More

    500+ ಚಿತ್ರಮಂದಿರಗಳಿಗೆ ಬೀಗಮುದ್ರೆ! ಹಳೆಯ ಚಿತ್ರಗಳನ್ನು ನೋಡೋರಿಲ್ಲ; ಹೊಸ ಚಿತ್ರಗಳು ಬರುತ್ತಿಲ್ಲ

    ವರ್ಷದ ಆರಂಭವೇ ಬಹಳ ನೀರಸವಾಗಿದೆ. ಅದರಲ್ಲೂ ಸಂಕ್ರಾಂತಿಯ ಸಂದರ್ಭದಲ್ಲಿ ಚಿತ್ರರಂಗ ಹುರುಪಿನಿಂದ ಕೂಡಿರುತ್ತದೆ. ಹಬ್ಬದ ಸಮಯವಾದ್ದರಿಂದ ಒಂದಿಷ್ಟು ದೊಡ್ಡ ಚಿತ್ರಗಳು ಪೈಪೋಟಿ ನಡೆಸಿರುತ್ತವೆ. ಆದರೆ, ಈ ವರ್ಷ ಅದೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಕರೊನಾ ಭಯದಿಂದ ಹೊಸ ಚಿತ್ರಗಳ ಬಿಡುಗಡೆ ಇರಲಿ, ಚಿತ್ರಮಂದಿರಗಳೇ ಬಂದ್ ಆಗುವ ಸ್ಥಿತಿ ಬಂದಿದೆ. ಇಂದಿನಿಂದ ರಾಜ್ಯದ 500ಕ್ಕೂ ಹೆಚ್ಚು ಚಿತ್ರಮಂದಿರಗಳು ಬಂದ್ ಆಗಲಿವೆ ಎಂದು ಹೇಳಲಾಗುತ್ತಿದೆ.

    |ಚೇತನ್ ನಾಡಿಗೇರ್ ಬೆಂಗಳೂರು

    ರಾಜ್ಯದಲ್ಲಿ ರಾತ್ರಿ ಕರ್ಫ್ಯೂ, ಡಿಸೆಂಬರ್​ನಿಂದಲೇ ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಅನುಮತಿ ನೀಡಿ ಒಂದು ವಾರವಾಗಿದೆ. ಡಿ. 31ಕ್ಕೆ ಬಿಡುಗಡೆಯಾಗಿದ್ದೇ ಕೊನೆ. ಆ ನಂತರ ಯಾವೊಂದು ಹೊಸ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ. ಈಗಾಗಲೇ ಕೋವಿಡ್ ಕೇಸ್​ಗಳ ಸಂಖ್ಯೆ ಹೆಚ್ಚಾಗಿದ್ದು, ಫೆಬ್ರವರಿಯಲ್ಲಿ ಕರೊನಾ ಮೂರನೆಯ ಅಲೆ ಉತ್ತುಂಗಕ್ಕೇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಿರುವಾಗ, ಕಳೆದ 15 ದಿನಗಳಿಂದ ಯಾವುದೇ ಹೊಸ ಚಿತ್ರ ಇಲ್ಲ. ‘ಬಡವ ರಾಸ್ಕಲ್’ ಸೇರಿ ಕಳೆದ ತಿಂಗಳು ಬಿಡುಗಡೆಯಾದ ಒಂದೆರಡು ಚಿತ್ರಗಳನ್ನೇ ಇದುವರೆಗೂ ಪ್ರದರ್ಶನ ಮಾಡಲಾಗುತ್ತಿದೆ. ಹೊಸ ಚಿತ್ರಗಳು ಬರದೆಯೇ ಇದನ್ನೇ ಇನ್ನಷ್ಟು ದಿನಗಳ ಕಾಲ ಓಡಿಸಿಕೊಂಡಿರುವುದಕ್ಕೆ ಸಾಧ್ಯವೇ ಇಲ್ಲ. ಹಾಗಂತ ಇನ್ನೊಂದೆರಡು ತಿಂಗಳ ಕಾಲ ಹೊಸ ಚಿತ್ರಗಳು ಬಿಡುಗಡೆಯಾಗುವಂತೆಯೂ ಕಾಣುತ್ತಿಲ್ಲ. ಶೇ.50ರಷ್ಟು ಹಾಜರಾತಿ ಮತ್ತು ರಾತ್ರಿ ಕರ್ಫ್ಯೂನಿಂದ ದೊಡ್ಡ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ನಿರ್ವಪಕರು ಹೆದರುತ್ತಿದ್ದಾರೆ. ಒಂದಿಷ್ಟು ಸಣ್ಣ ಚಿತ್ರಗಳು ಬಿಡುಗಡೆಯಾದರೂ, ಆ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೂ ಆಸಕ್ತಿ ಇಲ್ಲ, ಚಿತ್ರಮಂದಿರದವರಿಗೂ ಆಸಕ್ತಿ ಇಲ್ಲ. ಹಾಗಾಗಿ, ಬೆಂಗಳೂರು, ಮೈಸೂರು ಮುಂತಾದ ದೊಡ್ಡ ನಗರಗಳನ್ನು ಹೊರತುಪಡಿಸಿದರೆ, ರಾಜ್ಯದ ಬಹುತೇಕ ಚಿತ್ರಮಂದಿರಗಳಿಗೆ ಬೀಗ ಬೀಳಲಿವೆ. ಇನ್ನು, ಉಳಿದ ಚಿತ್ರಮಂದಿರದವರು ಚಿತ್ರಪ್ರದರ್ಶನವನ್ನು ಮುಂದುವರಿಸುವ ಯೋಚನೆಯಲ್ಲಿದ್ದಾರೆ. ಏಕೆಂದರೆ, ಬಂದ್ ಮಾಡಿದರೆ ಮತ್ತೆ ರಿಪೇರಿಗೆ ಇನ್ನಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಅದರ ಬದಲು ಚಿತ್ರಪ್ರದರ್ಶನ ಮುಂದುವರಿಸಿದರೆ, ಆಗ ಒಂದಿಷ್ಟಾದರೂ ಕಲೆಕ್ಷನ್ ಆಗುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರಮಂದಿರಗಳ ನಿರ್ವಹಣೆಯೂ ಆಗುತ್ತದೆ ಎಂಬ ದೃಷ್ಟಿಯಿಂದ ಕೆಲವರು ಚಿತ್ರಪ್ರದರ್ಶನ ಮುಂದುವರಿಸುತ್ತಿದ್ದಾರೆ.

    200 ಚಿತ್ರಮಂದಿರಗಳಿಗೆ ಖಾಯಂ ಬೀಗ?: ಈ ಮೂರನೆಯ ಅಲೆ ಮುಗಿಯುವ ಹೊತ್ತಿಗೆ 200 ಚಿತ್ರಮಂದಿರಗಳಿಗೆ ಖಾಯಮ್ಮಾಗಿ ಬೀಗ ಬಿದ್ದರೆ ಆಶ್ಚರ್ಯವಿಲ್ಲ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಈ ಮೂರನೆಯ ಅಲೆ ಮುಗಿಯುವಷ್ಟರಲ್ಲಿ ರಾಜ್ಯಾದ್ಯಂತ 200 ಚಿತ್ರಮಂದಿರಗಳು ಮುಚ್ಚುವ ಸಾಧ್ಯತೆ ಇದೆ. ಆದರೆ, ಯಾರೂ ಸಹ ನಾಳೆಯೇ ಮುಚ್ಚಲಿದ್ದೇವೆ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ವ್ಯಾಪಾರ ಬದಲಿಸುವುದಕ್ಕೆ ಅವರಿಗೂ ಒಂದಿಷ್ಟು ಸಮಯ ಬೇಕಾಗುತ್ತದೆ. ಆ ಜಾಗದಲ್ಲಿ ಏನು ಮಾಡಬಹುದು ಎಂದು ಅವರು ಮೊದಲು ಅರಿತುಕೊಳ್ಳಬೇಕು. ಚಿತ್ರಮಂದಿರಗಳನ್ನು ಬಂದ್ ಮಾಡಿದರೂ, ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ ಮತ್ತು ನಂತರ ತೀರ್ಮಾನ ಮಾಡುತ್ತಾರೆ. ಒಟ್ಟಾರೆ ಎಲ್ಲವೂ ಸರಿ ಹೋಗುವಷ್ಟರಲ್ಲಿ ಕರ್ನಾಟಕದಲ್ಲಿ ಚಿತ್ರಮಂದಿರಗಳ ಸಂಖ್ಯೆ ಇನ್ನಷ್ಟು ಕಡಿಮೆಯಾದರೆ ಆಶ್ಚರ್ಯವಿಲ್ಲ’ ಎನ್ನುತ್ತಾರೆ ಅವರು. ಈಗಾಗಲೇ ಒಟಿಟಿಯಿಂದ ಚಿತ್ರಮಂದಿರಗಳಿಗೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರ ಮೇಲೆ ಮೂರನೆಯ ಅಲೆಯ ಬರೆ ಬೇರೆ. ಇದೆಲ್ಲ ಮುಗಿಯುವ ಹೊತ್ತಿಗೆ ಎಷ್ಟು ಚಿತ್ರ ಮಂದಿರಗಳು ಮೈನಸ್ ಆಗಿರುತ್ತವೆ ಎಂದು ಗೊತ್ತಾಗಬೇಕಿದ್ದರೆ, ಆರು ತಿಂಗಳಾದರೂ ಬೇಕು.

    ಆಚಾರ್ಯ, ವಿಕ್ರಾಂತ್ ಮುಂದಕ್ಕೆ?: ಈಗಾಗಲೇ ‘ಆರ್​ಆರ್​ಆರ್’ ಮತ್ತು ‘ರಾಧೆ ಶ್ಯಾಮ್ ಚಿತ್ರಗಳು ಮುಂದೂಡಲ್ಪಟ್ಟಿವೆ. ಈಗ ಇನ್ನಷ್ಟು ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಪ್ರಮುಖವಾಗಿ ಫೆಬ್ರವರಿಯಲ್ಲಿ ಕರೊನಾ ಮೂರನೆಯ ಅಲೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿರುವುದರಿಂದ, ಆ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿರಂಜೀವಿ ಅಭಿನಯದ ‘ಆಚಾರ್ಯ’ ಮತ್ತು ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆಯಾಗುತ್ತವಾ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಇವೆರೆಡೇ ಚಿತ್ರಗಳೇಕೆ? ಏಪ್ರಿಲ್ ಒಂದರಂದು ನಿಗದಿಯಾಗಿರುವ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಸಹ ಮುಂದೆ ಹೋಗಬಹುದು ಎಂಬ ಗುಸುಗುಸು ಈಗಾಗಲೇ ಶುರುವಾಗಿದೆ. ಆದರೆ, ಯಾವ ಚಿತ್ರತಂಡಗಳು ಸದ್ಯಕ್ಕೆ ಯಾವ ಘೋಷಣೆಯನ್ನೂ ಮಾಡದೆ, ಕಾದು ನೋಡುವ ತಂತ್ರ ಅನುಸರಿಸುತ್ತಿವೆ.

    ಕನ್ನಡದ ಮೊದಲ ಚಿತ್ರ ‘ನಮ್ಮ ಭಾರತ’: ಎಲ್ಲರೂ ಚಿತ್ರ ಬಿಡುಗಡೆಗೆ ಹೆದರುತ್ತಿರುವಾಗಲೇ, ವರ್ಷದ ಮೊದಲ ಕನ್ನಡ ಚಿತ್ರವಾಗಿ ‘ನಮ್ಮ ಭಾರತ’ ಇಂದು ರಾಜ್ಯದ ಕೆಲವೆಡೆ ಬಿಡುಗಡೆಯಾಗುತ್ತಿದೆ. ದೇಶಭಕ್ತಿ ಸಾರುವ ಈ ಚಿತ್ರವನ್ನು ಕುಮಾರಸ್ವಾಮಿ (ಕೆ.ಆರ್. ನಗರ) ನಿರ್ದೇಶಿಸಿದ್ದಾರೆ. ಇದೊಂದು ಮಕ್ಕಳ ಚಿತ್ರವಾಗಿದ್ದು, ದೇಶದ ಪ್ರಜೆಗಳಾಗಿ ನಮ್ಮೆಲ್ಲರ ಜವಾಬ್ದಾರಿ ಏನು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.

    ಸಂಕ್ರಾಂತಿಗಿಲ್ಲ ಸಿನಿಮಾ ಸಂಭ್ರಮ: ಹಾಗೆ ನೋಡಿದರೆ, ತೆಲುಗು ಮತ್ತು ತಮಿಳು ಚಿತ್ರರಂಗಗಳಿಗೆ ಹೋಲಿಸಿದರೆ ಸಂಕ್ರಾಂತಿ ಹಬ್ಬ, ಕನ್ನಡ ಚಿತ್ರರಂಗಕ್ಕೆ ಅಷ್ಟೇನೂ ದೊಡ್ಡ ಹಬ್ಬವಲ್ಲ. ವರಮಹಾಲಕ್ಷ್ಮೀ, ಗಣಪತಿ, ವಿಜಯದಶಮಿ ಮತ್ತು ದೀಪಾವಳಿಯ ಹಬ್ಬಗಳ ಸಂದರ್ಭದಲ್ಲಿ ಇರುವಂತಹ ಪೈಪೋಟಿ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಇರುವುದೂ ಇಲ್ಲ. ಮೇಲಾಗಿ, ಈ ಸಮಯದಲ್ಲಿ ತೆಲುಗು ಮತ್ತು ತಮಿಳಿನ ದೊಡ್ಡ ಚಿತ್ರಗಳು ಬಿಡುಗಡೆಯಾಗುವುದರಿಂದ, ಕನ್ನಡದ ದೊಡ್ಡ ಚಿತ್ರಗಳ್ಯಾವವೂ ಆ ಸಂದರ್ಭದಲ್ಲಿ ಬಿಡುಗಡೆ ಆಗುವುದೂ ಇಲ್ಲ. ಅದೇ ತಮಿಳು ಮತ್ತು ತೆಲುಗಿನಿಂದ ಒಂದಾದರೂ ದೊಡ್ಡ ಚಿತ್ರ ಬಿಡುಗಡೆಯಾಗುವುದನ್ನು ಗಮನಿಸಬಹುದು. ಕಳೆದ ಸಂಕ್ರಾಂತಿಯಂದು ವಿಜಯ್ ‘ಮಾಸ್ಟರ್’ ಬಿಡುಗಡೆಯಾಗಿತ್ತು. ಅದರ ಹಿಂದಿನ ವರ್ಷ ರಜನಿಕಾಂತ್ ‘ದರ್ಬಾರ್’ ಬಂದಿತ್ತು. 2019ರಲ್ಲಿ ರಜನಿ ‘ಪೆಟ್ಟಾ’ ಮತ್ತು ಅಜಿತ್ ‘ವಿಶ್ವಾಸಂ’ ಚಿತ್ರಗಳು ಪೈಪೋಟಿ ನಡೆಸಿದ್ದವು. ತೆಲುಗಿನಲ್ಲೂ ಅಷ್ಟೇನೂ ಪೈಪೋಟಿ ಇರಲಿಲ್ಲ. 2020ರಲ್ಲಿ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕ್ಕೆವರು’ ಮತ್ತು ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂಲೋ’ ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನು, 2019ರಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ಎನ್​ಟಿಆರ್ – ಕಥಾನಾಯಕುಡು’ ಮತ್ತು ರಾಮ್ರಣ್ ತೇಜ ‘ವಿನಯ ವಿಧೇಯ ರಾಮ’ ಚಿತ್ರಗಳು 2 ದಿನಗಳ ಅಂತರದಲ್ಲಿ ಪೈಪೋಟಿ ನಡೆಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts