More

    ಗೃಹಲಕ್ಷ್ಮಿ ಯೋಜನೆ ಸೆಪ್ಟೆಂಬರ್‌ ತಿಂಗಳಿಗೇ ಸ್ಟ್ರಕ್‌!!

    ಕಾರವಾರ: ತಾಂತ್ರಿಕ ಸಮಸ್ಯೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಸೆಪ್ಟೆಂಬರ್‌ ತಿಂಗಳಿಗೇ ಸ್ಕ್ರಕ್‌ ಆಗಿದೆ. ಯೋಜನೆ ಡಿಸೆಂಬರ್‌ ತಿಂಗಳು ಬಂದರೂ ಇದುವರೆಗೂ ಅಕ್ಟೋಬರ್‌ ತಿಂಗಳ ಹಣ ಶೇ. 6 ರಷ್ಟು ಯಜಮಾನಿಯರಿಗೆ ತಲುಪಿಲ್ಲ. !!

    ಮನೆಯ ಯಜಮಾನಿಯ ಖಾತೆಗೆ ಮಾಸಿಕ ತಲಾ 2 ಸಾವಿರ ರೂ.ಜಮಾ ಮಾಡುವ ಕಾರ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಚಾಲನೆ ದೊರೆತಿದ್ದು, ಅಲ್ಲಿಂದ ನಿರಂತರವಾಗಿ ಮೂರೂ ತಿಂಗಳ ಪ್ರಯೋಜನ ದೊರಕಿದ್ದು ಶೇಕಡ 5.34 ರಷ್ಟು ಯಜಮಾನಿಯರಿಗೆ ಮಾತ್ರ!!
    ಹೌದು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆಯಲ್ಲಿನ ಗೋಜಲಿನಿಂದಾಗಿ ನಿಯಮದಂತೆಯೇ ನೋಂದಣಿ ಮಾಡಿಕೋಂಡರೂ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗುತ್ತಿಲ್ಲ. ಯೋಜನೆ ಶುರುವಾಗಿ 5 ತಿಂಗಳಾದರೂ ಇನ್ನೂ ಮೊದಲ ತಿಂಗಳ ಹಣ ಪಡೆಯದವರೂ ಇದ್ದಾರೆ. ಮೂರನೇ ತಿಂಗಳ ಹಣ ಬಂದಿದೆಯೇ ಎಂದು ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುತ್ತಿರುವ ಲಕ್ಷಾಂತರ ಮಹಿಳೆಯರಿದ್ದಾರೆ. ಹಲವು ಯಜಮಾನಿಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೆದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಎಲ್ಲರಿಗೂ ಯೋಜನೆ ತಲುಪಿಸುತ್ತಿಲ್ಲ ಎಂದು ಅಕಾರಿಗಳ ಮೇಲೆ ಜನಪ್ರತಿನಿಧಿಗಳು ಒತ್ತಡ ಹಾಕುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಉಂಟಾಗುತ್ತಿರುವ ಗೊಂದಲಗಳಿಂದ ಕೆಳ ಹಂತದ ಅಧಿಕಾರಿಗಳು ಏನು ಮಾಡಬೇಕು ಎಂದು ಅರಿಯದೇ ಭಯಭೀತರಾಗಿದ್ದಾರೆ.

    ಫಲಾನುಭವಿಗಳು ಇಳಿಕೆ!!

    ಅಚ್ಚರಿ ಎಂದರೆ ದಿನದಿಂದ ದಿನಕ್ಕೆ ಯೋಜನೆ ಪ್ರಯೋಜನ ಬಯಸಿ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಫಲಾನುಭವಿಗಳ ಸಂಖ್ಯೆ ಮೂರು ತಿಂಗಳಿಂದ ಇಳಿಕೆ ಕ್ರಮದಲ್ಲಿ ಹೋಗುತ್ತಿದೆ. ಜಿಲ್ಲೆಯಲ್ಲಿ 3.46 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹರು ಎಂದು ಗುರುತಿಸಲಾಗಿತ್ತು. ಅದರಲ್ಲಿ 3.08 ಲಕ್ಷ (ಶೇ.88.86) ಯಜಮಾನಿಯರು ಸೆಪ್ಟೆಂಬರ್ ಅಂತ್ಯದ ಒಳಗೆ ಅರ್ಜಿ ಗುಜರಾಯಿಸಿದ್ದಾರೆ. ಆಗಸ್ಟ್ ತಿಂಗಳ ಮೊದಲ ಕಂತನ್ನು 2.68 ಲಕ್ಷ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಯಿತು. ಆದರೆ, ಅಚ್ಚರಿಯ ವಿಷಯ ಎಂದರೆ ಸೆಪ್ಟೆಂಬರ್ ತಿಂಗಳಲ್ಲಿ ಫಲಾನುಭವಿಗಳ ಸಂಖ್ಯೆ 2.64 ಲಕ್ಷ ಕ್ಕೆ ಇಳಿಕೆಯಾಯಿತು. ಅಕ್ಟೋಬರ್ ತಿಂಗಳ ಫಲಾನುಭವಿಗಳ ಸಂಖ್ಯೆ 16,611 ಕ್ಕೆ ಇಳಿಕೆಯಾಗಿದೆ. ನಿರಂತರವಾಗಿ  ಮೂರು ತಿಂಗಳ ಹಣ ಪಡೆದವರು ಕೇವಲ 16,465 ಎನ್ನುತ್ತದೆ ಇಲಾಖೆ ದಾಖಲೆಗಳು. 

    ಇದನ್ನೂ ಓದಿ: ರಾಷ್ಟ್ರೀಯ ರೋಲರ್‌ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ , ಕಂಚು ಗೆದ್ದ ಉತ್ತರ ಕನ್ನಡದ ಪ್ರತಿಭೆಗಳು

    ಇನ್ನು ಕೆಲವರ ಖಾತೆಗೆ ಆಗಸ್ಟ್ ಹಣ ಬಂದಿದ್ದು, ಸೆಪ್ಟೆಂಬರ್ ಹಣ ಜಮಾ ಆಗಿಲ್ಲ. ಆದರೆ, ಮತ್ತೆ ಅಕ್ಟೋಬರ್ ತಿಂಗಳ ಹಣ ಜಮಾ ಆಗಿದೆ. ಡಿಬಿಟಿ ಮೂಲಕ ಬಿಪಿಎಲ್ ಪಡಿತರದ ಹಣ ಜಮಾ ಆಗುತ್ತಿದೆ. ಇದೇಕೆ ಆಗುತ್ತಿಲ್ಲ ಎಂಬುದು ಹಲವರ ಪ್ರಶ್ನೆ. ಆದರೆ, ಇದ್ಯಾವ ಪ್ರಶ್ನೆಗಳಿಗೂ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.

    ವಿವಿಧ ಸಮಸ್ಯೆ

    ಮೊದಲ ತಿಂಗಳಲ್ಲಿ  ನೋಂದಣಿಯಾದ2.98 ಲಕ್ಷ ಮಹಿಳೆಯರ ಪೈಕಿ 29,927 ಯಜಮಾನಿಯರ  ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿರಲಿಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಫಲಾನುಭವಿಯನ್ನು ಸಂಪರ್ಕಿಸಿ ಯೋಜನೆ ಫಲ ಸಿಗದ  ಕಾರಣ ಪಟ್ಟಿ ಮಾಡಿತ್ತು. ಅದರ ಆಧಾರದ ಮೇಲೆ ದೋಷಗಳನ್ನು ಸರಿಪಡಿಸಲು ಕ್ರಮ ವಹಿಸಿತ್ತು. ಕೆಲವರ ಬ್ಯಾಂಕ್‌ನಲ್ಲಿ ಒಂದು ಹೆಸರು, ಆಧಾರನಲ್ಲಿ ಇನ್ನೊಂದು ಹೆಸರಿತ್ತು. ಇನ್ನು ಕೆಲವರ ಬ್ಯಾಂಕ್ ಖಾತೆ ಬಳಕೆಯಿಲ್ಲದೇ ಸ್ಥಗಿತವಾಗಿತ್ತು. ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾಗಿರಲಿಲ್ಲ. ಇನ್ನು ಹಲವರ ರೇಶನ್ ಕಾರ್ಡ್ನಲ್ಲಿ ಮಹಿಳೆಯನ್ನು ಯಜಮಾನಿ ಎಂದು ಗುರುತಿಸಿರಲಿಲ್ಲ. ಅವರೆಲ್ಲವನ್ನೂ ದುರಸ್ತಿ ಮಾಡುವ ಕಾರ್ಯ ನಡೆದಿದ್ದು, 29 ರಲ್ಲಿ ಸುಮಾರು 16 ಸಾವಿರ ಜನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ. ಆದರೆ, ತಿದ್ದುಪಡಿಗಳು ಮಹಿಳಾ ಇಲಾಖೆ ಸರ್ವರ್‌ನಲ್ಲಿ ಅಪ್‌ಡೇಟ್ ಆಗದ ಕಾರಣ ಅಂಥವರಿಗೂ ಇನ್ನೂ ಹಣ ಜಮಾ ಆಗಿಲ್ಲ.

    ಸರ್ವರ್ ಆನ್ಸರ್‌ಗೆ ಕಂಗಾಲು

    ಹೊಸ ಫಲಾನುಭವಿಯ ಹೆಸರನ್ನು ಅನುಮೋದಿಸುವುದು ಮತ್ತು ಮೃತ ಯಜಮಾನಿಯ ಹೆಸರನ್ನು ಪಟ್ಟಿಯಲ್ಲಿ ತೆಗೆದು ಹಾಕಲು ಮಾತ್ರ ತಾಲೂಕಿನ ಸಿಡಿಪಿಒ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಯಾವುದೇ ಬದಲಾವಣೆ ಅಥವಾ ಸೇರ್ಪಡೆಗೆ ಅವಕಾಶವೇ ಇಲ್ಲ. ಮೊದಲು ತಿಂಗಳ ಹಣ ಜಮಾ ಆದ ಹಲವು ಖಾತೆಗಳಿಗೆ ಎರಡನೇ ತಿಂಗಳು ಹಣ ವರ್ಗಾವಣೆಯಾಗಿಲ್ಲ. ಅದಕ್ಕೆ `ಆಧಾರ ನಾಟ್ ಸೀಡೆಡ್ ಎಂದು ವರದಿ ತೋರಿಸುತ್ತಿದೆ. ಇನ್ನು ಕೆಲವು ಚಾಲ್ತಿ ಇರುವ ಖಾತೆಗಳೇ `ಬ್ಯಾಂಕ್ ಅಕೌಂಟ್ ನಾಟ್ ವ್ಯಾಲೀಡ್’ ಎಂಬ ವರದಿ ಬರುತ್ತಿದೆ. ಎರಡೆರಡು ದಿನಕ್ಕೆ ವರದಿ ಬದಲಾಗುತ್ತಿದೆ. ಸರ್ವರ್ ನೀಡುವ ಈ ಆನ್ಸರ್‌ನಿಂದ ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದಾರೆ. ನಮ್ಮ ಸಮಸ್ಯೆಯನ್ನು ಜನರಿಗೆ ಹೇಗೆ ಹೇಳೋಣ ಎಂದು ಅರ್ಥ ಮಾಡಿಸುವುದು ಎಂಬ ಗೊಂದಲದಲ್ಲಿದ್ದಾರೆ.

    ವಾಪಸ್ ಪಡೆದ ಸರ್ಕಾರ

    ಆಗಸ್ಟ್ ತಿಂಗಳಲ್ಲಿ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ 54.10 ಕೋಟಿ ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಗೆ ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 57.29 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ ತಿಂಗಳಲ್ಲಿ 64.51 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಈಗ ಅನುದಾನವನ್ನು ಜಿಲ್ಲೆಯಿಂದ ವಾಪಸ್ ತರಿಸಿಕೊಳ್ಳಲಾಗಿದೆ. ನೇರವಾಗಿ ರಾಜ್ಯದಿಂದಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

    ಗೃಹಲಕ್ಷ್ಮಿ ಲೆಕ್ಕಾಚಾರ

    • ಯೋಜನೆ ಪಡೆಯಲು ಅರ್ಹರೆಂದು ಗುರುತಿಸಿ ಫಲಾನುಭವಿಗಳು –3,46,835
    • ಇದುವರೆಗೆ ನೋಂದಣಿ ಮಾಡಿಕೊಂಡ ಮಹಿಳೆಯರು – 3,08,201
    • ಪ್ರಾಥಮಿಕ ಫಲಾನುಭವಿ ಪಟ್ಟಿಯಲ್ಲಿರುವ ಮೃತರು- 4,419
    • ಜಿಲ್ಲೆಯಿಂದ ಬೇರೆಡೆ ವಲಸೆ ಹೋದವರು- 8,749
    • ಯೋಜನೆ ಬೇಡ ಎಂದು ತಿರಸ್ಕರಿಸಿದವರು- 218
    • ಅನಾರೋಗ್ಯದಿಂದ ಹಾಸಿಗೆ ಹಿಡಿದವರು- 135
    • ಆದಾಯ ತೆರಿಗೆ ಪಾವತಿದಾರರು –2,713
    • ರೇಶನ್ ಕಾರ್ಡ್ ಸಮಸ್ಯೆ –11,496
    • ಬ್ಯಾಂಕ್ ಕೆವೈಸಿ ಸಮಸ್ಯೆ- 2,152
    • ಬ್ಯಾಂಕ್ ಖಾತೆ ಸಮಸ್ಯೆ 422
    • ಆಧಾರ ಸಮಸ್ಯೆ 5,425


    ಗೃಹಲಕ್ಷ್ಮಿಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ರಾಜ್ಯದಿಂದಲೇ ಡಿಬಿಟಿ ಮೂಲಕ ಹಣ ಜಮಾ ಆಗುತ್ತಿದೆ. ಬ್ಯಾಂಕ್, ಆಧಾರ ಕಾರ್ಡ್ ಸಮಸ್ಯೆಗಳಿದ್ದಲ್ಲಿ ಫಲಾನುಭವಿಗಳಿಗೆ ಮಾಹಿತಿ ನೀಡಿ ಅದನ್ನು ಸರಿಪಡಿಸಲು ನಾವು ಕ್ರಮ ವಹಿಸುತ್ತಿದ್ದೇವೆ.
    ಡಾ.ಹುಲಿಗೆಮ್ಮ ಕುಕನೂರು
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts