More

    ಆಸೆ, ಆಮಿಷಕ್ಕಾಗಿ ಮತಾಂತರ ಸಲ್ಲ; ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ

    |ಹರೀಶ್ ಸಾಗೋನಿ ಸಾಸ್ವೆಹಳ್ಳಿ

    ರಷ್ಯಾ ದೇಶದಲ್ಲಿ ನಮ್ಮ ಧರ್ಮಸಭೆಗೆ ಕ್ರಿಶ್ಚಿಯನ್ನರೂ ಬರುತ್ತಾರೆ. ಅವರಿಗ್ಯಾರಿಗೂ ನಾನು ನಮ್ಮ ಧರ್ಮಕ್ಕೆ ಬರಲು ಹೇಳಿಲ್ಲ. ಆದರೂ ಹಿಂದು ಧರ್ಮದ ಆಚಾರ-ವಿಚಾರ ಮೆಚ್ಚಿ ಅಲ್ಲಿನವರು ಲಿಂಗ ದೀಕ್ಷೆ ಪಡೆದಿದ್ದಾರೆ. ಹಾಗಿರುವಾಗ ನಾವೇಕೆ ಅನ್ಯ ಧರ್ಮಕ್ಕೆ ಹೋಗಬೇಕು?

    ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ‘ಮತಾಂತರ ಮತ್ತು ಮತಾಂತರ ನಿಷೇಧ ಕಾಯ್ದೆ’ ಬಗ್ಗೆ ‘ವಿಜಯವಾಣಿ’ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡಿದ್ದು ಹೀಗೆ. ನಾನು ರಷ್ಯಾ ದೇಶಕ್ಕೆ ಹೋದ ವೇಳೆ ನಮ್ಮ ಧರ್ಮಸಭೆಗೆ ಕ್ರಿಶ್ಚಿಯನ್ನರೂ ಬರುತ್ತಿರುತ್ತಾರೆ. ನಮ್ಮ ಧರ್ಮದ ಆಚಾರ ವಿಚಾರ ನೋಡಿ ಮೆಚ್ಚಿ ಬಂದವರು. ಆದರೆ, ಭಾರತ ದೇಶದಲ್ಲಿ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಬಲವಂತದ ಮತಾಂತರ ನಡೆದ ಉದಾಹರಣೆ ಸಾಕಷ್ಟಿವೆ ಎಂದರು.

    1.ಮತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ…?

    ನಾವು ಜನಿಸಿದ ಧರ್ಮದಲ್ಲಿಯೇ ನಮಗೆ ತೃಪ್ತಿದಾಯಕ ಜೀವನ ದೊರೆಯತ್ತಿರುವಾಗ ನಾವೇಕೆ ಮತ್ತೊಂದು ಧರ್ಮಕ್ಕೆ ಹೋಗಬೇಕು? ಪ್ರತಿಯೊಬ್ಬರೂ ತಂತಮ್ಮ ಧರ್ಮದಲ್ಲಿಯೇ ಇರಬೇಕು. ಸ್ವಸ್ಥ ಮನಸುಗಳಿದ್ದಲ್ಲಿ ಮತಾಂತರ ವಿಷಯವೇ ಬರುವುದಿಲ್ಲ. ಯಾವುದೇ ಒಂದು ಧರ್ಮದ ಆಚರಣೆಗೆಂದು ಮನಸಾರೆ ಧರ್ಮ ಬದಲಾಯಿಸಿದರೆ ಸರಿ. ಆದರೆ, ಮನಸ್ಸಿಗೆ ನೋವಾಗಿದೆ ಎಂದು ಧರ್ಮ ಬದಲಾವಣೆಯಂತಹ ನಿರ್ಧಾರ ಕೈಗೊಳ್ಳುವುದು ಹಾಗೂ ಮತಾಂತರ ಕೃತ್ಯಕ್ಕೆ ಕೈ ಹಾಕುವುದು ಅಕ್ಷಮ್ಯ. ಆಸೆ-ಆಮಿಷಕ್ಕಾಗಿ ಧರ್ಮ ಬದಲಾವಣೆ ಸರಿಯಲ್ಲ.

    2. ಈಗೀಗ ಮೇಲ್ವರ್ಗದವರೂ ಮತಾಂತರ ಆಗುತ್ತಿದ್ದಾರಲ್ಲ…

    ಇಷ್ಟು ದಿನ ಮತಾಂತರಕ್ಕೆ ಬಡತನವೇ ಮೂಲ ಕಾರಣ ಎಂದು ತಿಳಿದಿದ್ದೆವು. ದಲಿತ, ಹಿಂದುಳಿದ ವರ್ಗದವರು ಮಾತ್ರ ಮತಾಂತರಕ್ಕೆ ಬಲಿಯಾಗುತ್ತಿದ್ದಾರೆ ಅನಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಜನರಿಗೆ ತಂತಮ್ಮ ಧರ್ಮಗಳಲ್ಲಿ ನಂಬಿಕೆಯೇ ಇಲ್ಲದಂತಾಗಿರುವುದು ನಿಜಕ್ಕೂ ವಿಪರ್ಯಾಸ. ಹಿಂದು ಧರ್ಮದಲ್ಲಿ ಯಾವ ಕೊರತೆ ಇದೆ ಎಂದು ಅನ್ಯ ಧರ್ಮವನ್ನು ಅಪೇಕ್ಷಿಸಬೇಕು? ಹಣ, ಆಸ್ತಿ-ಆಮಿಷಕ್ಕೆ ಮತ ಬದಲಾಯಿಸಿದಾತ ಆ ಧರ್ಮದಲ್ಲಿಯೂ ಉಳಿಯುತ್ತಾನೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಬೇರೆಡೆ ಮತ್ತಷ್ಟು ಹೆಚ್ಚಿಗೆ ಸಿಗುತ್ತದೆ ಎಂದಾದರೆ ಅವರು ಅಲ್ಲಿಗೂ ಹಾರುವವರೇ.

    3. ದಾವಣಗೆರೆಯಲ್ಲಿ ವೀರಶೈವರೂ ಮತಾಂತರ ಹೊಂದಿದ್ದಾರಲ್ಲ…

    ಅವರು ಯಾಕೆ ಅನ್ಯ ಧರ್ಮಕ್ಕೆ ಮತಾಂತರವಾದರು ಎಂಬುದನ್ನು ಅವರನ್ನೇ ಕೇಳಬೇಕು. ಯಾಕೆಂದರೆ ನಮ್ಮ ವೀರಶೈವ ಧರ್ಮದಲ್ಲಿ ಅವರು ಯಾವುದರ ಕೊರತೆ ಕಂಡುಕೊಂಡಿದ್ದಾರೋ ತಿಳಿಯದು. ಹಿಂದು ಧರ್ಮಕ್ಕಿಂತ ಕ್ರೖೆಸ್ತ ಧರ್ಮ ಶ್ರೇಷ್ಠ ಎಂದುಕೊಂಡರೋ? ಅಥವಾ ಅಲ್ಪಸಂಖ್ಯಾತ ಮೀಸಲಾತಿಯಂತಹ ಸ್ಥಾನ-ಮಾನಗಳ ಲಾಬಿಗೆ ಹೋದರೋ? ಅವರನ್ನೇ ಕೇಳಿ ತಿಳಿದುಕೊಳ್ಳಿ.

    4. ಮತಾಂತರ ಅಂತ ಬಂದಾಗ ನಿಮ್ಮ ಒಟ್ಟಾರೆ ಅಭಿಪ್ರಾಯ…

    ಮನುಷ್ಯ ಕುಲಕ್ಕೆ ಲೌಕಿಕ ಬದುಕಷ್ಟೇ ಮುಖ್ಯವಲ್ಲ. ಧರ್ಮ, ಅಧ್ಯಾತ್ಮದ ಬಗ್ಗೆ ಅರಿವಿಟ್ಟುಕೊಳ್ಳಬೇಕು. ಲೌಕಿಕ ಬದುಕಿನಲ್ಲಿ ನೆಮ್ಮದಿ, ಶಾಂತಿ, ಸಮಾಧಾನ ದೊರೆಯಲು ಸಾಧ್ಯವೇ ಇಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಹಾಗಿದ್ದರೂ ನಾವು ಸಂಪತ್ತು, ವ್ಯವಹಾರ ಎಂದುಕೊಂಡು ನಮ್ಮ ಧರ್ಮವನ್ನು ನಾವೇ ಹಾಳು ಮಾಡಲು ಹೊರಟಿದ್ದೇವೆ. ಧರ್ಮ ರಕ್ಷಣೆ ಮಾಡುವ ಜವಾಬ್ದಾರಿ ಆಯಾ ಧರ್ಮದಲ್ಲಿ ಇರುವ ಪ್ರತಿಯೊಬ್ಬನಿಗೂ ಇರಬೇಕು. ಆಗ ‘ಮತಾಂತರ ನಿಷೇಧ ಕಾಯಿದೆ’ ಅವಶ್ಯಕತೆಯೇ ಇರುತ್ತಿರಲಿಲ್ಲ.

    5. ಮತಾಂತರ ನಿಷೇಧ ಕಾಯ್ದೆ ಬಗ್ಗೆ ನಿಮ್ಮ ಅಭಿಪ್ರಾಯ..

    ಸದ್ಯದ ಪರಿಸ್ಥಿತಿಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇದೆ. ಸರ್ಕಾರ ಅದನ್ನು ಕಾರ್ಯಗತಗೊಳಿಸಲು ಮುಂದಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸುವುದು ಒಳಿತು. ಈ ವಿಷಯದಲ್ಲಿ ವೋಟ್ಬ್ಯಾಂಕ್ ಲಾಭ ಪಡೆಯಲು ಪರ-ವಿರೋಧದ ನಡೆ ಸರಿಯಲ್ಲ.

    ಮೀಸಲಾತಿ ಕೇಳೋದು ತಪ್ಪಲ್ಲ

    ವೀರಶೈವ ಸಮುದಾಯದಲ್ಲಿ ಪಂಚಮಸಾಲಿ ಸಮಾಜದವರು 2ಎ ಮೀಸಲಾತಿಗಾಗಿ ಸರ್ಕಾರದ ಮುಂದೆ ಬೇಡಿಕೆ ಇಟ್ಟು ಹೋರಾಡುತ್ತಿದ್ದಾರೆ ನಿಜ. ಅವಶ್ಯಕತೆ ಇದ್ದವರು ಬೇಡುತ್ತಿದ್ದಾರೆ. ಸರ್ಕಾರವನ್ನು ಬೇಡುವ ಹಕ್ಕು ಅವರಿಗಿದೆ. ಬೇಡುವುದು ತಪ್ಪಲ್ಲ. ನೀಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಬೇಡಿಕೆ ಸರಿ ಇದೆ ಎಂದೆನಿಸಿದರೆ 2ಎ ಮೀಸಲಾತಿ ನೀಡಬೇಕೆಂದು ಸ್ವಾಮೀಜಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts