More

    ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢವಾಗಿ ನಾಪತ್ತೆ! ಎಲ್ಲಿರಬಹುದು? ಪೊಲೀಸರು ಹೇಳಿದ್ದೇನು?

    ನವದೆಹಲಿ: ಕೆಲ ತಿಂಗಳುಗಳ ಹಿಂದೆ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ತೆರಳಿ ಫೇಸ್​ಬುಕ್​ ಫ್ರೆಂಡ್​ನನ್ನು ವರಿಸಿ, ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡು ಭಾರಿ ಸಂಚಲನ ಮೂಡಿಸಿದ್ದ ರಾಜಸ್ಥಾನದ ಮೂಲದ ಅಂಜು ಇದೀಗ ಸ್ವದೇಶಕ್ಕೆ ಮರಳಿದ ಕೆಲವೇ ಕ್ಷಣಗಳಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

    ಫೇಸ್​ಬುಕ್​ ಫ್ರೆಂಡ್​ ನುಸ್ರುಲ್ಲನನ್ನು ಮದುವೆ ಮಾಡಿಕೊಳ್ಳಲು ಈ ವರ್ಷದ ಆರಂಭದಲ್ಲಿ ಅಂಜು (ಈಗ ಫಾತಿಮಾ) ಪಾಕಿಸ್ತಾನಕ್ಕೆ ತೆರಳಿದ್ದಳು. ಇದೀಗ ತವರಿಗೆ ಮರಳಿದ್ದು, ಈವರೆಗೂ ಆಕೆಯನ್ನು ರಾಜಸ್ಥಾನದ ಭಿವಾಡಿಯ ವಸತಿ ಸಮುದಾಯದಲ್ಲಿ ಭೇಟಿಯಾಗಿಲ್ಲ ಎಂದು ಆಕೆಯ ಮಕ್ಕಳು ತಿಳಿಸಿದ್ದಾರೆ.

    ಇದೀಗ ಅಂಜು ಎಲ್ಲಿದ್ದಾಳೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಈ ವಾರ ದೆಹಲಿಯಲ್ಲಿ ಲ್ಯಾಂಡ್​ ಆದ ಬಳಿಕ ಆಕೆ ನಾಪತ್ತೆಯಾಗಿದ್ದಾಳೆ. ಆಕೆ ಮಕ್ಕಳನ್ನು ಭೇಟಿಯಾಗಲು ಭೀವಾಡಿಗೆ ಆಗಮಿಸಿಲ್ಲ. ಅಂಜು ನೆಲೆಸಿರುವ ವಸತಿ ಸಮುದಾಯಕ್ಕೆ ಇದೀಗ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲ ವಾಹನಗಳು ಮತ್ತು ಅಪರಿಚಿತರನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಆ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. ಇಂಟೆಲಿಜೆನ್ಸ್ ಬ್ಯೂರೋದ ತಂಡವು ಅಂಜು ಅವರ ಮಕ್ಕಳಾದ 15 ವರ್ಷದ ಮಗಳು ಮತ್ತು ಆರು ವರ್ಷದ ಮಗನನ್ನೂ ವಿಚಾರಣೆ ನಡೆಸಿದೆ.

    ಅಂಜು ಪ್ರಕರಣದ ತನಿಖೆ ನಡೆಯುತ್ತಿದೆ. ಆಕೆ ಈವರೆಗೂ ಭಿವಾಡಿಗೆ ಆಗಮಿಸಿಲ್ಲ. ಆಕೆ ಎಲ್ಲಿದ್ದಾಳೆ ಎಂಬುದು ಸಹ ಸದ್ಯಕ್ಕೆ ತಿಳಿಯುತ್ತಿಲ್ಲ. ವಿಚಾರಣೆ ನಡೆಸುತ್ತಿದ್ದೇವೆ. ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಭಿವಾಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪಕ್ ಸೈನಿ ಹೇಳಿದ್ದಾರೆ. ಅಂಜು ಅವರನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    ಅಂಜು ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ ನಂತರ, ಆಕೆಯನ್ನು ಪಂಜಾಬ್ ಪೊಲೀಸ್‌ನ ಗುಪ್ತಚರ ತಂಡ ಮತ್ತು ಅಮೃತಸರದಲ್ಲಿರುವ ಇಂಟಿಲಿಜೆನ್ಸ್​ ಬ್ಯೂರೋ ವಿಚಾರಣೆಗೊಳಪಡಿಸಿತು. ಇದಾದ ಬಳಿಕ ಬುಧವಾರ ದೆಹಲಿಗೆ ಹಾರಲು ಆಕೆಗೆ ಅವಕಾಶ ನೀಡಲಾಯಿತು. ಅಂಜು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಾಗ, ಆಕೆ ಪಾಕಿಸ್ತಾನದಲ್ಲಿ ಉಳಿದುಕೊಂಡಿರುವ ಬಗ್ಗೆ ಪ್ರಶ್ನಿಸಲಾಯಿತು. ಆದರೆ, ಅವಳು ಅದರ ಬಗ್ಗೆಯಾಗಲಿ ಅಥವಾ ತನ್ನ ತಾಯ್ನಾಡಿಗೆ ಮರಳಿದ್ದರ ಬಗ್ಗೆಯಾಗಲಿ ಮಾತನಾಡಲಿಲ್ಲ. ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಇದಾದ ಬಳಿ ಅಂಜು ತನ್ನ ಭಾರತೀಯ ಪತಿ ಅರವಿಂದ್‌ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ ಎಂದು ಸುದ್ದಿಯಾಯಿತು. ಮತ್ತೊಂದೆಡೆ ಅರವಿಂದ್ ಅವರನ್ನು ಪಾಕಿಸ್ತಾನದಿಂದ ಹಿಂದಿರುಗಿದ ಪತ್ನಿಯ ಬಗ್ಗೆ ಕೇಳಿದಾಗ, ಅದು ತನಗೆ ತಿಳಿದಿಲ್ಲ ಮತ್ತು ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.

    ಅರವಿಂದ್ ಹೇಳುವಂತೆ ತಾನು ಮತ್ತು ಅಂಜು ಇನ್ನೂ ವಿಚ್ಛೇದನ ಪಡೆದಿಲ್ಲ. ವಿಚ್ಛೇದನ ನಡೆಯಲು ಮೂರರಿಂದ ಐದು ತಿಂಗಳು ಬೇಕು ಎಂದಿದ್ದಾರೆ. ಇನ್ನೂ ಅಂಜು ಭಾರತಕ್ಕೆ ಬರಲು ಕೇವಲ ಒಂದು ತಿಂಗಳಿಗೆ ಮಾತ್ರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಕಾನೂನು ತಜ್ಞರ ಪ್ರಕಾರ, ವಿಚ್ಛೇದನದ ನಂತರವೇ ಅವಳು ತನ್ನ ಮಕ್ಕಳನ್ನು ತನ್ನ ಸುಪರ್ದಿಗೆ ಪಡೆಯಬಹುದೇ ಹೊರತು ಅದಕ್ಕಿಂತ ಮೊದಲು ಅಲ್ಲ ಎಂದು ಹೇಳಲಾಗಿದೆ.

    ಯಾರು ಈ ಅಂಜು?
    ಅಂಜು (34) ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿ, ಪ್ರಿಯಕರನನ್ನು ಅರಸಿ ಪಾಕ್​ಗೆ ಹೋಗಿ ಮದುವೆಯಾದಳು. ನಸ್ರುಲ್ಲಾನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಳು. (ಏಜೆನ್ಸೀಸ್​)

    ಬುರ್ಖಾ ಧರಿಸಿ ಪ್ರಿಯಕರನ ಜತೆ ಊಟ ಸವಿಯುತ್ತಿರುವ ಅಂಜು: ವಿಡಿಯೋ ವೈರಲ್​

    ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

    ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts