

ಚೆನ್ನೈ: ವಿಶ್ವ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ಗೆ ದಿನಗಣನೆ ಆರಂಭವಾಗಿದ್ದು, 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಮಾರ್ಚ್ 22ರಂದು ಶುರುವಾಗಲಿರುವ ಟೂರ್ನಿಯಲ್ಲಿ ಈ ಬಾರಿ ಗಾಯದ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಪ್ರಮುಖ ಆಟಗಾರರು ಗೈರಾಗಿದ್ದಾರೆ.
ಇದೀಗ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗಾಯದ ಸಮಸ್ಯೆಯಿಂದ ಹೊರತಾಗಿಲ್ಲ ಎಂದು ತಿಳಿದು ಬಂದಿದೆ. ಆರ್ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಸ್ಟಾರ್ ಆಟಗಾರರಿಬ್ಬರು ಅಲಭ್ಯರಾಗಲಿದ್ದು, ಇದು ತಂಡದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಕಾನ್ವೆ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಐಪಿಎಲ್ನ ಮೊದಲಾರ್ಧದಲ್ಲಿ ಅವರು ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗಿದೆ. ಚೆನ್ನೈ ತಂಡದ ವೇಗದ ಬೌಲರ್ ಶ್ರೀಲಂಕಾ ವೇಗಿ ಮಥೀಶ ಪತಿರಾಣ ಕೂಡ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪತಿರಾಣ ಕೂಡ ಮೊದಲಾರ್ಧದ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಕಣಕ್ಕಿಳಿಯುವುದಿಲ್ಲ ಎಂದು ತಿಳಿದು ಬಂದಿದೆ. ಈ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಇಬ್ಬರ ಬದಲಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಮಾರ್ಚ್ 22ರಂದು ತಿಳಿದು ಬರಲಿದೆ.