More

    ಕಲಬುರಗಿ ಕ್ಷೇತ್ರ ವಶಕ್ಕೆ ಉರಿಬಿಸಿಲಲ್ಲೂ ಕೈ-ಕಮಲ ಅಬ್ಬರ

    | ಬಾಬುರಾವ್ ಯಡ್ರಾಮಿ ಕಲಬುರಗಿ

    ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಅಖಾಡ ಪ್ರಧಾನಿ ನರೇಂದ್ರ ಮೋದಿ ವರ್ಸಸ್ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಎಂಬಂತಾಗಿದೆ. ಹೀಗಾಗಿ ದೇಶದ ಗಮನ ಸೆಳೆದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದ್ದು, ಸೂರ್ಯನ ಬಿಸಿಲಿಗಿಂತಲೂ ಎಲೆಕ್ಷನ್ ಹವಾ ಜೋರಾಗಿದೆ.

    ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್ ಅಭ್ಯರ್ಥಿಯಾದರೆ, ಬಿಜೆಪಿಯ ಹಾಲಿ ಸಂಸದ ಡಾ.ಉಮೇಶ ಜಾಧವ್ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಸಮರದಲ್ಲಿ ಕಲಬುರಗಿ ಮೀಸಲು ಕ್ಷೇತ್ರ ಗೆಲ್ಲಲೇಬೇಕು ಎಂದು ಉಭಯ ಪಕ್ಷಗಳ ಪ್ರಮುಖರು ಹಠಕ್ಕೆ ಬಿದ್ದು ಪ್ರಚಾರ ನಡೆಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ತಂತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

    ರಾಜ್ಯದಲ್ಲಿ ಜರುಗಿದ ಕೆಲ ಘಟನೆಗಳು ಈ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ನಾಯಕರು ಪಕ್ಷಾಂತರಗೊಂಡಿದ್ದು, ಕಳೆದೊಂದು ವಾರದ ಪ್ರಚಾರದ ಅಬ್ಬರ ಗಮನಿಸಿದರೆ ಕಾಂಗ್ರೆಸ್​ಗೆ ನಾಯಕರ ಬಲವಿದ್ದರೆ, ಬಿಜೆಪಿಗೆ ಕೆಡರ್ ಬಲ ಇರುವುದು ಕಂಡು ಬರುತ್ತಿದೆ. ಕಾರ್ಯಕರ್ತರ ಶಕ್ತಿ ಗುಪ್ತಗಾಮಿನಿಯಂತೆ ಕೆಲಸ ಮಾಡುತ್ತಿದೆ. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಒಳಏಟಿನ ಭೀತಿ ಇನ್ನಿಲ್ಲದಂತೆ ಕಾಡುತ್ತಿದೆ.

    ಜಾತಿ ಸಮೀಕರಣ: ಜಾತಿ ಸಮೀಕರಣದ ಪ್ರಕಾರ ನೋಡುವುದಾದರೆ ಕಲಬುರಗಿ ಕ್ಷೇತ್ರದಲ್ಲಿ ಲಿಂಗಾಯತ-ವೀರಶೈವ ಮತದಾರರು ನಿರ್ಣಾಯಕರು ಎನ್ನಲಾಗುತ್ತಿದೆ. ಅದು ಬಿಟ್ಟರೆೆ ಹೆಚ್ಚಿನ ಸಂಖ್ಯೆಯಲ್ಲಿ ಕೋಲಿ-ಕಬ್ಬಲಿಗ, ಕುರುಬ, ಮುಸ್ಲಿಮರಿದ್ದಾರೆ. ವಿಪ್ರ ಸಮಾಜದ ಮತಗಳು ಬಹುಪಾಲು ನಿರ್ಧರಿತವಾಗಿವೆ. ಇನ್ನುಳಿದಂತೆ ಸಣ್ಣ-ಪುಟ್ಟ ಹಿಂದುಳಿದ ಸಮುದಾಯಗಳ ಜತೆಗೆ ಲಿಂಗಾಯತರ ಮತ ಹೆಚ್ಚಿಗೆ ಪಡೆದುಕೊಂಡವರು ಗೆಲ್ಲುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಪಕ್ಷಾಂತರ ಯಾರಿಗೆ ಪ್ಲಸ್-ಮೈನಸ್? : ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಕ್ಷೇತ್ರದಲ್ಲಿ ಸೋಲುಂಡಿದ್ದರು. ಅದಕ್ಕೆ ಪ್ರಮುಖ ಪಾತ್ರವಹಿಸಿದ್ದವರು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಮತ್ತು ಬಾಬುರಾವ್ ಚಿಂಚನಸೂರ್. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಇಬ್ಬರೂ ಮತ್ತೆ ಕಾಂಗ್ರೆಸ್ ಕ್ಯಾಂಪ್ ಸೇರಿದ್ದಾರೆ. ಇದರ ಪ್ಲಸ್- ಮೈನಸ್ ಯಾರಿಗೆ ಆಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಮಾಲೀಕಯ್ಯ ವಿರುದ್ಧ ಸ್ಪರ್ಧಿಸಿದ್ದ ಜಿಪಂ ಮಾಜಿ ಅಧ್ಯಕ್ಷ ನಿತಿನ್ಗುತ್ತೇದಾರ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈಗ ಅಫಜಲಪುರದಲ್ಲಿ ಹಾಲಿ ಶಾಸಕ ಎಂ.ವೈ.ಪಾಟೀಲ್ ಮತ್ತು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಶಕ್ತಿ ಹೆಚ್ಚಾದಂತೆ ಕಂಡು ಬರುತ್ತಿದೆ. ಆದರೆ ನಿತಿನ್ ಗುತ್ತೇದಾರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ 53 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರು. ಈಗ ಅವರ ಶಕ್ತಿ ಬಿಜೆಪಿ ಪಾಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಮಾಜಿ ಸಚಿವ ಚಿಂಚನಸೂರ, ಚಿತ್ತಾಪುರದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಈಗ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸಹ ಮೈತ್ರಿಯಲ್ಲಿದ್ದು, ಇದು ಬಿಜೆಪಿಗೆ ಬಲ ನೀಡಬಹುದು. ಬಿಜೆಪಿ-ಕಾಂಗ್ರೆಸ್​ನಲ್ಲಿ ಬಂಡಾಯ ಇಲ್ಲ. ಆದರೆ ಬಿಜೆಪಿಯ ಕೆಲ ಮುಖಂಡರು ಮೈ ಚಳಿಬಿಟ್ಟು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಅಲ್ಲದೆ ಜೆಡಿಎಸ್​ನವರು ಜೇವರ್ಗಿ, ಗುರುಮಠಕಲ್​ದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

    ಹಾಲಿ- ಮಾಜಿ ಶಾಸಕರಿಗೆ ಲೀಡ್ ಟಾರ್ಗೆಟ್ : ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು ಮಾಜಿ ಶಾಸಕರಿಗೆ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಲೀಡ್ ತಂದುಕೊಡುವ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಇದರಿಂದಾಗಿ ಎಲ್ಲರೂ ತಮ್ಮ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶ್ರಮ ಹಾಕುತ್ತಿದ್ದಾರೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ಅವರ ಕ್ಷೇತ್ರದಲ್ಲಿ ರಾಧಾಕೃಷ್ಣ ಅವರಿಗೆ ಹೆಚ್ಚು ಮತ ಲಭಿಸುವಂತೆ ಮಾಡಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಚಿತ್ತಾಪುರ, ಸೇಡಂ, ಜೇವರ್ಗಿ, ಅಫಜಲಪುರದಲ್ಲಿ ಬಿಜೆಪಿ ಲೀಡ್ ಆಗಿತ್ತು. ಈ ಸಲ ಅಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರಿಗೆ ಮತಗಳನ್ನು ಹಾಕಿಸುವ ಮೂಲಕ ತಮ್ಮ ಶಕ್ತಿ ತೋರಿಸುವಂತೆಯೂ ಸೂಕ್ಷ್ಮ ಸಂದೇಶ ರವಾನಿಸಲಾಗಿದೆ.

    ಸವಾಲಾಗಿ ಸ್ವೀಕಾರ: ಸ್ಪರ್ಧೆಯಿಂದ ದೂರ ಉಳಿದು, ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸುವ ಮೂಲಕ ತಮ್ಮ ಸೋಲಿನ ಸೇಡು ಅಳಿಯನ ಮೂಲಕ ತೀರಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಮುಂದಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಅವರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಐದು ಸಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಅಲ್ಲದೆ ಎರಡು ದಿನಗಳಿಂದ ಇಲ್ಲಿಯೇ ಠಿಕಾಣಿ ಹೂಡಿ ಮುಖಂಡರು, ಕಾರ್ಯಕರ್ತರಿಗೆ ಸಲಹೆ- ಸೂಚನೆ ನೀಡುತ್ತಿದ್ದಾರೆ.

    ನೇಹಾ, ಕೋಟನೂರ ಘಟನೆ ಎಫೆಕ್ಟ್ : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಫಯಾಜ್ ಎಂಬಾತ ಹತ್ಯೆ ಮಾಡಿರುವುದು ಮತ್ತು ಕಲಬುರಗಿ ಹೊರವಲಯದ ಕೋಟನೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಘಟನೆಯಲ್ಲಿ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿ ಬಂದ ಕುಟುಂಬದವರ ಮೇಲೆ ಕಿಡಿಗೇಡಿಗಳು ಮನೆಗೆ ನುಗ್ಗಿ ಹಲ್ಲೆ ಮಾಡಿದ ಘಟನೆ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

    ಬಿರು ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಾಜಧಾನಿಗೆ ತಂಪೆರೆದ ಮಳೆರಾಯ: ಬೆಂಗಳೂರು ಮಂದಿ ಫುಲ್​ ಖುಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts