More

    ಸಹಜ ಹೆರಿಗೆ ಭರವಸೆ ನೀಡಿ ಮಗು ಉಳಿಸಲಿಲ್ಲ!

    ವೈದ್ಯ, ಸಿಬ್ಬಂದಿ ವಿರುದ್ಧ ಪಾಲಕರು, ಸಂಬಂಧಿಕರ ಆಕ್ರೋಶ – ಪೆರೇಸಂದ್ರ ಆಸ್ಪತ್ರೆ ಎದುರು ಪ್ರತಿಭಟನೆ

    ಗುಡಿಬಂಡೆ: ಸಹಜ ಹೆರಿಗೆ ಮಾಡಿಸುವ ಭರವಸೆ ನೀಡಿ ಹೊಟ್ಟೆಯಲ್ಲೇ ಮಗು ಮೃತಪಟ್ಟ ನಂತರ ಕಡೇ ಗಳಿಗೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಕೈತೊಳೆದುಕೊಳ್ಳಲು ಯತ್ನಿಸಿದ ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಾಲಕರು ಹಾಗೂ ಸಂಬಂಧಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ಪಾಲಕ ರಘು ಮಾತನಾಡಿ, ಪೆರೇಸಂದ್ರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಐದು ಸಾವಿರ ರೂ. ಕೊಡಿ, ಇಲ್ಲಿಯೇ ನಾರ್ಮಲ್ ಡೆಲಿವರಿ ಮಾಡಿಸುತ್ತೇವೆಂದು ಹೇಳಿ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೂ ಕಾಲಹರಣ ಮಾಡಿ ಕೊನೆಗೆ ಹೊಟ್ಟೆಯಲ್ಲಿ ಮಗು ಮೃತಪಟ್ಟ ಬಳಿಕ ತಮ್ಮ ಮೇಲೆ ದೂರು ಬರುತ್ತದೆ ಎಂದು ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡುವಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ತಿಳಿಯಿತು. ಪೆರೇಸಂದ್ರ ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ಮಗು ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಸೆ ಚಿವುಟಿದ ವೈದ್ಯ
    ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಿಲ್ಲ ಎಂಬ ಕೊರಗಿನಲ್ಲಿದ್ದೆವು. ದೇವರ ಕೃಪೆಯಿಂದ ಮಗುವಾಗುವ ಆಸೆ ಚಿಗುರೊಡೆಯಿತು. ಒಂಬತ್ತು ತಿಂಗಳಿಂದ ಹೊಟ್ಟೆಯಲ್ಲಿ ಮಗುವನ್ನು ಹೊತ್ತ ಖುಷಿಯಲ್ಲಿದ್ದ ತಾಯಿ ಅಶ್ವಿನಿಯ ಆಸೆ ಚಿವುಟಿ ಹಾಕಿದರು ಎಂದು ರಘು ನೋವು ತೋಡಿಕೊಂಡರು.

    ತಕ್ಕಶಾಸ್ತಿಯಾಗಲಿ
    ಶಾಸಕ ಪ್ರದೀಪ್ ಈಶ್ವರ್ ಅವರ ಸ್ವಗ್ರಾಮ ಪೆರೇಸಂದ್ರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ರೀತಿ ನಡೆದಿರುವುದು ದುರಂತ. ಐದು ವರ್ಷಗಳಿಂದ ಮಗುವಿನ ನೀರಿಕ್ಷೆಯಲ್ಲಿದ್ದ ಆಶ್ವಿನಿ ಮತ್ತು ರಘು ಅವರಿಗೆ ಐದು ಸಾವಿರ ಹಣಕ್ಕಾಗಿ ಒಂದು ಪುಟ್ಟ ಕಂದಮ್ಮನ ಜೀವ ತೆಗೆದ ಶುಶ್ರೂಷಕಿಯರು ಮತ್ತೊಂದು ಜೀವ ತೆಗೆಯದಿರಲಿ. ಹಾಗಾಗಿ ಇವರಿಗೆ ಈಗಲೇ ತಕ್ಕಶಾಸ್ತಿಯಾಗಬೇಕು ಎಂದು ಗ್ರಾಮದ ಯುವಕ ಹಮೇಶ್ ಒತ್ತಾಯಿಸಿದರು.

    ವಿಷಯ ತಿಳಿದ ತಾಲೂಕು ಆರೋಗ್ಯಾಧಿಕಾರಿ ಮಂಜುಳಾ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ, ಇಲ್ಲಿ ಹೆರಿಗೆ ಮಾಡುವ ವೈದ್ಯರು ಇಲ್ಲದೇ ಇರುವುದರಿಂದ ಹೆರಿಗೆ ಮಾಡಿಸಲು ಅವಕಾಶ ಇಲ್ಲ. ಮುಂದಿನ ದಿನಗಳಲ್ಲಿ ಹೆರಿಗೆ ವೈದ್ಯರನ್ನು ನೇಮಿಸಲಾಗುವುದು ತಿಳಿಸಿದರು.
    ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಡಾ. ಕೆ. ಸುಧಾಕರ್ ತವರು ಗ್ರಾಮದಲ್ಲೇ ಇಂಥ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎನ್ನುತ್ತಿದ್ದಾರೆ ಜಿಲ್ಲೆಯ ಜನತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts