More

    ಇನ್ನಷ್ಟು ಎಚ್ಚರಿಕೆ ಅಗತ್ಯ; ರಾಜಕೀಯ ಪಕ್ಷಗಳು ವಿವೇಚನೆಯಿಂದ ನಡೆದುಕೊಳ್ಳಬೇಕು

    ‘ಒಮಿಕ್ರಾನ್ ರೂಪದಲ್ಲಿ ಹೊಸ ಸವಾಲು ಎದುರಾಗಿದೆ. ಆದರೆ, ಕರೊನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಕುರಿತಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆಯೂ ಮಾತನಾಡಿದ್ದಾರೆ. ಗುರುವಾರ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ ಅವರು, ‘ಕರೊನಾ ಸಂಬಂಧಿತ ನಿಯಮಗಳನ್ನು ಜಾರಿ ಮಾಡುವಾಗ ಜನರ ದೈನಂದಿನ ಜೀವನ ಮತ್ತು ಆರ್ಥಿಕತೆಯನ್ನು ಗಮನದಲ್ಲಿ ಇರಿಸಿಕೊಳ್ಳಿ, ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧವಾಗಿ ಇರಿಸಿ’ ಎಂದು ಸೂಚಿಸಿದ್ದಾರೆ. ಈಗಾಗಲೇ ಹಲವು ಹಂತದ ಲಾಕ್​ಡೌನ್​ನಿಂದ ಬಸವಳಿದು ಹೋಗಿರುವ ಜನಸಾಮಾನ್ಯರು ಮತ್ತೊಂದು ಲಾಕ್​ಡೌನ್ ಎದುರಿಸಲು ಸಿದ್ಧರಿಲ್ಲ. ಹಲವು ರಂಗಗಳು ಇನ್ನೂ ನಷ್ಟದ ಕೂಪದಿಂದ ಮೇಲೆ ಬರಲಾಗದೆ, ಸಂಕಷ್ಟಕ್ಕೆ ಸಿಲುಕಿವೆ. ಹೀಗಿರುವಾಗ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜತೆಗೆ, ಜನರ ಜೀವನವು ಬಾಧಿತವಾಗದಂತೆ ಸಮತೋಲನದ ಹಾದಿಯನ್ನು ಕಂಡುಕೊಳ್ಳಬೇಕಿದೆ.

    ಅಮೆರಿಕದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 14 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ ಈ ಸಂಖ್ಯೆ ಪ್ರಸಕ್ತ 2.50 ಲಕ್ಷದ ಆಸುಪಾಸಿನಲ್ಲಿದ್ದರೂ ಏಪ್ರಿಲ್ ಹೊತ್ತಿಗೆ ಏಳೆಂಟು ಲಕ್ಷಕ್ಕೆ ಏರುವ ಸಾಧ್ಯತೆ ಇದೆ ಎಂಬುದು ತಜ್ಞರ ಅಂದಾಜು. ಅಂದರೆ, ಮುಂದಿನ ದಿನಗಳು ಖಂಡಿತವಾಗಿಯೂ ಸವಾಲಿನಿಂದ ಕೂಡಿರಲಿವೆ ಮತ್ತು ಆ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂಬುದು ನಿರ್ವಿವಾದ. ಆದರೆ, ಜನರಿಗೆ ಅರಿವು ತುಂಬಬೇಕಾದ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರೇ ಕರೊನಾ ವಿಷಯದಲ್ಲಿ ಬೇಜವಾಬ್ದಾರಿಯುತ ವರ್ತನೆ ತೋರುತ್ತಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಮೇಕೆದಾಟು ವಿಷಯವಾಗಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ ಕುರಿತು ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ‘ಜನರ ಹಿತಕ್ಕಾಗಿ’ ಎಂದು ಕೈಗೊಳ್ಳುವ ಇಂಥ ಕ್ರಮಗಳು ಜನರ ಪ್ರಾಣಕ್ಕೆ ಕುತ್ತು ತರುತ್ತವೆ ಎಂಬ ಸಾಮಾನ್ಯ ವಿವೇಚನೆ ರಾಜಕೀಯ ಪಕ್ಷಗಳಿಗೆ ಬೇಡವೆ? ಎಲ್ಲ ಸಂದರ್ಭಗಳಲ್ಲೂ ರಾಜಕೀಯ ಲಾಭವೇ ಮುಖ್ಯವಾಗಬೇಕೆ? ನ್ಯಾಯಾಲಯ ಹೇಳಿದ ಬಳಿಕವೇ ಪಾದಯಾತ್ರೆ ನಿಲ್ಲಿಸಲಾಗಿದೆ. ಆದರೆ, ಪರಿಸ್ಥಿತಿಯ ಗಂಭೀರತೆ ಅರಿತು ರಾಜಕೀಯ ನಾಯಕರು ಈ ನಿರ್ಧಾರವನ್ನು ಮುಂಚೆಯೇ ತೆಗೆದುಕೊಳ್ಳಬಹುದಿತ್ತು. ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಕರೊನಾ ಸಂಬಂಧಿತ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ, ನಿರ್ಲಕ್ಷಿಸಿದರೆ ಜನಸಾಮಾನ್ಯರು ಹೇಗೆ ತಾನೆ ಅನುಸರಿಸಿಯಾರು?

    ಐದು ರಾಜ್ಯಗಳಲ್ಲಿ ಚುನಾವಣೆಯ ಭರಾಟೆ ಜೋರಾಗಿದೆ. ಯಾವುದೇ ಕಾರಣಕ್ಕೂ ಚುನಾವಣೆಯ ಪ್ರಚಾರ ಕಾರ್ಯ ಕರೊನಾ ಹರಡುವಿಕೆಯ ಮಾಧ್ಯಮವಾಗಬಾರದು. ಜನಜಂಗುಳಿ ಸೃಷ್ಟಿಸಿ ರ್ಯಾಲಿ, ಮೆರವಣಿಗೆ ಮಾಡುವಂಥ ದುಸ್ಸಾಹಸಗಳಿಗೆ ಕೈಹಾಕಬಾರದು. ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾದ ಸಮಯವಿದು. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ, ಲಸಿಕೆ ಅಭಿಯಾನವನ್ನು ತೀವ್ರಗೊಳಿಸುವ ಮತ್ತು ಸುರಕ್ಷತಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಕರೊನಾ ಮೂರನೇ ಅಲೆಯ ವಿರುದ್ಧ ಪ್ರಬಲವಾಗಿ ಹೋರಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts