

ನವದೆಹಲಿ: ಕಳೆದ ಕೆಲವು ದಿನಗಳಿಂದ ಉತ್ತರ ಭಾರತದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ.
ಯಮುನಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆ ಶಾಲಾ-ಕಾಲೇಜುಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಜುಲೈ 16ರವರೆಗೂ ರಜೆ ಘೋಷಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಹಾಗೂ ದೆಹಲಿ ವಿಪತ್ತು ನಿರ್ವಹಣಾ ಮಂಡಳಿ(DDMA) ಸಭೆ ಬಳಿಕ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಜುಲೈ 16ರವರೆಗೂ ವರ್ಕ್ ಫ್ರಮ್ ಹೋಮ್ ಮಾಡುವಂತೆ ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ DDMAಯ ಹಿರಿಯ ಅಧಿಕಾರಿಯೊಬ್ಬರು ಕಾಶ್ಮೀರಿ ಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವಾಣಿಜ್ಯ ಕಟ್ಟಡಗಳನ್ನು ಜುಲೈ 16ರ ವರೆಗೂ ಮುಚ್ಚುವಂತೆ ಸೂಚಿಸಲಾಗಿದೆ. ISBTಗೆ ಬರುವ ಬಸ್ಸುಗಳನ್ನು ಸಿಂಘು ಬಾರ್ಡರ್ ಬಳಿ ನಿಲ್ಲಿಸುವಂತೆ ಸೂಚಿಸಲಾಗಿದೆ.
ಯುಮುನಾ ನದಿಯೂ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಾರಣ ದೆಹಲಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆನಿಬಿಡ ಪ್ರದೇಶಗಳಲ್ಲಿರುವ ಜನರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.