More

    ಸಪ್ತತಿಪೂರ್ತಿ ಸಂಭ್ರಮ; ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥರ 71ನೇ ವರ್ಧಂತಿ

    ಸನಾತನ ಧರ್ಮದ ಪ್ರಚಾರಕ್ಕಾಗಿ ದೇಶದ 4 ದಿಕ್ಕುಗಳಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳಲ್ಲಿ ಶೃಂಗೇರಿ ಶಾರದಾಪೀಠವೂ ಒಂದು. ಶ್ರೀ ಸುರೇಶ್ವರಾಚಾರ್ಯರು ಮೊದಲ್ಗೊಂಡು 35 ಯತಿವರೇಣ್ಯರಿಂದ ಅಧಿಷ್ಠಿತವಾದ ಈ ಪೀಠಕ್ಕೆ 36ನೇ ಅಧಿಪತಿ ಶ್ರೀ ಭಾರತೀ ತೀರ್ಥರು. ಇಂದು ಅವರು 70 ವಸಂತಗಳನ್ನು ಪೂರೈಸಲಿದ್ದು, ಶೃಂಗೇರಿಯಲ್ಲಿ ಸಪ್ತತಿಪೂರ್ತಿ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ.

    ಶೃಂಗೇರಿ ಶ್ರೀ ಶಾರದಾ ಪೀಠ ದೇಶದ ಅತ್ಯಂತ ಮಹತ್ವದ ಗುರು ಪೀಠಗಳಲ್ಲಿ ಒಂದು. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಈ ಪೀಠದ 36ನೇ ಜಗದ್ಗುರುಗಳು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು. 1989ರಲ್ಲಿ ಪೀಠಾರೋಹಣ ಮಾಡಿದ ಶ್ರೀಗಳು ಸಕಲ ಆಸ್ತಿಕ ಜನರ ಶ್ರೇಯಸ್ಸಿಗಾಗಿ ಪ್ರತಿನಿತ್ಯ ಶ್ರೀಶಾರದಾ ಚಂದ್ರಮೌಳೀಶ್ವರರ ಪೂಜಾ ನಿರತರಾಗಿದ್ದಾರೆ.

    ಶ್ರೀಗಳ ಪೂರ್ವಾಶ್ರಮದ ಹೆಸರು ಸೀತಾರಾಮಾಂಜನೇಯಲು. ತಂದೆ ತಂಗಿರಾಲ ವೆಂಕಟೇಶ್ವರ ಅವಧಾನಿ, ತಾಯಿ ಅನಂತಲಕ್ಷ್ಮಮ್ಮ. ಆಂಧ್ರಪ್ರದೇಶದ ಮಚಲೀಪಟ್ಟಣದಲ್ಲಿ 1951ರಲ್ಲಿ ಜನಿಸಿದರು. ದೈವಭಕ್ತಿ, ಅಧ್ಯಯನ ಶಕ್ತಿ, ಪ್ರಾಪಂಚಿಕ ಸಂಗತಿಗಳಲ್ಲಿ ನಿರಾಸಕ್ತಿ ಅವರಿಗೆ ಜನ್ಮದಾರಭ್ಯ ಬಂದಿರುವ ಸ್ವಭಾವ. ಅವರ ಈ ಸದ್ಗುಣಗಳನ್ನು ಗುರುತಿಸಿದ 35ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ಅವರನ್ನು ಕರೆತಂದು ಶೃಂಗೇರಿಯಲ್ಲಿ ಸ್ವತಃ ಶಾಸ್ತ್ರಾಭ್ಯಾಸ ಮಾಡಿಸಿದರು. 1974ರ ನ. 11ರಂದು ಸಂನ್ಯಾಸ ದೀಕ್ಷೆ ನೀಡಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿದರು.

    ಶ್ರೀ ಭಾರತೀತೀರ್ಥರ ಮಾತೃಭಾಷೆ ತೆಲುಗು. ಆದರೆ ಚಿಕ್ಕವಯಸ್ಸಿನಿಂದಲೂ ಸಂಸ್ಕೃತದಲ್ಲೇ ಮಾತು. ವ್ಯಾಕರಣ, ಸಾಹಿತ್ಯ, ತತ್ತ್ವಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಸಂಸ್ಕೃತದಲ್ಲಿ ಕವನ ರಚಿಸಿದ್ದಾರೆ. ಆಟ ಪಾಠಗಳಲ್ಲೂ ಸಂಸ್ಕೃತವನ್ನು ಬಳಸಿ ಪದ್ಯರೂಪದಲ್ಲಿ ಮಾತನಾಡುತ್ತಿದ್ದರಂತೆ! ಆಂಧ್ರ, ತಮಿಳುನಾಡು, ಕರ್ನಾಟಕ ಹಾಗೂ ಕೇರಳದ ಭಕ್ತರು ಶೃಂಗೇರಿ ಮಠಕ್ಕೆ ನಡೆದುಕೊಳ್ಳುತ್ತಾರೆ. ಅವರ ಜತೆ ಶ್ರೀಗಳು ಅವರವರ ಭಾಷೆಯಲ್ಲೇ ಸಂಭಾಷಿಸುತ್ತಾರೆ. ಆ ಭಾಷೆಗಳ ನುಡಿಗಟ್ಟುಗಳ ಬಗ್ಗೆ ಶ್ರೀಗಳಿಗಿರುವ ಅದ್ಭುತ ಪರಿಚಯವನ್ನು ಕಂಡು ಭಕ್ತರು ವಿಸ್ಮಿತರಾಗುತ್ತಾರೆ.

    ವೇದಶಾಸ್ತ್ರಗಳನ್ನು ಸಂರಕ್ಷಿಸಿದರೆ ಮಾತ್ರ ಸನಾತನ ಧರ್ಮ ಸಂರಕ್ಷಣೆಯಾಗುತ್ತದೆ ಎಂಬ ದೃಢನಿಶ್ಚಯದೊಂದಿಗೆ ಶಾರದಾಪೀಠದ ಅನೇಕ ಶಾಖಾ ಮಠಗಳಲ್ಲಿ ವೇದಶಾಸ್ತ್ರ ಪಾಠಶಾಲೆಗಳನ್ನು ತೆರೆದಿದ್ದಾರೆ. ಶಂಕರಾಚಾರ್ಯ ಅದ್ವೈತ ಶೋಧ ಕೇಂದ್ರ ರೂಪಿಸಿದ್ದಾರೆ. ಅನೇಕ ಗ್ರಂಥಗಳ ರಚನೆಗೆ ಕಾರಣಕರ್ತರಾಗಿದ್ದಾರೆ. ಶಂಕರಾಚಾರ್ಯರ ಅನುಶಾಸನದಂತೆ ಶೃಂಗೇರಿಯಿಂದ ಕಾಶ್ಮೀರದವರೆಗೆ ಧರ್ಮಯಾತ್ರೆ ಮಾಡಿದ್ದಾರೆ. 2012-13ರಲ್ಲಿ 13 ತಿಂಗಳ ಕಾಲ ದಕ್ಷಿಣ ಭಾರತದಾದ್ಯಂತ ಸಂಚರಿಸಿ ಧರ್ಮಪ್ರಚಾರ ಮಾಡಿದ್ದಾರೆ. ಚತುರಾಮ್ನಾಯ ಪೀಠಾಧಿಪತಿಗಳ ಸಮ್ಮೇಳನ ನಡೆಸಿದ್ದಾರೆ. ಪ್ರಕೃತಿ ವಿಕೋಪ ಸಂಭವಿಸಿದಾಗ ಸಂತ್ರಸ್ತರಿಗೆ ಅಪಾರ ನೆರವು ನೀಡಿದ್ದಾರೆ. ಅಂಗವಿಕಲರಿಗೆ ಸಹಾಯಕ ಉಪಕರಣಗಳು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಚಿತಭೋಜನ, ಉಚಿತ ಕಂಪ್ಯೂಟರ್ ಶಿಕ್ಷಣ ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ಶ್ರೀಗಳು ಮಾಡಿದ್ದಾರೆ. ಪ್ರಶಾಂತಜೀವನ ನಡೆಸಲು ಬಯಸುವವರಿಗೆ ಶಾಂತಿಕುಟೀರ, ಅಶಕ್ತ ವೃದ್ಧರಿಗೆ ವೃದ್ಧಾಶ್ರಮ ಸಹ ಶೃಂಗೇರಿಯಲ್ಲಿ ಇವೆ. ಸುಮಾರು 127 ಅಡಿ ಎತ್ತರದ ಆಕರ್ಷಕ ಪ್ರವೇಶ ಗೋಪುರ (16 ಕೋಟಿ ರೂ. ವೆಚ್ಚ) ಕೂಡ ಶ್ರೀಗಳ ಕೊಡುಗೆ. ಅವರ ಆಶಯದಂತೆ ಸರ್ಕಾರ ಶಂಕರ ಜಯಂತಿಯ ದಿನವನ್ನು ‘ತತ್ತ್ವಜ್ಞಾನಿಗಳ ದಿನ’ ಎಂದು ಘೊಷಿಸಿದೆ. ಪ್ರಧಾನಮಂತ್ರಿ ಆದಿಯಾಗಿ ಮಠಕ್ಕೆ ಬಂದು ಹೋಗುವ ಗಣ್ಯರಂತೂ ಅಗಣಿತ. ದಿನಕ್ಕೆರಡು ಬಾರಿ ಭಕ್ತರಿಗೂ ಶ್ರೀಗಳ ದರ್ಶನಾಶೀರ್ವಾದ ಇದೆ. ಉಳಿದ ಸಮಯ ಪಾಠ-ಪ್ರವಚನ, ಪೂಜೆ-ಅನುಷ್ಠಾನ, ಅಧ್ಯಾತ್ಮ ಚಿಂತನೆಗೆ ಮೀಸಲು. ಶಾರದಾಂಬೆಗೆ ವಜ್ರದ ಕಿರೀಟ ಹಾಗೂ ಅಭಯಹಸ್ತ, ಚಿನ್ನದ ರಥ, ಬಂಗಾರದ ಸೀರೆ, ಬಂಗಾರದ ದ್ವಾರ, ಗರ್ಭಗೃಹದ ಭಿತ್ತಿಗಳಿಗೆ ಚಿನ್ನದ ಹೊದಿಕೆ, ಚಂದ್ರಮೌಳೀಶ್ವರ ಸ್ವಾಮಿಗೆ ಬೃಹತ್ ಚಿನ್ನದ ಮಂಟಪ, ಶಾರದಾಂಬೆಯ ದೇಗುಲಕ್ಕೆ ಸ್ವರ್ಣಶಿಖರ… ಇವೆಲ್ಲ ಸಾಕಾರವಾಗಿದ್ದು ಶ್ರೀಗಳ ಅವಧಿಯಲ್ಲೇ. ಮಠದ ಇತಿಹಾಸದಲ್ಲಿ ಇದು ಅಕ್ಷರಶಃ ಸುವರ್ಣಯುಗವೇ.

    15 ದಿನಗಳ ಕಾರ್ಯಕ್ರಮ: ಶ್ರೀ ಭಾರತೀ ತೀರ್ಥರ 71ನೇ ವರ್ಧಂತಿ ಅಂಗವಾಗಿ ಶೃಂಗೇರಿ ಮಠದಲ್ಲಿ ಲಕ್ಷ ಮೋದಕ ಗಣಪತಿ ಹೋಮ, ಆಯುತ ಚಂಡೀ ಮಹಾಯಾಗ, ಕೋಟಿ ಕುಂಕುಮಾರ್ಚನೆ, ವೇದಶಾಸ್ತ್ರ, ಸಂಸ್ಕೃತ ಸಾಹಿತ್ಯ ಪರಿಣತ ವಿದ್ವಾಂಸರಿಗೆ ಮತ್ತು ಸಂಗೀತಾದಿ ಕಲಾವಿದರಿಗೆ ಪುರಸ್ಕಾರ ಪ್ರದಾನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏ. 13ರಿಂದಲೇ ಕಾರ್ಯಕ್ರಮಗಳು ಆರಂಭವಾಗಿದ್ದು 27ರವರೆಗೂ ನಡೆಯ ಲಿವೆ. 18ರಂದು ಸಂಜೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

    ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts