಸದಿರುವುದು ವಿಪರ್ಯಾಸ.

    2002 ರಲ್ಲಿ ಸರ್ವೆ ಆಫ್ ಇಂಡಿಯಾ ಮೂಲಕ ಅರಣ್ಯ ಪ್ರದೇಶದ ಸರ್ವೆ ನಡೆದಿತ್ತು. ಆ ವೇಳೆ ಅರಣ್ಯ ಗಡಿ ಗುರುತಿಸಲಾಗಿದೆ. ಹೀಗಿದ್ದರೂ, ಒತ್ತುವರಿಯಾಗಿರುವ ಅರಣ್ಯ ಪ್ರದೇಶ ತೆರವುಗೊಳಿಸಿ, ಅರಣ್ಯ ಕಾಪಾಡುವ ಮುತುವರ್ಜಿ ತೋರುತ್ತಿಲ್ಲ. ಇದರಿಂದ ಅರಣ್ಯ ಪ್ರದೇಶ ಮತ್ತಷ್ಟು ಒತ್ತುವರಿಯಾಗುತ್ತಿದೆ.

    Web Exclusive | ಬ್ರಹ್ಮಗಿರಿ ಅಭಯಾರಣ್ಯ ಒತ್ತುವರಿ; ತೆರವಿಗೆ ಅರಣ್ಯಾಧಿಕಾರಿಗಳ ಹಿಂದೇಟು
    ಮಾಕುಟ್ಟ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿರುವುದು.

    ಬೆಟ್ಟದ ತೋಟ

    ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಬೆಟ್ಟ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕಾಫಿ ತೋಟ ಮಾಡಲಾಗಿದೆ. ಹಲವು ವರ್ಷಗಳ ಹಿಂದೆ ಜಾಗ ಒತ್ತುವರಿ ಮಾಡಿಕೊಂಡು ಕಾಫಿ ಬೆಳೆಯಲಾಗಿದೆ. ಬೆಟ್ಟ ಪ್ರದೇಶವಾಗಿರುವುದರಿಂದ ಈ ತೋಟಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಹೆಚ್ಚು ಮಳೆ ಸುರಿಯುವುದು, ದಟ್ಟವಾಗಿ ಆವರಿಸಿರುವ ಹೊಗೆಯಿಂದಾಗಿ ಇಲ್ಲಿ ಕಾಫಿ ಫಸಲು ಕೂಡ ಕಡಿಮೆ. ಹೀಗಿದ್ದರೂ, ಒತ್ತುವರಿದಾರರ ಒತ್ತುವರಿ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಬೆಟ್ಟ ಪ್ರದೇಶ ಒತ್ತುವರಿ ಮಾಡಿಕೊಂಡು ಕಾಫಿ ತೋಟ ವಿಸ್ತರಿಸುವ ಕಾರ್ಯ ಮಾಡುತ್ತಿದ್ದಾರೆ.

    ಸಿಸಿಎಫ್ ಸಭೆ

    ಬ್ರಹ್ಮಗಿರಿ ಅಭಯಾರಣ್ಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದನ್ನು ತಕ್ಷಣ ತೆರವುಗೊಳಿಸುವಂತೆ ಕೊಡಗು ವೃತ್ತದ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಡಗು ಅರಣ್ಯ ಭವನದಲ್ಲಿ ಇತ್ತೀಚೆಗೆ ಸ್ಥಳೀಯ ಅರಣ್ಯಾಧಿಕಾರಿಗಳ ಸಭೆ ನಡೆಸಿ, ಅರಣ್ಯ ಪ್ರದೇಶ ಒತ್ತುವರಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ, ಅರಣ್ಯ ಪ್ರದೇಶ ತೆರವು ಮಾಡಲು ಸೂಚಿಸಬೇಕು. ತದನಂತರ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯ ಯಾವ ಗ್ರಾಮದಲ್ಲಿ ಅರಣ್ಯ ಒತ್ತುವರಿ ಆಗಿದೆ ಎಂದು ತಿಳಿಸಿದರೆ, ಸ್ಥಳೀಯ ವಲಯ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದು ನೀಡಲಾಗುವುದು.

    | ಪ್ರಭಾಕರನ್ ಡಿಸಿಎಫ್, ವನ್ಯಜೀವಿ ವಿಭಾಗ, ಮಡಿಕೇರಿ.

    ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ; ಗ್ರಾಮ ಪಂಚಾಯತ್ ಚುನಾವಣೆ ಸುತ್ತಮುತ್ತ ಅಭ್ಯರ್ಥಿಗಳಿಬ್ಬರ ಸಾವು!

    ‘ಬೆಳಗೆದ್ದು..’ ಹಳೇದನ್ನೆಲ್ಲ ನೆನಪಿಸಿಕೊಂಡರು ನಟಿ ರಶ್ಮಿಕಾ!

    ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮುಕೇಶ್​ ಅಂಬಾನಿ ಈಗ ಟಾಪ್​ 10ನಿಂದಲೇ ನಾಪತ್ತೆ!

    ವಧು ಎಂದು ನಂಬಿಸಿ ಕೆಲಸದವಳನ್ನೇ ಮದುವೆ ಮಾಡಿಸಿದಳು! ಹೆಂಡತಿಗೆ ಗಿಫ್ಟ್​ ಕೊಟ್ಟಿದ್ದ ಮೊಬೈಲ್​ನಿಂದಲೇ ಬಯಲಾಯಿತು ಸತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts