ಮಕ್ಕಳಾಗಿಲ್ಲ ಎಂದು ನಿತ್ಯ ಮಾನಸಿಕ ಮತ್ತು ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ವ್ಯಕ್ತಿ
ಮುಂಜಾನೆ ಚಿನ್ನ,ರನ್ನ ಎಂದು ಮುದ್ದು ಮಾಡ್ತಿದ್ದವರ ರಾತ್ರಿಯಾಗುತ್ತಲೇ ಗಲಾಟೆ
ನ.11ರಂದು ಕುಡಿದು ಗಲಾಟೆ ಮಾಡಿದ್ದ ಗಂಡ, ಕೋಪದಿಂದ ಚಾಕುವಿನಿಂದ ಇರಿದು ಕೊಂದ ಪತ್ನಿ
ಬೆಂಗಳೂರು: ಬೆಂಗಳೂರಿನಲ್ಲಿ 16 ದಿನದಲ್ಲಿ ಏಳು ಜನರನ್ನು ಕೊಲೆ ಮಾಡಿದ್ದ ಕ್ಯಾಬ್ ಡ್ರೈವರ್ ಕೇಸ್ ಮಾಸುವ ಮುನ್ನವೇ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳಾಗಿಲ್ಲ ಎಂದು ಜಗಳ ಮಾಡುತ್ತಿದ್ದ ಗಂಡನನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರದಲ್ಲಿ ಬೆಳಕಿಗೆ ಬಂದಿದೆ.
ರಾಜಶೇಖರ್ (44) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ಮಾಲಾಶ್ರೀ (35) ಪತಿಯನ್ನು ಕೊಲೆ ಮಾಡಿ ಬಂಧನಕ್ಕೊಳಗಾದ ಮಹಿಳೆ ಎನ್ನಲಾಗಿದೆ.
ರಾಜಶೇಖರ್ ಮತ್ತು ಮಾಲಾ ಶ್ರೀಗೆ ಐದು ವರ್ಷದ ಹಿಂದೆ ಮದುವೆಯಾಗಿತ್ತು. ಮಕ್ಕಳಾಗಿರಲಿಲ್ಲ. ಮುಂಜಾನೆ ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿ, ಮುದ್ದು ಮಾಡಿ ನೋಡಿಕೊಳ್ಳುತ್ತಿದ್ದ ಆತ, ಸಂಜೆಯಾಗುತ್ತಲೇ ಕಂಠಪೂರ್ತಿ ಕುಡಿದು ಆಕೆಯ ಜೊತೆ ಮಕ್ಕಳಾಗಿಲ್ಲ ಎನ್ನುವ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದ. ನಿನ್ನೆಯೂ ಇದೇ ವಿಚಾರಕ್ಕೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.
ರಾಜ್ಶೇಖರ್ ನಿತ್ಯ ಪತ್ನಿ ಮಾಲಾ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಮಕ್ಕಳಾಗಿಲ್ಲ ಎಂದು ಇಬ್ಬರು ಕೊರಗುತ್ತಿದ್ದರು.ಮುಂಜಾನೆ ಆಕೆಯನ್ನು ರಾಣಿಯಂತೆ ನೋಡಿಕೊಂಡು ಮುದ್ದು ಮಾಡುತ್ತಿದ್ದ ಆತ, ರಾತ್ರಿಯಾದರೆ ಸಾಕು ನಿನ್ನಿಂದಲೇ ಮಕ್ಕಳಾಗಿಲ್ಲ ಎಂದು ದೂಷಿಸುತ್ತಿದ್ದ. ಇದು ಪ್ರತಿ ದಿನ ನಡೆಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನ.11ರ ರಾತ್ರಿ ಕುಡಿದಿದ್ದ ರಾಜ್ಶೇಖರ್ ಪತ್ನಿ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಮಾಡಿದ್ದಾನೆ. ಮಕ್ಕಳಾಗಿಲ್ಲ ಎಂದು ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಮಾಲಾ ಅಡುಗೆ ಮನೆಯಿಂದ ಚಾಕು ತಂದು ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ರಾಜ್ಶೇಖರ್ ತೀವ್ರ ರಕ್ತಸ್ರಾವದಿಂದಾಗಿ ಕುಸಿದು ಬಿದ್ದಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮಾಲಾಶ್ರೀ ಮಕ್ಕಳಾಗಿಲ್ಲ ಎನ್ನುವ ಖಿನ್ನತೆಗೆ ಒಳಗಾಗಿದ್ದರು. ಇತ್ತೀಚೆಗೆ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದುಕೊಂಡು ನಾಲ್ಕು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರಲಾಗಿತ್ತು. ಸದ್ಯ ಆಕೆ ಎರಡು ತಿಂಗಳ ಗರ್ಭಿಣಿ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ, (ಏಜೆನ್ಸೀಸ್).