ವಾಷಿಂಗ್ಟನ್: ಇರಾನ್ನಲ್ಲಿ ಈಗ ಯಾವುದೇ ನಾಯಕರು ಉಳಿದಿಲ್ಲ, ಯಾರ ಜೊತೆ ಮಾತುಕತೆ ನಡೆಸಬೇಕೋ ಗೊತ್ತಾಗುತ್ತಿಲ್ಲ ಎಂದು ಭಾನುವಾರ(ಅ. 25) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನವೆಂಬರ್ 03ರಂದು ನಡೆಯುವ ಅಮೆರಿಕದ ಮಧ್ಯಂತರ ಚುನಾವಣೆಯ ಹಿನ್ನೆಲೆ ರ‍್ಯಾಲಿಯೊಂದರಲ್ಲಿ ಮಾತನಾಡಿರುವ ಟ್ರಂಪ್, ಅವರ ಬಳಿ ವಿಮಾನಗಳಿಲ್ಲ, ಹಡಗುಗಳಿಲ್ಲ, ನಾಯಕರಿಲ್ಲ, ಏನೂ ಇಲ್ಲ... ಅವರ ಪ್ರಮುಖ ನಾಯಕ ಇಲ್ಲವಾಗಿದ್ದಾರೆ. ಎರಡನೇ ಹಂತದ ನಾಯಕರೂ ಇಲ್ಲವಾಗಿದ್ದಾರೆ. ನಾನು ಇಲ್ಲಿಗೆ ನಿಲ್ಲಿಸಬೇಕು, ಏಕೆಂದರೆ ನಾವು ಯಾರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂಬುದನ್ನು ಮೊದಲು ಕಂಡುಕೊಳ್ಳಬೇಕಿದೆ ಎಂದಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಯುದ್ಧದ ಮೊದಲ ದಿನವೇ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗಳಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರು ಹತರಾಗಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಕಳೆದ ಒಂಬತ್ತು ತಿಂಗಳುಗಳಿಂದ ನಿರಂತರವಾಗಿ ಹೋರಾಡುತ್ತಿರುವ ಎರಡೂ ದೇಶಗಳು ತಾತ್ಕಾಲಿಕವಾಗಿ ಯುದ್ಧವನ್ನು ನಿಲ್ಲಿಸಿವೆ. ಆದಾಗ್ಯೂ, ನವೆಂಬರ್ 3ರಂದು ಅಮೆರಿಕದ ಮಧ್ಯಂತರ ಚುನಾವಣೆಯ ಬಳಿಕ ಇರಾನ್ ಮೇಲೆ ಮತ್ತೆ ಯುದ್ಧ ನಡೆಸುವ ಬಗ್ಗೆ ಟ್ರಂಪ್ ಸುಳಿವು ನೀಡಿದ್ದಾರೆ.
ಇರಾನ್ ಮೇಲೆ ಸಂಭಾವ್ಯ ಯುದ್ಧದ ಬಗ್ಗೆ ಟ್ರಂಪ್ ಸುಳಿವು ನೀಡಿದ ಹಿನ್ನೆಲೆ ಮಾತನಾಡಿರುವ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ, ಯುದ್ಧದ ಸಂಭಾವ್ಯ ಪುನರಾರಂಭವು ತನ್ನ ದೇಶದ ನಿಲುವುಗಳನ್ನು ಬದಲಾಯಿಸುವುದಿಲ್ಲ. ಇತ್ತೀಚೆಗೆ, ಹೊಸ ಯುದ್ಧದ ಬಗ್ಗೆ ಮಾತು ಕೇಳಿಬರುತ್ತಿದೆ, ಆದರೆ ನಾನು ಈಗಾಗಲೇ ಯುದ್ಧಾನಂತರದ ಅವಧಿಯ ಬಗ್ಗೆ ಯೋಚಿಸುತ್ತಿದ್ದೇನೆ. ಯುದ್ಧ ಇರಲಿ ಅಥವಾ ಇಲ್ಲದಿರಲಿ, ನಮ್ಮ ನೀತಿಗಳು ಒಂದೇ ಆಗಿರುತ್ತವೆ ಎಂದಿದ್ದಾರೆ (ಏಜೆನ್ಸೀಸ್).