More

    ಸಂಕಷ್ಟದಲ್ಲಿಯೂ ಸದೃಢ ಭಾರತ ನಿರ್ಮಾಣ

    ಬಾಗಲಕೋಟೆ: ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ವಿಶ್ವದ ಏಕೈಕ ಶಾಂತಿ ರಾಷ್ಟ್ರ ಭಾರತ. ಸಂವಿಧಾನದ ಆಶಯದಂತೆ ಕೇಂದ್ರ, ರಾಜ್ಯ ಸರ್ಕಾರ ಸಾರ್ವಭೌಮ, ಅಖಂಡತೆಯನ್ನು ಎತ್ತಿ ಹಿಡಿಯಲು ಬದ್ಧವಾಗಿವೆ. ಪ್ರವಾಹ, ಕೋವಿಡ್‌ನಂತಹ ಸಂಕಷ್ಟದಲ್ಲಿಯೂ ಸದೃಢವಾದ ದೇಶ ನಿರ್ಮಾಣ ಮಾಡುತ್ತಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ದೇಶಕಂಡ ಅನನ್ಯ ಪ್ರತಿಭೆ ಡಾ.ಬಿ.ಆರ್.ಅಂಬೇಡ್ಕರ್ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ವಿಶ್ವಕ್ಕೆ ಮಾದರಿಯಾಗುವ ಸಂವಿಧಾನ ರೂಪುಗೊಳ್ಳಲು ಕಾರಣರಾದರು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ, ಕಾನೂನು ಸಲಹೆಗಾರ ಬಿ.ಎನ್.ರಾವ್, ಎಚ್.ಸಿ.ಮುಖರ್ಜಿ ಅವರ ಕೊಡುಗೆಯೂ ಅಪಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸದೃಢವಾದ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ದಿಟ್ಟ ಉತ್ತರ ನೀಡಲು ಸಜ್ಜಾಗಿದ್ದಾರೆ. ವಿರೋಧಿ ರಾಷ್ಟ್ರಗಳಲ್ಲಿ ನಡುಕ ಶುರುವಾಗಿದೆ ಎಂದರು.

    ಒಂದು ವರ್ಷದಿಂದ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ. ಇಂತಹ ಸಂಕಷ್ಟದಲ್ಲಿ ಆರ್ಥಿಕ ಸದೃಢತೆಗಾಗಿ ಪ್ರಧಾನಿ ನರೇಂದ್ರ ಮೋದಿ 29.87 ಲಕ್ಷ ಕೋಟಿ ರೂ. ಆತ್ಮ ನಿರ್ಭರ ಯೋಜನೆ ಘೋಷಿಸಿ ದೇಶದ ಜನರಿಗೆ ಧೈರ್ಯ ತುಂಬಿದರು. ಅಲ್ಲದೆ, ವಿಜ್ಞಾನಿಗಳಿಗೆ ಉತ್ತೇಜನ ನೀಡಿ ಕೋವಿಡ್ ಸೋಂಕಿಗೆ ಸಂಜೀವಿನಿ ಕಂಡು ಹಿಡಿದು ಲಸಿಕೆ ವಿತರಣೆ ಆರಂಭ ಮಾಡಿದರು. ಎಲ್ಲ ಕ್ಷೇತ್ರಗಳು, ಸಮುದಾಯಗಳು, ವರ್ಗಗಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆ ಜಾರಿಗೊಳಿಸುತ್ತಿದ್ದಾರೆ. ತನ್ಮೂಲಕ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಬೆಳಗುತ್ತಿದ್ದಾರೆ. ಅದರಂತೆ ಪ್ರವಾಹ, ಕೋವಿಡ್ ಸಂಕಷ್ಟದ ನಡುವೆಯೂ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. 2284 ಕೋಟಿ ರೂ. ಮೊತ್ತದ ಪ್ಯಾಕೇಜ್ ನೀಡಿ ಆರ್ಥಿಕ ಬಲ ತುಂಬಿದ್ದಾರೆ ಎಂದರು.

    ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. 76 ಲಸಿಕೆ ಕೇಂದ್ರಗಳ ಮೂಲಕ 17,833 ವಾರಿಯರ್ಸ್‌ಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈವರೆಗೆ 3504 ಜನರಿಗೆ ಲಸಿಕೆ ನೀಡಲಾಗಿದೆ. 2019 ಪ್ರವಾಹ ಸಂದರ್ಭದಲ್ಲಿ ಪ್ರವಾಹ ಬಾಧಿತ 67,387 ರೈತರಿಗೆ ಒಟ್ಟು 57.16 ಕೋಟಿ ರೂ. ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಎ ಮತ್ತು ಬಿ ಮಾದರಿಯ 960, ಸಿ ಮಾದರಿಯ 4,383 ಮನೆಗಳು ಹಾನಿಯಾಗಿದ್ದವು. ಈ ಪೈಕಿ 3,541 ಮನೆಗಳಿಗೆ 17.70 ಕೋಟಿ ರೂ. ಪರಿಹಾರ ನೀಡಲಾಗಿದೆ. ಮೂಲ ಸೌಕರ್ಯ ದುರಸ್ತಿಗಾಗಿ 50 ಕೋಟಿ ರೂ. ಅನುದಾನ ನೀಡಲಾಗಿದೆ. 2020 ಪ್ರವಾಹ ವೇಳೆಯಲ್ಲಿ ಹಾನಿಯಾದ ರಸ್ತೆ, ಸೇತುವೆ ದುರಸ್ತಿಗೆ 28.375 ಕೋಟಿ ರೂ. ನೀಡಲಾಗಿದೆ ಎಂದರು.

    ಶಾಸಕ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

    ಜಿಲ್ಲಾ ಮುಖ್ಯರಸ್ತೆ ಮೇಲ್ದರ್ಜೆಗೆ
    ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 564.73 ಕಿ.ಮೀ. ಗ್ರಾಮೀಣ ರಸ್ತೆಯನ್ನು ಜಿಲ್ಲಾ ಮುಖ್ಯರಸ್ತೆಯನ್ನಾಗಿ, 210 ಕಿ.ಮೀ. ಉದ್ದದ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಲ್ಲದೆ, 182.50 ಕೋಟಿ ರೂ. ಅನುದಾನದಲ್ಲಿ 56.49 ಕಿ.ಮೀ. ರಾಜ್ಯ ಹೆದ್ದಾರಿಯ ರಸ್ತೆ ಹಾಗೂ 149.29 ಕೋಟಿ ರೂ. ವೆಚ್ಚದಲ್ಲಿ 184.98 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಸುಧಾರಣೆಗೊಳಿಸಲಾಗಿದೆ. ನಬಾರ್ಡ್ ಅಡಿಯಲ್ಲಿ 23.94 ಕೋಟಿ ರೂ. ಅನುದಾನದಲ್ಲಿ 92 ಶಾಲಾ ಕಟ್ಟಡ, 5.61 ಕೋಟಿ ರೂ. ವೆಚ್ಚದಲ್ಲಿ 26 ಅಂಗನವಾಡಿ ಕಟ್ಟಡ, 76.33 ಕೋಟಿ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ 10 ವಸತಿ ನಿಲಯ ನಿರ್ಮಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಡಿಸಿಎಂ ಕಾರಜೋಳ ಹೇಳಿದರು.

    ಪಥ ಸಂಚಲನ
    ಕಾರ್ಯಕ್ರಮ ಪೂರ್ವದಲ್ಲಿ ಪೊಲೀಸ್ ಇಲಾಖೆಯಿಂದ ರಾಷ್ಟ್ರಗೀತೆ, ಪೊಲೀಸ್ ಪಡೆ, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಹಾಗೂ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು. ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ರೈತಗೀತೆ ನಡೆಯಿತು.

    ಸಾಧಕರಿಗೆ ಪುರಸ್ಕಾರ
    ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಪುರಸ್ಕರಿಸಲಾಯಿತು. ಪಂಡಿತ ಬಡಿಗೇರ(ಶ್ರೀಕೃಷ್ಣ ಪಾರಿಜಾತ), ಪಾಂಡುರಂಗ ಸುಗತೇಕರ (ಗೊಂದಲಿಗರ ಪದ), ಈರಪ್ಪ ಮಂಟೂರ (ಭಜನಾ ಪದ), ಕೃಷ್ಣಪ್ಪ ಮಾದರ (ಜಾನಪದ), ಚನ್ನಮ್ಮ ಚಿಚಖಂಡಿ (ಕ್ರೀಡೆ), ವಿಠ್ಠಲ ಕಾಂಬಳೆ (ಸೈನಿಕರು), ಸುಬ್ಬರಾವ ಬೋಸ್ಲೆ ( ಸೈನಿಕ), ಮುರುಗೇಶ ಹಳ್ಳಿ (ದೃಶ್ಯ ಮಾಧ್ಯಮ), ಮಹಾಂತೇಶ ದಾಲಿನ (ಕೃಷಿ), ಪ್ರವೀಣ ಮುಧೋಳ ( ಕೃಷಿ), ಮಲ್ಲಿಕಾರ್ಜುನಪ್ಪ (ಅಗ್ನಿ ಶಾಮಕ) ಅವರನ್ನು ಗಣ್ಯರು ಸನ್ಮಾನಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts