More

    ಆರ್​ಸಿಬಿ ಕಪ್ ಕನಸು ಭಗ್ನ: ಹೊಸ ಅಧ್ಯಾಯದಲ್ಲೂ ಒಲಿಯದ ಪ್ರಶಸ್ತಿ, ಎಲಿಮಿನೇಟರ್ ಗೆದ್ದ ರಾಜಸ್ಥಾನ

    ಅಹಮದಾಬಾದ್: ಕೇವಲ ಶೇ. 1 ಚಾನ್ಸ್ ಇದ್ದಾಗಲೂ ಎಲ್ಲರ ನಿರೀಕ್ಷೆ ಮೀರಿಸಿ ಐಪಿಎಲ್ ಪ್ಲೇಆಫ್ ಹಂತಕ್ಕೇರಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 17ನೇ ಪ್ರಯತ್ನದಲ್ಲೂ ಕಪ್ ಗೆಲುವಿನ ಕನಸು ನನಸಾಗಿಸಲು ವಿಫಲವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಸರ್ವಾಂಗೀಣ ನಿರ್ವಹಣೆ ಎದುರು ಮಂಕಾದ ಆರ್​ಸಿಬಿ ತಂಡ ಐಪಿಎಲ್-17ರ ಎಲಿಮಿನೇಟರ್​ನಲ್ಲಿ 4 ವಿಕೆಟ್​ಗಳಿಂದ ಸೋಲು ಅನುಭವಿಸಿ ಅಭಿಯಾನ ಮುಗಿಸಿದೆ. ಇದರೊಂದಿಗೆ ಹೊಸ ಅಧ್ಯಾಯದಲ್ಲೂ ಆರ್​ಸಿಬಿಗೆ ಕಪ್ ಕೈಗೆಟುಕಲಿಲ್ಲ. ಸಂಜು ಸ್ಯಾಮ್ಸನ್ ಪಡೆ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ನಿರಂತರ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್),ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್​ನೊಂದಿಗೆ 8 ವಿಕೆಟ್​ಗೆ 172 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿ ಯುತ ಬ್ಯಾಟಿಂಗ್ ನೆರವಿನಿಂದ 19 ಓವರ್​ಗಳಲ್ಲಿ 6 ವಿಕೆಟ್​ಗೆ 174 ರನ್​ಗಳಿಸಿ ರೋಚಕ ಗೆಲುವು ಕಂಡಿತು.

    ಆರ್​ಸಿಬಿ ಉತ್ತಮ ಆರಂಭ
    ಫಾಫ್ ಡು ಪ್ಲೆಸಿಸ್ (17) ಹಾಗೂ ವಿರಾಟ್ ಕೊಹ್ಲಿ (33) ಆರಂಭದಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ಮೊದಲ 3 ಓವರ್​ಗಳಲ್ಲಿ ಇವರಿಬ್ಬರು 17 ರನ್ ಕಸಿದು ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. 4ನೇ ಓವರ್​ನಲ್ಲಿ 17 ರನ್ ಕಸಿದು ರನ್​ಗಳಿಕೆಗೆ ಒತ್ತು ನೀಡಿದರು. ಕೊಹ್ಲಿ-ಪ್ಲೆಸಿಸ್ ಮೊದಲ ವಿಕೆಟ್​ಗೆ 28 ಎಸೆತಗಳಲ್ಲಿ 37 ರನ್​ಗಳಿಸಿದರು. ಬೌಲ್ಟ್ ಎಸೆದ ಇನಿಂಗ್ಸ್ ನ 5ನೇ ಓವರ್​ನಲ್ಲಿ ಪ್ಲೆಸಿಸ್, ಡೀಪ್ ಮಿಡ್ ವಿಕೆಟ್​ನಲ್ಲಿ ಪೊವೆಲ್ ಪಡೆದ ಕ್ಯಾಚ್​ಗೆ ಡಗೌಟ್ ಸೇರಿದರು. ಸತತ 6 ಪಂದ್ಯಗಳಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಆರ್​ಸಿಬಿ ಈ ಬಾರಿ ಕ್ಯಾಮರಾನ್ ಗ್ರೀನ್​ಗೆ (27) ಬಡ್ತಿ ನೀಡಿತು. 2ನೇ ವಿಕೆಟ್​ಗೆ ಜತೆಯಾದ ಗ್ರೀನ್ 16 ಎಸೆತಗಳಲ್ಲಿ 19 ರನ್​ಗಳಿಸಿದರು. ಆಗ ದಾಳಿಗಿಳಿದ ಆರ್​ಸಿಬಿಯ ಮಾಜಿ ಸ್ಪಿನ್ನರ್​ಚಾಹಲ್, ಕೊಹ್ಲಿ ವಿಕೆಟ್ ಪಡೆದು ರಾಜಸ್ಥಾನಕ್ಕೆ ಮೇಲುಗೈ ತಂದರು.

    ಮೊತ್ತ ಏರಿಸಿದ ಮಹಿಪಾಲ್ ಲೊಮ್ರೊರ್
    15 ಓವರ್​ಗಳಲ್ಲಿ 125 ರನ್​ಗಳಿಸಿದ ಆರ್​ಸಿಬಿ ಸಾಧಾರಣ ಮೊತ್ತದತ್ತ ಸಾಗಿತು. ಆಗ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೊಮ್ರೊರ್ ಏಕಾಂಗಿಯಾಗಿ ತಂಡದ ಮೊತ್ತ ಏರಿಸಿ ಆಸರೆಯಾದರು. ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ಪಾಲಿಗೆ ಫಿನಿಷರ್ ಆಗಿದ್ದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ (11) ಸಹ ವೈಫಲ್ಯ ಕಂಡರು. ಆದರೂ 6ನೇ ವಿಕೆಟ್​ಗೆ ಮಹಿಪಾಲ್ ಜತೆಯಾಗಿ 24 ಎಸೆತಗಳಲ್ಲಿ 32 ರನ್ ಕಸಿಯಲು ಸಾಥ್ ನೀಡಿದರು. ಆಗ 19ನೇ ಓವರ್​ನಲ್ಲಿ ಇವರಿಬ್ಬರ ವಿಕೆಟ್ ಪಡೆದ ಆವೇಶ್ ಖಾನ್ (43ಕ್ಕೆ 3) ಆರ್​ಸಿಬಿ ಪಾಲಿಗೆ ಕಂಟಕವಾದರು. ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಸ್ವಪ್ನಿಲ್ ಸಿಂಗ್ (9*) ಹಾಗೂ ಕರ್ಣ್ ಶರ್ಮ (5*) ಸೇರಿ 170ರ ಗಡಿ ದಾಟಿಸಿದರು.

    ರಾಯಲ್ಸ್​ಗೆ ಜೈಸ್ವಾಲ್ ಬುನಾದಿ
    ಚೇಸಿಂಗ್​ಗೆ ಇಳಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ಟಾಮ್ ಕೊಹ್ಲರ್ ಕ್ಯಾಡ್ಮೋರ್ (20) ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರಂಭಿಕ 3 ಓವರ್​ಗಳಲ್ಲಿ ಶಿಸ್ತಿನ ದಾಳಿ ನಡೆಸಿದ ಆರ್​ಸಿಬಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಇವರಿಬ್ಬರು ಮೊದಲ ವಿಕೆಟ್​ಗೆ 33 ಎಸೆತದಲ್ಲಿ 46 ರನ್ ಪೇರಿಸಿತು. ಇನಿಂಗ್ಸ್​ನ 4ನೇ ಓವರ್​ನಲ್ಲಿ ಮ್ಯಾಕ್ಸ್​ವೆಲ್, ಕ್ಯಾಡ್​ವೋರ್ ಕ್ಯಾಚ್ ಕೈ ಚೆಲ್ಲಿದರು. ಮರು ಓವರ್​ನಲ್ಲಿ ಲಾಕಿ ಫರ್ಗ್ಯುಸನ್ ಅವರನ್ನು ಬೌಲ್ಡ್ ಮಾಡಿದರು. ಬಳಿಕ ಜೈಸ್ವಾಲ್ ಜತೆಯಾದ ನಾಯಕ ಸಂಜು ಸ್ಯಾಮ್ಸನ್ (17) ಎರಡನೇ ವಿಕೆಟ್​ಗೆ 23 ಎಸೆತದಲ್ಲಿ 35 ರನ್​ಗಳಿಸಿ ಚೇಸಿಂಗ್​ಗೆ ಬಲ ತುಂಬಿದರು. ಜೋಡಿ ಸವಾಲಾಗುತ್ತಿದ್ದಂತೆ ದಾಳಿಗಿಳಿದ ಕ್ಯಾಮರಾನ್ ಗ್ರೀನ್, ಜೈಸ್ವಾಲ್ ವಿಕೆಟ್ ಪಡೆದರೆ, ಮರು ಓವರ್​ನಲ್ಲಿ ಸ್ಯಾಮ್ಸನ್ ಸ್ಟಂಪ್ ಔಟ್ ಆದರು. ಇದರೊಂದಿಗೆ ಆರ್​ಸಿಬಿ ಕಂಬ್ಯಾಕ್ ಸೂಚನೆ ನೀಡಿತು.

    ಆರ್​ಆರ್ ಚೇಸಿಂಗ್​ಗೆ ಪರಾಗ್-ಹೆಟ್ಮೆಯರ್ ಬಲ
    4ನೇ ವಿಕೆಟ್​ಗೆ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜತೆಯಾದ ಧ್ರುವ ಜುರೆಲ್ (8) ಕೆಲ ಹೊತ್ತು ಆಸರೆಯಾದರು. ಇವರಿಬ್ಬರು 19 ಎಸೆತಗಳಲ್ಲಿ 26 ರನ್​ಗಳಿಸಿ ಆರ್​ಸಿಬಿಗೆ ಒತ್ತಡ ಹೇರಿದರೂ, ಜುರೆಲ್ ರನೌಟ್ ಆದರು. ಆಗ ಪರಾಗ್ ಜತೆಗೂಡಿದ ಇಂಪ್ಯಾಕ್ಟ್ ಪ್ಲೇಯರ್ ಶಿಮ್ರೊನ್ ಹೆಟ್ಮೆಯರ್ (26 ರನ್, 14 ಎಸೆತ, 3 ಬೌಂಡರಿ, 1 ಎಸೆತ) ಚೇಸಿಂಗ್ ಸುಲಭಗೊಳಿಸಿದರು. 25 ಎಸೆತಗಳಲ್ಲಿ 45 ರನ್ ಕಸಿದ ಇವರಿಬ್ಬರು ಆರ್​ಸಿಬಿ ಬೌಲರ್​ಗಳನ್ನು ದಂಡಿಸಿದರು. ಇನಿಂಗ್ಸ್​ನ 18ನೇ ಓವರ್ ಎಸೆದ ಮೊಹಮದ್ ಸಿರಾಜ್ (33ಕ್ಕೆ 2), ಪರಾಗ್, ಹೆಟ್ಮೆಯರ್ ವಿಕೆಟ್ ಪಡೆದು ತಿರುವ ನೀಡಲು ಯತ್ನಿಸಿದರು. ಆದರೆ ಅಂತಿಮ 2 ಓವರ್​ನಲ್ಲಿ 13 ರನ್ ಬೇಕಿದ್ದಾಗ ಲಾಕಿ ಫರ್ಗ್ಯುಸನ್​ಗೆ 2 ಬೌಂಡರಿ, ಸಿಕ್ಸರ್ ಸಿಡಿಸಿದ ರೋವ್ಮನ್ ಪೊವೆಲ್ (16*) ಕೊನೇ ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.

    ಅಶ್ವಿನ್ ಡಬಲ್ ಶಾಕ್
    ಕೊಹ್ಲಿ ನಿರ್ಗಮನದ ಬಳಿಕ ಜತೆಯಾದ ಕ್ಯಾಮರಾನ್ ಗ್ರೀನ್ ಹಾಗೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಪಿನ್ನರ್​ಗಳ ಶಿಸ್ತಿನ ದಾಳಿಯ ಎದುರು ರನ್​ಗಳಿಸಲು ಪರದಾಡಿದರು. ಆರ್​ಸಿಬಿ 10 ಓವರ್​ಗಳಲ್ಲಿ 2 ವಿಕೆಟ್​ಗೆ 76 ರನ್ ಸಾಧಾರಣ ಮೊತ್ತ ಕಲೆಹಾಕಿತು. ನಿಧಾನವಾಗಿ ಲಯ ಕಂಡುಕೊಂಡ ಪಾಟೀದಾರ್ ಹಾಗೂ ಗ್ರೀನ್ 3ನೇ ವಿಕೆಟ್​ಗೆ 31 ಎಸೆತಗಳಲ್ಲಿ 41 ರನ್ ಕಸಿಯಿತು. 11ನೇ ಓವರ್​ನಲ್ಲಿ ಪಾಟೀದಾರ್ ಅವರ ಸುಲಭ ಕ್ಯಾಚ್ ಅನ್ನು ಲಾಂಗ್ ಆನ್​ನಲ್ಲಿ ಜುರೆಲ್ ಕೈ ಚೆಲ್ಲಿದರು. ಆರ್​ಆರ್ ಬೌಲರ್​ಗಳಿಗೆ ಈ ಜೋಡಿ ಸವಾಲಾಗುವ ಮುನ್ನ ಅನುಭವಿ ಆರ್.ಅಶ್ವಿನ್ (19ಕ್ಕೆ 2) ಈ ಜತೆಯಾಟ ಮುರಿದರು. 13ನೇ ಓವರ್​ನ ಸತತ ಎಸೆತದಲ್ಲಿ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್ (0) ಡಗೌಟ್ ಸೇರಿದರು. ಉತ್ತಮ ಆರಂಭ ಪಡೆದ ಪಾಟೀದಾರ್, ಆವೇಶ್ ಖಾನ್​ಗೆ ವಿಕೆಟ್ ನೀಡಿ ನಿರಾಸೆ ಮೂಡಿಸಿದರು.

    ಚರ್ಚೆಗೆ ಗ್ರಾಸವಾದ ತೀರ್ಪು
    ಆವೇಶ್ ಖಾನ್ ಎಸೆದ ಇನಿಂಗ್ಸ್​ನ 14ನೇ ಓವರ್ 3ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಎಲ್​ಬಿಡಬ್ಲ್ಯು ಆದರು. ಆನ್​ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಸ್ವತ ಕಾರ್ತಿಕ್ ಸಹ ಅರೆ ಮನಸ್ಸಿನಿಂದ ಡಿಆರ್​ಎಸ್ ಮೊರೆ ಹೋದರು. ಆಗ 3ನೇ ಅಂಪೈರ್, ಚೆಂಡು ಬ್ಯಾಟ್​ಗೆ ಮೊದಲು ತಾಗಿದೆ ಎಂದು ನಾಟೌಟ್ ತೀರ್ಪಿತ್ತರು. ಇದು ಆಟಗಾರರಿಗೂ ಆಶ್ಚರ್ಯ ಉಂಟು ಮಾಡಿತು. ಈ ತೀರ್ಪಿನ ಬೆನ್ನಲ್ಲೆ ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬ್ಯಾಟ್ ಪ್ಯಾಡ್​ಗೆ ಬಡಿದಾಗ ಅಲ್ಟ್ರಾ ಎಡ್ಜ್​ನಲ್ಲಿ ಕಾಣಿಸಿಕೊಂಡ ಸ್ಪೈಕ್​ಅನ್ನೇ ತೃತೀಯ ಅಂಪೈರ್, ಚೆಂಡು ಬ್ಯಾಟ್​ಗೆ ತಾಗಿದಾಗ ಬಂದ ಸ್ಪೈಕ್ ಎಂದು ತಪ್ಪಾಗಿ ಗ್ರಹಿಸಿ ನಾಟೌಟ್ ತೀರ್ಪು ನೀಡಿದರು ಎಂದು ದೂರಿದ್ದಾರೆ.

    ಮಗಳ ಮೂಲಕ ಶಾಲಾ ಬಾಲಕಿಯರಿಗೆ ಗಾಳ ಹಾಕಿ ವೇಶ್ಯಾವಾಟಿಕೆ! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

    ಡೌನ್​ಲೋಡಾದ್ರೆ ಹಣಕ್ಕೆ ಕನ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts