More

    ಬಡತನದಲ್ಲೇ ಅರಳಿದ ಪ್ರತಿಭಾವಂತೆ ನೇತ್ರಾವತಿ

    ‘ಹೆಣ್ಣು ಅಬಲೆಯಲ್ಲ ಸಬಲೆ’ ಎಂಬುದನ್ನು ತೋರಿಸಿ ಎಲ್ಲ ರಂಗದಲ್ಲೂ ಪುರುಷರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಕೆಲವೊಮ್ಮೆ ದಿಕ್ಕು ತೋಚದಾಗ ಅವಳೇ ದಾರಿ ಹುಡುಕಿಕೊಂಡು ಹಂತ ಹಂತವಾಗಿ ಯಶಸ್ವಿನ ಮೆಟ್ಟಿಲು ಹತ್ತಿರುವ ನಿದರ್ಶನಗಳಿವೆ. ಅದರಂತೆ, ಬೆಂಗಳೂರಿನ ಬೇಗೂರು ನಿವಾಸಿ ಜಿ. ನೇತ್ರಾವತಿ, ಕಡುಬಡತದಲ್ಲೇ ಅರಳಿದ ಪ್ರತಿಭಾವಂತೆ. ‘ಬ್ಲೂಮಿಂಗ್ ಬಡ್ಸ್’ ಹೆಸರಿನಲ್ಲಿ ಪ್ರಿ ಸ್ಕೂಲ್ ಮತ್ತು ಡೇ ಕೇರ್ ತೆರೆದು ನೂರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆರಂಭದಲ್ಲಿ ಎದುರಾದ ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಹಂತ ಹಂತವಾಗಿ ಬೆಳೆದು ಯಶಸ್ವಿ ಮಹಿಳಾ ಉದ್ಯಮಿ ಆಗಿ ಹೊರಹೊಮ್ಮಿದ್ದಾರೆ. ನೇತ್ರಾವತಿ ಅವರ ಸಾಧನೆ ಲಕ್ಷಾಂತರ ಮಹಿಳೆಯರಿಗೆ ಸ್ಪೂರ್ತಿ ತಂದಿದೆ. ಇವರ ಈ ಸಾಧನೆಯನ್ನು ಗುರುತಿಸಿ ವಿಜಯವಾಣಿ ಪತ್ರಿಕೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

    ಬೆಂಗಳೂರು: ಬೆಂಗಳೂರಿನ ಬೇಗೂರಿನಲ್ಲಿ ಹರಿಕಥೆ ಗೋವಿಂದಪ್ಪ ಮತ್ತು ಚಂದ್ರಮ್ಮ ದಂಪತಿ ಪುತ್ರಿಯಾಗಿ ನೇತ್ರಾವತಿ ಜನಿಸಿದರು. ಅಕ್ಕ ಹೇಮಾವತಿ, ಸಹೋದರ ಜಯಸಿಂಹ ಒಡಹುಟ್ಟಿದವರು. 1ರಿಂದ 7ನೇ ತರಗತಿಯನ್ನು ಬೇಗೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ಬಳಿಕ ಪ್ರೌಢಶಿಕ್ಷಣವನ್ನು ವಿದ್ಯಾವಿಕಾಸ ಸರ್ಕಾರಿ ಶಾಲೆಯಲ್ಲಿ ಪೂರೈಸಿದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಪದವಿಯನ್ನು ಪೂರೈಸಿದ್ದಾರೆ. ಬಳಿಕ 2004ರಲ್ಲಿ ವಿಶ್ವಪ್ರಿಯಲೇಔಟ್​ನಲ್ಲಿ ‘ದಿ ಸೊಸಲೋನಿ’ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡರು.

    ಎರಡು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ನೇತ್ರಾವತಿ, ಟೀಚರ್ ಹುದ್ದೆ ತ್ಯಜಿಸಿ 2006ರ ಅಕ್ಟೋಬರ್​ನಲ್ಲಿ ಬೇಗೂರಿನ ಮನೆಯೊಂದರಲ್ಲಿ ಸಣ್ಣದಾಗಿ ‘ಬ್ಲೂಮಿಂಗ್ ಬಡ್ಸ್’ ಹೆಸರಿನಲ್ಲಿ ಪ್ರಿಸ್ಕೂಲ್ ಮತ್ತು ಡೇ ಕೇರ್ ತೆರೆದರು. ಆರಂಭದಲ್ಲಿ ಈ ಸ್ಕೂಲ್​ನಲ್ಲಿ ನಾಲ್ಕು ಮಕ್ಕಳಿದ್ದರು. ಒಂದೇ ವರ್ಷದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಇದರಿಂದಾಗಿ ಬೇಗೂರಿನ 5ನೇ ಕ್ರಾಸ್​ನಲ್ಲಿ ನಿವೇಶನವನ್ನು ಬಾಡಿಗೆಗೆ ಪಡೆದು 10 ಸಾವಿರ ಚದರಡಿ ಜಾಗದಲ್ಲಿ ‘ಪ್ರಿಸ್ಕೂಲ್’ ಸ್ಥಳಾಂತರಿಸಲಾಯಿತು. ಮಕ್ಕಳ ಸಂಖ್ಯೆಯೂ ಇನ್ನಷ್ಟು ಹೆಚ್ಚಳವಾದ ಪರಿಣಾಮ ಬೇಗೂರಿನ 5ನೇ ಕ್ರಾಸ್​ನಲ್ಲಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಶಾಲೆಯಲ್ಲಿ ಈಗ 200ಕ್ಕೂ ಅಧಿಕ ಮಕ್ಕಳಿದ್ದಾರೆ. ಪಾಲಕರಿಂದ ತುಂಬ ಬೇಡಿಕೆ ಬಂದ ಕಾರಣ ನೇತ್ರಾವತಿ, 2023ರಲ್ಲಿ ಬೇಗೂರಿನ ಡಿಎಲ್​ಎಫ್ ಸಮೀಪ ‘ಬ್ಲೂಮಿಂಗ್ ಬಡ್ಸ್’ ಪ್ರಿಸ್ಕೂಲ್​ನ 2ನೇ ಶಾಖೆ ಆರಂಭಿಸಿದರು. ಈ ಶಾಲೆಯಲ್ಲಿ 170 ಮಕ್ಕಳಿದ್ದಾರೆ. ಎರಡು ಶಾಖೆಯಲ್ಲಿ 2ರಿಂದ 6 ವರ್ಷವರೆಗಿನ ಒಟ್ಟು 370 ಅಧಿಕ ಮಕ್ಕಳಿದ್ದಾರೆ.

    ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ: ಬ್ಲೂಮಿಂಗ್ ಬಡ್ಸ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ‘ಬ್ಲೂಮಿಂಗ್ ಬಡ್ಸ್’ ಹೆಸರಿನಲ್ಲಿ ಪ್ರಿಸ್ಕೂಲ್ ಮತ್ತು ಡೇ ಕೇರ್ ನಡೆಯುತ್ತಿದೆ. ‘ಬ್ರೖೆಟ್ ಬಿಗಿನಿಂಗ್ ಬ್ಲೂಮಿಂಗ್ ಫ್ಯೂಚರ್’ ಪರಿಕಲ್ಪನೆಯಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ತಯಾರಿಸಲು ಹಾಗೂ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನೂರಾರು ಮಕ್ಕಳಿಗೆ ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್​ನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಮೊದಲ ಬಾರಿಗೆ ಬೇಗೂರಿನಲ್ಲಿ ಪ್ರಿಸ್ಕೂಲ್ ಪರಿಕಲ್ಪನೆ ತಂದುಕೊಟ್ಟ ಹೆಗ್ಗಳಿಕೆ ನೇತ್ರಾವತಿಗೆ ಸಲ್ಲುತ್ತದೆ. ‘ಎಲ್ಲರಿಗೂ ಶಿಕ್ಷಣ’ ಎಂಬ ಧ್ಯೇಯ ಮುಂದಿಟ್ಟುಕೊಂಡು ಚಿಕ್ಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಕೌಶಲವನ್ನೂ ಕಲಿಸುತ್ತಿದ್ದಾರೆ. ಬ್ಲೂಮಿಂಗ್ ಬಡ್ಸ್ ಅಂದರೆ ಮೊಗ್ಗು ಹೂವಾಗಿ ಅರಳುತ್ತದೆ. ಇದನ್ನು ದೇವರಿಗೆ ಅರ್ಪಿಸಲಾಗುತ್ತದೆ. ಹೂವು ಇಲ್ಲದಿದ್ದರೆ ಪೂಜೆಯೇ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ, ಹೂವಿಗೆ ಹೆಚ್ಚು ಮಹತ್ವ ಇರುತ್ತದೆ. ಅದೇರೀತಿ, ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್​ನಲ್ಲಿ ಮೊಗ್ಗಿನಂತೆ ಇರುವ ಮಕ್ಕಳ ಭವಿಷ್ಯವನ್ನು ಹೂವಿನಂತೆ ಉಜ್ವಲಗೊಳಿಸಲಾಗುತ್ತದೆ ಎನ್ನುತ್ತಾರೆ ನೇತ್ರಾ ಹರಿಕಥೆ.

    Bangalore Nethra

    ಅಮ್ಮನಿಗೆ ತಿಳಿಯದಂತೆ ಪ್ರಿಸ್ಕೂಲ್ ಆರಂಭ: ನೇತ್ರ ಹರಿಕಥೆ ಅವರು ಶಾಲೆ ಪ್ರಾರಂಭಿಸಬೇಕೆಂಬ ಇಚ್ಛೆಯನ್ನೂ ತನ್ನ ತಾಯಿ ಚಂದ್ರಮ್ಮ ಬಳಿ ತಿಳಿಸಿದ್ದಾಗ ಇದಕ್ಕೆ ಒಪ್ಪದೆ ಮದುವೆ ಆಗುವಂತೆ ಒತ್ತಾಯಿಸಿದ್ದರು. ಆದರೂ ಧೃತಿಗೆಡದ ನೇತ್ರ, ತಮ್ಮ ಸೋದರ ಮಾವ ವಾಸು ಬೇಗೂರು ಅವರಿಂದ ನೈತಿಕ ಹಾಗೂ ಆರ್ಥಿಕ ಬೆಂಬಲದಿಂದ ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ಮತ್ತು ಡೇ ಕೇರ್ ಆರಂಭಿಸಿದರು. ಒಂದು ಹಂತಕ್ಕೆ ಬೆಳೆದಿರುವ ನೇತ್ರ ಅವರ ಸಾಧನೆ ನೋಡಲು ಸೋದರ ಮಾವ ಇಲ್ಲವೆಂಬ ನೋವು ಈಗಲೂ ಅವರಿಗೆ ಕಾಡುತ್ತಿದೆ. ಇಂದು ತಮ್ಮ ಮಗಳ ಸಾಧನೆ ನೋಡಿ ಚಂದ್ರಮ್ಮ ಹಾಗೂ ಕುಟುಂಬ ವರ್ಗದವರು ಹೆಮ್ಮೆ ಪಡುತ್ತಾರೆ.

    ಶಿಕ್ಷಣ ಬಿಸಿನೆಸ್ ಅಲ್ಲ: ಶಿಕ್ಷಣವನ್ನು ಯಾರೂ ವ್ಯಾಪಾರೀಕರಣ ಮಾಡಿಕೊಳ್ಳಬಾರದು. ಅದರಂತೆ, ಶಿಕ್ಷಣವನ್ನು ವ್ಯಾಪಾರವೆಂದು ಎಂದಿಗೂ ನಾನು ಪರಿಗಣಿಸಿಲ್ಲ. ಇದನ್ನು ಸೇವೆಯೆಂದು ಭಾವಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದೇವೆ. ಇದರಿಂದಾಗಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಲೆಯೂರಲು ಸಾಧ್ಯವಾಗಿದೆ. ಬ್ಲೂಮಿಂಗ್ ಬಡ್ಸ್ ಫ್ರಿ ಸ್ಕೂಲ್​ನಲ್ಲಿ ಪ್ರತಿ ವರ್ಷ 10 ಬಡ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಿ ಶಿಕ್ಷಣ ನೀಡುತ್ತಿದ್ದೇವೆ. ಕೆಲವರಿಗೆ ಶುಲ್ಕದಲ್ಲಿಯೂ ವಿನಾಯಿತಿ ಸಹ ಕೊಟ್ಟಿದ್ದೇವೆ ಎನ್ನುತ್ತಾರೆ ನೇತ್ರಾವತಿ.

    ಬಾಲ್ಯದಲ್ಲೇ ನೋವು: ನೇತ್ರಾವತಿ ಅವರ ಬಾಲ್ಯ ಜೀವನವೂ ತುಂಬ ಕಷ್ಟದಿಂದ ಕೂಡಿತ್ತು. ಎಷ್ಟೂ ದಿನ ಊಟವಿಲ್ಲದೆ ಹಸಿವುನಿಂದ ಇದ್ದರು. ಇವರ ತಾಯಿ ಚಂದ್ರಮ್ಮ ಮೂವರ ಮಕ್ಕಳನ್ನು ಸಾಕಿ ಸಲುಹಿದ್ದರು. ಗಾರ್ವೆಂಟ್ಸ್ ಕೆಲಸ ಮಾಡುತ್ತ ಮಕ್ಕಳನ್ನು ಓದಿಸಿದ್ದರು. ಶಾಲೆಯಲ್ಲಿ ಓದುತ್ತಿದ್ದ ವೇಳೆ ಊಟ ಇಲ್ಲದೆ ನೇತ್ರಾವತಿ ಮತ್ತು ಇವರ ಅಕ್ಕ ಹೇಮಾವತಿ, ಹತ್ತಿರದ ದೇವಸ್ಥಾನಕ್ಕೆ ತೆರಳಿ ಕಾಲ ಕಳೆದು ಮರಳಿ ಶಾಲೆಗೆ ಬರುತ್ತಿದ್ದರು. ಅರೆಬರೆ ಹೊಟ್ಟೆಯಲ್ಲೇ ಕಾಲ ಕಳೆದಿದ್ದಾರೆ. ಈ ಸಂಕಷ್ಟವನ್ನು ಯಾರ ಬಳಿ ಹೇಳದೆ ನೋವುಂಡವರು ನೇತ್ರಾವತಿ. ಆರ್ಥಿಕ ಸಮಸ್ಯೆಯಿಂದ ಕುಟುಂಬ ನಲುಗಿತ್ತು. ವಿದ್ಯಾಭ್ಯಾಸ ಮುಗಿದ ಬಳಿಕ 2 ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು.

    Blooming Budds

    ಪತಿ ಸಾಥ್: ಆರ್ಥಿಕವಾಗಿ ಸಾಕಷ್ಟು ನಲುಗಿದ್ದರೂ ನೇತ್ರಾವತಿ ಹರಿಕಥೆ, ಛಲ ಬಿಡದೆ ವಿದ್ಯಾಭ್ಯಾಸ ಮುಗಿಸಿದ ಬಳಿಕ 2 ವರ್ಷ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಗಣೇಶ್ ಅವರನ್ನು ವಿವಾಹವಾದರು. ಮದುವೆ ಬಳಿಕ ಬೇರೆ ಮಹಿಳೆಯರಂತೆ ಕೇವಲ ಮನೆಗೆ ಸೀಮಿತವಾಗದೆ ತಮ್ಮ ಕನಸನ್ನು ಬೆನ್ನುಹತ್ತಿ ಮುಂದೆ ಸಾಗಲು ಪ್ರಯತ್ನಿಸುತ್ತಿದ್ದರು. ಪತಿ ಗಣೇಶ್ ಅವರು ಸಹ ಪತ್ನಿ ಪ್ರಯತ್ನಕ್ಕೆ ಪ್ರತಿ ಹಂತದಲ್ಲೂ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ನೇತ್ರಾವತಿ ಮತ್ತು ಗಣೇಶ ದಂಪತಿಗೆ ದಿಗಂತ್ ಎಂಬ ಪುತ್ರ ಇದ್ದಾನೆ.

    ಎರಡನೇ ಶಾಖೆ ಆರಂಭ: 17 ವರ್ಷಗಳ ಸತತ ಪ್ರಯತ್ನ ಫಲವಾಗಿ ಪಾಲಕರ ಒತ್ತಾಯ ಮತ್ತು ಬೇಡಿಕೆ ಮೇರೆಗೆ ನೇತ್ರಾ ಹರಿಕಥೆ, 2023ರಲ್ಲಿ 2ನೇ ಶಾಖೆಯನ್ನು ಬೇಗೂರಿನ ಡಿಎಲ್​ಎಫ್ ಅಕ್ಷಯ್ನಗರ ಬಳಿ ಪ್ರಾರಂಭಿಸಿದ್ದಾರೆ. ಬ್ಯಾಂಕ್​ನಿಂದ 1 ಕೋಟಿ ರೂ. ಸಾಲ ಪಡೆದು 2ನೇ ಶಾಖೆಯನ್ನು ಪ್ರಾರಂಭಿಸಿ ಅದೇ ಉತ್ಸಹದಿಂದ ಮುನ್ನುಗ್ಗುತ್ತಿದ್ದಾರೆ. ಗಂಡನ ಮನೆಯವರು ಮತ್ತು ಸಂಬಂಧಿಕರಿಂದ ನಯಾಪೈಸೆ ಆರ್ಥಿಕ ಸಹಾಯ ಪಡೆಯದೆ ನೇತ್ರ ಅವರು ಶಾಲೆ ತೆರೆದಿರುವುದು ಗಮನಾರ್ಹ. ಪ್ರತಿ ಹಂತದಲ್ಲಿಯೂ ಕುಟುಂಬ ವರ್ಗದವರು ಬೆನ್ನೆಲುಬಾಗಿ ನಿಂತಿರುವುದು ನೇತ್ರ ಅವರಿಗೆ ಮತ್ತಷ್ಟು ಸಾಧಿಸಲು ಸ್ಪೂರ್ತಿ ತರುವಂತಾಗಿದೆ.

    ಅಡುಗೆ ಮನೆಗೆ ಸೀಮಿತರಾಗಬೇಡಿ: ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಬಾರದು. ಮದುವೆ, ಮಕ್ಕಳು ಆದ್ಮೇಲೆ ಏನಾದರೂ ಸಾಧನೆ ಮಾಡಬೇಕು. ಪುರುಷರಿಗಿಂತ ಮಹಿಳೆಯರು ಹೆಚ್ಚು ಶಕ್ತಿಶಾಲಿ ಎಂಬುದು ನೇತ್ರ ಅವರ ಅಭಿಪ್ರಾಯ. ಕುಟುಂಬಕ್ಕೆ ಹೊರೆಯಾಗದೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸದಾ ಪ್ರಯತ್ನಿಸಬೇಕು. ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಏನಾದರೂ ಸಾಧನೆ ಮಾಡಬೇಕು. ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳಬಾರದು. ಇಂಗ್ಲಿಷ್ ಗೊತ್ತಿಲ್ಲವೆಂದೂ ಹಿಂಜರಿಯಬಾರದು ಎಂದು ಸಲಹೆ ನೀಡುತ್ತಾರೆ. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ್ದು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಲೋಕ ಜ್ಞಾನ ಹೆಚ್ಚಿರುತ್ತದೆ. ಎಲ್ಲೇ ಇದ್ದರೂ ಬದುಕುವ ಶಕ್ತಿ ಅವರಿಗಿದೆ. ಕನ್ನಡ ಮಾಧ್ಯಮದಲ್ಲಿ ಸಾಕಷ್ಟು ಜನ ಓದಿದವರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಇಂಗ್ಲಿಷ್ ಒಂದು ಭಾಷೆ ಅಷ್ಟೇ. ಮನಸ್ಸು ಮಾಡಿದರೆ ಭಾಷೆಯನ್ನು ಕೆಲ ತಿಂಗಳಲ್ಲೇ ಕಲಿಯಬಹುದು ಎಂಬುದು ನೇತ್ರಾ ಸಲಹೆ.

    ಕಲಿಕೆ ವಿವರ

    • 2ರಿಂದ 6 ವರ್ಷವರೆಗಿನ ಮಕ್ಕಳಿಗೆ ಪ್ರವೇಶ
    • ಶೈಕ್ಷಣಿಕ ಅವಧಿ 10 ತಿಂಗಳು
    • ಪ್ರತಿ ವರ್ಷ ಜೂನ್​ನಿಂದ ಮಾರ್ಚ್​ವರೆಗೆ ತರಗತಿ
    • ಪ್ರವೇಶ ಪಡೆದ ಮಕ್ಕಳ ಭಾವಚಿತ್ರ ಸಮೇತ ಪುಸ್ತಕ ಮುದ್ರಣ
    • ಪುಸ್ತಕ ಮುದ್ರಣದಲ್ಲಿ ಮಕ್ಕಳ ಕಲಿಕೆಗೆ ಅನುಕೂಲಕರ ವ್ಯವಸ್ಥೆ
    • 26 ಶಿಕ್ಷಕಿಯರು, 10 ಕೇರ್ ಟೇಕರ್ ಇದ್ದಾರೆ
    • ಇಂಗ್ಲಿಷ್ ವರ್ಣಮಾಲೆ, ವೇಷಭೂಷಣ, ಕ್ರೀಡೆ, ರೈಮ್ಸ್​​ ಸ್ಪರ್ಧೆ
    • ಪ್ರೇಕ್ಷಣೀಯ ಸ್ಥಳ, ದೇವಸ್ಥಾನಗಳಿಗೆ ಮಕ್ಕಳ ಭೇಟಿ
    • ನೃತ್ಯ, ಸಂಗೀತ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು
    • ವಿವಿಧ ಬಗೆಯ ಕ್ರೀಡೆಯ ಜತೆಗೆ ಕೌಶಲ್ಯದ ಕಲಿಕೆ
    • ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ನೃತ್ಯ ಪ್ರದರ್ಶನಕ್ಕೆ ತಯಾರಿ
    • ಮಕ್ಕಳಿಗೆ ಭಾಷಣ ಸ್ಪರ್ಧೆ, ಸ್ಟೋರಿ ಡ್ರಾಯಿಂಗ್ ಸ್ಪರ್ಧೆ
    • ಬೇರೆ ಶಾಲೆಗಳಗಿಂತ ವಿಭಿನ್ನವಾಗಿ ಮಕ್ಕಳಿಗೆ ಕಲಿಕೆ
    • 15 ಮಕ್ಕಳಿಗೆ ಓರ್ವ ಶಿಕ್ಷಕಿ ನೇಮಕ
    • ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿದ್ದ ಶಿಕ್ಷಕಿಯರಿಗೆ ಆದ್ಯತೆ
    • ಹತ್ತಾರು ಶಿಕ್ಷಕಿಯರಿಗೆ ಉದ್ಯೋಗ ನೀಡಿದ ಶಾಲೆ

    ಬ್ಲೂಮಿಂಗ್ ಬಡ್ಸ್​ನಲ್ಲಿದೆ ಅತ್ಯಾಧುನಿಕ ಮೂಲ ಸೌಕರ್ಯ

    • ಪ್ಲೇ ಗ್ರೂಪ್, ನರ್ಸರಿ, ಎಲ್​ಕೆಜಿ, ಯುಕೆಜಿ
    • ಆಟದ ಮೈದಾನ, ನೃತ್ಯ ಶಾಲೆ, ಕೈತೋಟ
    • ಮಕ್ಕಳ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ
    • ಒಳಾಂಗಣ ಚಟುವಟಿಕೆಗೆ ಪ್ರತ್ಯೇಕ ಕೊಠಡಿ
    • ಮರಳಿನ ಆಟದ ಚೌಕ, ಮಾಲಿನ್ಯರಹಿತ ವಾತಾವರಣ
    • ಮಕ್ಕಳನ್ನು ಕರತರಲು ವಾಹನ ಸೌಲಭ್ಯ

    ‘ಬೆಂಗಳೂರು ರತ್ನ’ ಪ್ರಶಸ್ತಿ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ವಿಜಯವಾಣಿ ಪತ್ರಿಕೆ ನನ್ನನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದಕ್ಕೆ ಸಂತಸವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಸೇವೆ ನೀಡಲು ಹೊಣೆಗಾರಿಕೆಯೂ ಹೆಚ್ಚಿದೆ. ದೇಶದಲ್ಲಿ ಪುರುಷರಂತೆ ಸಮಾನವಾಗಿ ಬದುಕುತ್ತಿರುವ ಮಹಿಳೆಯರು ಮತ್ತಷ್ಟು ಸಾಧನೆ ಮಾಡುವಂತಾಗಲಿ. ಜೀವನದಲ್ಲಿ ಕೀಳರಿಮೆ ಬೆಳೆಸಿಕೊಳ್ಳದೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಮದುವೆ, ಮಕ್ಕಳು ಆದ ಬಳಿಕ ಅಡುಗೆಮನೆಗೆ ಸೀಮಿತರಾಗದೆ ಹೊರಗಡೆ ಮಹಿಳೆಯರು ಉದ್ಯೋಗ ಮಾಡುವಂತಾಗಬೇಕು.

    | ನೇತ್ರಾವತಿ ಜಿ. ಸಂಸ್ಥಾಪಕಿ, ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ಮತ್ತು ಡೇ ಕೇರ್

    ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ಮತ್ತು ಡೇ ಕೇರ್​ನಲ್ಲಿ ನನ್ನ ಮಗಳನ್ನು ಸೇರಿಸಿದ್ದೇನೆ. ಶಿಕ್ಷಕಿಯರು ಚೆನ್ನಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಕೇರ್​ಟೇಕರ್ ಸಹ ತಮ್ಮ ಮಕ್ಕಳಂತೆ ಆರೈಕೆ ಮಾಡುತ್ತಾರೆ. ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳೂ ಪ್ರಾಮುಖ್ಯತೆ ನೀಡುತ್ತಾರೆ. ಕೈಗೆಟುಕುವ ದರದಲ್ಲಿ ಶಿಕ್ಷಣ ಸಿಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಡಲಾಗುತ್ತದೆ. ಪ್ರಿಸ್ಕೂಲ್​ನಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಚಿಕ್ಕವಯಸ್ಸಿನಲ್ಲೇ ನೇತ್ರಾವತಿ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರನ್ನು ನಾನು ಅಭಿನಂದಿಸುತ್ತೇನೆ. ನಾನು ನನ್ನ ಮಗಳಿಗೆ ಈ ಶಾಲೆಯನ್ನು ಆಯ್ಕೆ ಮಾಡಿರುವ ಬಗ್ಗೆ ಹೆಮ್ಮೆಯಿದೆ.

    | ಹರಿಕಾ ಪಾಲಕರು

    ಪ್ರೌಢಶಾಲೆಗಳಲ್ಲಿ ನಾನು ಪಡೆದ ಕಾರ್ಯ ಅನುಭವಕ್ಕಿಂತ ಪ್ರೀಸ್ಕೂಲ್​ನಲ್ಲಿ ಪಡೆಯುತ್ತಿರುವ ಅನುಭವ ವಿಭಿನ್ನವಾಗಿದೆ. ನೇತ್ರ ಮ್ಯಾಮ್ವರಲ್ಲಿ ನಾನು ನೋಡಿರುವ ಉತ್ತಮವಾದ ಗುಣವೆಂದರೆ ಅದು ಯಾವುದೇ ಕಷ್ಟದ ಸಂದರ್ಭ ಬಂದರೂ ಎದೆಗುಂದದೆ ಧೈರ್ಯವಾಗಿ ಆ ಸಮಸ್ಯೆಯನ್ನು ಬಗೆಹರಿಸಿ ತಿಳಿಗೊಳಿಸುತ್ತಾರೆ. ಶಾಲೆಯ ಸಂಸ್ಥಾಪಕಿಯಾದರೂ ನಮ್ಮೊಂದಿಗೆ ಬಹಳ ಸುಲಭವಾಗಿ ಬೆರೆತು, ಸಲಹೆಗಳನ್ನು ನೀಡಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ಬೆಂಕಿಯಲ್ಲಿ ಅರಳಿದ ಹೂವಿನಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

    | ಶ್ವೇತಾ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts