More

    ಬ್ಯಾಂಕ್​ಗಳಲ್ಲಿ ಸಾಲಕ್ಕಿಂತ ಠೇವಣಿಯೇ ಹೆಚ್ಚು

    ಸುಭಾಸ ಧೂಪದಹೊಂಡ ಕಾರವಾರ
    ಕರೊನಾ ಲಾಕ್​ಡೌನ್ ಉದ್ಯಮಗಳನ್ನು ಮಕಾಡೆ ಮಲಗಿಸಿದೆ. ಆರ್ಥಿಕತೆಯನ್ನು ಬುಡಮೇಲು ಮಾಡಿದೆ ಎಂಬ ಹೇಳಿಕೆಗಳಿವೆ. ಆದರೆ, ಉತ್ತರ ಕನ್ನಡದ ಬ್ಯಾಂಕ್​ಗಳ ಲೆಕ್ಕ ನೋಡಿದರೆ, ಪರಿಸ್ಥಿತಿಯೇ ಭಿನ್ನವಾಗಿದೆ. ಇಂದಿಗೂ ಜಿಲ್ಲೆಯ ಬ್ಯಾಂಕ್​ಗಳಲ್ಲಿ ಮಾತ್ರ ಠೇವಣಿದಾರರದೇ ಮೇಲುಗೈ! 2020ರ ಕರೊನಾ ಆರ್ಥಿಕ ವರ್ಷದಲ್ಲೂ ಪರಿಸ್ಥಿತಿ ಬದಲಾಗಿಲ್ಲ ಎಂಬುದು ವಿಶೇಷ.
    ಜಿಲ್ಲಾ ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ನೀಡುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಡಿಸಿಸಿ, ಎಲ್ಲ ರಾಷ್ಟ್ರೀಕೃತ ಹಾಗೂ ಖಾಸಗಿ ಸೇರಿ 342 ಬ್ಯಾಂಕ್​ಗಳ ಶಾಖೆಗಳಿವೆ.(ಅರ್ಬನ್ ಬ್ಯಾಂಕ್​ಗಳು ಈ ವ್ಯಾಪ್ತಿಗೆ ಸೇರಿಲ್ಲ)ಕಳೆದ ಆರ್ಥಿಕ ವರ್ಷದಲ್ಲಿ(2020-21)ಈ ಬ್ಯಾಂಕ್​ಗಳಲ್ಲಿ ಒಟ್ಟಾರೆ 17,574 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 1,816 ಕೋಟಿ ರೂ. ಕೃಷಿ ಸಾಲ, 1,716 ಕೋಟಿ ರೂ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲ ಸೇರಿ ಒಟ್ಟು 7,222 ಕೋಟಿ ರೂ. ಮಾತ್ರ ಸಾಲ ನೀಡಲಾಗಿದೆ.(2019-20)ರಲ್ಲಿ 16347 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿತ್ತು. 6627 ಕೋಟಿ ರೂ. ಸಾಲ ನೀಡಲಾಗಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ 595 ಕೋಟಿ ರೂ. ಹೆಚ್ಚುವರಿ ಸಾಲ ನೀಡಲಾಗಿದೆ. ಆದರೆ, 1,227 ಕೋಟಿ ರೂ. ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿದೆ.
    ಸಿಡಿ ರೇಷಿಯೋ ಕಡಿಮೆ: ಬ್ಯಾಂಕ್​ಗಳ ಅಭಿವೃದ್ಧಿಯ ದೃಷ್ಟಿಯಿಂದ ಸಾಲ ಹಾಗೂ ಠೇವಣಿ ಅನುಪಾತ (ಸಿಡಿ ರೇಶಿಯೋ) ಕನಿಷ್ಠ ಶೇ. 50 ಕ್ಕಿಂತ ಜಾಸ್ತಿ ಇರಬೇಕು ಎಂದು ಐಆರ್​ಬಿ ಹೇಳುತ್ತದೆ. ಇದು ಜಿಲ್ಲೆಯ ಅಭಿವೃದ್ಧಿಯ ಹಾಗೂ ಹಣದ ಚಲನೆಯ ಸೂಚ್ಯಾಂಕ ಎಂದೂ ಪರಿಗಣಿಸಲಾಗುತ್ತದೆ. ಉತ್ತರ ಕರ್ನಾಟಕದ ಭಾಗದ ಜಿಲ್ಲೆಯಲ್ಲಿ ಈ ಅನುಪಾತ ಶೇ. 70 ರಿಂದ 80 ರಷ್ಟಿರುತ್ತದೆ. ಆಂಧ್ರ ಸೇರಿ ಕೆಲವೆಡೆ ಶೇ. 100 ಕ್ಕಿಂತ ಅಧಿಕ ಸಿಡಿ ರೇಶಿಯೋ ಇರುವ ಜಿಲ್ಲೆಗಳಿವೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು. ಆದರೆ, ಉತ್ತರ ಕನ್ನಡದ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ. ‘2018 ರಲ್ಲಿ ಸಿಡಿ ರೇಶಿಯೋ ಶೇ. 37 ರಷ್ಟಿತ್ತು. ವಿವಿಧ ಸರ್ಕಾರಿ ಯೋಜನೆಗಳು, ಸ್ವಸಹಾಯ ಗುಂಪುಗಳಿಗೆ ಉತ್ತೇಜನ ಸಾಲ ನೀಡಿ 2021 ರ ಮಾರ್ಚ್ ಅಂತ್ಯದ ತ್ರೖೆಮಾಸಿಕದಲ್ಲಿ ಅದನ್ನು ಶೇ. 41.39 ಕ್ಕೆ ಏರಿಸಲಾಗಿದೆ’ಎನ್ನುತ್ತಾರೆ. ಜಿಲ್ಲಾ ಅಗ್ರಣಿಯ ಬ್ಯಾಂಕ್​ನ ನಿಕಟಪೂರ್ವ ಮ್ಯಾನೇಜರ್ ಪಿ.ಎಂ.ಪಿಂಜಾರ.
    ಜಿಲ್ಲೆಯಲ್ಲಿ ಶ್ರೀಮಂತರೇ ಹೆಚ್ಚಾ?: ಜಿಲ್ಲೆಯಲ್ಲಿ ಶೇ. 73 ರಷ್ಟು ಬಿಪಿಎಲ್ ಕುಟುಂಬಗಳಿವೆ ಎನ್ನುತ್ತದೆ ಆಹಾರ ಇಲಾಖೆ ದಾಖಲೆಗಳು. ಹಾಗಿದ್ದರೆ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟವರ್ಯಾರು? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಪರಿಸ್ಥಿತಿ ಹಾಗಿಲ್ಲ. ಠೇವಣಿ ಹೆಚ್ಚಿದೆ ಎಂದ ಮಾತ್ರಕ್ಕೆ ಜಿಲ್ಲೆಯಲ್ಲಿ ಶ್ರೀಮಂತರೇ ಹೆಚ್ಚಿದ್ದಾರೆ ಎಂದು ನಿರ್ಣಯಿಸಬೇಕಿಲ್ಲ. ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ, ಸರ್ಕಾರದ ಕೆಲ ನಿಯಮಾವಳಿಗಳು ಸಾಲ ನೀಡಲು ಪೂರಕವಾಗಿಲ್ಲ. ಜನರಿಗೆ ಸಾಲ ಬೇಕು ಎಂದಿದ್ದರೂ ಅವರು ಸೂಕ್ತ ದಾಖಲೆ ನೀಡುವಲ್ಲಿ ವಿಫಲರಾಗುತ್ತಾರೆ ಎಂಬುದು ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts