More

    ಪಾಲಿಕೆಗೆ ನೌಕರರ ಕಾಯಂಗೊಳಿಸಲು 3 ಲಕ್ಷ ರೂ. ಲಂಚ: ಆಡಿಯೋದಲ್ಲಿ ವಿಶೇಷ ಆಯುಕ್ತರ ಹೆಸರು ಬಳಕೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದಂತೆ 13 ವರ್ಷದಿಂದ ಮೂಲ ವೇತನ ಪರಿಷ್ಕರಿಸಿ ನೀಡಲಾಗುತ್ತಿದ್ದು, ಕಾರ್ಮಿಕರಿಂದ ತಲಾ 3 ಲಕ್ಷ ರೂ. ಪಡೆಯುವ ಕುರಿತು ಆಡಿಯೋ ವೈರಲ್ ಆಗಿದೆ.

    ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 2007ರಲ್ಲಿ ಒಂದು 1 ನಗರಸಭೆ ಮತ್ತು 7 ಪಟ್ಟಣ ಪಂಚಾಯಿತಿ ಮತ್ತು 110 ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ಸೇರ್ಪಡೆ ಮಾಡಲಾಗಿತ್ತು. ಇದರಲ್ಲಿ 110 ಹಳ್ಳಿಗಳ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರರನ್ನು ಬಿಬಿಎಂಪಿ ಅವರು ಕೆಲಸಕ್ಕೆ ಸೇರಿದ ದಿನವನ್ನು ಪರಿಗಣಿಸಿ 2020ರಲ್ಲಿ ಕಾಯಂಗೊಳಿಸಿ ಮೂಲ ವೇತನ ಪರಿಷ್ಕರಣೆ ಮಾಡ ಹೆಚ್ಚಿನ ವೇತನ ನೀಡಲು ಮುಂದಾಗಿದೆ. ಇದರಿಂದ ಪ್ರತಿ ನೌಕರರಿಗೆ ತಲಾ 10 ರಿಂದ 15 ಲಕ್ಷ ರೂ. ಹಣ ಬರುತ್ತಿದೆ. ಹೀಗಾಗಿ, ಹಣ ಪಾವತಿಯಾದ ಕೂಡಲೆ 3 ಲಕ್ಷ ರೂ. ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತ ಆಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಆಡಳಿತ ವಿಶೇಷ ಆಯುಕ್ತರ ಹೆಸರು ತಳುಕು:
    ಪಾಲಿಕೆಯಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ 534 ನೌಕರರನ್ನು ಕಾಯಂ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಆಡಿಯೋದಲ್ಲಿ ನೌಕರರು ನೀಡುವ 3 ಲಕ್ಷ ರೂ. ಹಣವನ್ನು ಆಡಳಿತ ವಿಭಾಗದ ವಿಶೇಷ ಆಯುಕ್ತ ಡಾ. ದಯಾನಂದ (ಐಎಎಸ್) ಹಾಗೂ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‌ರಾಜ್ ಅವರಿಗೆ ಕೊಡಬೇಕು ಎಂದು ಹೇಳಿರುವುದು ಬಹಿರಂಗವಾಗಿದೆ. ಈ ಹಣ ಕೊಡದಿದ್ದಲ್ಲಿ ಅವರ ಹೆಸರನ್ನು ಕೈಬಿಡಲಾಗುತ್ತದೆ ಎಂದು ತಿಳಿಸುವ ಮೂಲಕ ಹಣ ವಸೂಲಿಗೆ ಸಂಚು ರೂಪಿಸಲಾಗಿದೆ. ಆದರೆ, ಆಡಿಯೋದಲ್ಲಿ ಮಾತನಾಡಿರುವ ಧ್ವನಿ ಯಾರದ್ದು ಎಂಬುದು ತಿಳಿದುಬಂದಿಲ್ಲ.

    ವಿಶೇಷ ಆಯುಕ್ತರಿಂದ ದೂರು:
    ನೌಕರರನ್ನು ಕಾಯಂ ಮಾಡಿಕೊಳ್ಳುವ ಕುರಿತ ಪ್ರಕರಣದಲ್ಲಿ ಹಣ ಬೇಡಿಕೆಯಿಟ್ಟು ತಮ್ಮ ಹೆಸರು ಬಳಕೆ ಮಾಡಿಕೊಂಡಿದ್ದ ಆಡಿಯೋ ವಿಶೇಷ ಆಯುಕ್ತ ದಯಾನಂದ ಅವರಿಗೂ ತಲುಪಿದೆ. ವಾಟ್ಸ್ ಆ್ಯಪ್‌ನಲ್ಲಿ ಆಡಿಯೋ ಬಂದ ಮೊಬೈಲ್ ಸಂಖ್ಯೆಯ ವ್ಯಕ್ತಿ ಮತ್ತು ಇದನ್ನು ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಮ್, ಬಿಎಂಟಿಎ್ ಮತ್ತು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಬಿಬಿಎಂಪಿ ಮತ್ತು ತನ್ನ ಹೆಸರನ್ನು ಬಳಕೆ ಮಾಡಿಕೊಳ್ಳುವ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಮನವಿ ಮಾಡಿದ್ದಾರೆ.

    ಕಾಯಂ ನೇಮಕಾತಿಗೆ ಮಾನದಂಡವೇನು?
    ಉಮಾದೇವಿ ಪ್ರಕರಣದಡಿ ಬಿಬಿಎಂಪಿಗೆ ಸೇರಿದ 1 ನಗರಸಭೆ, 7 ಪಟ್ಟಣ ಪಂಚಾಯಿತಿ ಖಾಲಿ ಹುದ್ದೆಗಳಿಗೆ ನೇಮಕಗೊಂಡು 10 ವರ್ಷ ದೋಷವಿಲ್ಲದೆ ಸೇವೆ ಮಾಡಿದ ನೌಕರರನ್ನು ಕಾಯಂ ಮಾಡಿಕೊಳ್ಳಲಾಗಿದೆ. 364 ಡಿಡಿ ಗ್ರೂಪ್ ನೌಕರರನ್ನು ಜಿಲ್ಲಾಧಿಕಾರಿ, ಬಿಲ್ ಕಲೆಕ್ಟರ್, ಕಂದಾಯ ಅಧಿಕಾರಿ, ಕಂಪ್ಯೂಟರ್ ಆಪರೇಟರ್ ಹಾಗೂ ಇಂಜಿನಿಯರ್‌ಗಳನ್ನು ನಗರಾಭಿವೃದ್ಧಿ ಇಲಾಖೆಯ ಸಮಿತಿ ಕಾಯಂಗೊಳಿಸಿತ್ತು. ಆದರೆ, ಈಗ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರರನ್ನು ಯಾವ ಮಾನದಂಡದ ಆಧಾರದಲ್ಲಿ ಕಾಯಂ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಇದಕ್ಕೆ ಅವಕಾಶಗಳೇ ಇಲ್ಲದಿದ್ದರೂ ಏಕಾಏಕಿ ಕಾಯಂಗೊಳಿಸುವುದರ ಹಿಂದೆ ಹುನ್ನಾರ ಕಂಡುಬರುತ್ತಿದೆ. ಜತೆಗೆ, ನೌಕರರಿಗೆ ಮೂಲ ವೇತನ ಪರಿಷ್ಕರಣೆ ಮಾಡಿ 60 ಕೋಟಿ ರೂ. ವೆಚ್ಚ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

    500+ ಚಿತ್ರಮಂದಿರಗಳಿಗೆ ಬೀಗಮುದ್ರೆ! ಹಳೆಯ ಚಿತ್ರಗಳನ್ನು ನೋಡೋರಿಲ್ಲ; ಹೊಸ ಚಿತ್ರಗಳು ಬರುತ್ತಿಲ್ಲ

    ಇನ್ನಷ್ಟು ಎಚ್ಚರಿಕೆ ಅಗತ್ಯ; ರಾಜಕೀಯ ಪಕ್ಷಗಳು ವಿವೇಚನೆಯಿಂದ ನಡೆದುಕೊಳ್ಳಬೇಕು

    ಆಸೆ, ಆಮಿಷಕ್ಕಾಗಿ ಮತಾಂತರ ಸಲ್ಲ; ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts