More

    40 ಲಕ್ಷದತ್ತ ಕರೊನಾ ದಾಪುಗಾಲು: ವಿಶ್ವದಲ್ಲಿ ಹೆಚ್ಚುತ್ತಲೇ ಇದೆ ಸೋಂಕು

    ನವದೆಹಲಿ: ಜಾಗತಿಕವಾಗಿ ಕರೊನಾ ವೈರಸ್​ಗೆ ಒಳಗಾದವರ ಸಂಖ್ಯೆ 40 ಲಕ್ಷದ ಗಡಿ ಸಮೀಪಿಸಿದೆ. ಕಳೆದ 24 ತಾಸಿನಲ್ಲಿ 63 ಸಾವಿರ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 39.76 ಲಕ್ಷಕ್ಕೆ ಏರಿದೆ.

    ಅಮೆರಿಕವೊಂದರಲ್ಲೇ 13 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಸ್ಪೇನ್​ನಲ್ಲಿ 2.60 ಲಕ್ಷ, ಇಟಲಿ ಹಾಗೂ ಬ್ರಿಟನ್​ನಲ್ಲಿ ತಲಾ 2 ಲಕ್ಷ, ರಷ್ಯಾ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ತಲಾ 1.50 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಬ್ರೆಜಿಲ್, ಟರ್ಕಿ ಹಾಗೂ ಇರಾನ್​ನಲ್ಲಿ ಸೋಂಕಿತರ ಸಂಖ್ಯೆ ತಲಾ 1 ಲಕ್ಷಕ್ಕೂ ಅಧಿಕವಿದೆ. ಗುಣಮುಖರ ಪ್ರಮಾಣವೂ ಹೆಚ್ಚಿದ್ದು, ಈವರೆಗೆ 13 ಲಕ್ಷಕ್ಕಿಂತ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಇನ್ನೂ 23.30 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 48 ಸಾವಿರ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಕರೊನಾ ಮರಣಮೃದಂಗವೂ ಮುಂದುವರಿದಿದ್ದು, ಜಾಗತಿಕವಾಗಿ ಮೃತಪಟ್ಟವರ ಸಂಖ್ಯೆ 2.71 ಲಕ್ಷಕ್ಕಿಂತ ಹೆಚ್ಚಾಗಿದೆ. ಅಮೆರಿಕದಲ್ಲಿ 77 ಸಾವಿರ, ಬ್ರಿಟನ್ 30, ಇಟಲಿ 29, ಸ್ಪೇನ್ 26 ಹಾಗೂ ಫ್ರಾನ್ಸ್​ನಲ್ಲಿ 25 ಸಾವಿರ ಜನರು ಮೃತಪಟ್ಟಿದ್ದಾರೆ.

    ಇದನ್ನೂ ಓದಿ ಬೈಕ್​ನ 4 ಅಡಿ ದೂರದಲ್ಲಿ ನಿಂತ್ರೆ ಹಾಲು ಬರುತ್ತೆ ..!​

    ಭಾರತದಲ್ಲಿ 59 ಸಾವಿರ ಪ್ರಕರಣ

    ದೇಶದಲ್ಲಿ 3,200 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 59 ಸಾವಿರಕ್ಕಿಂತ ಹೆಚ್ಚಾಗಿದೆ. ಸಾವನ್ನಪ್ಪಿದವರ ಸಂಖ್ಯೆ 1900 ಗಡಿ ದಾಟಿದ್ದು, ಇನ್ನೂ 39 ಸಾವಿರ ಸಕ್ರಿಯ ಪ್ರಕರಣಗಳಿವೆ. ಈವರೆಗೆ 17 ಸಾವಿರಕ್ಕಿಂತ ಹೆಚ್ಚು ಜನರು ಗುಣಮುಖರಾಗಿದ್ದಾರೆ.

    ದ್ವಿಗುಣ ದಿನಗಳ ಇಳಿಕೆ: ಮಹಾರಾಷ್ಟ್ರ, ಗುಜರಾತ್ ಹಾಗೂ ದೆಹಲಿಯಂತಹ ರಾಜ್ಯಗಳಲ್ಲಿ ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳ ಪ್ರಮಾಣ ಇಳಿಕೆಯಾಗಿ 10.2 ದಿನಗಳಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶದಿಂದ ತಿಳಿದುಬಂದಿದೆ. ಕಳೆದ ಬುಧವಾರ ದೇಶದಲ್ಲಿ ಕರೊನಾ ದ್ವಿಗುಣ ಪ್ರಮಾಣ 12 ದಿನಗಳಷ್ಟಿತ್ತು. ಕಳೆದೊಂದು ತಿಂಗಳಿನಿಂದ ನಿಧಾನಗತಿ ಯಲ್ಲಿ ಏರಿಕೆಯಾಗುತ್ತಿದ್ದ ಒಟ್ಟು ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿ ದಾಟಿದ ಬಳಿಕ ವೇಗ ಪಡೆದುಕೊಂಡಿದೆ. ಭಾರತದಲ್ಲಿ ರೋಗಿಗಳು ಗುಣಮುಖವಾಗುತ್ತಿರುವ ಪ್ರಮಾಣ ಶೇ. 29.36ರಷ್ಟಿದೆ. 216 ಜಿಲ್ಲೆಗಳಲ್ಲಿ ಈವರೆಗೆ ಯಾವುದೇ ಸೋಂಕು ಪ್ರಕರಣ ವರದಿಯಾಗಿಲ್ಲ.

    ಮನೆಗೇ ಮದ್ಯ ಪೂರೈಸಿ

    ಜನರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಬಹುದೇ ಎನ್ನುವುದನ್ನು ಪರಿಶೀಲಿಸಿ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಮದ್ಯದಂಗಡಿಗಳಿಂದ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗುತ್ತಿದ್ದು, ಇಂಥ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಅದರ ವಿಚಾರಣೆ ನಡೆಸಿದ ಕೋರ್ಟ್, ಈ ಸೂಚನೆಯನ್ನು ನೀಡಿದೆ. ಅರ್ಜಿಯ ಕುರಿತಾಗಿ ರಾಜ್ಯಗಳಿಗೆ ಯಾವುದೇ ಆದೇಶ ನೀಡಲಾಗುವುದಿಲ್ಲ. ಆದರೆ ಮನೆಗೆ ಮದ್ಯ ಪೂರೈಕೆ ಸಾಧ್ಯವಾಗುತ್ತದೆಯೇ ಎನ್ನುವುದನ್ನು ರಾಜ್ಯಗಳು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು.

    ವುಹಾನ್ ಮಾರುಕಟ್ಟೆ ಪಾತ್ರ?

    ಕರೊನಾ ವೈರಸ್ ಹರಡುವಿಕೆಯಲ್ಲಿ ವುಹಾನ್​ನ ವನ್ಯಜೀವಿ ಮಾರುಕಟ್ಟೆಯ ಪಾತ್ರವಿರುವುದು ಸ್ಪಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಾಂಸ ಮಾರುಕಟ್ಟೆ ಪಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಅದು ಸೃಷ್ಟಿಕರ್ತ ಪಾತ್ರವಾಗಿರಬಹುದು, ಪ್ರವರ್ತಕ ಪಾತ್ರವಾಗಿರಬಹುದು ಅಥವಾ ಕಾಕತಾಳೀಯವಾಗಿ ಕರೊನಾ ಅದಕ್ಕಂಟಿರಬಹುದು ಎಂದು ಡಬ್ಲ್ಯೂಎಚ್​ಒನ ಆಹಾರ ಸುರಕ್ಷತೆ ಮತ್ತು ಜುನೋಟನಿ ತಜ್ಞ ಡಾ.ಪೀಟರ್ ಬೆನ್ ಎಂಬರ್ಕ್ ತಿಳಿಸಿದ್ದಾರೆ.

    ಮಾರುಕಟ್ಟೆಗೆ ಸೋಂಕು ಹೇಗೆ ಬಂದಿತು ಎನ್ನುವುದು ಸ್ಪಷ್ಟವಿಲ್ಲ. ಅದು ವನ್ಯಜೀವಿಯಿಂದ, ವ್ಯಾಪಾರಿಗಳಿಂದ ಅಥವಾ ಗ್ರಾಹಕರಿಂದ ಬಂದಿರಬಹುದು ಎಂದಿದ್ದಾರೆ. ಚೀನಾದ ಪ್ರಯೋಗಾಲಯದಲ್ಲಿ ಕರೊನಾ ವೈರಸ್ ತಯಾರಿಸಲಾಗಿದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಅಮೆರಿಕ ವಾದಿಸುತ್ತಿದೆ.

    ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಬೇಗ ಮುಗಿಸಿ: ಸುಪ್ರೀಂ ಕೋರ್ಟ್ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts