More

    ಹೆತ್ತ ತಾಯಿಗೆ ಬೇಡವಾದ ನವಜಾತ ಹೆಣ್ಣು ಶಿಶು: ತಾಯಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

    ಹಾವೇರಿ: ನನಗೆ ಹೆಣ್ಣು ಮಗು ಬೇಡ ಎಂದು ನವಜಾತ ಹೆಣ್ಣು ಶಿಶುವನ್ನು ಹೆತ್ತ ತಾಯಿ ತೀರಸ್ಕರಿಸಿದ್ದಾಳೆ. ಹೆರಿಗೆ ಮಾಡಿದ ವೈದ್ಯೆ ಅದನ್ನು ಮಾರಾಟ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ತಾಯಿ ಸೇರಿ ನಾಲ್ವರ ವಿರುದ್ಧ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಕುಸುಮಾ ಬಸವರಾಜ (30)ಮಗು ಮಾರಾಟ ಮಾಡಿದ ಹೆತ್ತ ತಾಯಿ. ಬ್ಯಾಡಗಿ ಪಟ್ಟಣದ ಇಸ್ಲಾಂಪುರ ಓಣಿಯ ವೈದ್ಯೆ ಜೈತುನಬಿ ಎಂ. ಸೌದಾಗರ ಹೆರಿಗೆ ಮಾಡಿಸಿದ ವೈದ್ಯೆ. ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ ಮಂಜುಳಾ ದಾಸಪ್ಪನವರ ಹಾಗೂ ರಾಜಪ್ಪ ದಾಸಪ್ಪನವರ ಮಗುವನ್ನು ತೆಗೆದುಕೊಂಡಿದ್ದ ದಂಪತಿ.
    ಇವರ ವಿರುದ್ಧ ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕವಿತಾ ಟಿ.ಎಸ್. ದೂರು ದಾಖಲಿಸಿದ್ದಾರೆ.
    ನಡೆದಿದ್ದೇನು…?
    ಕುಸುಮಾ ಗರ್ಭಿಣಿಯಿದ್ದಾಗ ವೈದ್ಯೆ ಜೈತುನಬಿ ಬಳಿ ತೋರಿಸಿಕೊಂಡಿದ್ದರು. ಆಕೆಗೆ ಕಳೆದ ಜನೇವರಿ 4ರಂದು ಬ್ಯಾಡಗಿ ಪಟ್ಟಣದಲ್ಲಿ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದೆ. ಆದರೆ, ನನಗೆ ಹೆಣ್ಣು ಮಗು ಬೇಡ ಎಂದ ಕುಸುಮಾ ಮಗುವನ್ನು ತೀರಸ್ಕರಿಸಿದ್ದಳು. ಆಗ ವೈದ್ಯೆ ಜೈತುನಬಿ ‘ನಿನಗೆ ಮಗು ಬೇಡವಾದರೆ, ಬೇರೆಯವರಿಗೆ ಕೊಡುತ್ತೇನೆ’ ಎಂದು ಹೇಳಿ ದಾವಣಗೆರೆಯ ಮಂಜುಳಾ ಹಾಗೂ ರಾಜಪ್ಪ ದಂಪತಿಯನ್ನು ಕರೆದು ಮಗುವನ್ನು ಕೊಟ್ಟಿದ್ದಾಳೆ. ದಂಪತಿಯು ಮಗುವನ್ನು ಸಾಕುತ್ತಿರುವ ಕುರಿತು ಅಕ್ಕಪಕ್ಕದ ಜನತೆ ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರು ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
    ಆದರೆ, ಮಗುವನ್ನು ಕುಸುಮಾ ತೀರಸ್ಕರಿಸಿದ ಬಳಿಕ ಜೈತುನಬಿ ಹಣಕ್ಕೆ ಮಾರಾಟ ಮಾಡಿದ್ದಾಳೆಯೆ ಅಥವಾ ಸಾಕಲು ಕೊಟ್ಟಿದ್ದಾಳೆಯೆ ಎಂಬುದು ಹಾಗೂ ಕುಸುಮಾ ಗದಗನಿಂದ ಬಂದು ಇಲ್ಲಿ ಏಕೆ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಜೈತುನಬಿ ವೈದ್ಯೆ ಹೌದೋ, ಅಲ್ಲವೋ ಎಂಬ ಕುರಿತು ಪೊಲೀಸರ ತನಿಖೆಯಿಂದ ಬಯಲಿಗೆ ಬರಬೇಕಿದೆ.
    ಪುರಸಭೆಯಿಂದ ಜನನ ಪ್ರಮಾಣಪತ್ರ…
    ಮಂಜುಳಾ ದಂಪತಿ ಈ ಮಗುವನ್ನು ಹೀಗೆಯೆ ತೆಗೆದುಕೊಂಡು ಹೋದರೆ ಏನೂ ಸಮಸ್ಯೆ ಇಲ್ಲತಾನೆ ಎಂದು ವೈದ್ಯೆ ಜೈತುನಬಿಯನ್ನು ವಿಚಾರಿಸಿದ್ದಾರೆ. ಇದಕ್ಕೆ ಜೈತುನಬಿ ಹಾಗೆಯೇ ಬೇಡ. ಇದು ನಿಮಗೆ ಹುಟ್ಟಿದೆ ಎಂದು ಪ್ರಮಾಣಪತ್ರ ಕೊಡುತ್ತೇನೆ. ಅದರಿಂದ ಪುರಸಭೆಯಲ್ಲಿ ಜನನ ಪ್ರಮಾಣಪತ್ರ ಮಾಡಿಸಿಕೊಳ್ಳಿ. ಆಗ ಏನೂ ಸಮಸ್ಯೆ ಆಗುವುದಿಲ್ಲ ಎಂದು ಸಲಹೆ ನೀಡಿದ್ದಾಳೆ. ನಂತರ ಮಂಜುಳಾಗೆ ಹೆರಿಗೆಯಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾಳೆ. ಮಂಜುಳಾ ಅದರ ಆಧಾರದ ಮೇಲೆ ಬ್ಯಾಡಗಿ ಪುರಸಭೆಯಲ್ಲಿ ಮಗುವಿನ ಜನನ ಪ್ರಮಾಣಪತ್ರ ಕೂಡ ಪಡೆದುಕೊಂಡಿದ್ದಾಳೆ.

    See also  ಜಿಲ್ಲಾ ಮಟ್ಟದ ಉದ್ಯೋಗ ಮೇಳ ಮಾ.3ರಂದು; ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳ ನೋಂದಣಿಗೆ ಆಹ್ವಾನ; ಪೋಸ್ಟರ್ ಬಿಡುಗಡೆಗೊಳಿಸಿದ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts