More

    ಹಿಂದು ಧರ್ಮವಷ್ಟೇ ಟಾರ್ಗೆಟ್; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಸೇಲಂ: ಇಂಡಿಯಾ ಕೂಟದ ಪಕ್ಷಗಳ ನಾಯಕರು ಉದ್ದೇಶಪೂರ್ವಕವಾಗಿಯೇ ಹಾಗೂ ಪದೇಪದೇ ಹಿಂದು ಧರ್ಮವನ್ನು ಅವಮಾನಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಂಗಳವಾರ ತಮಿಳುನಾಡಿನ ಸೇಲಂನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಪ್ರತಿಪಕ್ಷಗಳ ನಾಯಕರು ಚೆನ್ನಾಗಿ ಯೋಚಿಸಿಯೇ ಹಿಂದು ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ ಎಂದರು.

    ಇಂಡಿಯಾ ಕೂಟದವರು ಬೇರೆ ಯಾವುದೇ ಧರ್ಮವನ್ನು ಟಾರ್ಗೆಟ್ ಮಾಡುವುದಿಲ್ಲ ಎಂದರು. ಬೇರೆಯವರ ವಿರುದ್ಧ ಒಂದಕ್ಷರವನ್ನೂ ಉಲಿಯದ ಇವರು, ಹಿಂದು ಧರ್ಮವನ್ನು ನಿಂದಿಸಲು ಮಾತ್ರ ಅರೆಕ್ಷಣವನ್ನೂ ಅಪವ್ಯಯ ಮಾಡುವುದಿಲ್ಲ ಎಂದು ಹೇಳಿದರು. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮೋದಿ, ಸಂಸತ್ತಿನಲ್ಲಿ ಪವಿತ್ರ ಸೆಂಗೋಲ್ ಪ್ರತಿಷ್ಠಾಪನೆಯನ್ನೂ ಅವರು ವಿರೋಧಿಸಿದ್ದರು ಎಂದು ನೆನಪಿಸಿದರು. ಸೆಂಗೋಲ್ ಇಲ್ಲಿನ ಗಣಿತಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಉದ್ದೇಶಪೂರ್ವಕವಾಗಿಯೇ ಅದನ್ನು ಅವಮಾನಿಸಲಾಗಿದೆ ಎಂದು ಆಪಾದಿಸಿದರು.

    ‘ಶಕ್ತಿ’ ವಿವಾದ ಪುನರಾವರ್ತನೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಶಕ್ತಿ’ ಟಿಪ್ಪಣಿ ಮೇಲೆ ಮತ್ತೆ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಮತ್ತು ಡಿಎಂಕೆ ಸಹಿತ ಅದರ ಮಿತ್ರ ಪಕ್ಷಗಳು ಶಕ್ತಿಯನ್ನು ನಾಶಮಾಡಲು ಹೊರಟಿವೆ ಎಂದರು. ಆದರೆ, ಅವರೇ ನಾಶವಾಗುತ್ತಾರೆ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಮತ್ತು ಡಿಎಂಕೆ ಒಂದೇ ನಾಣ್ಯದ ಎರಡು ಮುಖಗಳು. ಎರಡೂ ಪಕ್ಷಗಳು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಮಾಡುತ್ತವೆ ಎಂದು ಆರೋಪಿಸಿದರು.

    ಮುಂಬೈಯಲ್ಲಿ ಇಂಡಿಯಾ ಕೂಟದ ರ್ಯಾಲಿಯಲ್ಲಿ ತಾವು ಪ್ರಸ್ತಾಪಿಸಿದ್ದು ಯಾವುದೇ ಧಾರ್ವಿುಕ ‘ಶಕ್ತಿ’ಯನ್ನಲ್ಲ. ದುರ್ವಿಚಾರ, ಭ್ರಷ್ಟಾಚಾರ ಮತ್ತು ಸುಳ್ಳುಗಳ ‘ಶಕ್ತಿ’ ಬಗ್ಗೆ ತಾನು ಮಾತಾಡಿದ್ದೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದರೂ ಕಾಂಗ್ರೆಸ್ ನೇತಾರನ ಮಾತನ್ನೇ ಆ ಪಕ್ಷದ ವಿರುದ್ಧ ಮೋದಿ ಪ್ರತ್ಯಸ್ತ್ರವನ್ನಾಗಿ ನಿರಂತರ ಬಳಸುತ್ತಿದ್ದಾರೆ. ತಮಿಳುನಾಡಿನಲ್ಲಿ ಶಕ್ತಿಯು ಕಂಚಿ ಕಾಮಾಕ್ಷಿ, ಮಧುರೆ ಮೀನಾಕ್ಷಿ ಮತ್ತು ಸಾಮ್ಯಪುರಂ ಮರಿಯಮ್ಮನ್ ಮುಂತಾದ ಸ್ತ್ರೀ ದೇವತೆಗಳ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಿ ಹೇಳಿದರು. ತಾವೂ ಒಬ್ಬ ಶಕ್ತಿಯ ಉಪಾಸಕ ಎಂದು ಪ್ರಧಾನಿ ಹೇಳಿಕೊಂಡರು.

    ಕೇರಳದಲ್ಲಿ ರೋಡ್​ಶೋ: ಕೇರಳದಲ್ಲಿ ಬಿಜೆಪಿಯ ಲೋಕಸಭೆ ಚುನಾವಣಾ ಅಭ್ಯರ್ಥಿಗಳಿಗೆ ಬೆಂಬಲ ಕೋರಲು ಪ್ರಧಾನಿ ಮೋದಿ ಮಂಗಳವಾರ ಪಾಲಕ್ಕಾಡ್​ನಲ್ಲಿ ಬೃಹತ್ ರೋಡ್​ಶೋ ನಡೆಸಿದರು.

    ಚುನಾವಣಾ ದಿನಾಂಕ ಬದಲಿಸಿ: ಕೇರಳದಲ್ಲಿ ಲೋಕಸಭಾ ಚುನಾವಣಾ ದಿನಾಂಕ ಪರಿಷ್ಕರಿಸುವಂತೆ ಚುನಾವಣಾ ಆಯೋಗಕ್ಕೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕೋರಿಕೊಂಡಿದೆ. ಚುನಾವಣೆ ನಿಗದಿ ಆಗಿರುವ ದಿನಾಂಕ (ಏ.26) ಮುಸ್ಲಿಮರಿಗೆ ಪ್ರಮುಖ ದಿನವಾದ ಶುಕ್ರವಾರ ಬರುತ್ತಿರುವುದರಿಂದ ಈ ಮನವಿ ಮಾಡಿಕೊಳ್ಳಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಎಂ. ಹಸನ್, ವಿಧಾನಸಭೆ ವಿಪಕ್ಷ ನಾಯಕ ವಿ.ಡಿ.ಸತೀಶನ್ ಜೊತೆಯಾಗಿ ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಶುಕ್ರವಾರವಾದ್ದರಿಂದ ಮುಸ್ಲಿಮರಿಗೆ ಮತ ಚಲಾಯಿಸಲು ಅನನುಕೂಲ ಆಗಲಿದೆ ಎಂದಿದ್ದಾರೆ.

    ಆಯೋಗಕ್ಕೆ ಡಿಎಂಕೆ ದೂರು: ಪ್ರಧಾನಿ ಮೋದಿ ಸೋಮವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಸಿದ ರೋಡ್ ಶೋನಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದರ ಕುರಿತು ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಲಾಗಿದೆ. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಈ ಕುರಿತು ದೂರು ನೀಡಿದ್ದು, ರೋಡ್ ಶೋನಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಂಡ ಬಗ್ಗೆ ತನಿಖೆಗೆ ಸೂಚಿಸ ಲಾಗಿದೆ ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಕ್ರಾಂತಿಕುಮಾರ್ ಪಾಟಿ ತಿಳಿಸಿದ್ದಾರೆ. ಈ ಸಂಬಂಧ ಶಿಕ್ಷಣ ಹಾಗೂ ಕಾರ್ವಿುಕ ಇಲಾಖೆಯಿಂದಲೂ ವರದಿ ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ದ್ವೇಷ ಭಾಷಣ ಮಾಡಿದ್ದಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ಭಾರತಿ ದೂರು ನೀಡಿದ್ದಾರೆ.

    ಪ್ರಧಾನಿಗೆ ಜೈರಾಂ ಪ್ರಶ್ನೆಗಳು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇರಳ ಹಾಗೂ ತಮಿಳುನಾಡಿಗೆ ಭೇಟಿ ನೀಡಿದ್ದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟೀಕಿಸಿದ್ದಲ್ಲದೆ, ಒಂದಷ್ಟು ಪ್ರಶ್ನೆಗಳನ್ನೂ ಕೇಳಿದ್ದಾರೆ. ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳದ ಸಾಧನೆ ಭಾರತದ ಎಲ್ಲ ರಾಜ್ಯಗಳಿಗಿಂತ ನಿರಂತರವಾಗಿ ಉತ್ತಮವಾಗಿದೆ. ಆದರೆ ಕೇರಳವನ್ನು ಈ ಹಿಂದೆ ಕುಖ್ಯಾತ ಸೊಮಾಲಿಯಾಗೆ ಹೋಲಿಸಿದ್ದ ಪ್ರಧಾನಿ, ಈಗ ಕೇರಳದ ಜನರಲ್ಲಿ ಕ್ಷಮೆ ಯಾಚಿಸುವರೇ? ಎಂದು ಕೇಳಿದ್ದಾರೆ. ತಮಿಳುನಾಡಿಗೆ ಯಾವತ್ತೂ ಕಡಿಮೆ ಪ್ರಾಧಾನ್ಯತೆ ತೋರಿದ ಮೋದಿ ಇತ್ತೀಚೆಗೆ ಆಗಾಗ ಆಗಮಿಸಿದ್ದಾರೆ. ಸೈಕ್ಲೋನ್ ಮಿಚೌಂಗ್ ಸಂದರ್ಭದಲ್ಲಿ ಅವರು ಬರಲಿಲ್ಲ. ಆಗಿನ ಪುನರ್ವಸತಿ ಹಾಗೂ ಪರಿಹಾರ ಕಾರ್ಯಕ್ಕಾಗಿ ತಮಿಳುನಾಡು ಸಿಎಂ 37,907 ಕೋಟಿ ರೂ. ಬೇಡಿಕೆ ಇಟ್ಟಿದ್ದರೂ ಕೇಂದ್ರ ಸರ್ಕಾರ ನೀಡಿರಲಿಲ್ಲ. ಆ ಬೇಡಿಕೆಗಳನ್ನು ಮೋದಿ ಈಗ ಈಡೇರಿಸುವರೇ? ಡಿಮಾನಿಟೈಸೇಷನ್, ಜಿಎಸ್​ಟಿ, ಯೋಜನಾಬದ್ಧವಲ್ಲದ ಕೋವಿಡ್ ಲಾಕ್​ಡೌನ್​ನಿಂದಾಗಿ ಸೇಲಂ ಜವಳಿ ಕ್ಷೇತ್ರಕ್ಕೆ ಧಕ್ಕೆ ತಂದಿರುವ ಮೋದಿ, ಆ ಕ್ಷೇತ್ರದ ಅಭ್ಯುದಯದ ಕುರಿತು ಏನು ದೂರದೃಷ್ಟಿ ಹೊಂದಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts