

ಬೆಂಗಳೂರು: ಅನೇಕರಿಗೆ ಬಾಯಿ ಹುಣ್ಣು ಸಮಸ್ಯೆ ಬಹಳ ನೋವನ್ನು ನೀಡುತ್ತದೆ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಕೆಲವರಿಗೆ ಈ ಸಮಸ್ಯೆ ವರ್ಷಕ್ಕೆ ಒಂದು ಬಾರಿ ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಪದೇ ಪದೇ ಕಾಡುತ್ತಿರುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರಯತ್ನಿಸುವ ಜನರು, ಮಾರುಕಟ್ಟೆಯಲ್ಲಿ ಸಿಗುವ ಇತರೆ ಜೆಲ್, ಪ್ರಾಡೆಕ್ಟ್ಗಳನ್ನು ಬಳಸಿ, ಸಮಸ್ಯೆಯನ್ನು ಮತ್ತಷ್ಟು ಜಾಸ್ತಿ ಮಾಡಿಕೊಳ್ಳುತ್ತಾರೆ.
ನಮಗೆಲ್ಲಾ ತಿಳಿದಿರುವಂತೆ ಸಾಮಾನ್ಯವಾಗಿ ಬೇಸಿಗೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಕಾರಣ, ದೇಹದಲ್ಲಿ ಹೆಚ್ಚಾಗುವ ಉಷ್ಣಾಂಶಂತೆ. ವಾತಾವರಣದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾದಂತೆ, ನಮ್ಮ ದೇಹದಲ್ಲಿ ಹೀಟ್ ಜಾಸ್ತಿಯಾಗುತ್ತದೆ. ಆಗ ಬಾಯಲ್ಲಿ ಹುಣ್ಣಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸುತ್ತದೆ. ಇದಕ್ಕೆ ಸರಳ ಪರಿಹಾರ ನಮ್ಮ ಮನೆಯ ಅಡುಗೆ ಕೋಣೆಯಲ್ಲಿದೆ.
ಪ್ರತಿಯೊಬ್ಬರಿಗೂ ತಿಳಿದಿರುವಂತೆ ಅರಿಶಿಣದಲ್ಲಿ ಹಲವು ರೋಗ ನಿವಾರಿಸುವ ಗುಣ ಅಡಗಿದೆ. ಇದನ್ನು ಕೇವಲ ಅಡುಗೆ ತಯಾರಿಕೆಗೆ ಮಾತ್ರ ಬಳಸುವುದಿಲ್ಲ. ಸಣ್ಣ-ಪುಟ್ಟ ಗಾಯಗಳಿಂದ ಹಿಡಿದು ಮುಖದಲ್ಲಿನ ಕಲೆಗಳು, ಮೊಡವೆಗಳು, ನೋವಿನ ಗುಳ್ಳೆಗಳನ್ನು ನಿಯಂತ್ರಿಸಲು ಸಹ ಬಳಸಲಾಗುತ್ತದೆ. ಬಾಯಿ ಹುಣ್ಣಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಚಿಟಿಕೆ ಅರಿಶಿಣ ಪುಡಿಯನ್ನು ನೀರಿನೊಂದಿಗೆ ಮಿಶ್ರಿಸಿ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೆಲ ನಿಮಿಷ ಹಚ್ಚಿಕೊಳ್ಳಿ, ನಂತರ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.