More

  ಆಹಾರ ಪಥ್ಯದಲ್ಲಿ ಬದಲಾವಣೆ ಪರಿಣಾಮ; ಮೀನು ಸೇವನೆ ಪ್ರಮಾಣ ಶೇ.81 ಹೆಚ್ಚಳ

  ನವದೆಹಲಿ: ಭಾರತದ ತಲಾ ವಾರ್ಷಿಕ ಮೀನು ಸೇವನೆ ಪ್ರಮಾಣ 2005ರಿಂದ 2021ರ ನಡುವೆ ಶೇ.81ರಷ್ಟು ಏರಿಕೆಯಾಗಿದೆ. ಈ ಪ್ರಮಾಣ 2005ರಲ್ಲಿ 4.9 ಕೆಜಿ ಇದ್ದದ್ದು 2021ರಲ್ಲಿ 8.89 ಕೆಜಿಯಾಗಿದೆ. ಇದು ಆದಾಯ ಮತ್ತು ಸಮೃದ್ಧಿಯ ಹೆಚ್ಚಳದ ಕಾರಣ ಆಹಾರ ಪಥ್ಯದಲ್ಲಿನ ಬದಲಾವಣೆಯ ಪರಿಣಾಮವಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಇದೇ ಅವಧಿಯಲ್ಲಿ ಮೀನು ಉತ್ಪಾದನೆ ದುಪ್ಪಟ್ಟುಗೊಂಡಿದೆ ಎಂದೂ ಅಧ್ಯಯನ ವರದಿ ತಿಳಿಸಿದೆ. ಮತ್ಸ್ಯ ಪ್ರಿಯ ಜನರಲ್ಲಿ ತಲಾ ವಾರ್ಷಿಕ ಸೇವನೆ 7.43 ಕೆಜಿಯಿಂದ 12.33 ಕೆಜಿಗೆ ಏರಿದ್ದು 4.9 ಕೆಜಿ ಹೆಚ್ಚಳವಾಗಿ, ಶೇ. 66 ಏರಿಕೆ ಆಗಿದೆ.

  ವರ್ಲ್ಡ್​ಫಿಶ್, ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್​ಪಿಆರ್​ಐ), ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತಿತರ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಈ ಅಧ್ಯಯನ ನಡೆಸಿದೆ. 2005-2006 ಮತ್ತು 2019-2021ರ ಅವಧಿಯ ಮತ್ಸ್ಯ ಸೇವನೆಯ ಅಧ್ಯಯನ ನಡೆಸಲಾಗಿದೆ.

  ಆಮದು ಪ್ರಮಾಣ ಏರಿಕೆ: ದೇಶದೊಳಗೆ ಸೇವನೆಗೆಂದು ಆಮದು ಮಾಡಿಕೊಳ್ಳಲಾದ ಮೀನು ಹಾಗೂ ಮತ್ಸ್ಯ ಉತ್ಪನ್ನಗಳ ಪ್ರಮಾಣ ತ್ವರಿತ ಏರಿಕೆ ಕಂಡಿದೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ. ಸ್ಥಳೀಯ ಮೂಲ ಹಾಗೂ ಆಮದು ಮಾಡಿಕೊಂಡ ಮೀನು ಎರಡನ್ನೂ ಪರಿಗಣಿಸಿದಾಗ ದೇಶೀಯ ಮಾರುಕಟ್ಟೆಯಲ್ಲಿ ಬಳಸಲಾದ ಒಟ್ಟು ಮೀನಿನ ಪ್ರಮಾಣ ಶೇ.120ರಷ್ಟು ಹೆಚ್ಚಿ 11.924 ದಶಲಕ್ಷ ಟನ್ ಆಗಿದೆ ಎಂದು ‘ಭಾರತದಲ್ಲಿ ಮೀನು ಬಳಕೆ: ಮಾದರಿ ಮತ್ತು ಪ್ರವೃತ್ತಿಗಳು’ ಶೀರ್ಷಿಕೆಯ ವರದಿ ವಿವರಿಸಿದೆ.

  ಉತ್ಪಾದನೆಯೂ ದುಪ್ಪಟ್ಟು: 2005-2021ರ ಅವಧಿಯಲ್ಲಿ ಭಾರತದ ಮೀನು ಉತ್ಪಾದನೆಯು ಶೇ. 5.63 ಸಂಯುಕ್ತ ವಾರ್ಷಿಕ ಬೆಳವಣಿಗೆ ದರದೊಂದಿಗೆ (ಸಿಎಜಿಆರ್) ದುಪ್ಪಟ್ಟಾಗಿ 14.164 ದಶಲಕ್ಷ ಟನ್​ಗೆ ಏರಿದೆ. ಒಟ್ಟು ಮೀನು ಉತ್ಪಾದನೆಯಲ್ಲಿ ದೇಶೀಯ ಮತ್ಸ್ಯ ಸೇವನೆ 2005-06ರಲ್ಲಿ ಶೇ. 82.36, 2015-16ರಲ್ಲಿ ಶೇ. 86.2 ಹಾಗೂ 2019-20ರಲ್ಲಿ 83.65 ಆಗಿತ್ತು. ಉಳಿದದ್ದನ್ನು ಆಹಾರೇತರ ಹಾಗೂ ರಫ್ತು ಉದ್ದೇಶಗಳಿಗೆ ಬಳಸಲಾಗಿದೆ ಎಂದು ಅಧ್ಯಯನ ಹೇಳಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts