More

    ಅಕ್ರಮ ಶೆಡ್ ತೆರವಿಗೆ ಸೂಚನೆ

    ಸಾಗರ: ವರದಹಳ್ಳಿ ರಸ್ತೆಯಲ್ಲಿರುವ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ವಿತರಿಸಲು ಮೀಸಲಿಟ್ಟಿದ್ದ ಜಾಗವನ್ನು ಅತಿಕ್ರಮ ಮಾಡಿರುವುದನ್ನು ತಹಸೀಲ್ದಾರ್ ಸೈಯದ್ ಕಲೀಮುಲ್ಲಾ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಯಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕಳಲೆ ಗ್ರಾಮದ ಸರ್ವೇ ನಂ. 40ರಲ್ಲಿ 0.35 ಗುಂಟೆ ಜಾಗವನ್ನು ಕೆಲವರು ಅತಿಕ್ರಮ ಪ್ರವೇಶ ಮಾಡಿ ರಾತ್ರೋರಾತ್ರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಈ ವಿಚಾರವನ್ನು ತಿಳಿದ ತಹಸೀಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಸೈಯದ್ ಕಲೀಮುಲ್ಲಾ, ಅತಿಕ್ರಮ ಪ್ರವೇಶ ಮಾಡಿದವರನ್ನು ಯಾವ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತರಾತುರಿಯಲ್ಲಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇದು ಕಾನೂನುಬಾಹಿರ. ಸರ್ಕಾರಿ ಜಾಗವನ್ನು ಯಾರೇ ಒತ್ತುವರಿ ಮಾಡಿದರೂ ಕಂದಾಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ಇದೆ. ಹಾಗಾಗಿ ಕೂಡಲೇ ಶೆಡ್ ತೆರವುಗೊಳಿಸಲು ಸೂಚಿಸಲಾಗಿದೆ. ಒಂದೊಮ್ಮೆ ತೆರವುಗೊಳಿಸದಿದ್ದರೆ ಕಾನೂನಿನ ಪ್ರಕಾರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
    ಯಡಜಿಗಳೆಮನೆ ಗ್ರಾಪಂ ವ್ಯಾಪ್ತಿಯಲ್ಲಿ ಖಾಲಿ ಇರುವ ಜಮೀನು ನೋಡಿ ರಾತ್ರೋರಾತ್ರಿ ಬೇಲಿ ಹಾಕಿ, ಅಕ್ರಮ ಶೆಡ್ ನಿರ್ಮಿಸುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಕರ್ಕಿಕೊಪ್ಪ ಗ್ರಾಮದಲ್ಲಿ ಸೊಪ್ಪಿನಬೆಟ್ಟ ಪ್ರದೇಶ, ಅರಣ್ಯ, ಪ್ಲಾಂಟೇಶನ್ ಇನ್ನಿತರೆ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದವರನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ ಉದಾಹರಣೆಗಳು ಇವೆ. ಸಾಗರ ತಾಲೂಕಿನಲ್ಲಿ ಈ ರೀತಿ ನೆಲ ನುಂಗುವ ದೊಡ್ಡಜಾಲವೇ ಇದೆ ಎಂದು ಸ್ಥಳೀಯರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts