More

    ಸೈಬರ್ ಕ್ರೖೆಂನ ಕರಾಳ ಮುಖ

    ವಿದೇಶದಲ್ಲಿ ಕೆಲಸ ಮಾಡುವುದಕ್ಕಾಗಿ ಭಾರತದಿಂದ ನೇಮಕ ಮಾಡಿಕೊಂಡಿದ್ದ ಸುಮಾರು ಮುನ್ನೂರಕ್ಕೂ ಹೆಚ್ಚು ಯುವಕರನ್ನು ಆ ರಾಷ್ಟ್ರಗಳಲ್ಲಿ ಸೈಬರ್ ಅಪರಾಧ ಮಾಡುವುದಕ್ಕೆ ಬಳಸುತ್ತಿದ್ದ ವಿಷಯ ಕೇಂದ್ರ ಗೃಹ ಸಚಿವಾಲಯಕ್ಕೆ ಗೊತ್ತಾಗಿ, ಇದೀಗ ಅವರನ್ನು ರಕ್ಷಣೆ ಮಾಡಲಾಗಿದೆ. ಇಂತಹ ಇನ್ನಷ್ಟು ಯುವಕರನ್ನು ರಕ್ಷಿಸಿ ಕರೆತರುವ ಕಾರ್ಯ ಪ್ರಗತಿಯಲ್ಲಿದೆ. ಈ ಯುವಕರನ್ನು ನೇಮಕ ಮಾಡಿಕೊಳ್ಳಲು ದುಷ್ಕರ್ವಿುಗಳು ಬಳಸಿದ್ದು ಫೇಸ್​ಬುಕ್, ಇನ್​ಸ್ಟಾಗ್ರಾಮ್ಂತಹ ‘ಸೋಶಿಯಲ್ ಮೀಡಿಯಾ ಮಾರ್ಗ’ ಎಂಬುದು ಗಮನಾರ್ಹ. ವಿದೇಶದಲ್ಲಿ ಒಳ್ಳೆಯ ನೌಕರಿ ಇದೆ ಎಂದು ಆಕರ್ಷಕ ಜಾಹೀರಾತುಗಳನ್ನು ಕೊಡುತ್ತಿದ್ದರು. ಅರ್ಜಿ ಸಲ್ಲಿಸಿದವರನ್ನು ನೇಮಕ ಮಾಡಿಕೊಳುತ್ತಿದ್ದರು. ಆಗ್ನೇಯ ಏಷ್ಯಾದ ಕಾಂಬೋಡಿಯಾ, ಮಯನ್ಮಾರ್, ಲಾವೋಸ್ ಮುಂತಾದ ದೇಶಗಳಿಗೆ ಕರೆಸಿಕೊಂಡು, ಆಶ್ರಯ ನೀಡುತ್ತಿದ್ದರು. ಡೇಟಿಂಗ್, ಗೇಮಿಂಗ್, ಹೂಡಿಕೆ ಮುಂತಾದ ಆಪ್​ಗಳ ಮೂಲಕ ಭಾರತೀಯರಿಗೇ ವಂಚನೆ ಮಾಡಲು ಇವರನ್ನು ಬಳಸಿಕೊಳ್ಳಲಾಗುತ್ತಿತ್ತು. ವಂಚನೆಯ ಪ್ರಮಾಣ ಎಷ್ಟು ಅಗಾಧವಾಗಿತ್ತೆಂದರೆ, ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲೇ ಭಾರತೀಯರ 7,061 ಕೋಟಿ ರೂ.ಗಳನ್ನು ವಂಚಕರು ಆನ್​ಲೈನ್ ಮೂಲಕ ಲಪಟಾಯಿಸಿದ್ದರು. ಈ ಕುರಿತು ದಾಖಲಾದ ದೂರುಗಳ ಸಂಖ್ಯೆ ಆರು ಲಕ್ಷಕ್ಕೂ ಹೆಚ್ಚು! ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ಇಂಡಿಯನ್ ಸೈಬರ್ ಕ್ರೖೆಂ ಕೋಆರ್ಡಿನೇಷನ್ ಸೆಂಟರ್ (ಐಫೋರ್​ಸಿ) ಕ್ರಮಕ್ಕೆ ಮುಂದಾಗಿತ್ತು. 3.25 ಲಕ್ಷ ಶಂಕಾಸ್ಪದ ಖಾತೆಗಳನ್ನು ಫ್ರೀಜ್ ಮಾಡಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ಎ ವಿಧಿಯನ್ನು ಬಳಸಿಕೊಂಡು, 3 ಸಾವಿರಕ್ಕೂ ಹೆಚ್ಚು ಯುಆರ್​ಎಲ್​ಗಳನ್ನು (ಯುನಿಫಾಮ್ರ್ ರಿಸೋರ್ಸ್ ಲೊಕೇಟರ್) ಮತ್ತು 595 ಆಪ್​ಗಳನ್ನು ಬ್ಲಾಕ್ ಮಾಡಿತ್ತು. 5.3 ಲಕ್ಷ ಸಿಮ್ ಕಾರ್ಡ್​ಗಳು, 80,848 ಐಎಂಇಐ (ಇಂಟರ್​ನ್ಯಾಷನಲ್ ಮೊಬೈಲ್ ಇಕ್ವಿಪ್​ವೆುಂಟ್ ಐಡೆಂಟಿಟಿ) ಸಂಖ್ಯೆಗಳನ್ನು ಬಂದ್ ಮಾಡಿತ್ತು. ಇತ್ತೀಚೆಗೆ ಕಾಂಬೋಡಿಯಾದಲ್ಲಿ ಈ ಭಾರತೀಯ ಉದ್ಯೋಗಿಗಳೇ ಮುಷ್ಕರಕ್ಕೆ ಮುಂದಾದಾಗ, ಅವರ ರಕ್ಷಣೆಗೆ ಮತ್ತು ಸುರಕ್ಷಿತ ವಾಪಸಾತಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

    ಕೆಲಸ ಸಿಕ್ಕರೆ ಸಾಕೆಂಬ ಮನಸ್ಥಿತಿಯಲ್ಲಿರುವ ಯುವಕರು ಇಂತಹ ಜಾಹೀರಾತು ನೋಡಿದೊಡನೆ ಮರುಳಾಗುವುದು ಸಹಜ. ಅವರ ಪಾಲಕರು ಕೂಡ ಸಾಲಸೋಲ ಮಾಡಿ ವಿದೇಶಕ್ಕೆ ಕಳಿಸಲು ಮುಂದಾಗುವುದೂ ಅಸಹಜವೇನಲ್ಲ. ಆದರೆ, ಒಳ್ಳೆಯ ಕೆಲಸ-ಸಂಬಳ ಸಿಕ್ಕಿತೆಂದು ಯೋಚನೆಯನ್ನೇ ಮಾಡದೇ ವಿದೇಶಗಳಿಗೆ ತೆರಳುವುದು ಅಪಾಯಕಾರಿ. ನೇಮಕಾತಿ ಮಾಡಿಕೊಳ್ಳುತ್ತಿರುವ ಸಂಸ್ಥೆ ಯಾವುದು, ಅದರ ಪೂರ್ವಾಪರ ಏನು, ಈ ಹಿಂದೆ ಅಲ್ಲಿ ಕೆಲಸ ಮಾಡಿದವರ ಅಭಿಪ್ರಾಯವೇನು ಎಂಬುದನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಈ ರೀತಿಯ ಅಕ್ರಮಗಳು ದಿನೇದಿನೆ ಹೆಚ್ಚಾಗುತ್ತಿರುವುದರಿಂದ ಇದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸಬೇಕಾಗಿದೆ. ಭಾರತದಿಂದ ವಿದೇಶಕ್ಕೆ ಉದ್ಯೋಗಕ್ಕಾಗಿ ಹೋಗುತ್ತಿರುವವರ ಡೇಟಾಬೇಸ್ ಸಿದ್ಧಪಡಿಸಿ ಇಟ್ಟುಕೊಂಡು, ಕಾಲಕಾಲಕ್ಕೆ ಅವರ ಕೆಲಸ- ವಾಸ- ಪರಿಸ್ಥಿತಿ ಮುಂತಾದವುಗಳ ಬಗ್ಗೆ ಅಧಿಕೃತ ಮಾಹಿತಿ ತರಿಸಿಕೊಳ್ಳಬೇಕು. ಯಾರಾದರೂ ಸಂಕಷ್ಟಕ್ಕೆ ಸಿಲುಕಿದರೆ, ತಕ್ಷಣವೇ ಭಾರತೀಯ ದೂತಾವಾಸಕ್ಕೆ ಆ ವಿಷಯ ತಲುಪುವ ಮತ್ತು ಅವರ ರಕ್ಷಣೆ ಮಾಡುವ ಕಾರ್ಯ ಸರ್ಕಾರಗಳಿಂದ ಆಗಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts