More

    ಸಂಪರ್ಕ ರಸ್ತೆ ಅಭಿವೃದ್ಧಿ ಮರೀಚಿಕೆ

    ವಿಜಯವಾಣಿ ಸುದ್ದಿಜಾಲ ಕಡಬ

    ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಡಬ ತಾಲೂಕಿನ ಉದನೆಯಲ್ಲಿ ಹರಿಯುತ್ತಿರುವ ಗುಂಡ್ಯ ಹೊಳೆಗೆ ಕಡಬ, ಕಲ್ಲುಗುಡ್ಡೆ, ಉದನೆ ಭಾಗಕ್ಕೆ ಸಂಪರ್ಕಿಸಲು ಸರ್ವಋತು ಸೇತುವೆ ಹಲವು ವರ್ಷಗಳ ಬೇಡಿಕೆ ಎರಡು ವರ್ಷಗಳ ಹಿಂದೆ ಈಡೇರಿದ್ದರೂ ಸಂಪರ್ಕ ರಸ್ತೆ ಅಭಿವೃದ್ಧಿ ಇನ್ನೂ ನಡೆದಿಲ್ಲ..!

    ಒಂದೊಮ್ಮೆ ಈ ಹೊಳೆ ದಾಟಲು ದೋಣಿಯ ಆಶ್ರಯದಲ್ಲಿದ್ದ ಜನರು, ತೂಗುಸೇತುವೆಯ ಪ್ರಯೋಜನ ಪಡೆದು ಬಳಿಕ ಬಹುದಿನಗಳ ಬೇಡಿಕೆಯ ಸರ್ವಋತು ಸೇತುವೆ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು 2022ರ ಫೆಬ್ರವರಿಯಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಇದಾಗಿ ಎರಡು ವರ್ಷಗಳಾದರೂ ಸಂಪರ್ಕ ರಸ್ತೆ ಅಭಿವೃದ್ಧಿ, ಬಸ್ ಸೇವೆ ಇನ್ನೂ ಈ ಭಾಗಕ್ಕೆ ಲಭ್ಯವಾಗಿಲ್ಲ.

    Udane Sethuve
    ಉದನೆಯಲ್ಲಿ ನಿರ್ಮಾಣಗೊಂಡಿರುವ ಸರ್ವಋತು ಸೇತುವೆ.

    ಸೇತುವೆ ನಿರ್ಮಾಣದ ಅನುದಾನದಲ್ಲಿ ಸೇತುವೆಯ ಎರಡೂ ಭಾಗದಲ್ಲೂ ಅಲ್ಪ ರಸ್ತೆ ಅಭಿವೃದ್ಧಿ ಹೊರತುಪಡಿಸಿ ಬೇರಾವುದೇ ರಸ್ತೆ ಅಭಿವೃದ್ಧಿ ಇಲ್ಲಿ ನಡೆದಿಲ್ಲ. ಉದನೆಯಿಂದ ಕಲ್ಲುಗುಡ್ಡೆ ಸಂಪರ್ಕಿಸುವ 3-4 ಕಿ.ಮೀ. ರಸ್ತೆ ಮಣ್ಣಿನ ರಸ್ತೆಯಾಗಿದ್ದು, ಅಭಿವೃದ್ಧಿ ಕಂಡಿಲ್ಲ. ಕೆಲವೆಡೆ ಡಾಂಬರು ಆಗಿದ್ದರೂ ಪ್ರಸ್ತುತ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ ಸಂಚಾರಕ್ಕೆ ತೊಡಕಾಗಿದೆ. ಆದಷ್ಟು ಬೇಗ ಉದನೆ- ಕಲ್ಲುಗುಡ್ಡೆ ರಸ್ತೆ ಅಭಿವೃದ್ಧಿ ಆದಲ್ಲಿ ಉದನೆ, ಪುತ್ತಿಗೆ ಭಾಗದ ಜನರಿಗೆ ಕಲ್ಲುಗುಡ್ಡೆ, ಕಡಬ ಸಂಪರ್ಕಕ್ಕೆ ಸುಲಭ ದಾರಿಯಾಗಲಿದೆ. ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಡಮಂಗಲ- ಹೊಸ್ಮಠ- ಕಲ್ಲುಗುಡ್ಡೆ- ಉದನೆ- ಶಿಬಾಜೆ ಸಂಪರ್ಕ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉದನೆ, ಶಿರಾಡಿ, ಗುಂಡ್ಯ ಭಾಗಗಳು ಕಡಬ ತಾಲೂಕು ವ್ಯಾಪ್ತಿಯಲ್ಲಿದ್ದು ಈ ಭಾಗದ ಜನರಿಗೆ ಕಡಬಕ್ಕೆ ತೆರಳಲು ಉದನೆ ಸೇತುವೆ ಆದ ಬಳಿಕ ಕಲ್ಲುಗುಡ್ಡೆ ಮೂಲಕ ಕಡಬಕ್ಕೆ ಬಲು ಹತ್ತಿರದ ದಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಉದನೆ ಕಲ್ಲುಗುಡ್ಡೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೂ ಸಂಪರ್ಕ ಸಾಧ್ಯವಾಗಲಿದೆ.

    ಬಸ್ ಸೇವೆಗೂ ಒತ್ತಾಯ

    ಪ್ರಸ್ತುತ ರಸ್ತೆ ಅಭಿವೃದ್ಧಿ ಆಗದೇ ವಾಹನಗಳ ಓಡಾಟ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ರಸ್ತೆ ಅಭಿವೃದ್ಧಿ ಆದಲ್ಲಿ ಜನರ, ವಾಹನ ಓಡಾಟವೂ ಹೆಚ್ಚಾಗಲಿದ್ದು, ಈ ವೇಳೆ ಉದನೆ- ಕಲ್ಲುಗುಡ್ಡೆ- ಕಡಬ, ಉದನೆ- ಕಲ್ಲುಗುಡ್ಡೆ- ಸುಬ್ರಹ್ಮಣ್ಯ ನಡುವೆ ಕೆಎಸ್‌ಆರ್‌ಟಿಸಿ ಬಸ್ ಓಡಾಟಕ್ಕೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

    ಈಗಾಗಲೇ ಎಡಮಂಗಲ- ಪಾಲೋಳಿ- ಹೊಸ್ಮಠ- ಪೇರಡ್ಕ- ಗೋಳಿಯಡ್ಕ- ಕಲ್ಲುಗುಡ್ಡೆ- ಉದನೆ- ಶಿಬಾಜೆ ಸಂಪರ್ಕಿಸುವ ಈ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಲ್ಲಿ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
    -ಅಮರನಾಥ್, ಇಇ, ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts