More

    ಐಪಿಎಲ್​ಗೆ ದಿನೇಶ್​ ಕಾರ್ತಿಕ್​ ಗುಡ್​ಬೈ! ಭಾವುಕರಾದ ಡಿಕೆಗೆ ವಿರಾಟ್​ ಕೊಹ್ಲಿ ಸಾಂತ್ವಾನ

    ನವದೆಹಲಿ: ಟೀಮ್​ ಇಂಡಿಯಾದ ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ವಿದಾಯ ಹೇಳುವ ಸುಳಿವು ನೀಡಿದ್ದಾರೆ. ಬುಧವಾರ (ಮೇ 22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಸೋಲಿನ ನಂತರ ಡಿಕೆ ಐಪಿಎಲ್‌ನಿಂದ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು.

    ಮೈದಾನದಿಂದ ಡಗ್‌ಔಟ್‌ಗೆ ಹೋಗುತ್ತಿದ್ದಾಗ ಕಾರ್ತಿಕ್ ಅವರು ತನ್ನ ಕೈಗವಸುಗಳನ್ನು ತೆಗೆದು ಕ್ರೀಡಾಂಗಣದಲ್ಲಿದ್ದ ಕ್ರೀಡಾಭಿಮಾನಿಗಳ ಎದುರು ಪ್ರದರ್ಶಿಸುವ ಮೂಲಕ ಐಪಿಎಲ್​ನಿಂದ ನಿವೃತ್ತಿಯಾಗುತ್ತಿರುವ ಸುಳಿವು ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ದಿನೇಶ್​ ಕಾರ್ತಿಕ್ ಅವರು 15 ಪಂದ್ಯಗಳನ್ನು ಆಡಿ 326 ರನ್ ಗಳಿಸಿದರು.

    ಡಿಕೆ ಭಾವುಕ
    ಆರ್​ಸಿಬಿ ಎಲಿಮಿನೇಟರ್​ ಪಂದ್ಯದಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ದಿನೇಶ್​ ಕಾರ್ತಿಕ್ ತುಂಬಾ ಭಾವುಕರಾದರು. ಈ ವೇಳೆ ವಿರಾಟ್​ ಕೊಹ್ಲಿ ಅವರು ಡಿಕೆಗೆ ಸಮಾಧಾನ ಮಾಡಿದರು. ಇದೇ ಸಂದರ್ಭದಲ್ಲಿ ಡಿಕೆಗೆ ಆರ್​ಸಿಬಿ ಆಟಗಾರರೆಲ್ಲರು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.

    ಅಂದಹಾಗೆ ದಿನೇಶ್ ಕಾರ್ತಿಕ್ 2008ರ ಆವೃತ್ತಿಯಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಡಿಕೆ 17 ಸೀಸನ್​ಗಳಲ್ಲಿ 257 ಪಂದ್ಯಗಳನ್ನು ಆಡಿದ್ದು 4842 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧ ಶತಕಗಳಿವೆ. ಔಟಾಗದೆ 97 ರನ್​ ಗಳಿಸಿದ್ದು ಗರಿಷ್ಠ ಸ್ಕೋರ್​ ಆಗಿದೆ. ಕೀಪರ್​ ಆಗಿ 145 ಕ್ಯಾಚ್‌ಗಳು, 37 ಸ್ಟಂಪ್ ಔಟ್ ಮತ್ತು 15 ರನೌಟ್‌ಗಳನ್ನು ಮಾಡಿದ್ದಾರೆ. ಕಾರ್ತಿಕ್ ಐಪಿಎಲ್​ನಲ್ಲಿ ಇದುವರೆಗೆ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇದಕ್ಕೂ ಮುನ್ನ ಅವರು ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿದ್ದರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದರು.

    ದಿನೇಶ್ ಕಾರ್ತಿಕ್ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಡಿಕೆ 2004ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಎಂ.ಎಸ್. ಧೋನಿ ಖ್ಯಾತಿ ಗಳಿಸಿದಾಗ ಡಿಕೆ ಕಣ್ಮರೆಯಾದರು. ಡಿಕೆ ಭಾರತಕ್ಕಾಗಿ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 1025 ರನ್ ಗಳಿಸಿದ್ದಾರೆ. 2018ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. 94 ಏಕದಿನ ಪಂದ್ಯಗಳನ್ನು ಆಡಿರುವ ಕಾರ್ತಿಕ್ 1752 ರನ್ ಗಳಿಸಿದ್ದಾರೆ ಮತ್ತು 64 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. 60 ಟಿ20ಗಳಲ್ಲಿ 686 ರನ್​ ಗಳಿಸಿ, 30 ಕ್ಯಾಚ್‌ಗಳನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    ಅಷ್ಟೇ ಎಲ್ಲವೂ ಮುಗಿದ ಕತೆ, ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತೇನೆ… ಕಣ್ಣೀರಿಟ್ಟ ಆರ್​ಸಿಬಿ ಆಟಗಾರ​! ವಿಡಿಯೋ ವೈರಲ್​

    ಆರ್​ಸಿಬಿ ಕಪ್ ಕನಸು ಭಗ್ನ: ಹೊಸ ಅಧ್ಯಾಯದಲ್ಲೂ ಒಲಿಯದ ಪ್ರಶಸ್ತಿ, ಎಲಿಮಿನೇಟರ್ ಗೆದ್ದ ರಾಜಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts