More

    ದಿಕ್ಸೂಚಿ| ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

    ದೇವಸ್ಥಾನಗಳು ಎಂದರೆ ಅದು ಬರಿ ಕಟ್ಟಡವಲ್ಲ. ಅದು ಭಕ್ತಿಭಾವನೆಗಳ ಇಟ್ಟಿಗೆಯ ಮೇಲೆ ನಿಂತ ಆಲಯ. ಅಲ್ಲಿ ಸಂಸ್ಕೃತಿ ಪರಂಪರೆ ಭಕ್ತಿ ಶ್ರದ್ಧೆ ಇದೆ. ಹಾಗೇ ಸಮಾಜವೂ ಇದೆ. ವಿವಿಧ ಹಿನ್ನೆಲೆಯ ಜನರು ಒಂದಾಗಿ ಬೆರೆತು ರಥ ಎಳೆಯುವ ಪ್ರಕ್ರಿಯೆ ಸಾಮಾಜಿಕ ಸೌಹಾರ್ದ ಮತ್ತು ಒಗ್ಗಟ್ಟಿನ ಸಂಕೇತ.

    ದಿಕ್ಸೂಚಿ| ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇಈ ವರ್ಷ ಪುರಿ ಜಗನ್ನಾಥ ರಥೋತ್ಸವ ನಡೆಯುವುದು ಅನುಮಾನ…. ಹೀಗೊಂದು ಸುದ್ದಿ ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಬಂದಾಗ ಅರೆಕ್ಷಣ ಎದೆ ಧಸಕ್ಕೆಂದು ನಿರಾಸೆಯಾದದ್ದು ನಿಜ. ಆ ವೈಭವ ನೋಡಿದವರಿಗೆ ಈ ಮಾತು ಉತ್ಪ್ರೇಕ್ಷೆ ಅನಿಸದು. ಇಷ್ಟು ದೂರಲ್ಲಿರುವ ನಮಗೇ ಹೀಗಾಗಬೇಕಾದರೆ ಜಗನ್ನಾಥನೇ ಮನೆದೇವರಾದ ಒಡಿಶಾದ ಲಕ್ಷಾಂತರ ಮನೆಗಳ ಕೋಟ್ಯಂತರ ಮಂದಿಗೆ ಹೇಗಾಗಿರಬೇಡ! ಅಂತೂ ಕೊನೆಗೆ ಸುಪ್ರೀಂ ಕೋರ್ಟಿನಿಂದ ತುಸು ಸಮಾಧಾನಕರ ಸಮಾಚಾರ ಬಂತು. ಕೆಲವು ನಿರ್ಬಂಧಗಳಿಗೆ ಒಳಪಟ್ಟು ರಥೋತ್ಸವ ನಡೆಸಬಹುದು ಅಂತ. ದೈಹಿಕ ಅಂತರ ಕಾಯ್ದುಕೊಳ್ಳುವುದು, ರಥೋತ್ಸವದಲ್ಲಿ 500ಕ್ಕಿಂತ ಹೆಚ್ಚಿನ ಜನರು ಸೇರಬಾರದು ಮುಂತಾದ ಷರತ್ತುಗಳನ್ನು ವಿಧಿಸುವ ಮೂಲಕ ನ್ಯಾಯಾಲಯ ರಥೋತ್ಸವಕ್ಕೆ ಅವಕಾಶ ನೀಡಿತು. ಅದರಂತೆ, ಜೂನ್ 23ರಂದು ಅಂದರೆ, ಆಷಾಢ ಮಾಸದ ಬಿದಿಗೆಯಂದು, ಪುರಿಯ ರಾಜ ಚಿನ್ನದ ಪೊರಕೆಯಿಂದ ರಥದ ಮುಂಭಾಗವನ್ನು ಗುಡಿಸುವ ಮೂಲಕ (ಇದು ಅಲ್ಲಿನ ಸಂಪ್ರದಾಯ) ಏಳು ದಿನಗಳ ಪರ್ಯಂತ ನಡೆಯುವ ರಥೋತ್ಸವಕ್ಕೆ ಚಾಲನೆ ನೀಡಿದರು. ಆದರೆ ಕೆಲವೇ ನೂರು ಜನ ಇದ್ದ ಈ ರಥೋತ್ಸವಕ್ಕೂ, ಲಕ್ಷಾಂತರ ಮಂದಿ ಭಾಗವಹಿಸುವ ಎಂದಿನ ಸಂಭ್ರಮಕ್ಕೂ ಹೋಲಿಕೆ ಮಾಡುವಂತೆಯೇ ಇಲ್ಲ.

    ನಮ್ಮ ದೇಶದ ದೇವಸ್ಥಾನಗಳಲ್ಲಿ ರಥೋತ್ಸವ ಜರುಗುವುದು ವಾರ್ಷಿಕ ವಿಧಿ. ಆದರೆ ಪುರಿ ರಥೋತ್ಸವದ ಭವ್ಯತೆ-ದಿವ್ಯತೆಯೇ ಬೇರೆ. ಅನಾಮತ್ತು ಮೂರೂವರೆ ಕಿಲೋಮೀಟರ್ ಉದ್ದ, 50 ಮೀಟರ್​ಗಿಂತ ಹೆಚ್ಚಿನ ಅಗಲದ ರಥಬೀದಿಯದು. ಅಲ್ಲಿ ಚೂರೂ ಜಾಗವಿಲ್ಲದಂತೆ ಜನ ಸೇರುತ್ತಾರೆ. ಶುದ್ಧಭಕ್ತಿಯಿಂದ ಪರಮಾತ್ಮನನ್ನು ಒಲಿಸಿಕೊಳ್ಳಬಹುದೆಂದು ಲೋಕಕ್ಕೆ ತೋರಿಸಿಕೊಟ್ಟು ಭಕ್ತಿಯ ಪರಾಕಾಷ್ಠೆಯನ್ನು ತೋರಿದ ಚೈತನ್ಯ ಮಹಾಪ್ರಭುಗಳು ತಮ್ಮ ಆಯುಷ್ಯದ 48 ವರ್ಷಗಳಲ್ಲಿ ಅರ್ಧದಷ್ಟು ಅಂದರೆ 24 ವರ್ಷಗಳನ್ನು ಕಳೆದದ್ದು ಪುರಿಯಲ್ಲಿಯೇ. ಅವರ ಅವತಾರ ಸಮಾಪ್ತಿಯಾದುದು ಸಹ ಇಲ್ಲಿಯೇ. ಆಗೆಲ್ಲ ಪುರಿಯ ತುಂಬ ‘ಹರೇ ಕೃಷ್ಣ’ ನಿನಾದ, ಭಕ್ತಿಯ ಆರೋಹಣ. ಚೈತನ್ಯರ ನಾಮಸಂಕೀರ್ತನೆಯೇ ವಿಶಿಷ್ಟ. ಅದರ ಪರಿಣಾಮವೋ ಏನೋ, ಚೈತನ್ಯರು ನೆಲೆಸಿದ್ದ ಇನ್ನೊಂದು ಸ್ಥಳವಾದ ವೃಂದಾವನದ ಅನೇಕ ದೇವಸ್ಥಾನಗಳಲ್ಲಿ ಹಗಲಿರುಳು ಭೇದವೆನ್ನದೆ ಭಜನೆ, ನಾಮಸಂಕೀರ್ತನೆ ನಡೆಯುತ್ತಲೇ ಇರುತ್ತದೆ. ಹೀಗಾಗಿ ವೃಂದಾವನ ರಾತ್ರಿ ಬೇಗನೆ ನಿದ್ರೆಗೆ ಜಾರುತ್ತದೆ, ಬೆಳಗಿನ ಜಾವ ಮೂರು ಗಂಟೆಗೇ ದೇಗುಲಗಳಲ್ಲಿ ಜನರು ಸೇರತೊಡಗಿ ಗಂಟೆಯ ನಿನಾದ ಶುರುವಾಗಿಬಿಡುತ್ತದೆ.

    ಇದನ್ನೂ ಓದಿ: ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

    ಕರೊನಾ ಎಂತೆಂಥ ಪರಿಸ್ಥಿತಿ ತಂದಿಟ್ಟಿದೆ ಎಂದರೆ, ನಮ್ಮ ನಮ್ಮ ಆರಾಧ್ಯದೈವದ ದರ್ಶನಕ್ಕೂ ತೊಡಕಾಗಿದೆ. ಈಗೇನೋ ಕೆಲವು ಷರತ್ತುಗಳಿಗೆ ಅನುಗುಣವಾಗಿ ದೇಗುಲಗಳನ್ನು ತೆರೆಯಲು ಅನುಮತಿ ಸಿಕ್ಕಿದೆಯಾದರೂ, ಮೊದಲಿನಂತೆ ಕಲರವ, ಸಡಗರ ಎಲ್ಲಿದೆ? ಬೆಳಗೆದ್ದು ದೇಗುಲವ ಸುತ್ತಿ ಕುಟುಂಬದ ಒಳಿತು ಪ್ರಾರ್ಥಿಸುವ ಗೃಹಿಣಿ, ಆಫೀಸಿಗೆ ಹೋಗುವ ಮುನ್ನ ದೇಗುಲಕ್ಕೆ ಪ್ರದಕ್ಷಿಣೆ ಹಾಕುವ ಉದ್ಯೋಗಸ್ಥ… ಈ ಎಲ್ಲ ದೃಶ್ಯಗಳು ಮೊದಲಿನ ಉತ್ಸಾಹದಲ್ಲಿ ಕಾಣುತ್ತಿಲ್ಲ.

    ಪುರಿ ಮಾತ್ರ ಎಂದಲ್ಲ, ನಮ್ಮ ದೇಶದಲ್ಲಿನ ಬಹುತೇಕ ಎಲ್ಲ ದೇಗುಲಗಳ ಜಾತ್ರೆ, ರಥೋತ್ಸವಗಳೂ ತಾತ್ಕಾಲಿಕವಾಗಿ ರದ್ದಾಗಿವೆ. ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ, ಕುಕ್ಕೆ ಸುಬ್ರಹ್ಮಣ್ಯ, ಬಾದಾಮಿ ಬನಶಂಕರಿ, ಗೋಕರ್ಣ ಮಹಾಬಲೇಶ್ವರ, ಇಡಗುಂಜಿ ಮಹಾಗಣಪತಿ, ಕೊಲ್ಲೂರು ಮೂಕಾಂಬಿಕೆ, ಉಡುಪಿ ಕೃಷ್ಣ ತಾಣ… ಇಲ್ಲೆಲ್ಲ ಮೊದಲಿನಂತೆ ಜನಸಂದಣಿ, ಭಕ್ತಿ ಸಡಗರ ಕಾಣಲು ಇನ್ನೆಷ್ಟು ದಿನಗಳು ಬೇಕೋ? ಇಂಥ ದೇಗುಲಗಳ ಯಾದಿ ತುಂಬ ಉದ್ದವಿದೆ.

    ಒಂದು ದೇವಸ್ಥಾನ ಅಂದರೆ ಅನೇಕ ಜನರಿಗೆ ಅದು ಜೀವನೋಪಾಯದ ಆಧಾರವೂ ಹೌದು. ಆ ಲೆಕ್ಕದಲ್ಲಿ ದೇವಸ್ಥಾನವು ಲೌಕಿಕ ಮತ್ತು ಅಲೌಕಿಕದ ಸಂಗಮ. ಹಾಗೇ ಸುಮ್ಮನೆ ನೋಡೋಣ. ದೇಗುಲದ ಅರ್ಚಕರು, ಇತರೆ ನೌಕರರು ಒಂದೆಡೆಯಾದರೆ, ಇನ್ನು ದೇಗುಲದ ಆವರಣದಲ್ಲಿ ಹೂ, ಹಣ್ಣುಕಾಯಿ ಮಾರುವವರು, ದೇವರ ಚಿತ್ರ, ಮೂರ್ತಿ, ಪುಸ್ತಕ ಮಾರುವವರು, ಆಯಾ ಭಾಗದ ಉತ್ಪನ್ನಗಳನ್ನು ಮಾರುವವರು… ಹೀಗೆ 10-15 ವೈವಿಧ್ಯಮಯ ಚಟುವಟಿಕೆಗಳು ಒಂದು ದೇಗುಲದ ಸುತ್ತ ಹೆಣೆದುಕೊಂಡಿರುತ್ತವೆ. ಅಂದರೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಷ್ಟು ಜನರಿಗೆ ದೇಗುಲ ಆಧಾರವಾಗಿರುತ್ತದೆ ಎಂಬುದನ್ನು ಅಂದಾಜಿಸಬಹುದು. ಹಾಗೇ, ಧಾರ್ವಿುಕ ಮತ್ತು ಆಧ್ಮಾತ್ಮಿಕ ಕೇಂದ್ರಗಳು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನೂ ನಡೆಸುವುದನ್ನು ನಾವು ಕಡೆಗಣಿಸುವಂತಿಲ್ಲ.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಲಾಕ್​ಡೌನ್ ಕಾರಣದಿಂದಾಗಿ ದೇವಸ್ಥಾನಗಳ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ. ವಿಶ್ವದ ಅತಿ ಶ್ರೀಮಂತ ದೇಗುಲಗಳಲ್ಲೊಂದಾದ ತಿರುಪತಿ ವೆಂಕಟರಮಣ ದೇವಸ್ಥಾನಕ್ಕೆ ಲಾಕ್​ಡೌನ್ ಆರಂಭವಾದ ನಂತರ ಪ್ರತಿ ತಿಂಗಳು ಸುಮಾರು 200 ಕೋಟಿ ರೂ. ಆದಾಯ ಖೋತಾ ಆಗಿದೆ. ತಿರುಪತಿ ದೇಗುಲದಲ್ಲಿ 8 ಸಾವಿರ ಕಾಯಂ ನೌಕರರು ಇದ್ದರೆ, 15 ಸಾವಿರ ಮಂದಿ ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಆದಾಯ ತಗ್ಗಿದೆಯೆಂದು ನೌಕರರ ಸಂಬಳಕ್ಕೆ ತೊಂದರೆ ಮಾಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಟಿಟಿಡಿ ವತಿಯಿಂದ ವಿವಿಧ ಬ್ಯಾಂಕುಗಳಲ್ಲಿ ಇರಿಸಲಾಗಿರುವ ನಿಶ್ಚಿತ ಠೇವಣಿ 12 ಸಾವಿರ ಕೋಟಿ ರೂ.ಗಳಷ್ಟಿದ್ದು, ಇದಕ್ಕೆ ವಾರ್ಷಿಕ ಬಡ್ಡಿ ಸುಮಾರು 700 ಕೋಟಿ ರೂ.ಗಳಷ್ಟಾಗುತ್ತದೆ. ವಾರ್ಷಿಕ ಸುಮಾರು ಎರಡೂವರೆ ಕೋಟಿ ಜನರು ಶ್ರೀನಿವಾಸನ ದರ್ಶನಾಶೀರ್ವಾದದ ಆಕಾಂಕ್ಷೆಯಿಂದ ಬರುತ್ತಾರೆ.

    ದೇಶದ ಇನ್ನೊಂದು ಪ್ರಮುಖ ತಾಣವಾದ ಶಿರಡಿ ಸಾಯಿಬಾಬಾ ದೇಗುಲ ಲಾಕ್​ಡೌನ್ ನಂತರದಲ್ಲಿ ದಿನಕ್ಕೆ ಒಂದೂವರೆ ಕೋಟಿ ರೂ.ಗಳಷ್ಟು ಆದಾಯ ಹಾನಿ ಅನುಭವಿಸಿತ್ತು. ಇಲ್ಲಿ ಸುಮಾರು 6 ಸಾವಿರ ನೌಕರರಿದ್ದಾರೆ. ಒಂದು ದೇವಸ್ಥಾನವು ಸುತ್ತಮುತ್ತಲ ಪ್ರದೇಶದ ಚಟುವಟಿಕೆಗೆ ಹೇಗೆ ಇಂಬಾಗುತ್ತದೆ ಮತ್ತು ಜೀವನಾಧಾರವಾಗುತ್ತದೆ ಎಂಬುದಕ್ಕೆ ಶಿರಡಿಯನ್ನು ಒಂದು ಉದಾಹರಣೆಯಾಗಿ ಗಮನಿಸಬಹುದು. ಶಿರಡಿ ಪಟ್ಟಣದ ಆರ್ಥಿಕ ಚಟುವಟಿಕೆ ಸಾಯಿಬಾಬಾ ದೇಗುಲವನ್ನು ಮತ್ತು ಅಲ್ಲಿಗೆ ಬರುವ ಭಕ್ತರನ್ನು ಅವಲಂಬಿಸಿದೆ. ಅಲ್ಲಿ ಸುಮಾರು 750 ಹೋಟೆಲುಗಳಿವೆ ಮತ್ತು ಅವುಗಳಲ್ಲಿ 10 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇನ್ನು, ಹೂಮಾಲೆ, ಪ್ರಸಾದ, ಫೋಟೋ, ಸಾಯಿಬಾಬಾ ಮೂರ್ತಿ ಮತ್ತಿತರವನ್ನು ಮಾರಾಟ ಮಾಡಿಕೊಂಡು ಸುಮಾರು 3000 ಮಂದಿ ಜೀವನೋಪಾಯ ಕಂಡುಕೊಂಡಿದ್ದಾರೆ. ಈಗ ಕರೊನಾದಿಂದಾಗಿ ಈ ಎಲ್ಲ ಚಟುವಟಿಕೆಗಳು ನಿಸ್ತೇಜವಾಗಿವೆ.

    ಧಾರ್ವಿುಕ ಯಾತ್ರೆ ಎಂಬುದು ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎಂಬುದು ಹಿಂದುಗಳ ಬಯಕೆ, ಆಕಾಂಕ್ಷೆ. ಹಿಂದೆಲ್ಲ ಸಾರಿಗೆ ಸವಲತ್ತುಗಳಿರಲಿಲ್ಲವಲ್ಲ. ಆಗ ಕಾಶಿಯಾತ್ರೆಗೆ ಹೋದ ಅನೇಕರು ದಾರಿಮಧ್ಯದಲ್ಲೆಲ್ಲೋ ಮರಣಿಸುತ್ತಿದ್ದುದೂ ಉಂಟು. ಹಾಗಿದ್ದರೂ ಜನರಿಗೆ ಚಿಂತೆಯಿರಲಿಲ್ಲ. ಯಲ್ಲಾಪುರ ತಾಲೂಕಿನ ಒಂದು ಹಳ್ಳಿಯ ವ್ಯಕ್ತಿಯೊಬ್ಬರು 17 ಬಾರಿ ಕಾಲ್ನಡಿಗೆಯಲ್ಲಿ ಕಾಶಿಯಾತ್ರೆ ಮಾಡಿದ್ದರೆಂಬುದನ್ನು ನಾನು ಕೇಳಿ ಬಲ್ಲೆ! ಇದಲ್ಲವೆ ಭಕ್ತಿಯ ಪರಾಕಾಷ್ಠೆ!

    ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ಹಾರಾಟ ಜುಲೈ 15 ರ ತನಕ ಇಲ್ಲ

    ಈಗಿನ ಆಧುನಿಕ ಕಾಲದಲ್ಲಿ ಧಾರ್ವಿುಕ ಪ್ರವಾಸೋದ್ಯಮ (ಸ್ಪಿರಿಚುವಲ್ ಟೂರಿಸಂ) ಎಂಬ ಪರಿಕಲ್ಪನೆಯೇ ಬಂದಿದೆ. ದೇಶವಿದೇಶಗಳಿಂದ ಬಹುಸಂಖ್ಯೆಯ ಯಾತ್ರಿಕರು ವಿವಿಧ ತಾಣಗಳಿಗೆ ಬರುವುದು ಮಾಮೂಲು. ಈಚಿನ ವರ್ಷಗಳಲ್ಲಿ ಧಾರ್ವಿುಕ ಯಾತ್ರೆ ಪಟ್ಟಿಗೆ ಯೋಗ ಮತ್ತು ಧ್ಯಾನ ಸಹ ಸೇರ್ಪಡೆಯಾಗಿರುವುದರಿಂದ ಜನರ ಆಸಕ್ತಿ ಮತ್ತಷ್ಟು ಹೆಚ್ಚಿದೆ. ಕಾಪೋರೇಟ್ ಕಂಪನಿಗಳೂ ಕೂಡ ದೈನಂದಿನ ಕೆಲಸದ ಬದುಕಿನ ರಿಲ್ಯಾಕ್ಸ್​ಗಾಗಿ ತಮ್ಮ ಉದ್ಯೋಗಿಗಳಿಗೆ ಧಾರ್ವಿುಕ ಪ್ರವಾಸ ಏರ್ಪಡಿಸುವ ಟ್ರೆಂಡ್ ಹೆಚ್ಚಿದೆ. ಲಾಕ್​ಡೌನ್ ಮುಂಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಧಾರ್ವಿುಕ ಸ್ಥಳಗಳ ಬುಕಿಂಗ್ ಪ್ರಮಾಣ ವಾರ್ಷಿಕ ಶೇ. 6-7ರಷ್ಟು ಹೆಚ್ಚಿದೆ. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಕೂಡ ಈಗ ಧಾರ್ವಿುಕ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿವೆ. ಉದಾ: ಉತ್ತರ ಪ್ರದೇಶ ಸರ್ಕಾರದ ರಾಮಾಯಣ ಸರ್ಕ್ಯುಟ್. ಇದು ರಾಮಾಯಣದ ಪ್ರಮುಖ ತಾಣಗಳಿಗೆ ಜನರನ್ನು ಕರೆದೊಯ್ಯುವ ಯೋಜನೆ.

    ದೇವಸ್ಥಾನಕ್ಕೆ ಹೋದಾಗ ಭಕ್ತರಿಗೆ ಏನೋ ಒಂದು ಸಮಾಧಾನ. ಆದರೆ ಈಗ ಮೊದಲಿನಂತೆ ಹೋಗುವ ಹಾಗಿಲ್ಲವಲ್ಲ. ಹಾಗಂತ ನಮ್ಮಲ್ಲಿ ಧಾರ್ವಿುಕ, ಆಧ್ಯಾತ್ಮಿಕ ಭಾವನೆ ಏನೂ ಕಡಿಮೆಯಾಗಿಲ್ಲ. ಏಕೆಂದರೆ ಮನೆಮನೆಯಲ್ಲೂ ಇಂಥ ಚಟುವಟಿಕೆಗಳು ನಡೆಯುತ್ತಲೇ ಇವೆ. ಭಜನೆ, ಧ್ಯಾನ, ಸ್ತೋತ್ರಪಠಣ…. ಇವೆಲ್ಲ ಅಬಾಧಿತ. ಕೆಲ ಮಠಮಾನ್ಯಗಳು ಕೂಡ ಕರೊನಾ ಕಾಲದಲ್ಲಿ ಕೆಲ ನಿರ್ದಿಷ್ಟ ಮಂತ್ರ ಅಥವಾ ಸ್ತೋತ್ರಗಳನ್ನು ಪಠಿಸಲು ತಂತಮ್ಮ ಭಕ್ತರಿಗೆ ಹೇಳಿವೆ. ಕೆಲ ಮಠಾಧೀಶರೇ ಇದರ ನೇತೃತ್ವ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ನಮ್ಮ ಮೂಲ ಸಿದ್ಧಾಂತ ಅದೇ ಅಲ್ಲವೆ? ‘ಭಗವಂತ ನಿನ್ನ ಹೃದಯದಲ್ಲಿಯೇ ಇದ್ದಾನೆ. ಹೊರಗಡೆ ಹುಡುಕಬೇಕಿಲ್ಲ’ ಎಂದು. ಹಾಗೇ ಭಾರತೀಯ ಪರಂಪರೆಯಲ್ಲಿ ಮಾನಸಪೂಜೆ ಎಂಬೊಂದು ಪರಿಕಲ್ಪನೆ ಇದೆ. ಇದು ಎಷ್ಟು ಅದ್ಭುತ ಮತ್ತು ವಿಶಿಷ್ಟ ಎಂದರೆ, ಭಕ್ತನು ಮನಸ್ಸಿನಲ್ಲೇ ದೇವರನ್ನು ಕಲ್ಪಿಸಿಕೊಂಡು ಮಾಡುವ ಸರ್ವಾಂಗಪೂಜೆ. ‘ಮಾನಸಪೂಜೆ ಅಂದರೆ ಮಾನಸಿಕವಾಗಿ ಮಾಡುವ ಷೋಡಶೋಪಚಾರ ಪೂಜೆ. ಇದರಲ್ಲಿ ಶಿವಮಾನಸ ಪೂಜೆ ಮತ್ತು ಲಲಿತಾ ಮಾನಸಪೂಜೆ ಎಂದು ಬರುತ್ತದೆ. ಶಿವಮಾನಸಪೂಜಾ ಸ್ತೋತ್ರ ಶ್ರೀ ಶಂಕರಾಚಾರ್ಯರು ರಚಿಸಿದ್ದು’ ಎನ್ನುತ್ತಾರೆ, ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ. ‘ಹೇ ದಯಾನಿಧೇ! ನಿನಗಾಗಿ ರತ್ನಖಚಿತವಾದ ಸಿಂಹಾಸನವನ್ನು ಸಿದ್ಧಗೊಳಿಸಿದ್ದೇನೆ. ಹಿಮಶೀತಲವಾದ ನೀರಿನಿಂದ ಸ್ನಾನಮಾಡಿಸುತ್ತಿದ್ದೇನೆ. ದಿವ್ಯಾಂಬರವನ್ನು ತೊಡಿಸುತ್ತಿದ್ದೇನೆ. ನಾನಾವಿಧವಾದ ರತ್ನಭೂಷಿತವಾದ ಒಡವೆಗಳನ್ನು ಧರಿಸಿಸುತ್ತಿದ್ದೇನೆ. ಕಸ್ತೂರಿಯ ಪರಿಮಳವುಳ್ಳ ಗಂಧವನ್ನು ಲೇಪಿಸುತ್ತಿದ್ದೇನೆ. ಜಾಜಿ, ಸಂಪಿಗೆ, ಬಿಲ್ವದಳಗಳ ಮಾಲೆಗಳನ್ನು ಸಮರ್ಪಿಸುತ್ತಿದ್ದೇನೆ. ಧೂಪದೀಪಗಳ್ನೂ ಹೊತ್ತಿಸಿದ್ದೇನೆ. ಮಾನಸಿಕವಾಗಿ ನಾನು ಕಲ್ಪಿಸಿದ ಈ ಉಪಚಾರಗಳನ್ನು ಸ್ವೀಕರಿಸು’- ಇದು ಶ್ರೀ ಶಿವಮಾನಸಪೂಜಾಸ್ತೋತ್ರದ ಪಲ್ಲವಿಯ ಅರ್ಥ. ಇಷ್ಟು ಮಾಡಿದ ಮೇಲೆ ಭಕ್ತನ ಎದುರಲ್ಲಿ ಭಗವಂತ ಬರದಿರುತ್ತಾನೆಯೇ? ಈ ಕಲ್ಪನೆಯನ್ನು ಶಂಕರರು ಯಾವ ಎತ್ತರಕ್ಕೆ ಒಯ್ಯುತ್ತಾರೆಂದರೆ, ‘ಈ ಶರೀರವೇ ನಿನ್ನ ಮನೆ’ ಎಂದು ಉದ್ಗರಿಸುತ್ತಾರೆ. ಅದು ಅದ್ವೈತದ ಚರಮಸ್ಥಿತಿ. ಶಂಕರಾಚಾರ್ಯರಿಗೆ ಸಾವಿರ ಸಾವಿರ ಪ್ರಣಾಮ!

    ಭಗವದ್ಗೀತೆಯ 17ನೇ ಅಧ್ಯಾಯದಲ್ಲಿ ಮನಸ್ಸಿನ ಪ್ರಸನ್ನತೆ, ಸೌಮ್ಯಭಾವ, ಮೌನ, ಮನೋನಿರೋಧ ಭಾವಶದ್ಧಿ- ಇವು ಮಾನಸಿಕ ತಪಸ್ಸು ಎಂದು ಹೇಳಲ್ಪಟ್ಟಿವೆ ಎಂದು ಈ ಪರಿಕಲ್ಪನೆಯ ಮತ್ತೊಂದು ಹೊಳಹಿನತ್ತ ಗಮನಸೆಳೆಯುತ್ತಾರೆ, ಶ್ರೀ ವೀರೇಶಾನಂದ ಸರಸ್ವತಿಯವರು.

    ಹೀಗಿದ್ದರೂ ನಮಗೆ ದೇವಸ್ಥಾನಗಳು ಬೇಕೇ ಬೇಕು. ಏಕೆಂದರೆ ಅದು ಬರಿ ಕಟ್ಟಡವಲ್ಲ. ಅದು ಭಕ್ತಿಭಾವನೆಗಳ ಇಟ್ಟಿಗೆಯ ಮೇಲೆ ನಿಂತ ಆಲಯ. ಅಲ್ಲಿ ಸಂಸ್ಕೃತಿ ಪರಂಪರೆ ಇದೆ. ಭಕ್ತಿ ಶ್ರದ್ಧೆ ಇದೆ. ಹಾಗೇ ಸಮಾಜವೂ ಇದೆ. ವಿವಿಧ ಹಿನ್ನೆಲೆಯ ಜನರು ಒಂದಾಗಿ ಬೆರೆತು ರಥ ಎಳೆಯುವ ಪ್ರಕ್ರಿಯೆ ಸಾಮಾಜಿಕ ಸೌಹಾರ್ದ ಮತ್ತು ಒಗ್ಗಟ್ಟಿನ ಸಂಕೇತ. ಈ ಕರೊನಾ ಮಾರಿ ಬೇಗ ಹೋಗಲಿ, ನಮ್ಮ ದೇಗುಲಗಳ ಬಾಗಿಲುಗಳು ಮುಂಚಿನಂತೆ ವಿಶಾಲವಾಗಿ ತೆರೆಯಲಿ, ಗಂಟೆಗಳು ಮೊಳಗಲಿ ಎಂಬುದು ಈ ಹೊತ್ತಿನ ಪ್ರಾರ್ಥನೆ.
    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    2000ದ ಸನಿಹದಲ್ಲಿದೆ ಬೆಂಗಳೂರಿನಲ್ಲಿ ಕೋವಿಡ್​ ಕೇಸ್​: ರಾಜ್ಯದಲ್ಲಿ 445 ಹೊಸ ಕೇಸ್​ ದೃಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts