More

    ಸಂಜೆಯಾದರೆ ಬಸ್ ಅಲಭ್ಯ

    ವಿಜಯವಾಣಿ ಸುದ್ದಿಜಾಲ ಕಡಬ

    ಸಂಜೆ 5.30ರ ಬಳಿಕ ಕುಕ್ಕೆ ಸುಬ್ರಹ್ಮಣ್ಯದಿಂದ ಕಡಬ ರಸ್ತೆಯಾಗಿ ಉಪ್ಪಿನಂಗಡಿ ಕಡೆಗೆ ಸಂಚರಿಸುವವರಿಗೆ ಕೆಎಸ್ಸಾರ್ಟಿಸಿ ಬಸ್ ಸೇವೆ ಲಭ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

    ಸುಬ್ರಹ್ಮಣ್ಯ- ಕಡಬ-ಉಪ್ಪಿನಂಗಡಿ ನಡುವೆ ಪ್ರಸ್ತುತ ಸಂಜೆ ವೇಳೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ ಕಡಬ ಮೂಲಕ ಉಪ್ಪಿನಂಗಡಿ ಕಡೆಗೆ ಸಂಜೆ 5.30ಕ್ಕೆ ಕೊನೆಯ ಬಸ್ ಸಂಚರಿಸುತ್ತದೆ. ಬಳಿಕ ಸುಬ್ರಹ್ಮಣ್ಯದಿಂದ ಕಡಬ, ಉಪ್ಪಿನಂಗಡಿ ಭಾಗಕ್ಕೆ ಯಾವುದೇ ಕೆಎಸ್ಸಾರ್ಟಿಸಿ ಬಸ್ ಸಂಚಾರ ವ್ಯವಸ್ಥೆ ಇಲ್ಲ.

    ಪ್ರಯಾಣಿಕರಿಗೆ ತೊಂದರೆ

    ಕುಕ್ಕೆ ಸುಬ್ರಹ್ಮಣ್ಯದಿಂದ ರಾಜ್ಯದ ವಿವಿಧ ಪ್ರಮುಖ ನಗರಗಳಿಗೆ ಪೂರಕ ಬಸ್ ಸೇವೆ ವ್ಯವಸ್ಥೆ ಇದೆ. ಆದರೆ ಸ್ಥಳೀಯವಾಗಿ ಪ್ರಯಾಣಿಕರು ಸಂಚರಿಸಲು ಸಂಜೆ ಬಳಿಕ ಬಸ್ ಇಲ್ಲದೆ ಸ್ಥಳೀಯ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಾರೆ. ಸಂಜೆ 5.30ರ ಬಳಿಕ ಕಡಬ ಭಾಗಕ್ಕೆ ತೆರಳುವ ಪ್ರಯಾಣಿಕರು ಸಂಚಾರಕ್ಕೆ ಕಸರತ್ತು ನಡೆಸುವ, ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಕೆಲವರು ಮರ್ದಾಳ ಮೂಲಕ ಧರ್ಮಸ್ಥಳಕ್ಕೆ ಸಂಚರಿಸುವ ಬಸ್‌ಗಳಲ್ಲಿ ಮರ್ದಾಳವರೆಗೆ ಪ್ರಯಾಣಿಸಿದರೆ, ಕೆಲವು ಬಸ್‌ಗಳಲ್ಲಿ ಪ್ರಯಾಣೀಕರು ಭರ್ತಿಯಾಗಿ ತುಂಬಿರುವುದರಿಂದ ಅದಕ್ಕೂ ಅವಕಾಶ ಇರುವುದಿಲ್ಲ.

    ಬಸ್ ಸೇವೆ ಕಲ್ಪಿಸಲು ಆಗ್ರಹ

    ಸುಬ್ರಹ್ಮಣ್ಯಕ್ಕೆ ಶಾಲಾ, ಕಾಲೇಜು, ಕೆಲಸ, ದೇವಸ್ಥಾನ ಮತ್ತಿತರ ಉದ್ದೇಶಗಳಿಂದ ಆಗಮಿಸುವವರು 5.30ರ ಬಳಿಕ ಸುಬ್ರಹ್ಮಣ್ಯದಿಂದ ಹೊರಟಲ್ಲಿ ಸಮಸ್ಯೆ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಹಾಗೂ ದಿನ ಕೂಲಿ ಕಾರ್ಮಿಕರು ಹೆಚ್ಚಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ 5.30ರ ಬಳಿಕವೂ ಹೆಚ್ಚವರಿ ಬಸ್‌ಗಳನ್ನು ಸುಬ್ರಹ್ಮಣ್ಯ-ಕಡಬ-ಉಪ್ಪಿನಂಗಡಿ ನಡುವೆ ಓಡಿಸಲು ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಹಲವು ಸಲ ಮನವಿ ಮಾಡಲಾಗಿದೆ.

    ಹೆಚ್ಚುವರಿ ಬಸ್ ಸೇವೆಗೆ ಆಗ್ರಹ

    ಪ್ರಸ್ತುತ ಮಂಗಳೂರು-ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ನಡುವೆ 16 ಬಸ್‌ಗಳು ಸಂಚರಿಸುತ್ತಿದ್ದು, ಇವುಗಳಲ್ಲಿ ಕೆಲ ಬಸ್‌ಗಳು ಸುಬ್ರಹ್ಮಣ್ಯ, ಕಡಬ, ಕಲ್ಲುಗುಡ್ಡೆಯಲ್ಲಿ ರಾತ್ರಿ ತಂಗುತ್ತದೆ. ಬಳಿಕ ಬೆಳಗ್ಗೆ ಮಂಗಳೂರು ಕಡೆಗೆ ಸಂಚಾರ ಆರಂಭಿಸುತ್ತದೆ. ಕೆಲವು ಮಂಗಳೂರಿನಲ್ಲಿ ತಂಗುತ್ತವೆ. ಆದ್ದರಿಂದ ಇರುವ ಬಸ್‌ಗಳಿಂದ ಹೆಚ್ಚವರಿ ಬಸ್ ವ್ಯವಸ್ಥೆ ಕಲ್ಪಿಸಿದಲ್ಲಿ ಸಮಸ್ಯೆ ಪರಿಹರಿಸಬಹುದು. ಇಲ್ಲವೇ ಪುತ್ತೂರು ವಿಭಾಗದವರು ಸುಬ್ರಹ್ಮಣ್ಯ-ಕಡಬ-ಉಪ್ಪಿನಂಗಡಿ ನಡುವೆ ಸಂಜೆ 5.30ರ ಬಳಿಕ ಬಸ್ ಸೇವೆ ಕಲ್ಪಿಸಬೇಕಾಗುತ್ತದೆ.

    ಸಿಬ್ಬಂದಿ ಕೊರತೆ ಕಾರಣ

    ಸುಬ್ರಹ್ಮಣ್ಯದಿಂದ ಕಡಬ, ಉಪ್ಪಿನಂಗಡಿ ಕಡೆಗೆ ಸಂಜೆ ಬಸ್ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ನಮ್ಮಲ್ಲಿ ಬಸ್‌ಗಳು ಇದ್ದರೂ ಸಿಬ್ಬಂದಿ ಕೊರತೆಯಿಂದ ಸದ್ಯಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಮಾರ್ಚ್ ವೇಳೆಗೆ ಸಿಬ್ಬಂದಿ ನಿಯೋಜನೆ ಆಗುವ ಸಾಧ್ಯತೆಯಿದ್ದು, ಆ ಸಂದರ್ಭ ಪ್ರಥಮ ಆದ್ಯತೆಯಲ್ಲಿ ಸಂಜೆ 5.30ರ ಬಳಿಕ ಸುಬ್ರಹ್ಮಣ್ಯ-ಕಡಬ-ಉಪ್ಪಿನಂಗಡಿ ನಡುವೆ ಕೆಎಸ್ಸಾರ್ಟಿಸಿ ಬಸ್ ಕಲ್ಪಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಹಿಂದೆ ಸಂಜೆ 5.30ರ ಬಳಿಕ ಸುಬ್ರಹ್ಮಣ್ಯದಿಂದ ಹೊರಡುವ ಬಸ್ ಕಡಬ-ಉಪ್ಪಿನಂಗಡಿ ಮೂಲಕ ಮಂಗಳೂರಿನವರೆಗಿತ್ತು. ಹಲವು ಸಮಯದಿಂದ ಬಸ್ ಆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕೆಲವೊಂದು ಭಾರಿ ಬಸ್ ಸಂಚರಿಸುವುದೇ ಇಲ್ಲ. ಹೀಗಾದಾಗ ಪ್ರಯಾಣಿಕರು ಬಾಡಿಗೆ ವಾಹನಗಳಲ್ಲಿ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಬಸ್ ನಂಬಿಕೊಂಡು ಸಂಚರಿಸುವ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತೊಂದರೆಯಾಗಿದೆ. ನಿತ್ಯ ನಿರಂತರವಾಗಿ ಬಸ್ ಓಡಾಟ ಮಾಡುವ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು.
    -ಚೇತನ್ ಕುಕ್ಕೇರಿ, ಆಲಂಕಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts