ಟೆಲ್ಅವೀವ್: ಇಸ್ರೇಲ್ನಲ್ಲಿ ಮುಂದಿನ ಸರ್ಕಾರ ರಚಿಸಲು ಮುಂದಾಗಿರುವ ಯಾಶರ್ ಪಕ್ಷದ ಮುಖ್ಯಸ್ಥ ಗಡಿ ಐಸೆನ್ಕೋಟ್, ಮಂಗಳವಾರ(ನ. 10) ಸಂಸತ್ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಡಿದ ಭಾಷಣಕ್ಕೆ ಕಿಡಿಕಾರಿದ್ದು, ಅವರು ಅಧಿಕಾರದಲ್ಲಿ ಮುಂದುವರಿಯಲು ಅನರ್ಹರು ಎಂದು ವಾಗ್ದಾಳಿ ನಡೆಸಿದ್ದಾರೆ.
ನೆಸ್ಸೆಟ್ನಲ್ಲಿ ಸಂಸದರ ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ದ್ವೇಷ ತುಂಬಿದ ಮತ್ತು ವಿಭಜಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತು ರಾಜಕೀಯ ಪಕ್ಷಗಳನ್ನು ಒಟ್ಟುಗೂಡಿಸುವ ಬದಲು ಇಸ್ರೇಲ್ನಲ್ಲಿ ವಿಭಜನೆಗಳನ್ನು ಹೆಚ್ಚಿಸಲು ಸಂಸತ್ತಿನ ಸಮಾರಂಭವನ್ನು ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ನಾನು 26ನೇ ನೆಸ್ಸೆಟ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ನಿರ್ಗಮಿತ ಪ್ರಧಾನ ಮಂತ್ರಿಯ ಭ್ರಮೆಯ, ವಿಭಜಕ, ದ್ವೇಷ ತುಂಬಿದ ಮತ್ತು ನಾಚಿಕೆಗೇಡಿನ ಭಾಷಣವನ್ನು ಆಲಿಸುತ್ತಾ ಕುಳಿತಿದ್ದೆ. ಅವರು ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯಲು ಅನರ್ಹರು ಎಂದು ನನಗೆ ಇನ್ನಷ್ಟು ಮನವರಿಕೆಯಾಯಿತು ಎಂದು ಬರೆದುಕೊಂಡಿದ್ದಾರೆ.
ನೆತನ್ಯಾಹು ಅವರ ಮುಂದುವರಿದ ನಾಯಕತ್ವವು ಇಸ್ರೇಲ್ ಅನ್ನು ವಿಭಜಿಸುತ್ತಿದೆ. ಮತ್ತು ಅದರ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ವಾದಿಸಿ, ರಾಷ್ಟ್ರೀಯ ತುರ್ತು ಸರ್ಕಾರ ರಚಿಸುವ ತನ್ನ ಪ್ರತಿಜ್ಞೆಯನ್ನು ಐಸೆನ್ಕೋಟ್ ಪುನರುಚ್ಚರಿಸಿದ್ದಾರೆ.
ಸಂಸತ್ತಿನ ಆರಂಭಿಕ ಅಧಿವೇಶನದಲ್ಲಿ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ನಿಂದ ಹೆಚ್ಚುತ್ತಿರುವ ಭದ್ರತಾ ಬೆದರಿಕೆಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಏಕತೆ ಸರ್ಕಾರ ರಚನೆಗೆ ಕರೆ ನೀಡಿದ್ದರು. ಅರಬ್ ಪಕ್ಷಗಳಾದ ಜೊಯಿಂಟ್ ಲಿಸ್ಟ್ ಮತ್ತು ರಾಮ್ ಪಕ್ಷಗಳ "ಯಹೂದಿ ರಾಜ್ಯದ ನಾಶ"ವನ್ನು ಬಯಸುತ್ತಿವೆ. ಅವರು ಭಯೋತ್ಪಾದಕರ ಬೆಂಬಲಿಗ ಪಕ್ಷಗಳು ಎಂದು ಆರೋಪಿಸಿದ್ದರು.
ಮುಂಬರುವ ಸವಾಲುಗಳನ್ನು ಎದುರಿಸಲು ಇಸ್ರೇಲ್ಗೆ ವಿಶಾಲವಾದ ರಾಜಕೀಯ ಮೈತ್ರಿಕೂಟದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದ ಅವರು, ಅಂತಹ (ಏಕತೆ) ಸರ್ಕಾರ ಮಾತ್ರ ಈ ಪ್ರಮಾಣದ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುತ್ತದೆ ಎಂದಿದ್ದರು. ಜೊತೆಗೆ ಅರಬ್ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿರುವ ಗಡಿ ಐಸೆನ್ಕೋಟ್ ನಿರ್ಧಾರವನ್ನು ನಾಚಿಕೆಗೇಡು ಎಂದು ಕಿಡಿಕಾರಿದ್ದರು.
ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗದಿದ್ದರೂ, ಐಸೆನ್ಕೋಟ್ ಅವರಿಗೆ ಸರ್ಕಾರ ರಚಿಸಲು ಮತ್ತು ಬಹುಮತ ಸಾಬೀತುಪಡಿಸಲು ಇಸ್ರೇಲ್ ಅಧ್ಯಕ್ಷರು ಆಹ್ವಾನ ನೀಡಿದ್ದಾರೆ. ಆ ಬಣವು ಸಂಸದರ ಬೆಂಬಲ ಪಡೆಯಲು ಪ್ರಯತ್ನ ಆರಂಭಿಸಿದೆ (ಏಜೆನ್ಸೀಸ್).