More

    10 ತಿಂಗಳಿಂದ ಬಂದಿಲ್ಲ ಹಾಲಿನ ಪ್ರೋತ್ಸಾಹಧನ

    * ಹಣ ಸಂದಾಯ ಮಾಡದೇ ಗಾಯದ ಮೇಲೆ ಬರೆ ಎಳೆದ ಸರ್ಕಾರ
    * ಆತಂಕದಲ್ಲಿ ಹೈನುಗಾರರು

    ಎಂ.ಎನ್. ಸುರೇಶ್ ಕನಕಪುರ

    ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವವರಿಗೆ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ಸತಾಯಿಸುತ್ತಿದ್ದು, ಹೈನುಗಾರರು ಕಂಗಾಲಾಗಿದ್ದಾರೆ.
    ರೈತರಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಡೇರಿಗಳಿಗೆ ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದು, ಆದರೆ, ಇದು ಸಕಾಲದಲ್ಲಿ ರೈತರಿಗೆ ಸಂದಾಯವಾಗುತ್ತಿಲ್ಲ. ಕಳೆದ ಹತ್ತು ತಿಂಗಳ ಪ್ರೋತ್ಸಾಹಧನ ಸಿಗದೆ ರೈತರಿಗೆ ತೊಂದರೆಯಾಗಿದೆ. ಪ್ರೋತ್ಸಾಹಧನ ರೈತರಿಗೆ ನೇರ ವರ್ಗಾವಣೆ ಮಾಡುವ ನೆಪದಲ್ಲಿ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿರುವುದು ರೈತರ ಸಮಸ್ಯೆ ದ್ವಿಗುಣ ಮಾಡಿದೆ.

    ಬರಗಾಲದಲ್ಲೂ ಬರೆ :

    ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ -್ಝಠಿ;4 ರೂ. ಪ್ರೋತ್ಸಾಹಧನ ನೀಡುವ ನಿಯಮ ಜಾರಿಗೆ ತಂದಿತ್ತು. ಅದಕ್ಕೂ ಮುನ್ನ ಪ್ರತಿ ಲೀಟರ್‌ಗೆ 2 ರೂ. ನೀಡಲಾಗುತ್ತಿತ್ತು. ಅತಿವೃಷ್ಟಿ, ಅನಾವೃಷ್ಟಿ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ 5 ರೂ. ಪ್ರೋತ್ಸಾಹಧನ ನೀಡಿತ್ತು. ಆದರೆ, ಕಳೆದ 10 ತಿಂಗಳಿನಿಂದ ಯಾವುದೇ ಪ್ರೋತ್ಸಾಹಧನ ಸಂದಾಯವಾಗದೇ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
    ಬರಗಾಲದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದ ಬೆನ್ನಲ್ಲೇ ಮಳೆ, ಬೆಳೆ, ನೀರು, ಮೇವು-ದಾಸ್ತಾನು ಇಲ್ಲದೆ ಪರಿತಪಿಸುವಂತಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಹಾಲಿನ ಸಹಾಯಧನ ಸ್ಥಗಿತ ಮಾಡಿರುವುದು ಮತ್ತೊಂದು ಸಂಕಷ್ಟಕ್ಕೆ ದೂಡಿದಂತಾಗಿದೆ. ಕನಕಪುರ, ಹಾರೋಹಳ್ಳಿ ಸೇರಿ 370ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಹಸ್ರಾರು ರೈತರಿದ್ದಾರೆ. ಅಲ್ಲದೇ ಅನೇಕ ಜಿಲ್ಲೆಗಳಲ್ಲೂ ರೈತರ ಸಹಾಯಧನ ಬಂದಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಜಿಲ್ಲೆಯ ರೈತರು ಹೈನುಗಾರಿಕೆಯಲ್ಲೇ ಜೀವನ ಕಟ್ಟಿಕೊಂಡಿದ್ದಾರೆ.

    ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ

    ಹಾಲು ಉತ್ಪಾದಕರು ಹಾಗೂ ರೈತ ಸಂಘಟನೆಗಳು ಬಮುಲ್‌ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ಸರ್ಕಾರ ಕೊಡುತ್ತೇವೆ ಅಥವಾ ಇಲ್ಲ ಎನ್ನುವುದನ್ನೂ ಸ್ಪಷ್ಟಪಡಿಸದೇ ಇರುವುದು ರೈತರ ಗಾಯಕ್ಕೆ ಬರೆ ಎಳೆದಂತಾಗಿದೆ. ಹಾಲು ಉತ್ಪಾದಕರ ಸಂಘಗಳು ರೈತರ ನಿಂದನೆಗೆ ಗುರಿಯಾಗುತ್ತಿವೆ. ರೈತರಿಗೆ ಸಂಘದ ಅಧ್ಯಕ್ಷರಾಗಲೀ, ಸದಸ್ಯರಾಗಲೀ ಸಮಜಾಯಿಷಿ ನೀಡಲು ಆಗುತ್ತಿಲ್ಲ. ಸರ್ಕಾರದ ಅಸ್ಪಷ್ಟ ನಿಲುವು ಇದಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತರು ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

    ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಪ್ರೋತ್ಸಾಹಧನ ನೀಡದಿರುವುದು ಅನಾಗರಿಕ ವರ್ತನೆಯಾಗಿದೆ. ರೈತರು ಸಂಕಷ್ಟಗಳಿಂದ ತಪ್ಪಿಸಿಕೊಳ್ಳಲು ಪ್ರೋತ್ಸಾಹಧನವನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು. ಬಿಟ್ಟಿ ಭಾಗ್ಯಗಳ ಜತೆಗೆ ರೈತಪರ ಯೋಜನೆಗಳಿಗೂ ಪ್ರೋತ್ಸಾಹ ನೀಡಬೇಕು. ರೈತರ ಹಾಲಿನ ದರ ಹೆಚ್ಚಿಸಿಲ್ಲ. ಪಶು ಆಹಾರಗಳ ಬೆಲೆ ಕಡಿಮೆಯಾಗಿಲ್ಲ. ಇದರಿಂದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ.
    ಕೊಳ್ಳಿಗನಹಳ್ಳಿ ರಾಮು, ಮಾಜಿ ತಾಪಂ ಸದಸ್ಯ

    ಹೈನುಗಾರಿಕೆಯನ್ನೇ ನಂಬಿರುವ ರೈತರಿಗೆ ಸರ್ಕಾರ ಪ್ರೋತ್ಸಾಹಧನ ಸ್ಥಗಿತಗೊಳಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಬರದಿಂದ ನಲುಗಿರುವ ರೈತರ ಕಷ್ಟ ಅರ್ಥಮಾಡಿಕೊಳ್ಳದ ಸರ್ಕಾರ ಮತಗಳಿಕೆಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರೈತರನ್ನು ವಂಚಿಸುತ್ತಿದೆ. ಮುಂದಿನ ದಿನಗಳಲ್ಲಿ ಬಮುಲ್ ಕಚೇರಿ ಮುಂದೆ ಹಸುಗಳನ್ನು ಕಟ್ಟಿ ಪ್ರತಿಭಟನೆ ಮಾಡಲಾಗುವುದು.
    ನಲ್ಲಹಳ್ಳಿ ಶ್ರೀನಿವಾಸ್, ರೈತಸಂಘದ ಜಿಲ್ಲಾ ಕಾರ್ಯದರ್ಶಿ

    ಕಳೆದ 9 ತಿಂಗಳಿನಿಂದ ರೈತರ ಹಾಲಿನ ಪ್ರೋತ್ಸಾಹಧನ ಬಿಡುಗಡೆ ವಿಳಂಬವಾಗಿದೆ. ಚುನಾವಣೆ ಹಾಗೂ ನೀತಿ ಸಂಹಿತೆ ಸೇರಿ ಹಲವು ಅಡೆತಡೆಗಳು ಉಂಟಾಗಿತ್ತು. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಚುನಾವಣಾ ಫಲಿತಾಂಶದ ಬಳಿಕ ಶೀಘ್ರವೇ ಸರ್ಕಾರ ಹಣ ಬಿಡುಗಡೆ ಮಾಡಲಿದೆ.
    ಎಚ್. ಪಿ. ರಾಜ್‌ಕುಮಾರ್, ಬಮುಲ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts