More

    ಲಾಕ್‌ಡೌನ್ ತೆರೆದಿಟ್ಟ ಮಾನವೀಯ ಮುಖ

    ರಾಜೇಶ್ ಶೆಟ್ಟಿ ದೋಟ ಮಂಗಳೂರು

    ಕರೊನಾ, ಲಾಕ್‌ಡೌನ್ ಸಂಕಷ್ಟಗಳಿಂದ ನಲುಗಿದ ಜನತೆಗೆ ಪ್ರಸ್ತುತ ದಿನಗಳಲ್ಲಿ ವ್ಯಕ್ತವಾಗುತ್ತಿರುವ ಸ್ಪಂದನೆ ಸಮಾಜದ ಮಾನವೀಯ ಮುಖವನ್ನು ಅನಾವರಣಗೊಳಿಸಿದೆ.

    ಜಾತಿ, ಧರ್ಮಗಳನ್ನು ಮೀರಿದ ಸಾಮಾಜಿಕ ಕಳಕಳಿ ಕರೊನಾ ಸಂಕಷ್ಟ ಸಮಯದಲ್ಲೂ ಭರವಸೆಯ ಬೆಳಕು ಮೂಡಿಸಿದೆ. ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ಜನಸಾಮಾನ್ಯರೂ ಈ ಸೇವಾ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಆಹಾರ, ದಿನಸಿ ಸಾಮಗ್ರಿ, ಬಟ್ಟೆ, ಔಷಧ ಮತ್ತಿತರ ನೆರವು ನೀಡುತ್ತಿದ್ದಾರೆ. ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರವನ್ನೂ ಮಾಡಿ ಸೇವೆಯ ಮಹತ್ವ ಸಾರಿದ್ದಾರೆ. ತಮ್ಮ ನೋವುಗಳನ್ನು ಬದಿಗಿಟ್ಟು ಇನ್ನೊಬ್ಬರ ಕಣ್ಣೀರು ಒರೆಸಿದವರೂ ಇವರಲ್ಲಿ ಅನೇಕ ಮಂದಿ.

    ನಿರಂತರ ಸೇವೆ: ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಈ ಬಾರಿ ಗ್ರಾಮ ಪಂಚಾಯಿತಿಯಿಂದ ಮನೆ ಬಾಗಿಲಿಗೆ ದಿನಸಿ ಸಾಮಗ್ರಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಸಂಸದರ, ಶಾಸಕರ ವಾರ್‌ರೂಂ, ಮನಪಾ, ಹೆಲ್ಪ್‌ಲೈನ್‌ಗಳು 24 ಗಂಟೆಯೂ ಸೇವಾನಿರತವಾಗಿವೆ. ಹಲವಾರು ಸಂಘಟನೆಗಳು ಆಂಬುಲೆನ್ಸ್, ವಾಹನ ಸೇವೆ ಒದಗಿಸಿ ಹೃದಯ ವೈಶಾಲ್ಯ ಮೆರೆದಿವೆ.

    ಹಸಿವು ನೀಗಿಸುವ ಕಾರ್ಯ: ಯುವಾ ಬ್ರಿಗೇಡ್, ಮೂಲ್ಕಿ ಬ್ಲಾಕ್ ಯೂತ್ ಕಾಂಗ್ರೆಸ್, ಇಂಡಿಯನ್ ಸೀನಿಯರ್ ಚೇಂಬರ್, ಸೇವಾಂಜಲಿ ಚಾರಿಟೆಬಲ್ ಟ್ರಸ್ಟ್, ವಿಶ್ವ ಹಿಂದು ಪರಿಷತ್, ಬಜರಂಗದಳ, ಹ್ಯುಮಾನಿಟಿ ಗ್ರೂಪ್ ಜೋಕಟ್ಟೆ, ಅಲ್ ಅಮೀನ್ ಹೆಲ್ಪ್‌ಲೈನ್ ಮತ್ತಿತರ ಸಂಘಟನೆಗಳು ನಿರ್ಗತಿಕರು, ಬಡವರು ಹಾಗೂ ಐಸೋಲೇಷನ್‌ನಲ್ಲಿರುವ ಸೋಂಕಿತರ ಹಸಿವು ನೀಗಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ತೊಕ್ಕೊಟ್ಟಿನಲ್ಲಿ ಜೇಸಿ ಕೊಣಾಜೆ ಮಂಗಳಗಂಗೋತ್ರಿ ನೇತೃತ್ವದಲ್ಲಿ ಜಮಾತೆ ಇಸ್ಲಾಮಿ ಹಿಂದ್, ರೀಚಲ್ ಚಾರಿಟೆಬಲ್ ಟ್ರಸ್ಟ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕೆಥೊಲಿಕ್ ಸಭಾ ಲಾಕ್‌ಡೌನ್ ಅಂತ್ಯದವರೆಗೂ ನಿರಂತರ ಅನ್ನದಾನ ಸೇವೆಯ ಕೈಂಕರ್ಯ ಹೊತ್ತಿದೆ.

    ಪ್ರಚಾರದ ಹಂಗಿಲ್ಲದ ಕಾರ್ಯ: ಕುಲಶೇಖರದ ಬ್ಯಾಪಿಸ್ಟ್ ಚಾರಿಟೆಬಲ್ ಟ್ರಸ್ಟ್, ಕುಳಾಯಿ ಫೌಂಡೇಶನ್, ನೇಸರ ಫೌಂಡೇಶನ್, ಇಸ್ಕಾನ್‌ನ ಮಂಗಳೂರು ಆಶ್ರಯಪಾತ್ರೆ ಯೋಜನೆ, ಮಂಗಳಾ ಚಾರಿಟೆಬಲ್ ಟ್ರಸ್ಟ್, ಹೆಲ್ಪ್‌ಡೆಸ್ಕ್ ಯುಟಿಕೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ದಿನಸಿ ಸಾಮಗ್ರಿ ವಿತರಣೆ ಮೂಲಕ ಜನರ ಸಂಕಷ್ಟಕ್ಕೆ ಧ್ವನಿಯಾಗುತ್ತಿದೆ.

    ಪ್ರಚಾರದ ಹಂಗಿಲ್ಲದೆ ಜನರ ಕಷ್ಟಗಳಿಗೆ ನೆರವಾಗುತ್ತಿರುವವರು ಅನೇಕ ಮಂದಿ ಇದ್ದಾರೆ. ಕೊಳಚಿಕಂಬಳ ನಿವಾಸಿ ಉದ್ಯಮಿ ಇನಾಯತ್ ಆಲಿ ಅವರು ಊರಿನ ಎಲ್ಲ ಗ್ರಾಮಸ್ಥರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ. ಜಪ್ಪಿನಮೊಗರು ಗ್ರಾಮದ ಉದ್ಯಮಿ ಜಾನ್ ಸುರೇಶ್ 400 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಪೂರೈಸಿದ್ದಾರೆ. ಇಂತಹ ಅನೇಕ ಸಂಘಟನೆಗಳು, ದಾನಿಗಳು ಮಾನವೀಯ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.

    ಪೊಲೀಸರಿಂದಲೂ ಸೇವಾ ಕಾರ್ಯ: ಸ್ಥಳೀಯ ಮತ್ತು ವಿದೇಶದಲ್ಲಿರುವವರಿಗೆ ನೆರವಿನ ಹಸ್ತ ನೀಡಲು ಮಂಗಳೂರು ನಗರ ಪೊಲೀಸರು ಕೋವಿಡ್ ಸಮನ್ವಯ ಹೆಲ್ಪ್‌ಲೈನ್ ರಚಿಸಿದ್ದು, ಈವರೆಗೆ 22 ಪ್ರಕರಣಗಳಲ್ಲಿ ಸಹಾಯ ನೀಡಲಾಗಿದೆ. ಮಂಗಳೂರು ನಾರ್ಕೊಟಿಕ್ಸ್ ಪೊಲೀಸ್ ಸ್ಟೇಷನ್ ಎಚ್‌ಪಿಸಿ ಶಿವಕುಮಾರ್ ಹಾಗೂ ಸುರತ್ಕಲ್ ಎಚ್‌ಪಿಸಿ ಸುನೀಲ್ ಎಂಬುವರು ಸ್ನೇಹಿತರ ನೆರವಿನಿಂದ ನಿತ್ಯ ಸುಮಾರು 150 ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

    ಅಂತ್ಯಕ್ರಿಯೆ ಮೂಲಕ ಮಾದರಿ ಸೇವೆ: ದೇರೆಬೈಲ್ ವಾರ್ಡ್ ಕಾರ್ಪೊರೇಟರ್ ವಾರಸುದಾರರಿಲ್ಲದ, ಅಂತ್ಯಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದ ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಬಲ್ಲಾಳ್‌ಬಾಗ್‌ನಲ್ಲಿ ಬಾಡಿಗೆ ಮನೆ ನಿವಾಸಿ ರಜನಿ ದಾಮೋದರ ಶೆಟ್ಟಿ ಪ್ರಸಕ್ತ ಕರ್ಫ್ಯೂ ಅವಧಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಬಡಿಸುವುದರಲ್ಲಿ ನಿರತರಾಗಿದ್ದಾರೆ.

    ನಾರಾಯಣ ಗುರುಗಳ ತತ್ವ ಸಂದೇಶದೊಂದಿಗೆ ಬಡವರ ಕಣ್ಣೊರೆಸುವ ಕಾರ್ಯಕ್ಕೆ ಮುಂದಾಗಬೇಕೆಂಬ ಇಚ್ಛೆಯಿಂದ ಗುರುಬೆಳದಿಂಗಳು ತಂಡವೂ ಸಮಾಜ ಸೇವೆಯಲ್ಲಿ ತೊಡಗಿದೆ. ನೂರಾರು ಮಂದಿಗೆ ದಿನಸಿ ಸಾಮಗ್ರಿ ಕಿಟ್, ವೈದ್ಯರ ಸಲಹೆ, ವೈದ್ಯಕೀಯ ನೆರವು, ಮನೆ ಬಾಗಿಲಿಗೆ ಔಷಧ, ಪಡಿತರ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ.

    ಪದ್ಮರಾಜ್ ಆರ್
    ಅಧ್ಯಕ್ಷ, ಗುರುಬೆಳದಿಂಗಳು ಸೇವಾ ಸಂಸ್ಥೆ ಕುದ್ರೋಳಿ

    ಸಂಘಟನೆಗಳು, ಸಂಸ್ಥೆಗಳು, ಉದ್ಯಮಿಗಳು ಸಂಕಷ್ಟದ ಸಮಯದಲ್ಲಿ ಮಾನವ ಕುಲದ ಉಳಿವಿಗಾಗಿ ತಮ್ಮ ಗಳಿಕೆಯ ಒಂದಿಷ್ಟನ್ನು ಆಹಾರ, ಔಷಧ ಸಹಿತ ಇತರ ವಸ್ತುಗಳಿಗಾಗಿ ವಿನಿಯೋಗಿಸುವ ಮೂಲಕ ಜೀವ ಉಳಿಸಲು ಜಾತಿ, ಧರ್ಮ ಮುಖ್ಯ ಅಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇಂತಹ ಮಾನವೀಯ ಸೇವೆ ಸದಾ ನೆಲೆ ನಿಲ್ಲಬೇಕು.

    ಪ್ರಶಾಂತ್ ಕಾಜವ
    ಮಾಜಿ ಅಧ್ಯಕ್ಷ, ಕುರ್ನಾಡು ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts