More

    ಹೆತ್ತವರು – ಮಕ್ಕಳ ನಡುವೆ ಅಂತರ ಬೇಕೇ?

    ಹೆತ್ತವರು - ಮಕ್ಕಳ ನಡುವೆ ಅಂತರ ಬೇಕೇ?| ಡಾ.ಕೆ.ಪಿ. ಪುತ್ತೂರಾಯ
    ಮೊನ್ನೆ ಒಂದು ದಂಪತಿಗಳು ತಮ್ಮ ಅಳಲನ್ನು ಹೀಗೆ ತೋಡಿಕೊಂಡರು: ‘ನಮಗಿರುವುದು ಒಬ್ಬನೇ ಮಗ. ಈಗ ವಯಸ್ಸಿಗೆ ಬಂದಿದ್ದಾನೆ. ಆದರೆ ನಮ್ಮ ಜೊತೆ ಫ್ರೀ ಆಗಿರುವುದಿಲ್ಲ; ಮನಬಿಚ್ಚಿ ಮಾತನಾಡುವುದಿಲ್ಲ್ಲ ಅವನ ಜತೆ ನಾವೆಷ್ಟು ಸಲಿಗೆಯಿಂದ ಇದ್ದರೂ ಅವನು ಮಾತ್ರ ನಮ್ಮನ್ನು ಪರಕೀಯರಂತೆ ಕಾಣುತ್ತಾನೆ. ಅವನಾಯಿತು ಅವನ ಕೋಣೆಯಾಯಿತು. ಯಾವಾಗ ನೋಡಿದರೂ ಮೊಬೈಲಿನಲ್ಲಿ ಮಾತಾಡುತ್ತಿರುತ್ತಾನೆ. ಏನನ್ನೋ ನೋಡುತ್ತಾ ಖುಷಿ ಪಡುತ್ತಿರುತ್ತಾನೆ. ತನ್ನ ಗೆಳೆಯರ ಜತೆ ತಾಸುಗಟ್ಟಲೆ ಮಾತನಾಡುವ ಇವನಿಗೆ ನಮ್ಮ ಜತೆ ಕೆಲವು ನಿಮಿಷಗಳ ಕಾಲ ಮಾತನಾಡಲೂ ಆಸಕ್ತಿ, ಪುರುಸೊತ್ತು ಇರುವುದಿಲ್ಲ. ಎಷ್ಟೋ ಬಾರಿ ಅವನದೇ ವೈಯುಕ್ತಿಕ ವಿಷಯಗಳನ್ನು ನಾವು ಅವನ ಗೆಳೆಯನ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ. ಇದರಿಂದ ನಮಗೆ ನೋವಾಗಿದೆ. ಅವನಿಗೋಸ್ಕರ ನಾವು ಎಲ್ಲವನ್ನು ತ್ಯಾಗ ಮಾಡಿದ್ದೇವೆ. ಆದರೂ ಅವನ ದೃಷ್ಟಿಯಲ್ಲಿ ದೂರದವರಾಗಿದ್ದೇವೆ. ನಮ್ಮ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದೇ ಇಲ್ಲ. ಏನು ಮಾಡಲಿ?’

    ಹೌದು ಇದು, ಈ ದಂಪತಿಗಳ ಕತೆ ಮಾತ್ರವಲ್ಲ. ಎಷ್ಟೋ ಮನೆಗಳ ಕತೆ, ವ್ಯಥೆ. ವಯಸ್ಸಿಗೆ ಬಂದ ಮಕ್ಕಳು ಹೆತ್ತವರಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಅಂತರವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಲು ಕಾರಣವೇನೆಂಬುದನ್ನು ವಿಶ್ಲೇಷಿಸಿದರೆ ಒಂದೊಂದು ಸತ್ಯಗಳು ಹೊರಬರುತ್ತವೆ.

    = ಪ್ರಾಪ್ತರಾಗುತ್ತಿದ್ದಂತೆ ಮಕ್ಕಳ ಮತ್ತು ಹೆತ್ತವರ ಆಸಕ್ತಿ-ಅಭಿರುಚಿಗಳು, ಅಭ್ಯಾಸ ಹವ್ಯಾಸಗಳು ತೀರ ಭಿನ್ನವಾದಾಗಲೂ ಮಕ್ಕಳು ಹೆತ್ತವರಿಂದ ದೂರವಿರಲು ಪ್ರಯತ್ನಿಸುತ್ತಾರೆ. ಇದು ತಲೆಮಾರುಗಳ ಅಂತರದಿಂದ ಉದ್ಭವಿಸಿದ ಸಮಸ್ಯೆ. ಇದು ಸಾರ್ವಕಾಲಿಕ. ಇದನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದಿದ್ದರೂ ಇಬ್ಬರೂ ಮಾಡಿಕೊಳ್ಳಬಹುದಾದ ಹೊಂದಾಣಿಕೆಯಿಂದ ಭಿನ್ನತೆಯನ್ನು ಕೊಂಚಮಟ್ಟಿಗೆ ಸರಿಪಡಿಸಿಕೊಳ್ಳಬಹುದು.

    =ಇನ್ನೊಂದು ಸ್ಪೇಸ್ ಪ್ರಾಬ್ಲಂ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ಪೇಸ್ ಎಂಬುದು ಇರುತ್ತದೆ. ಆತ ಅದರೊಳಗೆ ಇರಲು, ಕಾಲ ಕಳೆಯಲು ಇಚ್ಛೆ ಪಡುತ್ತಾನೆ. ಇಲ್ಲಿ ಹೆತ್ತವರ ಹಸ್ತಕ್ಷೇಪ ಮಕ್ಕಳು ಇಷ್ಟಪಡದ ವಿಚಾರ. ಆದುದರಿಂದ ಅವರ ಎಲ್ಲಾ ವಿಚಾರಗಳಲ್ಲಿ ಮೂಗು ತೂರಿಸದೆ ಅವರಿಷ್ಟದಂತೆ ಅವರನ್ನು ಇರಲು ಬಿಡಿ. ಅವಶ್ಯವಿದ್ದಲ್ಲಿ ಮಾತ್ರ ಸರಿಪಡಿಸಿ.

    = ಹೆತ್ತವರ ಮತ್ತು ಮಕ್ಕಳ ನಡುವಿನ ವಯಸ್ಸಿನ ಇಲ್ಲವೇ ಬುದ್ಧಿವಂತಿಕೆಯ ಅಂತರ ಸಹಜವಾಗಿಯೇ ದೊಡ್ಡದಾಗಿರುತ್ತದೆ. ಫಲಶ್ರುತಿಯಾಗಿ ಇವರಿಬ್ಬರ ನಡುವೆ ಅಂತರವೇರ್ಪಡುವುದು ಸರ್ವೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಹೆತ್ತವರು ತಮ್ಮ ಹಿರಿತನವನ್ನು ಚಲಾಯಿಸದೆ ಮಕ್ಕಳನ್ನು ಗೆಳೆಯರಂತೆ ಕಾಣಬೇಕು. ಇದನ್ನೇ ‘ಸಂಪ್ರಾಪ್ತೇ ಷೋಡಷೇ ವರ್ಷೆ ಪುತ್ರಂ ಮಿತ್ರಂ ವದಾಚರೇತ್’ ಎಂಬ ಮಾತಿನಲ್ಲಿ ಹೇಳಲಾಗಿದೆ. ಆಗ ಮಾತ್ರ ಅನುಕೂಲಕರ ವಾತಾವರಣ ಏರ್ಪಡಲು ಸಾಧ್ಯ. ಮಕ್ಕಳು ತಮ್ಮ ಗೆಳೆಯರ ಜೊತೆ ಬೇಗ ಬೆರೆತು ಕೊಳ್ಳಲು ಈ ಸೌಹಾರ್ದವೇ ಕಾರಣ. ಈ ಮಟ್ಟಕ್ಕೆ ಹೆತ್ತವರು ಇಳಿಯಲು ಅಥವಾ ಮಕ್ಕಳು ಏರಲು ಸಾಧ್ಯವಾಗದೇ ಹೋದರೂ, ಹೆತ್ತವರ ಬಗ್ಗೆ ಮಕ್ಕಳಿಗೆ ಮಾನಸಿಕ ಭಯ ಇರಬಾರದು.

    = ಪ್ರತಿಯೊಂದಕ್ಕೂ ಮಕ್ಕಳನ್ನು ಗದರಿಸುವ, ಬೈಯ್ಯುವ ಇಲ್ಲವೇ ಪ್ರಶ್ನಿಸುವ ಅಭ್ಯಾಸವಿದ್ದಲ್ಲಿ ಅಂತಹ ಹೆತ್ತವರಿಂದ ಮಕ್ಕಳು ದೂರ ಉಳಿಯಲು ಪ್ರಯತ್ನಿಸುತ್ತಾರೆ. ತಪ್ಪು ಮಾಡಿದಲ್ಲಿ ನಯವಾಗಿ, ಏಕಾಂತದಲ್ಲಿ ಅವರ ತಪ್ಪುಗಳು ಅವರಿಗೇ ಅರ್ಥವಾಗುವಂತೆ ತಂದೆ ತಾಯಿಯರಿಬ್ಬರೂ ಜತೆಯಾಗಿ ತಿಳಿ ಹೇಳಿ ಅವರ ಸ್ನೇಹ, ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕು.

    = ಹೆತ್ತವರು ಭ್ರಷ್ಟರಾಗಿದ್ದಲ್ಲಿ ಅಥವಾ ಚಾರಿತ್ರ್ಯಹೀನರಾಗಿದ್ದಲ್ಲಿ ಅಂತಹ ಹೆತ್ತವರಿಂದಲೂ ಮಕ್ಕಳು ದೂರ ಉಳಿಯುತ್ತಾರೆ. ಆದುದರಿಂದ ಹೆತ್ತವರು ಮಕ್ಕಳಿಗೆ ಆದರ್ಶಪ್ರಾಯರಾಗಿರಬೇಕು. ನುಡಿದಂತೆ

    ನಡೆದಾಗ ಹಾಗೂ ನಡೆದಂತೆ ನುಡಿದಾಗ ಮಾತ್ರ ಇದು ಸಾಧ್ಯ.

    = ದುಡಿಯುವ ಭರದಲ್ಲಿ ಮಕ್ಕಳಿಗಾಗಿ ಹೆತ್ತವರ ಬಳಿ ಸಮಯದ, ಆಸಕ್ತಿಯ ಕೊರತೆ ಉಂಟಾದಾಗಲೂ ಮಕ್ಕಳು ಅವರಿಂದ ದೂರವಾಗುತ್ತಾರೆ.

    =ಹೆತ್ತವರು ಮಕ್ಕಳಿಂದ ಏನನ್ನೂ ಮುಚ್ಚಿಡಬಾರದು. ತಮ್ಮ ಆದಾಯ, ಕಷ್ಟ ನಷ್ಟಗಳ ಬಗ್ಗೆ ಮಕ್ಕಳಿಗೂ ಗೊತ್ತಿರಬೇಕು. ಮನೆಯಲ್ಲಿ ಎಲ್ಲರಿಗೂ ಎಲ್ಲವೂ ಪಾರದರ್ಶಕವಾ ಗಿರಬೇಕು.

    =ಮಕ್ಕಳೂ ಅಷ್ಟೆ, ತಮ್ಮ ಎಲ್ಲಾ ಅನುಭವ ಅನಿಸಿಕೆ ಬೇಕು ಬೇಡಗಳನ್ನು ಹೆತ್ತವರ ಜತೆ ಮುಕ್ತವಾಗಿ ಹಂಚಿಕೊಳ್ಳಬೇಕು. ಕಾರಣ ಹೆತ್ತವರಿಗಿಂತ ಉತ್ತಮ ಹಿತಚಿಂತಕರು ಮಕ್ಕಳಿಗೆ ಬೇರೆ ಯಾರೂ ಇಲ್ಲ. ಈ ಸತ್ಯಾಂಶದ ಅರಿವಾದರೆ ಮಕ್ಕಳು ಹೆತ್ತವರನ್ನು ಬಿಟ್ಟಿರಲಾರರು. ಒಟ್ಟಿನಲ್ಲಿ ಯಾವ ಮನೆಯಲ್ಲಿ ಹೆತ್ತವರು ಮತ್ತು ಮಕ್ಕಳು ಒಳ್ಳೆಯ ಸ್ನೇಹಿತರಂತೆ ಇರುತ್ತಾರೋ ಆ ಮನೆಯಲ್ಲಿ ಅಂತರಗಳು ಕಡಿಮೆ; ಸಮಸ್ಯೆಗಳೂ ಕಡಿಮೆ.

    ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts