More

    ಯುಪಿಎಸ್ಸಿ ಪರೀಕ್ಷೆ ಗೆದ್ದ ಮಂಡ್ಯದ ರೈತನ ಮಗ: ಬಿರೋಟ ಗ್ರಾಮದ ಚಂದನ್‌ಗೆ 731ನೇ ರ್ಯಾಂಕ್

    ಮಂಡ್ಯ: ಕೇಂದ್ರ ಲೋಕಸಭಾ ಆಯೋಗ ನಡೆಸಿದ ಯುಪಿಎಸ್ಸಿ ಪರೀಕ್ಷೆಯಲ್ಲಿ ಮಳವಳ್ಳಿ ತಾಲೂಕು ಬಿರೋಟ ಗ್ರಾಮದ ಬಿ.ಎಸ್.ಚಂದನ್ 731ನೇ ರ‌್ಯಾಂಕ್ ಪಡೆದಿದ್ದಾರೆ. ಇದರೊಂದಿಗೆ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜತೆಗೆ ಸರ್ಕಾರಿ ಶಾಲೆಯಲ್ಲಿಯೇ ಕಲಿತು ಸಾಧಿಸಿ ಮಾದರಿಯಾಗಿದ್ದಾರೆ.
    ಗ್ರಾಮದ ರೈತ ಸಣ್ಣೇಗೌಡ ಹಾಗೂ ಸವಿತಾ ದಂಪತಿಯ ಪುತ್ರ ಚಂದನ್, ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಹಿಂದೆ ಸಹೋದರ ಬಿ.ಎಸ್.ಚೇತನ್ ಶ್ರಮ ಸಾಕಷ್ಟಿದೆ. ಕಾರಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ತಮ್ಮನ ವ್ಯಾಸಂಗಕ್ಕೆ ಆರ್ಥಿಕ ಹಾಗೂ ನೈತಿಕ ಬೆಂಬಲವಾಗಿ ನಿಂತಿದ್ದಾರೆ.
    ಮಾಸ್ಟರ್‌ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ಚಂದನ್, ಪ್ರೌಢ ವ್ಯಾಸಂಗವನ್ನು ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.91.8 ಅಂಕಗಳಿಸಿ ಪಿಯುಸಿ ಶಿಕ್ಷಣಕ್ಕೆ ಕೆ.ಎಂ.ದೊಡ್ಡಿ ಭಾರತೀ ವಿದ್ಯಾಸಂಸ್ಥೆಗೆ ಸೇರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಕಲಿತು ದ್ವಿತೀಯ ಪಿಯುಸಿಯಲ್ಲಿ ಶೇ.85.5 ಅಂಕ ಪಡೆಯುತ್ತಾರೆ. ಬಳಿಕ ಇದೇ ಕಾಲೇಜಿನಲ್ಲಿ ಬಿಎಸ್ಸಿಯನ್ನು ಶೇ.70 ಅಂಕದೊಂದಿಗೆ ಪೂರ್ಣಗೊಳಿಸುತ್ತಾರೆ.
    ಇದಾದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಚಂದನ್ ಆಸ್ಥೆ ವಹಿಸುತ್ತಾರೆ. ಅದರಂತೆ ದಿನಕ್ಕೆ 12ರಿಂದ 14 ಗಂಟೆ ಸಮಯವನ್ನು ಓದುವುದಕ್ಕೆ ಮೀಸಲಿಡುತ್ತಾರೆ. ಜತೆಗೆ ಬೆಂಗಳೂರಿನಲ್ಲಿ ಕೋಚಿಂಗ್ ಕ್ಲಾಸ್‌ಗೂ ಸೇರುತ್ತಾರೆ. 2021ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಯತ್ನಿಸಿ ವಿಫಲರಾದರು. ಛಲಬಿಡದೆ ಕಷ್ಟಪಟ್ಟು ಓದಿದ ಪರಿಣಾಮ 2022ರಲ್ಲಿ ಬೆಂಗಳೂರಿನಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗುತ್ತಾರೆ. ಕರ್ತವ್ಯದ ಜತೆಗೆ ಯುಪಿಎಸ್ಸಿ ಪರೀಕ್ಷೆಗೂ ಸಿದ್ಧವಾಗುತ್ತಾರೆ. ಈ ನಡುವೆ ಪರೀಕ್ಷೆ ಬರೆದರೂ ಯಶಸ್ಸು ಸಿಕ್ಕಿರಲಿಲ್ಲ. 2023ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಚಂದನ್, ಈ ವರ್ಷ ಮಾರ್ಚ್‌ನಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡು ಆಯ್ಕೆಯಾಗಿದ್ದಾರೆ.

    ಯುಪಿಎಸ್ಸಿ ಪರೀಕ್ಷೆ ಗೆದ್ದ ಮಂಡ್ಯದ ರೈತನ ಮಗ: ಬಿರೋಟ ಗ್ರಾಮದ ಚಂದನ್‌ಗೆ 731ನೇ ರ್ಯಾಂಕ್

    ಪ್ರಾರಂಭಿಕ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಮಾಡಲಾಗಿತ್ತು. ಕಾಲೇಜು ಹಂತದಲ್ಲಿ ಇಂಗ್ಲೀಷ್ ಮೊದಲು ಸ್ವಲ್ಪ ಕಷ್ಟ ಎನ್ನಿಸಿದರೂ ಆನಂತರ ಸರಿಯಾಯಿತು. ತಂದೆ, ತಾಯಿ ಹಾಗೂ ಸಹೋದರನ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಸರ್ಕಾರದಿಂದ ಹಲವು ಸೌಲಭ್ಯ ಪಡೆದಿದ್ದೇವೆ. ಅದನ್ನು ತೀರಿಸಲು ಅವಕಾಶ ಸಿಕ್ಕಿದೆ. ಜನರಿಗೆ ನನ್ನಿಂದಾಗುವ ಸೇವೆಯನ್ನು ಮಾಡುತ್ತೇನೆ.
    ಬಿ.ಎಸ್.ಚಂದನ್
    ಯುಪಿಎಸ್ಸಿ 731ನೇ ರ್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts