More

    ಮಾಗಡಿ ಕೆಂಪೇಗೌಡ ವೃತ್ತದಲ್ಲಿ ಅನೈರ್ಮಲ್ಯದ ಭೀತಿ

    ತರಕಾರಿ, ಸೊಪ್ಪು ಖರೀದಿಗೆ ಗ್ರಾಹಕರನ ಹಿಂದೇಟು ವ್ಯಾಪಾರಸ್ಥರು ಕಂಗಾಲು

    * ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
    ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಂಪೇಗೌಡ ವೃತ್ತದ ಬಳಿಯ ರಸ್ತೆ ಕೆರೆಯಂತಾಗಿ ತರಕಾರಿ ಮಾರಾಟಗಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ.

    ಪಟ್ಟಣದ ಕೆಂಪೇಗೌಡ ವೃತ್ತ ರಸ್ತೆಯ ಎರಡು ಬದಿಗಳಲ್ಲಿ ರೈತರು ಬೆಳೆದ ತರಕಾರಿ, ಸೊಪ್ಪು ಮಾರಾಟ ಸೇರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಈ ಸ್ಥಳದಲ್ಲಿ ಮಳೆ ನೀರು, ಶೌಚಗೃಹದ ಹಾಗೂ ತ್ಯಾಜ್ಯ ಮಿಶ್ರಿತ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕೆರೆಯಂತಾಗಿದೆ. ವಾಹನ ಸವಾರರು, ಸಾರ್ವಜನಿಕರು ಕೊಳಚೆ ದಾಟಿ ಮುಂದಕ್ಕೆ ಹೋಗುವಾಗ ತರಕಾರಿ, ವಸ್ತುಗಳ ಮೇಲೆ ರಾಚುತ್ತಿದೆ. ಈ ಅನೈರ್ಮಲ್ಯದ ಭೀತಿಯಿಂದ ಸಂತೆ ಮಾಡಲು ಬಂದ ಗ್ರಾಹಕರು ಸೊಪ್ಪು, ತರಕಾರಿ ಕೊಳ್ಳದೆ ಹಿಂದಿರುಗುವ ಸ್ಥಿತಿ ಎದುರಾಗಿದೆ.

    ಇನ್ನೂ ತರಕಾರಿ, ಸೊಪ್ಪುಗಳನ್ನು ರೈತರಿಂದ ಖರೀದಿಸಿ ನಾಗರಿಕರಿಗೆ ಮಾರಲು ಸಾವಿರಾರು ರೂ. ಬಂಡವಾಳ ಹಾಕಿದ ವ್ಯಾಪಾರಸ್ಥರು ಇದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಬೀದಿಬದಿ ತರಕಾರಿ ಮಾರಾಟಗಾರರು ಆರೋಪಿಸಿದ್ದಾರೆ.

    ಶೌಚಗೃಹ, ಒಳಚರಂಡಿ ಮಲಿನದ ಪಕ್ಕದಲ್ಲೇ ಮಾರುವ ತರಕಾರಿ, ಸೊಪ್ಪುಗಳನ್ನು ಗ್ರಾಹಕರು ಖರೀದಿಸಿ ತಿನ್ನುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಸಾಲ ಮಾಡಿ ಶ್ರಮಪಟ್ಟು ಬೆಳೆದ ತರಕಾರಿ, ಸೊಪ್ಪುಗಳನ್ನು ಅನೈರ್ಮಲ್ಯ ತುಂಬಿರುವ ಜಾಗದಲ್ಲಿ ಇಟ್ಟು ಮಾರಾಟ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ.

    ಇನ್ನೂ ತರಕಾರಿ ಮಾರಾಟಗಾರರು ಮಾರಾಟದ ನಂತರ ಕೊಳೆತ ತರಕಾರಿ, ಸೊಪ್ಪುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಹಾಗೂ ಪುರಸಭೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದರಿಂದ ಒಂದೆಡೆ ಕಸ ಸಂಗ್ರಹವಾಗಿ ಗಬ್ಬುನಾರುತ್ತಿದೆ. ಈ ದುರ್ವಾಸನೆಯಿಂದ ಸ್ಥಳೀಯರು, ಗ್ರಾಹಕರು ಈ ವಾಸನೆಯನ್ನು ಕುಡಿಯುವಂತಾಗಿದೆ ಎಂಬುದು ತರಕಾರಿ ಮಾರಾಟಗಾರರ ಆರೋಪವಾಗಿದೆ.

    ಪ್ರತಿವರ್ಷ ಮಳೆ ಬಂದಾಗ ಕೆಂಪೇಗೌಡ ವೃತ್ತ ಕೆರೆಯಂತಾಗುತ್ತದೆ. ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿರುವುದು ರೈತರಿಗೆ ಮಾಡಿದ ಅವಮಾನ ಎಂದು ರೈತಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ದೂರಿದ್ದಾರೆ.

    ಪುರಸಭೆಯ ಕುರುಡುತನ 

    ಎಸ್‌ಬಿಐ ಬ್ಯಾಂಕ್ ಮುಂಂಭಾಗದ ಒಳಚರಂಡಿ ಮ್ಯಾನ್‌ಹೊಲ್‌ಗೆ ತ್ಯಾಜ್ಯ ತುಂಬಿ ರಸ್ತೆಯ ಮೇಲೆ ನಿರಂತರವಾಗಿ ಹರಿಯುತ್ತಿದ್ದು. ಈ ತ್ಯಾಜ್ಯದ ನೀರನ್ನು ತುಳಿದುಕೊಂಡೇ ಸಾವಿರಾರು ಮಂದಿ ತೆರಳುವಂತಾಗಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವ ಪುರಸಭಾ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿರುವುದರ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತರಕಾರಿ ಮಾರಾಟಗಾರರ, ರೈತರ ಸುಂಕ ಮಾತ್ರ ಪುರಸಭೆ ಅಧಿಕಾರಿಗಳಿಗೆ ಬೇಕೇ ಹೊರತು ರೈತರ ಸಂಕಷ್ಟ ಆಲಿಸುತ್ತಿಲ್ಲ. ಕೊಳಚೆ ನೀರಿನಲ್ಲಿ ತರಕಾರಿ ಮಾರುವ ಪರಿಸ್ಥಿತಿ ಬಂದಿರುವುದು ನಾಡಪ್ರಭು ಕೆಂಪೇಗೌಡರಿಗೆ ಪುರಸಭೆ ಹಾಗೂ ತಾಲೂಕು ಆಡಳಿತ ಮಾಡುತ್ತಿರುವ ಅವಮಾನವಾಗಿದೆ. ಶೀಘ್ರವೇ ರೈತರು ಬೆಳೆದ ತರಕಾರಿ, ಸೊಪ್ಪು ಮಾರಲು ಸಮರ್ಪಕ ಮಾರುಕಟ್ಟೆ ನಿರ್ಮಿಸದಿದ್ದರೆ ತಾಲೂಕು ಆಡಳಿತದ ವಿರುದ್ಧ ಬೃಹತ್ ಹೋರಾಟ ಮಾಡಲಾಗುವುದು
    ಹೊಸಪಾಳ್ಯ ಲೋಕೇಶ್, ತಾಲೂಕು ರೈತಸಂಘದ ಅಧ್ಯಕ್ಷ
    ತರಕಾರಿ ಮಾರಾಟ ಮಾಡುವ ಸ್ಥಳ ತಗ್ಗು ಪ್ರದೇಶವಾಗಿರುವುದರಿಂದ ಮಳೆಯ ನೀರು ಒಂದೆಡೆ ಸೇರುತ್ತಿದೆ. ಮಳೆಯಿಂದಾಗಿ ಒಳಚರಂಡಿ, ಮ್ಯಾನ್‌ಹೊಲ್ ತುಂಬಿದ್ದು ತುರ್ತಾಗಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.
    ಮಂಜಮ್ಮ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts