

ಕಡಪಾ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯದಲ್ಲಿ ಆಂಧ್ರಪ್ರದೇಶದ ಯುವ ಬ್ಯಾಟ್ಸ್‌ಮನ್ ಒಬ್ಬ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ಒಂದನ್ನು ಬರೆದಿದ್ದಾನೆ.
ಆಂಧ್ರಪ್ರದೇಶದ ಪರ ಕಣಕ್ಕಿಳಿದಿದ್ದ ವಂಶಿ ಕೃಷ್ಣ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಈ ಅಪರೂಪದ ಸಾಧನೆ ಮಾಡಿದ್ದು, ಇದರ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ರೈಲ್ವೇಸ್ನ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಎಸೆದ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿದ ಕೃಷ್ಣ 64 ಎಸೆತಗಳಲ್ಲಿ 110 ರನ್ ಗಳಿಸಿ ಔಟ್ ಆದರು. ಈ ಮೂಲಕ ಭಾರತದ ಬ್ಯಾಟ್ಸ್ಮನ್ಗಳಾದ ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ರುತುರಾಜ್ ಗಾಯಕ್ವಾಡ್ (2022) ಅವರ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಧ್ರ 378 ರನ್ ಗಳಿಸಿತ್ತು. ವಂಶಿ ಕೃಷ್ಣ 64 ಎಸೆತಗಳಲ್ಲಿ 110 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ರೈಲ್ವೇಸ್ ಮೊದಲ ಇನಿಂಗ್ಸ್’ನಲ್ಲಿ 9 ವಿಕೆಟ್ ನಷ್ಟಕ್ಕೆ 865 ರನ್ ಗಳಿಸಿತ್ತು. ಆದರೆ, ಈ ಪಂದ್ಯ ಡ್ರಾ ಆಗಿಯೇ ಉಳಿಯಿತು. ಇಬ್ಬರು ರೈಲ್ವೇಸ್ ಬ್ಯಾಟ್ಸ್‌ಮನ್‌ಗಳು ದ್ವಿಶತಕ ಗಳಿಸಿದರು. ಅನ್ಷ್ ಯಾದವ್ 268 ರನ್ ಗಳಿಸಿದರೆ, ರವಿ ಸಿಂಗ್ 258 ರನ್’ಗಳ ಇನ್ನಿಂಗ್ಸ್ ಆಡಿದ್ದರು.