More

    ಕಾಂಗ್ರೆಸ್‌ನಲ್ಲಿ ಮಹಿಳೆಯರು ಸಂಘಟಿತರಾಗಬೇಕು

    ಗೋಣಿಕೊಪ್ಪ: ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರು ಹೆಚ್ಚು ಸಂಘಟಿತರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ ತಿಳಿಸಿದರು.
    ಪೊನ್ನಂಪೇಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಆಯೋಜಿಸಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕಾರ್ಯಕರ್ತರನ್ನು ಒಗ್ಗೂಡಿಸಲು ಪಕ್ಷದ ಜಿಲ್ಲಾಧ್ಯಕ್ಷರು ಹೆಚ್ಚು ಮುತುವರ್ಜಿ ವಹಿಸಬೇಕು. ಅದರಲ್ಲೂ ಮಹಿಳೆಯರನ್ನು ಸಂಘಟಿತರನ್ನಾಗಿ ರೂಪಿಸಲು ಅವಕಾಶ ಕಲ್ಪಿಸಬೇಕು ಎಂದರು.
    ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನ ಸಭಾ ಕ್ಷೇತ್ರ ಮಾತ್ರವಿದೆ ಎಂಬ ಕಾರಣಕ್ಕೆ ಪಕ್ಷದ ವರಿಷ್ಠರು ಜಿಲ್ಲೆಯನ್ನು ಕಡಿಮೆ ಎಂದು ಭಾವಿಸಿರಬಹುದು. ಇದರಿಂದ ತುರ್ತಾಗಿ ಸ್ಪಂಧನೆ ಸಿಗದಿದ್ದರೂ ಹಂತ ಹಂತವಾಗಿ ಸಂಘಟಿತರಾಗಲು ಅವಕಾಶವಿದೆ. ಪಕ್ಷದಲ್ಲಿ ಮುಖಂಡರ ದಿಢೀರ್ ಬದಲಾವಣೆಯಿಂದ ತೊಂದರೆಯಾದರೂ, ಎಲ್ಲರನ್ನೂ ಒಟ್ಟುಗೂಡಿಸಲು ಮುಂದಾಗಬೇಕು. ಜನಪ್ರತಿನಿಧಿಗಳ ಸಂಖ್ಯೆ ಪಕ್ಷದಲ್ಲಿ ಹೆಚ್ಚಾದರೆ ಮಾತ್ರ ಪಕ್ಷಕ್ಕೂ ಹೆಚ್ಚು ಬಲ ಬರುತ್ತದೆ. ಇತ್ತೀಚೆಗಷ್ಟೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮನ ಸಂದರ್ಭ ಬ್ಯಾನರ್‌ನಲ್ಲಿ ನನ್ನ ಚಿತ್ರ ಹಾಕದೆ ಕಡೆಗಣಿಸಲಾಗಿತ್ತು. ನಮ್ಮ ಪಕ್ಷದ ಶಾಸಕರು ಆಯ್ಕೆಯಾಗಿದ್ದರೆ ಇಂತಹ ಮುಜುಗರ ಎದುರಿಸುವ ಪ್ರಸಂಗ ನಡೆಯುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಹೆಚ್ಚು ಗೆಲುವಿಗೆ ಶ್ರಮಿಸಬೇಕಿದೆ ಎಂದರು.
    ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್ ಮಾತನಾಡಿ, ಪಕ್ಷ ಸಂಘಟನೆಯಿಂದಾಗಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಶೂನ್ಯ ದಾಖಲೆಯಿಂದ ಹೊರಬರುವಂತಾಗಿದೆ. ಒಂದಷ್ಟು ಸಹಕಾರ ಸಂಘಗಳಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳೇ ಇರಲಿಲ್ಲ. ಇಂತಹ ಬೆಳವಣಿಗೆ ಮುಂದಿನ ಗ್ರಾಮ ಪಂಚಾಯಿತಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮುಂದುವರಿಯಬೇಕಿದೆ. ಇದರಿಂದ ಎಂಎಲ್ಸಿ ಸ್ಥಾನವನ್ನು ಕೂಡ ದಕ್ಕಿಸಿಕೊಳ್ಳಲು ಅವಕಾಶವಿದೆ ಎಂದರು.
    ಅಧ್ಯಕ್ಷ ಮೀದೇರಿರ ನವೀನ್ ಮಾತನಾಡಿದರು. ಈ ಸಂದರ್ಭ ನಿರ್ಗಮಿತ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅವರಿಂದ ನಿಯೋಜಿತ ಅಧ್ಯಕ್ಷ ಮೀದೇರಿರ ನವೀನ್‌ಗೆ ಪಕ್ಷದ ಧ್ವಜ ಹಸ್ತಾಂತರದ ಮೂಲಕ ಅಧಿಕಾರ ನೀಡಲಾಯಿತು. ಪಕ್ಷದಲ್ಲಿ ದುಡಿದು ನಿಧನರಾದ ಕೊಡಂದೇರ ಗಣಪತಿ, ಕಡೇಮಾಡ ಅಶೋಕ್, ಹೊಟ್ಟೇಂಗಡ ಪ್ರಕಾಶ್ ಅವರು ಕಾರ್ಯವನ್ನು ಸ್ಮರಿಸಿಕೊಳ್ಳಲಾಯಿತು.
    ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಪ್ರಮುಖರಾದ ಉಸ್ಮಾನ್, ಶಿವು ಮಾದಪ್ಪ, ಎಂ.ಎಸ್.ಪೂಣಚ್ಚ, ಪಂಕಜ, ಸರಾ ಚಂಗಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts